ಸೋಮವಾರ, ಮಾರ್ಚ್ 8, 2021
24 °C
ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿನ ಸೋಲುಗಳನ್ನು ಇಟ್ಟುಕೊಂಡು, ಹೊಸ ಮರೀಚಿಕೆಯನ್ನು ಜನರೆದುರು ಕುಣಿಸುವುದು ಸರಿಯಲ್ಲ

ಸರ್ಕಾರಕ್ಕೂ ಇಂಗ್ಲಿಷ್ ಮಾಧ್ಯಮ ಸನ್ನಿ

ಎಂ.ಅಬ್ದುಲ್ ರೆಹಮಾನ್ ಪಾಷ Updated:

ಅಕ್ಷರ ಗಾತ್ರ : | |

Prajavani

ಇಷ್ಟು ದಿನ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಹರಡುತ್ತಿದ್ದ ಮೌಢ್ಯವನ್ನು ಇದೀಗ ಸರ್ಕಾರವೇ ಅಧಿಕೃತ
ವಾಗಿ ಕೈಗೆತ್ತಿಕೊಂಡಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಮಕ್ಕಳು ಉದ್ಧಾರವಾಗುತ್ತಾರೆ ಎಂಬ ಸಮೂಹ ಸನ್ನಿ ಈಗ ಸರ್ಕಾರಕ್ಕೂ ಹಿಡಿದಿದೆ. ಇದು ಒಂದು ಕಡೆ ಇಡೀ ಶೈಕ್ಷಣಿಕ ಮನೋವಿಜ್ಞಾನವನ್ನು ಧಿಕ್ಕರಿಸುವ ನಡೆಯಾದರೆ, ಇನ್ನೊಂದು ಕಡೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವಲ್ಲಿ ತಮ್ಮದೇ ದಯನೀಯ ಸೋಲನ್ನು ಒಪ್ಪಿಕೊಂಡಂತಾಗುತ್ತದೆ.

ಮತ್ತೊಂದು ಕಡೆ, ಶೇಕಡ 25ರಷ್ಟು ಶಾಲಾ ಶಿಕ್ಷಣವನ್ನು ಈಗಾಗಲೇ ತನ್ನ ಕಪಿಮುಷ್ಟಿಯಲ್ಲಿ ಹಿಡಿದುಕೊಂಡು, ‘ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರಷ್ಟೇ ನಿಮ್ಮ ಮಕ್ಕಳ ಉದ್ಧಾರ’ ಎಂಬ ಅಮಲನ್ನು ಕುಡಿಸಿ, ಅಮಾಯಕ ತಂದೆತಾಯಂದಿರ ರಕ್ತವನ್ನು ಹೀರುತ್ತಿರುವ ಖಾಸಗಿ ಶಾಲೆಗಳ ನಿಲುವನ್ನು ದೃಢಪಡಿಸಿದಂತಾಗುತ್ತದೆ.

ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿನ ಭಾಷಣದಲ್ಲಿ ರಾಜ್ಯಪಾಲರು ‘ಸಮಾಜದ ಬಡ ವರ್ಗದ ಬುದ್ಧಿವಂತ ಮಕ್ಕಳು (ದಡ್ಡರ ಕತೆಯೇನೋ ಗೊತ್ತಿಲ್ಲ!) ಇಂಗ್ಲಿಷ್ ಜ್ಞಾನದ ಕೊರತೆಯಿಂದಾಗಿ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸುವುದಕ್ಕೆ ನನ್ನ ಸರ್ಕಾರ ಬದ್ಧವಾಗಿದೆ’ ಎಂದವರೇ, ‘ಆದರೂ ಕನ್ನಡಕ್ಕೆ ಪ್ರಾಮುಖ್ಯತೆ
ನೀಡುವ ವಿಷಯದಲ್ಲಿ ಯಾವುದೇ ರಾಜಿಯಾಗುವುದಿಲ್ಲ’ ಎಂದು ಕೊಸರು ಸೇರಿಸಿದರು.

ಭಾಷಾ ಕಲಿಕೆಗೂ ಒಂದು ಭಾಷೆಯನ್ನು ಮಾಧ್ಯಮವನ್ನಾಗಿ ಅಳವಡಿಸಿಕೊಳ್ಳುವುದಕ್ಕೂ ಇರುವ ಮಹತ್ವದ ವ್ಯತ್ಯಾಸವನ್ನು ಅವರು ಮನಗಾಣಬೇಕು.

ಯಾವುದೇ ತರಗತಿಯಲ್ಲಿ, ಉದಾಹರಣೆಗೆ, ಮೂರನೇ ತರಗತಿಯಲ್ಲಿ ವಿಜ್ಞಾನ, ಸಮಾಜವಿಜ್ಞಾನ, ಗಣಿತದಂಥ ‘ವಿಷಯ’ಗಳನ್ನು ಇಂಗ್ಲಿಷ್ ಭಾಷೆಯ ‘ಮಾಧ್ಯಮ’ದಲ್ಲಿ ಕಲಿಯುವ ಮುನ್ನ ಮಕ್ಕಳಿಗೆ ಇಂಗ್ಲಿಷ್ ‘ಭಾಷೆ’ಯಲ್ಲಿ ಸುಮಾರು ಆರನೇ ತರಗತಿಯ ಭಾಷಾ ಕೌಶಲ ಪ್ರೌಢಿಮೆ ಇರಬೇಕಾಗುತ್ತದೆ. ಆಗ ಮಾಧ್ಯಮದ ಭಾಷೆ ತಾನೇ ಒಂದು ಸಮಸ್ಯೆಯಾಗದೆ, ಅದರ ಮೂಲಕ ಹೊಸ ವಿಷಯವನ್ನು ಕಲಿಯುವ ಒಂದು ಸವಾಲು ಮಾತ್ರ ಮಕ್ಕಳೆದುರು ಇರುತ್ತದೆ. ಮೊದಲ ತರಗತಿಯಲ್ಲಿಯೇ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೆ ತಂದರೆ ಮಗು ಭಾಷೆಯನ್ನು ಕಲಿಯುವುದೇ ಬೆಟ್ಟದಷ್ಟು ದೊಡ್ಡ ಸವಾಲಾಗಿರುತ್ತದೆ. ಜೊತೆಗೆ, ಇನ್ನೂ ಏನೂ ಬಾರದೇ ಇರುವ ಭಾಷೆಯನ್ನೇ ‘ಮಾಧ್ಯಮ’ವನ್ನಾಗಿ ಬಳಸಿ ವಿಷಯಗಳನ್ನೂ ಕಲಿಯಬೇಕಾಗಿ ಬರುತ್ತದೆ. ಇದು ಅತ್ಯಂತ ಅವೈಜ್ಞಾನಿಕ.

ಮುಖ್ಯಮಂತ್ರಿಯವರನ್ನೂ ಒಳಗೊಂಡಂತೆ ಅನೇಕ ಜನಪ್ರತಿನಿಧಿಗಳ ಮಕ್ಕಳು ಓದಿರುವುದು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿಯೇ. ಆದರೆ ಅವರು ‘ಉದ್ಧಾರ’ವಾಗಿರುವುದು ತಮ್ಮ ಮಕ್ಕಳು ಎಂದೋ ಅಥವಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದಿದ್ದಕ್ಕೋ ಎಂಬ ಪ್ರಾಮಾಣಿಕ ಪ್ರಶ್ನೆಯನ್ನು ಜನಪ್ರತಿನಿಧಿಗಳು ಕೇಳಿಕೊಳ್ಳಬೇಕು. ಮನೆಯಲ್ಲಿ ದಟ್ಟವಾಗಿ ಕನ್ನಡದ (ಇಂಗ್ಲಿಷೇತರ) ವಾತಾವರಣ ಇರುವ ಶ್ರೀಮಂತ ವ್ಯಾಪಾರಿಗಳು, ಉದ್ಯಮಿಗಳು, ಶಾಸಕರು, ಸಿನಿಮಾ ಕಲಾವಿದರು, ರಿಯಲ್ ಎಸ್ಟೇಟ್ ವ್ಯವಹಾರದವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದಾರಲ್ಲಾ, ಅವರು ಅದೆಷ್ಟು ಚೆನ್ನಾಗಿ ಇಂಗ್ಲಿಷ್ ಭಾಷೆಯಲ್ಲಿ ಮಾತಾಡುತ್ತಾರೆ, ಓದುತ್ತಾರೆ, ಬರೆಯುತ್ತಾರೆ, ತಮ್ಮ ವ್ಯವಹಾರವನ್ನು ಇಂಗ್ಲಿಷಿನಲ್ಲಿಯೇ ಮಾಡಿ ಉದ್ಧಾರವಾಗಿದ್ದಾರೆ ಎಂಬುದರ ಬಗ್ಗೆ ಒಂದು ಚಿಕ್ಕ ಸಮೀಕ್ಷೆ ಮಾಡಿದರೆ ಗೊತ್ತಾಗುತ್ತದೆ.

ಅವರೆಲ್ಲಾ ಉದ್ಧಾರವಾಗಿರುವುದು ಅವರವರ ಅಪ್ಪಅಮ್ಮಂದಿರಿಂದಲೇ ವಿನಾ ಇಂಗ್ಲಿಷ್ ಮಾಧ್ಯಮದಿಂದ ಅಲ್ಲ. ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ‘ಪ್ರಾಯೋಗಿಕವಾಗಿ’ ತೆರೆಯುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.  ಈ ಪ್ರಯೋಗ ಯಶಸ್ವಿಯಾಗಲು ಮೂಲಭೂತವಾದ ಸಿದ್ಧಾಂತಗಳೇ ಇಲ್ಲ! ಇನ್ನು ಇದು ಯಶಸ್ವಿಯಾಗುವುದು ಹೇಗೆ? ಇದನ್ನು ಜಾರಿಗೆ ತರುವ ಮುನ್ನ ಬೇರೆ ಇನ್ನೊಂದು ಸುಲಭದ, ಸರಳವಾದ ಸಮೀಕ್ಷೆಯನ್ನು ಮಾಡಿಸಬಹುದು.

ಅದೇನೆಂದರೆ, ಮನೆಯಲ್ಲಿ ಕನ್ನಡ ಮಾತಾಡುವ, ಆದರೂ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದಿ ಹೊರಬಂದಿರುವ ಎಷ್ಟು ಪ್ರಮಾಣದ ಮಕ್ಕಳು ಜೀವನದಲ್ಲಿ ‘ಉದ್ಧಾರ’ವಾಗಿದ್ದಾರೆ ಎಂಬುದರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ಮಾಡಿಸಬೇಕು. ಅವರೆಲ್ಲಾ ತಮ್ಮ ಕುಟುಂಬದ ಸಾಮರ್ಥ್ಯವನ್ನೂ ಮೀರಿ, ಅದೂ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದಿದ ಮೂಲ ಕಾರಣಕ್ಕಾಗಿಯೇ ಬದುಕಿನಲ್ಲಿ ಮುಂದುವರಿದಿದ್ದಾರೆ ಎಂಬ ಫಲಿತಾಂಶ ಬಂದರೆ, ಬಹುಶಃ ಸರ್ಕಾರದ ಪ್ರಯೋಗಕ್ಕೆ ಬೆಲೆ ಬಂದೀತು.

ಕನ್ನಡ ಭಾಷೆಯನ್ನೇ ಮಾಧ್ಯಮವನ್ನಾಗಿ ಇಟ್ಟು ಕೊಂಡು ಓದಿದ ಮಕ್ಕಳಿಗೇ ಶಾಲೆ ಬಿಟ್ಟ ನಂತರ ಉದ್ಯೋಗ, ವ್ಯವಹಾರ ಇತ್ಯಾದಿ ಬದುಕಿನ ಮಜಲುಗಳಲ್ಲಿ ಯಶಸ್ವಿಯಾಗಿ ಕನ್ನಡವನ್ನು ಬಳಸಲು ಬರುತ್ತಿಲ್ಲ. ನಿಜವೆಂದರೆ, ಕನ್ನಡ ಮನೆಮಾತನ್ನೇ ‘ಶಿಕ್ಷಣದ ಕನ್ನಡ’ ಭಾಷೆಯನ್ನಾಗಿ ಸಜ್ಜುಗೊಳಿ ಸಲಿಕ್ಕೆ ಸಮಯ ಮತ್ತು ಶ್ರಮ ಬೇಕಾಗುತ್ತದೆ. ಅದೇ ಸರಿಯಾಗಿ ಆಗುತ್ತಿಲ್ಲ. ಅದನ್ನು ಮಾಡುವ
ಮನಸ್ಸೂ ಸರ್ಕಾರಕ್ಕಿಲ್ಲ. ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಅನುಭವಿಸುತ್ತಿರುವ ಹಿಮಾಲಯದಷ್ಟು ಸೋಲುಗಳನ್ನು ಕಣ್ಣೆದುರಿಗೇ ಇಟ್ಟುಕೊಂಡು, ಹೊಸದೊಂದು ಮರೀಚಿಕೆಯನ್ನು ಜನರೆದುರು ಕುಣಿಸುವುದು ಸರಿಯಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.