ಮನದ ಗಲೀಜು ತೊಳೆಯುವ ಪುಡಿ ಇದೆಯೇ?

ಮಂಗಳವಾರ, ಏಪ್ರಿಲ್ 23, 2019
31 °C

ಮನದ ಗಲೀಜು ತೊಳೆಯುವ ಪುಡಿ ಇದೆಯೇ?

Published:
Updated:
Prajavani

ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿರುವ ಡಿಟರ್ಜಂಟ್ ಪುಡಿಯೊಂದರ ಜಾಹೀರಾತನ್ನು ಇತ್ತೀಚೆಗಷ್ಟೇ ನೋಡಿದೆ. ಸಂವಿಧಾನದ ಆಶಯದ ಮತ್ತು ನಮ್ಮೆಲ್ಲರ ಬಯಕೆಯ ಬಹುತ್ವದ ಭಾರತದ ಝಲಕ್ ಅನ್ನು ಅದರಲ್ಲಿ ನೋಡಿ ಖುಷಿಪಟ್ಟೆ.

ಜಾಹೀರಾತು ಇಷ್ಟೇ. ಅಚ್ಚಬಿಳಿ ಉಡುಪಿನಲ್ಲಿ ಸೈಕಲ್‍ನಲ್ಲಿ ಬರುವ ಪುಟ್ಟ ಬಾಲೆ, ಓಣಿಯ ಮಕ್ಕಳ ಹತ್ತಿರ ಕೇಳಿ ಕೇಳಿ ಬಣ್ಣ ಹಾಕಿಸಿಕೊಳ್ಳುತ್ತಾಳೆ. ಆಕೆ ಹಿಂದೂ. ಅವರ ಹತ್ತಿರ ಬಣ್ಣ ಖಾಲಿಯಾದ ಮೇಲೆ, ಬಿಳಿ ಬಟ್ಟೆ ಧರಿಸಿದ ತನ್ನ ಸ್ನೇಹಿತನನ್ನು ಹೊರಗೆ ಕರೆಯುತ್ತಾಳೆ. ಆತ ಮುಸ್ಲಿಂ ಬಾಲಕ. ಅವನನ್ನು ಸೈಕಲ್ ಮೇಲೆ ಕೂರಿಸಿಕೊಂಡು ಮಸೀದಿಯ ಹತ್ತಿರ ಬಿಡುತ್ತಾಳೆ. ಆತ ‘ನಮಾಜ್ ಓದಿ ಬರುತ್ತೇನೆ’ ಎನ್ನುತ್ತಾನೆ. ಅದಕ್ಕೆ ಆಕೆ ‘ಆಮೇಲೆ ಬಣ್ಣ ಬೀಳುತ್ತದೆ’ ಎನ್ನುತ್ತಾಳೆ. ‘ಆತ್ಮೀಯತೆಗಾಗಿ ಬಟ್ಟೆ ಕಲೆಯಾಗುವುದಾದರೆ ಕಲೆ ಒಳ್ಳೆಯದು’ ಎನ್ನುವ ಮಾತಿನೊಂದಿಗೆ ಜಾಹೀರಾತು ಮುಗಿಯುತ್ತದೆ.

ಹೋಳಿಯಾಟದಲ್ಲಿ ಭ್ರಾತೃತ್ವದ, ಏಕತೆಯ ಸಂದೇಶ ಸಾರಿದ ಈ ಸುಂದರ ಜಾಹೀರಾತಿನಲ್ಲಿಯೂ ಕೋಮುದ್ವೇಷದ ಕಿಡಿ ಹಚ್ಚಲೆತ್ನಿಸಿದ ವ್ಯಕ್ತಿಗಳ ಮನಃಸ್ಥಿತಿ ಎಂಥದ್ದಿರಬಹುದು ಎಂದು ಅಚ್ಚರಿಯಾಯಿತು. ಏಳೆಂಟು ವರ್ಷದ ಆ ಮುದ್ದು ಮಕ್ಕಳನ್ನು ನೋಡಿ ನಮ್ಮ ತುಟಿಯಂಚಿನಲ್ಲಿಯೂ ಮುಗುಳ್ನಗು ಬಿರಿಯುತ್ತದೆ. ಆದರೆ, ಅದರಲ್ಲೂ ಲವ್ ಜಿಹಾದ್ ಅನ್ನು ಹುಡುಕುವ ವಿಕೃತ ಮನಸ್ಸುಗಳಿವೆಯೆಂದರೆ ಅಚ್ಚರಿಯಾಗುತ್ತದೆ. ಆ ಡಿಟರ್ಜಂಟ್ ಪುಡಿಯನ್ನು ಮತ್ತು ಆ ಕಂಪನಿಯ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಕೆಲವರು ಕರೆ ಕೊಟ್ಟಿದ್ದಾರೆ. ಜಾಹೀರಾತಿನಲ್ಲಿ ಹುಡುಗಿಯ ಬದಲು ಹುಡುಗ ಇರಬೇಕಿತ್ತು ಎಂಬ ಅವರ ಸೆಕ್ಸಿಸ್ಟ್ ಹೇಳಿಕೆ, ಅವರು ಉಪಯೋಗಿಸಿರುವ ಭಾಷೆ, ಅದರಲ್ಲಿ ಉಕ್ಕುತ್ತಿರುವ ದ್ವೇಷ ಆತಂಕ ಹುಟ್ಟಿಸುತ್ತದೆ.

ಸಮಾಧಾನಕರ ವಿಷಯವೆಂದರೆ, ಇಂತಹವರ ಅಭಿಯಾನಕ್ಕೆ ವಿರುದ್ಧವಾಗಿ ಆ ಕಂಪನಿಯ ಪರವಾದ ಅಭಿಯಾನವೂ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ. ತಾನಿವತ್ತು ಎರಡು ಕೆ.ಜಿ. ಹೆಚ್ಚಿಗೆ ಆ ಡಿಟರ್ಜಂಟ್ ಪೌಡರ್ ಕೊಂಡುಕೊಂಡೆ ಎಂದು ಬಹಳ ಮಂದಿ ಟ್ವೀಟ್ ಮಾಡಿದ್ದಾರೆ. ‘ಬಹುತ್ವವನ್ನು ವಿರೋಧಿಸುವ ಇಂತಹ ಶಕ್ತಿಗಳು ನಮ್ಮ ಪ್ರೀತಿಗೆ ಹೆದರುತ್ತಾರೆ. ಬನ್ನಿ, ಹೆಚ್ಚು ಹೆಚ್ಚು ಪ್ರೀತಿಯಿಂದ ಬಾಳೋಣ’ ಎಂದು ಮತ್ತೊಬ್ಬರು ಬರೆದಿದ್ದಾರೆ. ‘ಕರುಣೆ, ಪ್ರೀತಿ, ಸಹಿಷ್ಣುತೆಯನ್ನು ಬಿತ್ತರಿಸಲು ಕೂಡ ನಾವು ವೀರರಾಗಿರಬೇಕಾದ ಅವಶ್ಯಕತೆ ಇದೆ’ ಎಂದು ಆ ಜಾಹೀರಾತು ತಂಡದ ಸದಸ್ಯರಲ್ಲೊಬ್ಬರಾದ ವಾಸನ್ ಬಾಲಾ ಬೇಸರದಿಂದ ಟ್ವೀಟ್ ಮಾಡಿದ್ದಾರೆ.

ಇದೇ ರೀತಿ, ಚಹಾ ಕಂಪನಿಯ ಒಂದು ಜಾಹೀರಾತು ಕೂಡ ವಿರೋಧ ಕಂಡಿತ್ತು. ಮಗನೊಬ್ಬ ವಯಸ್ಸಾದ ತಂದೆಯನ್ನು ಕುಂಭಮೇಳಕ್ಕೆ ಕರೆದುಕೊಂಡು ಹೋಗುತ್ತಾನೆ. ಅವನ ಉದ್ದೇಶ ಆ ಜನಜಂಗುಳಿಯಲ್ಲಿ ತಂದೆಯನ್ನು ಬಿಟ್ಟು ಬರುವುದು. ಹಾಗೆಯೇ ಗುಂಪಿನಲ್ಲಿ ಬಿಟ್ಟು ಮುಂದೆ ಹೋಗಿಬಿಡುತ್ತಾನೆ. ಸ್ವಲ್ಪ ದೂರ ಹೋದ ಮೇಲೆ, ತಂದೆಯೊಬ್ಬ ತನ್ನ ಪುಟ್ಟ ಮಗ ಕೈತಪ್ಪಿ ಹೋಗಿಬಿಟ್ಟಾನೆಂದು ಇಬ್ಬರ ಕೈ ಸೇರಿಸಿ ಟವೆಲ್ ಒಂದನ್ನು ಕಟ್ಟುತ್ತಿರುತ್ತಾನೆ. ಅದನ್ನು ನೋಡಿದ ಈ ಮಗನಿಗೆ ಜ್ಞಾನೋದಯವಾಗಿ ವಾಪಸ್ ತಂದೆಯ ಹತ್ತಿರ ಬರುತ್ತಾನೆ. ತಂದೆ ಅಲ್ಲೇ ಕುಳಿತು ಎರಡು ಟೀ ಆರ್ಡರ್ ಮಾಡಿ ಮಗನಿಗಾಗಿ ಕಾಯುತ್ತಿರುತ್ತಾನೆ. ಅಪ್ಪ– ಮಗ ಇಬ್ಬರೂ ಟೀ ಕುಡಿಯುವ, ಮನಸ್ಸನ್ನು ತಟ್ಟುವ ಜಾಹೀರಾತದು. ಆ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸುವವರು ಹೇಳುವ ಪ್ರಕಾರ, ಅದು ಕುಂಭಮೇಳಕ್ಕೆ ಮಾಡಿದ ಅವಮಾನವಂತೆ!

ವೃಂದಾವನದಲ್ಲಿ, ಹೆತ್ತ ಮಕ್ಕಳಿಂದ ಪರಿತ್ಯಕ್ತರಾದ ಸಾವಿರಾರು ವಿಧವೆಯರ ಶೋಚನೀಯ ಪಾಡು ಇವರ ಕಂಗಳಿಗೆ ಕಾಣುವುದೇ ಇಲ್ಲ. ಭಾರತದಲ್ಲಿ ವಯಸ್ಸಾದ ತಂದೆತಾಯಿಗಳಿಂದ ‘ಮುಕ್ತಿ’ ಪಡೆಯುವ ಒಂದು ಜನಪ್ರಿಯ ವಿಧಾನ, ಅವರನ್ನು ದೂರದ ಊರಲ್ಲಿ ಗೊತ್ತಿರದ ಜನರ ನಡುವೆ ಬಿಟ್ಟು ಬರುವುದು. ಅದಕ್ಕೆ ಕುಂಭಮೇಳವಾದರೇನು, ಜಾತ್ರೆಯಾದರೇನು, ರೈಲ್ವೆ ಸ್ಟೇಷನ್ ಆದರೇನು! ನಾವು ನಾಚಿಕೆ ಪಡಬೇಕಿರುವುದು ನಮ್ಮ ಕೊಳಕು ಮನಃಸ್ಥಿತಿಯ ಬಗ್ಗೆ, ಪಿತೃದೇವೋಭವ ಮಾತೃದೇವೋಭವ ಎನ್ನುತ್ತಲೇ ವೃದ್ಧ ತಂದೆತಾಯಿಗಳನ್ನು ಅನಾಥರಾಗಿಸುವ ನೀಚತನದ ಬಗ್ಗೆಯೇ ಹೊರತು, ಅಂತಹ ವ್ಯಕ್ತಿಗಳಲ್ಲಿ ಪಾಪಪ್ರಜ್ಞೆ ಮೂಡಿಸಿ ಸಮಾಜದ ಸ್ವಾಸ್ಥ್ಯವನ್ನು ಸ್ವಲ್ಪಮಟ್ಟಿಗಾದರೂ ಕಾಪಾಡಲೆತ್ನಿಸುವ ಇಂತಹ ಜಾಹೀರಾತುಗಳ ಬಗ್ಗೆಯಲ್ಲ.

ಈ ಜಾಹೀರಾತುಗಳ ತಪ್ಪು ಇಷ್ಟೇ. ಅವು ನಮ್ಮ ಅಂತರಂಗವನ್ನು ನಮಗೇ ಬೆತ್ತಲುಗೊಳಿಸಿ ತೋರಿಸುತ್ತವೆ. ಅದನ್ನು ತಡೆದುಕೊಳ್ಳುವ ಧೈರ್ಯ ನಮಗಿಲ್ಲ ಅಷ್ಟೇ. ನಾವೆಲ್ಲರೂ ಒಂದು, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದು ಎಂದು ಬರೀ ಭಾಷಣಗಳಲ್ಲಿ ಹೇಳುತ್ತಿದ್ದೇವೆ. ನಮ್ಮ ಮನಸ್ಸಿನ ಗಲೀಜು ಮಾತ್ರ ಹಾಗೆಯೇ ಇದೆ. ಅದು ಇಂತಹ ಸಂದರ್ಭದಲ್ಲಿ ಹೊರಗೆ ಬರುತ್ತಿರುತ್ತದೆ. ಅದನ್ನು ತೊಳೆಯುವ ಯಾವ ಪುಡಿಯೂ ಲಭ್ಯವಿಲ್ಲದಿರುವುದು ನಮ್ಮೆಲ್ಲರ ದುರಂತ. ಸಮಾಜದಲ್ಲಿ ಸಾಮರಸ್ಯ ಹರಡುವ ಪ್ರಯತ್ನಗಳನ್ನು ಹೇಗಾದರೂ ತಡೆಯುವ ಇಂತಹ ಶಕ್ತಿಗಳನ್ನು ಒಟ್ಟಾಗಿ ಎದುರಿಸದಿದ್ದರೆ ಪರಿಣಾಮಗಳು ಗಂಭೀರವಾಗಲಿವೆ.

ಬರಹ ಇಷ್ಟವಾಯಿತೆ?

 • 29

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !