ಬುಧವಾರ, ಮಾರ್ಚ್ 3, 2021
19 °C
ಉದ್ಯೋಗ ಭದ್ರತೆ, ಕನಿಷ್ಠ ಅವಶ್ಯಕ ವೇತನ ಮೂಲಭೂತ ಹಕ್ಕಾಗಬೇಕು

ಅರಳುವ ಮುಂಚೆ ಬಾಡಲು ಬಿಡದಿರಿ

ಚೇತನ್ ಎಂ Updated:

ಅಕ್ಷರ ಗಾತ್ರ : | |

Deccan Herald

2018ರ ಸಾಲಿನ ಜಾಗತಿಕ ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿದ ಕೇಂಬ್ರಿಜ್‌ ವಿಶ್ವವಿದ್ಯಾಲಯದ ‘ಕೇಂಬ್ರಿಜ್‌ ಅಸೆಸ್‌ಮೆಂಟ್ ಇಂಟರ್‌ನ್ಯಾಷನಲ್ ಎಜುಕೇಷನ್’ ತಂಡವು ತನ್ನ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಭಾರತದಲ್ಲಿ ಶೇ 60ರಷ್ಟು ವಿದ್ಯಾರ್ಥಿಗಳು ಹೆಚ್ಚುವರಿ ತರಬೇತಿ ಅಥವಾ ಟ್ಯೂಷನ್‌ಗಳಿಗೆ ಹೋಗುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಇದು ನಮ್ಮ ಶಾಲಾ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿ. ಶಾಲಾ ಶಿಕ್ಷಣದ ಕೊರತೆಗಳನ್ನು ಹಲವಾರು ಖಾಸಗಿ ಸಮೀಕ್ಷೆಗಳು, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವರದಿಗಳು ಪಟ್ಟಿ ಮಾಡಿವೆ. ಪ್ರಥಮ್ ಸಂಸ್ಥೆಯ ‘ಏಸರ್’ ವರದಿಯಂತೂ ಶಾಲೆಗಳಲ್ಲಿ ಬೋಧನೆ ಮತ್ತು ಕಲಿಕೆಯ ಕುಸಿಯುತ್ತಿರುವ ಗುಣಮಟ್ಟವನ್ನು ದಾಖಲಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಪೋಷಕರು ತಮ್ಮ ಆದಾಯದಲ್ಲಿ ಶೇ 11ರಿಂದ 12ರಷ್ಟು ಖರ್ಚು ಮಾಡಿ ಮಕ್ಕಳನ್ನು ಅನಿವಾರ್ಯವಾಗಿ ಟ್ಯೂಷನ್‌ಗೆ ಕಳುಹಿಸುತ್ತಿದ್ದಾರೆ. ಮೂಲಾಂಶಗಳನ್ನು (ಬೇಸಿಕ್ಸ್) ಗಟ್ಟಿಗೊಳಿಸಲಿಕ್ಕಾಗಿ ಟ್ಯೂಷನ್‌ಗೆ ಕಳಿಸುತ್ತೇವೆ ಎಂದು ಹಲವು ಪೋಷಕರು ಸಮೀಕ್ಷೆಗಳಲ್ಲಿ ಹೇಳಿದ್ದಾರೆಂದರೆ ಶಾಲೆಗಳಲ್ಲಿ ಬೋಧನೆಯ ಕಳಪೆ ಮಟ್ಟ ಸ್ಪಷ್ಟವಾಗುತ್ತದೆ.

ವೈಜ್ಞಾನಿಕವಾಗಿ ಚಿಂತಿಸುವ, ಸ್ವತಂತ್ರವಾಗಿ ವಿಶ್ಲೇಷಿಸುವ, ಕಲ್ಪನಾಶಕ್ತಿಯನ್ನು ಅರಳಿಸುವ, ಪರಾಮರ್ಶಿಸಿ ಪರಿಕಲ್ಪನೆಯನ್ನು ಅರ್ಥೈಸುವ ಬದಲಿಗೆ, ಉರು ಹೊಡೆಯುವ ಶಿಕ್ಷಣ ಪದ್ಧತಿ ನಮ್ಮಲ್ಲಿದೆ. ಹಿಂದಿನ ಪರೀಕ್ಷೆಗಳಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ನೆನಪಿನಲ್ಲಿಟ್ಟುಕೊಂಡು, ಉತ್ತರ ಪತ್ರಿಕೆಯಲ್ಲಿ ಹೊರಹಾಕುವ ನಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಪ್ರಹಸನವೇ ಪರೀಕ್ಷೆ! ಇಂತಹ ಸಾಮರ್ಥ್ಯದಲ್ಲಿ ‘ಪ್ರಾವೀಣ್ಯ’ ಪಡೆದುಕೊಳ್ಳಲು ‘ಟ್ಯೂಷನ್’ ಸಂಸ್ಥೆ ನೆರವಾಗುತ್ತದೆ. ಇನ್ನೊಂದರ್ಥದಲ್ಲಿ ‘ಮನನ’ ಕೇಂದ್ರಿತ ಶಿಕ್ಷಣ ವ್ಯವಸ್ಥೆಯೇ ಟ್ಯೂಷನ್ ಸಂಸ್ಥೆಗಳನ್ನು ಪೋಷಿಸುತ್ತಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉದ್ಯೋಗದ ಅವಕಾಶ, ಪ್ರವೇಶ ಪರೀಕ್ಷೆ ಮತ್ತು ಕೋಚಿಂಗ್ ದಂಧೆಗೆ ನಿಕಟ ಸಂಬಂಧ ಇದೆ. ಪ್ರವೇಶ ಪರೀಕ್ಷೆಗಳೇ ಕೋಚಿಂಗ್ ಸಂಸ್ಥೆಗಳ ಜೀವದ್ರವ್ಯ. ಕಳೆದ 15 ವರ್ಷಗಳಲ್ಲಿ ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುವವರ ಸಂಖ್ಯೆ 4 ರಿಂದ 5 ಪಟ್ಟು ಹೆಚ್ಚಿದೆ. ಹಾಗಾಗಿ, ಕೈತುಂಬ ಸಂಬಳ ಮತ್ತು ಉದ್ಯೋಗ ಭದ್ರತೆಯನ್ನು ಏಕಕಾಲಕ್ಕೆ ನೀಡಬಲ್ಲ ಉದ್ಯೋಗಕ್ಕೆ ಬೇಡಿಕೆ ದ್ವಿಗುಣಗೊಂಡಿದೆ. ಎಲ್ಲರಿಗೂ ಇಂತಹ ಅವಕಾಶ ಕಲ್ಪಿಸಲು ಸರ್ಕಾರಗಳು ವಿಫಲವಾಗಿರುವ ಕಾರಣ, ಉನ್ನತ ಉದ್ಯೋಗಕ್ಕೆ ಪ್ರವೇಶ ಪರೀಕ್ಷೆಗಳನ್ನು ನಡೆಸಿ, ಕೆಲವರಿಗಷ್ಟೇ ಉನ್ನತ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಯಿತು. ‘ಪ್ರವೇಶ ಪರೀಕ್ಷೆ ತೇರ್ಗಡೆಯಾಗಲು ತರಬೇತಿ ನೀಡುತ್ತೇವೆ’ ಎಂಬುದನ್ನೇ ಬಂಡವಾಳ ಮಾಡಿಕೊಂಡು ಕೋಚಿಂಗ್ ಸಂಸ್ಥೆಗಳು ನಾಯಿ ಕೊಡೆಗಳಂತೆ ತಲೆ ಎತ್ತಿದವು. ಇಂದು ಪ್ರತಿಷ್ಠಿತ ಐಐಟಿ, ಐಐಎಂ, ಮೆಡಿಕಲ್ ಮತ್ತು ಎಂಜಿನಿಯರಿಂಗ್ ಸೀಟು, ಸರ್ಕಾರಿ ನೌಕರಿ- ಎಲ್ಲದಕ್ಕೂ ಕೋಚಿಂಗ್ ನಡೆಯುತ್ತಿದೆ. ವಿಶೇಷವೆಂದರೆ ಅಂತಹ ಸಂಸ್ಥೆಗಳಲ್ಲಿ ತರಬೇತಿ ಪಡೆದವರಿಗೇ ಹೆಚ್ಚು ರ‍್ಯಾಂಕ್ ದೊರಕುತ್ತಿವೆ! ಜ್ಞಾನಾರ್ಜನೆ ಹಿಂದೆ ಸರಿದಿದೆ. ಪರೀಕ್ಷೆ ಎದುರಿಸಲು ಬೇಕಾದ ತಂತ್ರಗಳನ್ನು, ಸೂತ್ರಗಳನ್ನು ಹೇಳಿಕೊಡಲಾಗುತ್ತದೆ.

‘ಅಸೋಚಾಮ್’ ಸಂಸ್ಥೆಯ ಪ್ರಕಾರ ಕಳೆದ 6 ವರ್ಷಗಳಿಂದ ಟ್ಯೂಷನ್‌ ಉದ್ಯಮ ವಾರ್ಷಿಕ ಶೇ 35ರಷ್ಟು ಬೆಳವಣಿಗೆ ಕಂಡಿದೆ. 2018ರ ಅಂತ್ಯಕ್ಕೆ ಇದರಲ್ಲಿ ಸುಮಾರು ₹ 4 ಲಕ್ಷ ಕೋಟಿಯಷ್ಟು ವಹಿವಾಟು ನಡೆಯಲಿದೆ. 2016ರಲ್ಲಿ, ದೆಹಲಿ ನಗರವೊಂದರಲ್ಲೇ ಐದು ಲಕ್ಷದಷ್ಟು ಖಾಸಗಿ ಟ್ಯೂಟರ್‌ಗಳು ಇದ್ದರು ಎನ್ನಲಾಗಿದೆ. ಈ ಕೋಚಿಂಗ್ ಸೆಂಟರ್‌ಗಳಲ್ಲಿನ ಟ್ಯೂಟರ್‌ಗಳ ತಿಂಗಳ ಸಂಬಳ, ಶಾಲೆಗಳಲ್ಲಿ ನೀಡುವ ವಾರ್ಷಿಕ ಸಂಬಳಕ್ಕೂ ಹೆಚ್ಚು! ಹಾಗಾಗಿಯೇ, ಉತ್ತಮ ಶಿಕ್ಷಕರು ಮಹಾನಗರಗಳಲ್ಲಿ ಶಾಲಾ ಕಾಲೇಜು ತೊರೆದು ಈ ಸಂಸ್ಥೆಗಳಲ್ಲಿ ಬೋಧನೆ ಮಾಡುತ್ತಿದ್ದಾರೆ. ಅಸೋಚಾಮ್ ಪ್ರಕಾರ ಕೆಲವು ಮಹಾನಗರಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆ
ಗಳ ಶೇ 87ರಷ್ಟು ವಿದ್ಯಾರ್ಥಿಗಳು ಹಾಗೂ ಶೇ  95ರಷ್ಟು ಪ್ರೌಢಶಾಲಾ ವಿದ್ಯಾರ್ಥಿಗಳು ಕೋಚಿಂಗ್ ಪಡೆಯುತ್ತಿದ್ದಾರೆ. ಪ್ರತ್ಯೇಕ ತರಬೇತಿಗೆ ಗಂಟೆಗೆ ₹1000ದಿಂದ 4000ದ ವರೆಗೂ, ಗುಂಪು ತರಬೇತಿಗೆ ತಿಂಗಳಿಗೆ ₹1000ದಿಂದ 6000ದವರೆಗೆ ಶುಲ್ಕ ಭರಿಸುತ್ತಾರೆ.

ಇದಕ್ಕೆ ಸಾಮಾಜಿಕ ಆಯಾಮವೂ ಇದೆ. ಪ್ರತಿಷ್ಠಿತ ಕೋಚಿಂಗ್ ಸಂಸ್ಥೆಗಳಲ್ಲಿ ತರಬೇತಿ ಪಡೆಯಲಿಕ್ಕಾಗದ ವಿದ್ಯಾರ್ಥಿಗಳು ಉನ್ನತ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಇದು ಶೋಭೆ ಅಲ್ಲ. ಇಂತಹ ಸಂಸ್ಥೆಗಳೇ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಅಕ್ರಮ ದಂಧೆಯಲ್ಲಿ ತೊಡಗಿರುವ ಹಲವು ಪ್ರಕರಣಗಳು ಕರ್ನಾಟಕದಲ್ಲಿ ಜರುಗಿವೆ. ಇನ್ನೊಂದೆಡೆ ಒಳ್ಳೆಯ ಅಂಕ ಪಡೆದು ಪೋಷಕರನ್ನು ಸಂತುಷ್ಟಗೊಳಿಸುವ ಒತ್ತಡವನ್ನು ವಿದ್ಯಾರ್ಥಿಗಳು ಅನುಭವಿಸುತ್ತಾರೆ. ರಾಜಸ್ಥಾನದ ಕೋಟಾ ಎಂಬ ಜಿಲ್ಲೆ ಐಐಟಿ ಸೀಟು ಪಡೆಯಲು ಎದುರಿಸಬೇಕಿರುವ ಜೆಇಇ ಎಂಬ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವ ಕೋಚಿಂಗ್ ಸಂಸ್ಥೆಗಳ ತಾಣ.  2015ರಿಂದ 2017ರ ಮಧ್ಯೆ 60ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಲ್ಲಿನ ಒತ್ತಡದ ದಿನಚರಿ ಸಹಿಸಲಾಗದೆ ಆತ್ಮಹತ್ಯೆಗೆ ಮೊರೆ ಹೋಗಿದ್ದಾರೆ. ನಿಮ್ಹಾನ್ಸ್ ವರದಿ ಪ್ರಕಾರ ಪ್ರತಿ 55 ನಿಮಿಷಕ್ಕೆ ಒಬ್ಬ ವಿದ್ಯಾರ್ಥಿ ಜೀವ ತೆಗೆದುಕೊಳ್ಳುತ್ತಿದ್ದಾನೆ.

ಈ ಸಮಸ್ಯೆ ಪರಿಹಾರಕ್ಕೆ ಶೈಕ್ಷಣಿಕ ಮತ್ತು ಸಾಮಾಜಿಕ ರಚನೆಯಲ್ಲೇ ಮೂಲಭೂತ ಬದಲಾವಣೆ ಬೇಕು. ಉದ್ಯೋಗಾವಕಾಶಕ್ಕೂ ಶಿಕ್ಷಣದ ಉದ್ದೇಶಕ್ಕೂ ತಪ್ಪಾಗಿ ಬೆಸೆದಿರುವ ಸಂಬಂಧವನ್ನು ತೊಡೆದು ಹಾಕಿ, ಉದ್ಯೋಗ ಭದ್ರತೆ ಹಾಗೂ ಕನಿಷ್ಠ  ಅವಶ್ಯಕ ವೇತನ ಎಲ್ಲರ ಮೂಲಭೂತ ಹಕ್ಕಾಗಬೇಕು. ಶಿಕ್ಷಣ ಎಂಬುದು ನೈಜ ಜ್ಞಾನವನ್ನು ಪಸರಿಸುವ ಸಾಧನವಾದರೆ ಈ ಸಮಸ್ಯೆ ಬಗೆಹರಿಯುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು