ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ನಡೆದ ಆರು ತಿಂಗಳ ಗರ್ಭಿಣಿ ಮಾನ್ಯಳ ಹತ್ಯೆ ಎಂಥವರ ಎದೆಯನ್ನೂ ನಡುಗಿಸುವಂಥದ್ದು. ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿ, ಮನೆತನದ ಮರ್ಯಾದೆಗೆ ಕುಂದು ತಂದಳೆಂಬ ಕಾರಣಕ್ಕಾಗಿ ತಂದೆಯೇ ಮಗಳನ್ನು ಹತ್ಯೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂಥ ಘಟನೆ.

ಶುದ್ಧನೆತ್ತರಿನ ಭ್ರಮೆ, ಕುಟುಂಬದ ಮರ್ಯಾದೆ, ಸಮಾಜದ ಟೀಕೆಯ ಹೆಸರಿನಲ್ಲಿ ಪ್ರತಿವರ್ಷ ಭಾರತದಲ್ಲಿ ಮರ್ಯಾದೆಗೇಡು ಹತ್ಯೆಗೀಡಾಗುತ್ತಿರುವವರ ಸಂಖ್ಯೆ ಒಂದು
ಸಾವಿರದಷ್ಟಿದೆ ಎನ್ನುತ್ತವೆ ‘ಹಾನರ್ ಬೇಸ್ಡ್ ವಯಲೆನ್ಸ್ ಅವೇರ್ನೆಸ್ ನೆಟ್ವರ್ಕ್’ನ ಅಂಕಿ–ಅಂಶಗಳು. ಮಾಧ್ಯಮ ಗಳಲ್ಲಿ ವರದಿಯಾಗುವ ಪ್ರಕರಣಗಳು ಬೆರಳೆಣಿಕೆ, ವರದಿ ಆಗದ ಪ್ರಕರಣಗಳು ನೂರಾರು.

ಈ ಮೊದಲು, ಉತ್ತರಪ್ರದೇಶ, ಹರಿಯಾಣದಂಥ ರಾಜ್ಯಗಳಲ್ಲಷ್ಟೇ ಕೇಳಿಬರುತ್ತಿದ್ದ ಮರ್ಯಾದೆಗೇಡು ಹತ್ಯೆಗಳು ದಕ್ಷಿಣ ಭಾರತಕ್ಕೂ ಕಾಲಿಟ್ಟಿರುವುದು ಆತಂಕಕಾರಿ. ಇಂಥ ಹತ್ಯೆಗಳ ಜಾಡು ಹಿಡಿದು ಹೊರಟರೆ ವರ್ಣಸಂಕರದ ಭೀತಿಯ ಕಥನಗಳು ತೆರೆದುಕೊಳ್ಳುತ್ತವೆ. ಜಾತಿಪ್ರಾಬಲ್ಯದ ಪ್ರಬಲ ಮುದ್ರೆಯಾಗಿರುವ ಹತ್ಯೆಗಳಲ್ಲಿ ಬಲಿಪೀಠದಲ್ಲಿ ಮಹಿಳೆ ಇರುವುದು ಅಚ್ಚರಿಯೇನಲ್ಲ.

‘ಸ್ವಜಾತಿ, ಸ್ವಧರ್ಮದ ಹೆಣ್ಣು ವರ್ಣಸಂಕರ ಆಗಬಾರದೆಂಬ ಉದ್ದೇಶದಿಂದ ಬಾಲ್ಯವಿವಾಹ, ಸತಿ ಸಹಗಮನ ಪದ್ಧತಿಯನ್ನು ರೂಪಿಸಲಾಗಿತ್ತು. ಅಂತೆಯೇ ಜಾತಿವ್ಯವಸ್ಥೆಯನ್ನು ಉಳಿಸಿಕೊಳ್ಳಲು ಹೆಣ್ಣಿನ ಲೈಂಗಿಕ ನಿಯಂತ್ರಣವೂ ಅಗತ್ಯ ಎಂಬ ಹುನ್ನಾರ ಪುರುಷ ಪ್ರಧಾನ ವ್ಯವಸ್ಥೆಯದಾಗಿತ್ತು’ ಎಂದು ಅಂಬೇಡ್ಕರ್ ತಮ್ಮ ‘ಭಾರತದಲ್ಲಿ ಜಾತಿಗಳು: ಅವುಗಳ ರಚನೆ, ಮೂಲ ಮತ್ತು ಬೆಳವಣಿಗೆ’ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದಲ್ಲಿ ಮರ್ಯಾದೆಗೇಡು ಹತ್ಯೆಯ ಇತಿಹಾಸ 12ನೇ ಶತಮಾನದಿಂದಲೂ ಇದೆ. ಜಾತಿವಿನಾಶಕಾರಿ ಚಳವಳಿಗೆ ಮುನ್ನುಡಿ ಬರೆದಿದ್ದ ಬಸವಣ್ಣನವರು, ಸಮಗಾರ ಹರಳಯ್ಯ ಅವರ ಮಗ ಶೀಲವಂತನ ಜೊತೆಗೆ ಬ್ರಾಹ್ಮಣ ಮಧುವರಸರ ಮಗಳು ಲಾವಣ್ಯಳ ಮದುವೆ ಮಾಡಿಸುತ್ತಾರೆ. ಈ ವರ್ಣಸಂಕರವನ್ನು ಸಹಿಸಲಾಗದೆ ಕುಪಿತರಾಗುವ ಮನುವಾದಿಗಳು ಚಪ್ಪಲಿ ಹೊಲೆಯುವ ಜಾತಿಯ ವರನಿಗೆ ಬ್ರಾಹ್ಮಣ ಹೆಣ್ಣನ್ನು ಕೊಡುವುದು ಧರ್ಮಬಾಹಿರ, ವಿಲೋಮ ವಿವಾಹ ಎಂದು ಕಲ್ಯಾಣದ ದೊರೆ ಬಿಜ್ಜಳನಿಗೆ ದೂರುತ್ತಾರೆ. ಶಿಕ್ಷೆಗೆ ಗುರಿಯಾಗುವ ಹರಳಯ್ಯ, ಶೀಲವಂತ ಮತ್ತು ಮಧುವರಸ ಸಾವಿಗೀಡಾಗುತ್ತಾರೆ.

ಕೃತಕ ಬುದ್ಧಿಮತ್ತೆಯ ಕಾಲದಲ್ಲೂ ಧರ್ಮ, ಜಾತಿ ಕಾರಣಕ್ಕಾಗಿ ಮರ್ಯಾದೆಗೇಡು ಹತ್ಯೆಗಳಾಗುತ್ತಿವೆ. ಧಾರ್ಮಿಕ ಭಯೋತ್ಪಾದನೆಯಂತೆ, ಜಾತಿಯ ಭಯೋತ್ಪಾದನೆ ತನ್ನ ಕಂಬಂಧಬಾಹು ವಿಸ್ತರಿಸುವ ಮುನ್ನವೇ ಅದನ್ನು ಚಿವುಟುವ ಅಗತ್ಯವಿದೆ. 70–80ರ ದಶಕದಲ್ಲಿ ಅಂತರ್ಜಾತಿ, ಅಂತರಧರ್ಮೀಯ ವಿವಾಹಿತರಿಗೆ ಸಾಮಾಜಿಕ ಚಳವಳಿಗಳು, ಹೋರಾಟಗಾರರ ಬೆಂಬಲವಿರುತ್ತಿತ್ತು. ‘ಜಾತಿ ಸುಡುವ ಮಂತ್ರ ಪ್ರೀತಿ’ ಎನ್ನುವುದು ಕುವೆಂಪು ಅವರ ಮಂತ್ರಮಾಂಗಲ್ಯದ ಆಶಯ.

ಜನಚಳವಳಿಗಳಿಗೆ ಹಿನ್ನಡೆ ಆಗುತ್ತಿರುವ ವರ್ತಮಾನದಲ್ಲಿ ಮರ್ಯಾದೆಗೇಡು ಹತ್ಯೆಗಳು ಪ್ರಾಬಲ್ಯ ಮೆರೆಯುತ್ತಿವೆ. ಇಂಥ ಹತ್ಯೆಗಳನ್ನು ಕಾನೂನಿನ ಮೂಲಕ ತಡೆಗಟ್ಟಬೇಕಿದೆ; ಅಂತರ್ಜಾತಿ, ಅಂತರಧರ್ಮೀಯ ವಿವಾಹಿತರಿಗೆ ಸಾಮಾಜಿಕ ಮಾನ್ಯತೆ ನೀಡುವ ಮೂಲಕ ಪ್ರೀತಿಸುವ ಜೀವಗಳನ್ನು ಕಾಪಾಡಬೇಕಿದೆ.

ಮರ್ಯಾದೆಗೇಡು ಹತ್ಯೆಗಳನ್ನು ತಡೆಯುವಲ್ಲಿ ಕಾನೂನು ಮಾತ್ರ ಪ್ರಬಲ ಪಾತ್ರ ವಹಿಸಬಲ್ಲದು. ಶಕ್ತಿವಾಹಿನಿ ಮತ್ತು ಭಾರತ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ಸಂಗಾತಿಯ ಆಯ್ಕೆಯ ಹಕ್ಕನ್ನು’ ಸಂವಿಧಾನದ ವಿಧಿ 21 ಮತ್ತು 19 (1) (ಎ) ಅಡಿಯಲ್ಲಿ ಗುರುತಿಸಿದ್ದು, ಬಾಳ ಸಂಗಾತಿಯ ಆಯ್ಕೆಯ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಮೂರನೇ ವ್ಯಕ್ತಿಗೆ ಯಾವುದೇ ಅಧಿಕಾರ ಇಲ್ಲ ಎಂದು ಘೋಷಿಸಿದೆ. ವಿವಾಹದ ಹಕ್ಕುಗಳಿಗೆ ಚ್ಯುತಿ ಉಂಟು ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆದೇಶಿಸಿದೆ. ವಯಸ್ಕರ ವಿವಾಹ ಕುರಿತಾಗಿ ಮತ್ತು ಬಾಳ
ಸಂಗಾತಿಯ ಆಯ್ಕೆಯ ವಿಚಾರವಾಗಿ ನಡೆಯುವ ಸಮುದಾಯದ ಸಭೆಗಳು, ಖಾಪ್ ಪಂಚಾಯತ್, ಕಟ್ಟಾ ಪಂಚಾಯತ್ಗಳನ್ನು ಅಕ್ರಮ ಕೂಟಗಳೆಂದು ಭಾವಿಸ ಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.

ಮರ್ಯಾದೆಗೇಡು ಹತ್ಯೆಗಳ ಬಗೆಗಿನ ಸುಪ್ರೀಂ ಕೋರ್ಟ್ ತೀರ್ಪುಗಳು ಮಹತ್ವದ್ದಾಗಿವೆ. ಲತಾ ವರ್ಸಸ್ ಸ್ಟೇಟ್ ಆಫ್ ಯು.ಪಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೀಗೆ ಹೇಳಿದೆ:

‘ಜಾತಿ ವ್ಯವಸ್ಥೆ ಈ ದೇಶಕ್ಕೆ ಅಂಟಿದ ಶಾಪ. ಎಷ್ಟು ಬೇಗ ಅದನ್ನು ನಾಶಪಡಿಸಲಾಗುತ್ತದೆಯೋ ಅಷ್ಟು ಒಳ್ಳೆಯದು. ದೇಶವು ಒಗ್ಗಟ್ಟಾಗಿ ತನ್ನ ಮುಂದಿರುವ ಸವಾಲುಗಳನ್ನು ಎದುರಿಸಬೇಕಾದ ಸಂದರ್ಭದಲ್ಲಿ ಜಾತಿ, ದೇಶವನ್ನು ಒಡೆಯುತ್ತಿದೆ. ‘ಜಾತಿ ವ್ಯವಸ್ಥೆ’ಯನ್ನು ನಾಶಪಡಿಸುವ ಕಾರಣಕ್ಕೆ ಅಂತರ್ಜಾತಿ ಮದುವೆಗಳು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿವೆ. ಆದರೆ, ದೇಶದ ಹಲವು ಭಾಗಗಳಲ್ಲಿ ಅಂತರ್ಜಾತಿ ಮದುವೆ ಮಾಡಿಕೊಳ್ಳುತ್ತಿರುವ ಯುವ ಜೋಡಿಗಳನ್ನು ಬೆದರಿಸುವ ಅಥವಾ ಹಿಂಸೆ ನೀಡುವಂಥ ಘಟನೆಗಳು ವರದಿ ಆಗುತ್ತಿರುವುದು ಆಘಾತಕಾರಿ. ಅಂತಹ ಹಿಂಸೆಯ ಘಟನೆಗಳು, ಬೆದರಿಕೆಗಳು, ಕಿರುಕುಳಗಳು ಸಂಪೂರ್ಣ ಕಾನೂನುಬಾಹಿರ ಮತ್ತು ಅವುಗಳನ್ನು ಎಸಗುವವರನ್ನು ಕಠಿಣವಾಗಿ ಶಿಕ್ಷಿಸಬೇಕು’. ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಕಠಿಣ ಕಾಯ್ದೆಗಳನ್ನು ರೂಪಿಸುವ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.