ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಇಲ್ಲಸಲ್ಲದ ಆತಂಕ ಸಲ್ಲದು...

ಅನಗತ್ಯ ಆತಂಕವು ರೋಗಶಮನ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ
Last Updated 24 ಮೇ 2021, 19:42 IST
ಅಕ್ಷರ ಗಾತ್ರ

ಕೊರೊನಾ ಎರಡನೇ ಅಲೆಯು ಹೆಚ್ಚು ಸಾವು ನೋವಿಗೆ ಕಾರಣವಾಗಿದೆ. ಕೊರೊನಾ ಸೋಂಕು ತಗುಲಿದಾಗ ವ್ಯಕ್ತಿಯು ಇತರ ವೈರಾಣು ಸೋಂಕಿನ ಗುಣಲಕ್ಷಣಗಳನ್ನೇ ಹೊಂದಿರುತ್ತಾನೆ. ಆದರೆ, ಅದು ಕೋವಿಡ್‌ ಹೌದೋ ಅಲ್ಲವೋ ಎಂದು ದೃಢಪಡಿಸಿಕೊಳ್ಳುವುದು ಮುಂದಿನ ಚಿಕಿತ್ಸಾ ಕ್ರಮ ಹಾಗೂ ನಿರ್ವಹಣೆಗೆ ಬಹಳ ಮುಖ್ಯ.

ಸಾಮಾನ್ಯವಾಗಿ ಸೋಂಕನ್ನು ಗಂಟಲು ದ್ರವದ ಆರ್‌ಟಿ ಪಿಸಿಆರ್ ಪರೀಕ್ಷೆಯ ಮೂಲಕ ದೃಢಪಡಿಸಿಕೊಳ್ಳುತ್ತೇವೆ. ಆದರೆ ಈ ಎರಡನೆಯ ಅಲೆಯಲ್ಲಿ ಶೇ 60ರಷ್ಟು ಕೊರೊನಾ ಸೋಂಕಿತರಲ್ಲಿ ಮಾತ್ರವೇ ಅದು ಪಾಸಿಟಿವ್‌ ವರದಿಯನ್ನು ತೋರಿಸುತ್ತಿದೆ. ಎದೆಗೂಡಿನ ಸಿ.ಟಿ ಸ್ಕ್ಯಾನ್ ಪರೀಕ್ಷೆಯು ಕೋವಿಡ್ ಸೋಂಕಿನಿಂದಾದ ಶ್ವಾಸಕೋಶಗಳಲ್ಲಿನ ಬದಲಾವಣೆಗಳ ಬಗ್ಗೆ ಆರಂಭ ದಲ್ಲಿಯೇ ತಿಳಿಸುವುದರಿಂದ ವೈದ್ಯರು ಇದೀಗ ಆ ಪರೀಕ್ಷೆಯನ್ನೇ ಹೆಚ್ಚು ಅವಲಂಬಿಸಿದ್ದಾರೆ. ಅದು ಸೋಂಕಿನ ತೀವ್ರತೆಯ ಬಗ್ಗೆಯೂ ಸೂಕ್ಷ್ಮವಾಗಿ ತಿಳಿಸುತ್ತದೆ.

ವ್ಯಕ್ತಿಗೆ ಕೊರೊನಾ ಸೋಂಕು ಎಂದಾದರೆ, ಮೊದಲು ಆತನನ್ನು ಇತರರಿಂದ, ಮುಖ್ಯವಾಗಿ ಹಿರಿಯ ನಾಗರಿಕರಿಂದ, ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುವವರಿಂದ ಪ್ರತ್ಯೇಕಿಸ ಬೇಕಾಗುತ್ತದೆ. ಅಷ್ಟೇ ಅಲ್ಲ, ಶೇ 15ರಿಂದ 20ರಷ್ಟು ಜನರಲ್ಲಿ ಅದು ಮುಂದಿನ ದಿನಗಳಲ್ಲಿ ಅಪಾಯಕ್ಕೆ ತಿರುಗುವ ಸಂಭವವನ್ನೂ ವೈದ್ಯರು ಗಮನದಲ್ಲಿ ಇಡ ಬೇಕಾಗುತ್ತದೆ. ಈ ಅಪಾಯಕರ ಪರಿಣಾಮಗಳನ್ನು ವೈದ್ಯರು ವ್ಯಕ್ತಿಯ ದೇಹದ ಗುಣಲಕ್ಷಣಗಳ ಮತ್ತು ವಿವಿಧ ತಪಾಸಣೆಗಳ ಆಧಾರದ ಮೇಲೆ ನಿರ್ಧರಿಸು ತ್ತಾರೆ. ಅವೆಂದರೆ ಎದೆಗೂಡಿನ ಸಿ.ಟಿ ಸ್ಕ್ಯಾನ್, ಅದರಲ್ಲಿಯೂ ವಿಶೇಷ ಬಗೆಯ ಎಚ್ಆರ್ ಸಿ.ಟಿ ಸ್ಕ್ಯಾನ್ ಮತ್ತು ರಕ್ತದಲ್ಲಿನ ರಕ್ತಕಣಗಳ ಸಂಖ್ಯೆ, ಬಿಳಿ ರಕ್ತಕಣಗಳ ಹಂಚಿಕೆ, ಸಕ್ಕರೆ ಅಂಶ ಮೊದಲಾದವು ಪ್ರಮುಖವಾದುವು.

ಈ ಎಲ್ಲ ತಪಾಸಣೆಗಳ ಅಗತ್ಯವು ಸೌಮ್ಯ ಸ್ವರೂಪದ ಕೊರೊನಾ ಸೋಂಕಿತರಿಗೆ ಖಂಡಿತ ಇರುವುದಿಲ್ಲ. ವ್ಯಕ್ತಿಯು ಆರೋಗ್ಯವಾಗಿ ಸದೃಢನಾಗಿದ್ದು, ಮಧುಮೇಹ, ಸ್ಥೂಲಕಾಯ, ಹೃದಯ ಸಂಬಂಧಿ ಕಾಯಿಲೆಗಳು, ಅಸ್ತಮಾ ಮತ್ತಿತರ ಸಮಸ್ಯೆಗಳು ಇಲ್ಲವೆಂದರೆ ಅಂತಹವರಲ್ಲಿ ಈ ಪರೀಕ್ಷೆಗಳು ಅನವಶ್ಯಕವೆಂದೇ ಹೇಳಬಹುದು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಸೌಮ್ಯ ಸ್ವರೂಪದ ಸೋಂಕಿತರಿಗೆ ರೋಗ ಲಕ್ಷಣಗಳನ್ನು ಕಡಿಮೆ ಮಾಡು ವಂತಹ ಔಷಧಗಳು ಮತ್ತು ರೋಗನಿರೋಧಕ ವ್ಯವಸ್ಥೆ ಯನ್ನು ಸದೃಢಪಡಿಸುವಂತಹ ಪೌಷ್ಟಿಕಾಂಶ ಪೂರಕ ಮಾತ್ರೆಗಳನ್ನಷ್ಟೇ ಸೂಚಿಸಿದೆ. ಹೆಚ್ಚಿನ ಸಂದರ್ಭಗಳಲ್ಲಿ ವ್ಯಕ್ತಿ ಗುಣಮುಖನಾಗಲು ಇವಿಷ್ಟೇ ಸಾಕಾಗುತ್ತವೆ.

ಹಾಗೆಯೇ ಕೊರೊನಾ ಸೋಂಕಿನ ಎರಡನೆಯ ವಾರದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ಗಮನದಲ್ಲಿರಿಸಿ, ಸೋಂಕಿನ ಮೊದಲ ದಿನಗಳಲ್ಲಿಯೇ ಒಂದಿಷ್ಟು ರಕ್ತಪರೀಕ್ಷೆಗಳನ್ನು ಮಾಡಿಸಲು ಕೆಲವೊಮ್ಮೆ ವೈದ್ಯರು ಸೂಚಿಸುವುದಿದೆ. ಇದು ಮುಂದಿನ ದಿನಗಳಲ್ಲಿ ರಕ್ತದಲ್ಲಿ ಈ ಅಂಶಗಳ ಮಟ್ಟವನ್ನು ಹೋಲಿಸಿ ನೋಡಿ ಸೋಂಕು ತೀವ್ರತೆಯತ್ತ ಸಾಗುತ್ತಿದೆಯೇ ಎಂದು ನಿರ್ಧರಿಸಲು. ಇದು ಎಷ್ಟು ವಿಪರೀತಕ್ಕೆ
ಇಳಿದಿದೆಯೆಂದರೆ, ಪ್ರಯೋಗಾಲಯಗಳಲ್ಲಿ ಕೋವಿಡ್‍ಗೆ ಸಂಬಂಧಪಟ್ಟ ತಪಾಸಣೆಗಳನ್ನು ಮಾಡಲು ಅವಶ್ಯವಾಗಿರುವ ರಾಸಾಯನಿಕ ಗಳನ್ನು ಹೊಂದಿಸುವುದೇ ದುಸ್ತರವಾಗಿದೆ. ಈ ರಾಸಾಯನಿಕಗಳ ದರವೂ ಈಗ ದುಪ್ಪಟ್ಟಾಗಿದೆಯಲ್ಲದೆ, ಸುಲಭವಾಗಿ ಲಭ್ಯವೂ ಇಲ್ಲ. ಅಲ್ಲದೆ ಲಾಕ್‍ಡೌನ್‍ನಿಂದಾಗಿ ಅವುಗಳನ್ನು ದೂರದ ಬೆಂಗಳೂರು, ಹೈದರಾಬಾದ್, ಚೆನ್ನೈ ಕಂಪನಿಗಳಿಂದ ತರಿಸಿಕೊಳ್ಳಲು ಸೂಕ್ತ ಸಾರಿಗೆ ವ್ಯವಸ್ಥೆಯೂ ಇಲ್ಲದ ಕಾರಣ, ಸ್ವಂತ ವಾಹನಗಳಲ್ಲಿ ವಿಶೇಷ ಅನುಮತಿ ಪಡೆದು ತರಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದು ವೈದ್ಯರ ಸಲಹೆಯ ಮೇರೆಗೆ ಮಾಡುವ ಪರೀಕ್ಷೆಗಳ ಕತೆಯಾದರೆ, ಇನ್ನೊಂದೆಡೆ ಕೆಲವರು ಸ್ವಯಂ ಚಿಕಿತ್ಸೆ ಹಾಗೂ ತಪಾಸಣೆಗೆ ಮುಂದಾಗಿದ್ದಾರೆ. ತಮ್ಮ ಪರಿಚಿತರಿಗೆ ವೈದ್ಯರು ಸೂಚಿಸಿದ ಔಷಧಗಳನ್ನೇ ಹಿಂದುಮುಂದು ನೋಡದೇ ಖರೀದಿಸಿ ಸೇವಿಸತೊಡಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಎಷ್ಟು ಜನ ಅನವಶ್ಯಕ ಆ್ಯಂಟಿಬಯೊಟಿಕ್‍ಗಳನ್ನು ಹಾಗೂ ಸ್ಟೆರಾಯ್ಡ್‌ ಮಾತ್ರೆಗಳನ್ನು ಸೇವಿಸುತ್ತಿದ್ದಾರೋ!

ಇದು ಪುನಃ ಆ್ಯಂಟಿಬಯೊಟಿಕ್ ಪ್ರತಿರೋಧಕತೆ ಮತ್ತು ಅವಕಾಶವಾದಿ ಶಿಲೀಂಧ್ರ ಕಾಟಕ್ಕೆ ಎಡೆಮಾಡಿ ಕೊಟ್ಟಂತೆಯೇ. ಬ್ಲ್ಯಾಕ್ ಫಂಗಸ್ ಬಾಧೆ ಕೂಡ ಈ ಬಗೆಯದ್ದೇ. ಅಷ್ಟೇ ಅಲ್ಲ, ಸೋಂಕಿನಿಂದ ಗುಣಮುಖ ರಾದ ಪರಿಚಿತರಿಗೆ ಸೂಚಿಸಿದ ಪ್ರಯೋಗಾಲಯದ ತಪಾಸಣೆಗಳನ್ನು, ಸಿ.ಟಿ ಸ್ಕ್ಯಾನ್ ಪರೀಕ್ಷೆಯನ್ನು ಸೋಂಕಿತರು ತಾವಾಗಿಯೇ ಪ್ರಯೋಗಾಲಯಕ್ಕೆ ತೆರಳಿ ಮಾಡಿಸಿಕೊಳ್ಳುತ್ತಿದ್ದಾರೆ.

ಜನರು ಹತ್ತಿರದವರ ಸಾವು ನೋವುಗಳನ್ನು ಕಂಡು ಭಯಭೀತರಾಗಿರುವುದು ನಿಜ. ಆದರೂ ಸೌಮ್ಯಸ್ವರೂಪದ ಸೋಂಕು ಇರುವವರು ಕೊಂಚ ಆಲೋಚನೆ ಮಾಡುವುದು ಒಳಿತು. ಏಕೆಂದರೆ ಸೋಂಕು ಪ್ರಾರಂಭವಾಗಿ ಏಳು ದಿನಗಳ ಬಳಿಕ ನಿಮ್ಮ ರೋಗಲಕ್ಷಣಗಳು ಇಳಿಮುಖವಾಗುತ್ತಿವೆ ಎಂದರೆ ನೀವು ಗುಣಮುಖರಾಗುತ್ತಿದ್ದೀರ ಎಂದೇ ಅರ್ಥ. ಹಾಗಿದ್ದಾಗ ಏಕೆ ಅನಗತ್ಯ ಆತಂಕ?

ಇನ್ನು ಕೆಲವರು ಮನೆಯಲ್ಲಿಯೇ ಆತಂಕಗೊಂಡು ಪಲ್ಸ್ ಆಕ್ಸಿಮೀಟರ್‌ನಲ್ಲಿ ಪದೇ ಪದೇ ಆಮ್ಲಜನಕದ ಮಟ್ಟವನ್ನು ನೋಡಿಕೊಳ್ಳುತ್ತಾರೆ. ಆತಂಕಗೊಂಡಾಗ ಹೃದಯದ ಬಡಿತ ಹೆಚ್ಚಾಗಿ ಸ್ವಾಭಾವಿಕವಾಗಿಯೇ ಆಮ್ಲಜನಕದ ಮಟ್ಟ ಕಡಿಮೆ ತೋರಿಸುತ್ತದೆ. ಇಂತಹ ಆತಂಕವು ರೋಗಶಮನ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆದ್ದರಿಂದ ಆತಂಕವನ್ನು ದೂರ ಮಾಡಿ, ಸಕಾರಾತ್ಮಕ ಮನಸ್ಸಿನಿಂದ ಕಾಯಿಲೆಯನ್ನು ಎದುರಿಸಿ.

ಲೇಖಕಿ: ರೋಗಲಕ್ಷಣಶಾಸ್ತ್ರಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT