ಬುಧವಾರ, ಸೆಪ್ಟೆಂಬರ್ 22, 2021
28 °C
ಕೊರೊನಾ ಕಾಲಘಟ್ಟದಲ್ಲಿ ಸದಾಕಾಲ ಕಣ್ಣೆದುರೇ ಇರುವ ಮಕ್ಕಳಿಗಾಗಿ ಪೋಷಕರು ಬದಲಾಗಬೇಕಾದ ಸಂದರ್ಭ ಇದು

ಸಂಗತ: ಮನೆಪಾಠಶಾಲೆ; ಮುಸುಕಿನ ಗುದ್ದಾಟ?

ಸರೋಜಾ ಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

‘ಫ್ರೆಂಡ್ಸ್ ಭೆಟ್ಟಿ ಆಗ್ಬಾರ್ದು, ಅವರ ಜೊತೆ ಆಟ ಆಡಬಾರದು, ನಿಂಗೆ ಯಾವಾಗಾದ್ರೂ ಇಂಥ ಸ್ಥಿತಿ ಬಂದಿತ್ತ ಅಮ್ಮಾ... ಎಂದು ಅಳುಧ್ವನಿಯಲ್ಲಿ ಅಮ್ಮನನ್ನು ಕೇಳುತ್ತಾನೆ ಹರ್ಷ. ‘ಮಗನ ಇಂಥ ಪ್ರಶ್ನೆಗಳಿಗೆ ನಾ ಹೇಗೆ ಉತ್ತರಿಸಲಿ...’ ಎಂದು ಹತಾಶಳಾದ ತಾಯಿ ಆಪ್ತಸಲಹೆಗಾರರನ್ನು ಕೇಳುತ್ತಿದ್ದಾಳೆ.

‘ಈ ರೀತಿ ಸ್ಕ್ರೀನ್‌ಟೈಮ್ ಆದರೆ ಮಕ್ಕಳ ಕಣ್ಣು ಎಷ್ಟು ವರ್ಷ ಸರಿ ಇದ್ದೀತು!’ ಆಗಲೇ ಕನ್ನಡಕ ಬಂದ ಮಗುವಿನ ತಾಯಿಯ ಅಳಲು. ಕೋವಿಡ್- 19 ಸಾಂಕ್ರಾಮಿಕದಿಂದಾಗಿ ಇಂದು ಪಾಲಕರು, ಪೋಷಕರ ಪಾತ್ರವೇ ಬದಲಾಗಿ ಹೋಗಿದೆ. ‘ಮನೆಯೇ ಮೊದಲ ಪಾಠಶಾಲೆ’ ಎಂಬ ಕವಿವಾಣಿ ಬದಲಾಗಿ ‘ಮನೆಯೇ ಪಾಠಶಾಲೆ’ ಆಗಿಬಿಟ್ಟಿದೆ. ಈ ಮೊದಲು ಏಳೆಂಟು ತಾಸು ಮಗು ಮನೆಯಿಂದ ಹೊರಗಡೆ ಇದ್ದರೂ, ಶಾಲೆಗೆ ಹೋಗಿಬರುವ ಧಾವಂತ, ಹೋಂವರ್ಕ್, ಪ್ರಾಜೆಕ್ಟ್‌ಗಳ ತಲೆಬಿಸಿಗಳೆಲ್ಲ ಇದ್ದರೂ ಶಾಲೆಯಲ್ಲಿ ಇರುವಷ್ಟು ಹೊತ್ತು ಸುರಕ್ಷಿತ ವಾತಾವರಣದಲ್ಲಿದೆ, ಮಗುವಿನ ಸರ್ವತೋಮುಖ ಅಭಿವೃದ್ಧಿ ಆಗುತ್ತಿದೆ ಎಂಬ ಸಮಾಧಾನದಲ್ಲಿ ಇರುತ್ತಿದ್ದ ತಂದೆತಾಯಂದಿರಿಗೆ ಕೊರೊನಾ ದೊಡ್ಡ ಜವಾಬ್ದಾರಿಯನ್ನೇ ಹೆಗಲ ಮೇಲೇರಿಸಿದೆ.

ಶಿಕ್ಷಕರು ಆನ್‌ಲೈನ್‌ ಪಾಠವನ್ನೇನೋ ಮಾಡಿ ಬಿಡುತ್ತಾರೆ. ಆದರೆ ಮನೆಯಲ್ಲಿ ಸರಿಯಾದ ಟೇಬಲ್, ಕುರ್ಚಿ ವ್ಯವಸ್ಥೆ ಬೇಕು, ನೆಟ್‌ವರ್ಕ್, ಡೇಟಾ ಸರಿಯಾಗಿ ಇದೆಯೋ ಇಲ್ಲವೋ ಪರೀಕ್ಷೆ ಮಾಡಿ ಮಗುವನ್ನು ಕಂಪ್ಯೂಟರ್ ಅಥವಾ ಮೊಬೈಲ್ ಮುಂದೆ ಸಮಯಕ್ಕೆ ಸರಿಯಾಗಿ ಕೂರಿಸಿ, ಸರಿಯಾಗಿ ಪಾಠ ಕೇಳಿಸಿಕೊಳ್ಳು ತ್ತಿದೆಯೋ ಇಲ್ಲವೋ ಎಂದು ಗಮನಿಸುವುದನ್ನು ತನ್ನ ಇತರ ನಿತ್ಯ ಕೆಲಸಗಳ ಜೊತೆಗೆ ಅಭ್ಯಾಸ ಮಾಡಿಕೊಳ್ಳುವ ಅನಿವಾರ್ಯ ಸಂದರ್ಭ ಪೋಷಕರಿಗೆ ಅದರಲ್ಲೂ ತಾಯಂದಿರಿಗೆ ಬಂದೆರಗಿದೆ.

ದಿನದ 15- 18 ಗಂಟೆಗಳ ಕಾಲ ಮಗು ಕಣ್ಣೆದುರಿಗೇ ಇರುತ್ತದೆ ಅಂದಾಗ ತಮ್ಮ ನಡೆನುಡಿ, ಅಭ್ಯಾಸ ಕ್ರಮಗಳಲ್ಲೂ ಎಚ್ಚರಿಕೆ ವಹಿಸುವ ಸಮಯವೂ ಇದು. ಹಾಗೆಂದು ಮೊದಮೊದಲು ಸಿಡುಕು, ಬೈಗಳು, ಮುಸುಕಿನಲ್ಲಿ ಗುದ್ದಾಟ ಒಂದಿಷ್ಟು ದಿನ ನಡೆದರೂ ಮಕ್ಕಳು ಮತ್ತು ಹೆತ್ತವರ ನಡುವೆ ಹೊಂದಾಣಿಕೆ ನಡೆದು, ಮನೆಪಾಠಶಾಲೆ ಎಂಬ ಯಂತ್ರದ ನಿರ್ವಹಣೆ ನಡೆದಿದೆ. ಅಮ್ಮಂದಿರಿಗೆ ತಮ್ಮ ನೆಚ್ಚಿನ ಸಾಮಾಜಿಕ ಜಾಲತಾಣ, ಟಿ.ವಿ ಧಾರಾವಾಹಿ, ಫೋನು ಇವೆಲ್ಲವುಗಳಿಗೆ ಸ್ವಲ್ಪ ಕಡಿವಾಣ ಹಾಕಿ, ಮಕ್ಕಳಿಗೆ ಇಷ್ಟದ ಅಡುಗೆ, ಅವರ ಆಟೋಟ, ವಾಕಿಂಗ್, ಹಾಡು, ಚಿತ್ರಕಲೆಯಂಥ ಹವ್ಯಾಸಗಳಿಗೆ ಜೊತೆಗೂಡುವ ಅವಕಾಶವೂ ಇದಾಗಿದೆ.

ಆಪ್ತಸಲಹೆಗಾರರಾಗಿರುವ ಪತಿಯೊಂದಿಗೆ ಕುತೂಹಲಕ್ಕಾಗಿ ಹಲವಾರು ಪೋಷಕರು ಮತ್ತು ಮಕ್ಕಳನ್ನು ಪ್ರಶ್ನಾವಳಿಗಳ ಮೂಲಕ ಸಂಪರ್ಕಿಸಿದಾಗ, ಮಿಶ್ರ ಪ್ರತಿಕ್ರಿಯೆಗಳು ಬಂದವು. ಈ ಮೊದಲೇ ಸಂಗೀತ, ನೃತ್ಯದಂಥ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದ ಮಕ್ಕಳ ಅಮ್ಮಂದಿರಿಗೆ ಅವರ ಪಾಠಗಳಿಗೆ, ಬಂದ ಆನ್‌ಲೈನ್‌ ಸ್ಪರ್ಧೆಗಳಿಗೆ ತಯಾರಿ ಮಾಡಿಸುವ ಕೆಲಸದ ಹೊರತಾಗಿ ಕೊರೊನಾ ಕಾಲ ಅಂಥ ತ್ರಾಸದಾಯಕವಾಗಿಲ್ಲ. ಅಂಥ ಮಕ್ಕಳ ಚುರುಕುತನವನ್ನು ಅಡುಗೆ ಮನೆಯಲ್ಲೂ ಕೈತೋಟದಲ್ಲೂ ಬಳಸಿಕೊಳ್ಳುವ ಉಪಾಯವನ್ನೂ ಅಮ್ಮಂದಿರು ಕಂಡುಕೊಂಡಿದ್ದಾರೆ. ಅದಕ್ಕೇ ಖುಷಿ ‘ನಾನು ರೊಟ್ಟಿಯನ್ನು ವೃತ್ತವಾಗಷ್ಟೇ ಅಲ್ಲ, ಗೋಳವಾಗಿಯೂ (ಉಬ್ಬಿಸಿದಾಗ) ಮಾಡ ಬಲ್ಲೆ...’ ಎಂದು ಖುಷಿಯಿಂದ ಹೇಳುತ್ತಾಳೆ.

ಒಬ್ಬ ಅಮ್ಮ ಕನ್ನಡದ ಕತೆಗಳನ್ನು, ಚೆಂದದ ಪದ್ಯಗಳನ್ನು ಚೊಕ್ಕವಾಗಿ ಮಗನೊಟ್ಟಿಗೆ ತಾನೂ ಸೇರಿ ಹೇಳಿ, ಹಾಡಿ ಆಪ್ತೇಷ್ಟರಲ್ಲಿ ಜನಪ್ರಿಯತೆ ಗಳಿಸಿದ್ದಾಳೆ. ಇನ್ನೊಬ್ಬಾಕೆ, ಮಗನಲ್ಲಿರುವ ಕತೆ ಬರೆಯುವ ಹವ್ಯಾಸಕ್ಕೆ ವಾರಕ್ಕೆ ಒಂದು ದಿನ ಸಮಯ ಮೀಸಲಿಟ್ಟು, ಮಗ ಬರೆದು, ಗಟ್ಟಿಯಾಗಿ ಓದುವಂತೆ ಮಾಡಿ ಆತನ ಆತ್ಮವಿಶ್ವಾಸ ಹೆಚ್ಚುವಂತೆ ಮಾಡುತ್ತಿದ್ದಾಳೆ. ತಮ್ಮೊಡನೆ ಮಕ್ಕಳನ್ನು ನಿತ್ಯದ ಯೋಗಾಭ್ಯಾಸಕ್ಕೆ ಸೇರಿಸಿಕೊಂಡ ಪೋಷಕರು ಕೆಲವರಾದರೆ, ಪಾಠ, ಹೋಂವರ್ಕ್ ಮುಗಿದ ನಂತರ ಮಕ್ಕಳೊಡನೆ ಕೇರಂ, ಚೆಸ್ ಆಡುವವರು ಕೆಲವರು.

ಆದರೆ ಉದ್ಯೋಗಸ್ಥ ತಾಯಂದಿರಿಗೆ ಇಷ್ಟೆಲ್ಲ ವ್ಯವಧಾನ ಇಲ್ಲ. ಮನೆಯಲ್ಲಿರುವ ಮಕ್ಕಳು ಏನು ಮಾಡಿಕೊಂಡರೋ ಏನೋ ಎಂಬ ಆತಂಕ ಮನದಲ್ಲಿ. ‘ನನ್ನ ಮಗನಿಗೆ ಬೇರೇನೂ ತೊಂದರೆ ಇಲ್ಲ, ಆದರೆ ಇತರರೊಡನೆ ಕೂಡಿ ಸಾಮಾಜಿಕವಾಗಿ ಬೆಳೆಯುವ ಅವಕಾಶ ಇಲ್ಲವಲ್ಲ’ ಎಂಬ ಕೊರಗು ಇನ್ನೊಬ್ಬರದ್ದು.

ಕೋವಿಡ್‌ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ಹೇಳಿಕೆಯೇ ಹಾಸ್ಯಾಸ್ಪದ ಎನ್ನುತ್ತಿದ್ದಾರೆ ಒಬ್ಬ ಪೋಷಕಿ! ಮಕ್ಕಳಲ್ಲಿ ರೋಗ ಎದುರಿಸುವ ಶಕ್ತಿ ಅಧಿಕವಾಗಿರುತ್ತದೆ, ಅವಶ್ಯ ಕ್ರಮಗಳೊಂದಿಗೆ ಶಾಲೆಯ ಬಾಗಿಲು ತೆರೆಯಲಿ ಎಂಬುದು ಹೆತ್ತವರ ಆಶಯ.

ಇನ್ನು ಮಕ್ಕಳ ಉತ್ತರಗಳೂ ಮನತಟ್ಟುವಂತಿದ್ದವು. ಕೊರೊನಾ ವೈರಸ್ ಪ್ರಯೋಗಾಲಯದಲ್ಲಿ ಹುಟ್ಟಿದ್ದೋ ಅಥವಾ ಚೀನಾದ ಕಾಡಿನಲ್ಲೋ ಎಂಬ ಕುತೂಹಲ ಹರ್ಷನಿಗೆ. ವೈರಸ್ ಭೀತಿ ಕಳೆದ ನಂತರದ ದಿನಗಳು ಹೇಗಿರಬಹುದು ಎಂಬ ಕುತೂಹಲ ಶ್ರೀಯಾಳಿಗೆ. ಮೂರನೇ ಅಲೆ ಬಂದರೆ ಸುರಕ್ಷಿತ ಕ್ರಮಗಳನ್ನು ಖಂಡಿತ ಪಾಲಿಸುತ್ತೇವೆ, ಶಾಲೆ ಆರಂಭವಾಗಲಿ ಎಂದೇ ಹೆಚ್ಚಿನ ಮಕ್ಕಳ ಒಕ್ಕೊರಲು. ಒಬ್ಬ ಬಾಲಕಿ ವ್ಯಕ್ತಪಡಿಸಿದ ಅಭಿಪ್ರಾಯ ಏನು ಗೊತ್ತೆ? ಶಾಲೆಯ ಸ್ನೇಹಿತರನ್ನಷ್ಟೇ ಅಲ್ಲ, ನಾವೆಲ್ಲ ಒಟ್ಟಾಗಿ ಸಾಲಿನಲ್ಲಿ ನಿಂತು ‘ಜನಗಣಮನ...’ ಹಾಡುವುದನ್ನೂ ಮಿಸ್ ಮಾಡಿಕೊಳ್ತಾ ಇದ್ದೀವಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು