ಶನಿವಾರ, ಮಾರ್ಚ್ 6, 2021
32 °C

ಅರ್ಥವ್ಯವಸ್ಥೆ ಮತ್ತು ಅವಾಸ್ತವ ಕಲ್ಪನೆ

ಸಂತೋಷ ಕೌಲಗಿ Updated:

ಅಕ್ಷರ ಗಾತ್ರ : | |

Prajavani

ಆಧುನಿಕ ಅರ್ಥವ್ಯವಸ್ಥೆಯ ಬಗ್ಗೆ ಪ್ರಜ್ಞಾವಂತರೆಲ್ಲರೂ ಮಾತನಾಡಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ಇದ್ದೇವೆ. ಜಿಡಿಪಿ ಎಂಬ ಭ್ರಾಮಕ ಅಂಕಿ ಅಂಶವನ್ನು ಹಿಡಿದು, ಅರ್ಥವ್ಯವಸ್ಥೆ ಏಳುತ್ತಿದೆ ಅಥವಾ ಬೀಳುತ್ತಿದೆ ಎಂದು ಲೆಕ್ಕ ಹಾಕಿ, ಹಾಕಿ ನಾವು ಇಷ್ಟು ವರ್ಷ ಮೂರ್ಖರಂತೆ ವರ್ತಿಸಿದ್ದೇವೆ. ಜಿಡಿಪಿ ಎಂಬುದು ಉತ್ಪಾದನೆ ಮತ್ತು ಬಳಕೆಯನ್ನು ಆಧಾರವಾಗಿ ಇಟ್ಟುಕೊಂಡು ಅರ್ಥವ್ಯವಸ್ಥೆಯನ್ನು ನಿರ್ವಹಿಸುವ ಪುರಾತನ ಪದ್ಧತಿ. ಉತ್ಪಾದನೆಗೆ ನಾವು ಅವಲಂಬಿಸಿರುವ ನೈಸರ್ಗಿಕ ಸಂಪನ್ಮೂಲಗಳು ಅಕ್ಷಯ
ಪಾತ್ರೆಯಂತೆ ಸದಾಕಾಲ ತುಂಬಿರುತ್ತವೆ ಎಂಬ ತಿಳಿವಳಿಕೆಯನ್ನು ಹೊಂದಿದ್ದ ಕಾಲದಲ್ಲಿ ಅದು ರೂಪುಗೊಂಡದ್ದು.

ಈಗ ಕಾಲ ಬದಲಾಗಿದೆ. ಮನುಷ್ಯನಿಗೆ ಪ್ರಕೃತಿ ಉಚಿತವಾಗಿ ನೀಡಿದ್ದ ಎಲ್ಲ ಸಂಪನ್ಮೂಲಗಳೂ ಮುಗಿಯುವ ಮಟ್ಟಕ್ಕೆ ಬಂದು ನಿಂತಿವೆ. ಯಥೇಚ್ಛವಾಗಿ, ಸುಲಭವಾಗಿ ಲಭ್ಯವಿದ್ದ ಮರಳಿನಿಂದ ಹಿಡಿದು ನೀರಿನವರೆಗಿನ ಎಲ್ಲ ಸಂಪನ್ಮೂಲಗಳೂ ಜನಸಾಮಾನ್ಯರಿಂದ ದೂರವಾಗುತ್ತಿವೆ. ಮರಮಟ್ಟುಗಳು ಎಂಬ ಶಬ್ದವನ್ನು ನಮ್ಮ ನಿಘಂಟಿನಿಂದ ತೆಗೆದುಬಿಡುವ ಕಾಲ ಬಂದಿದೆ. ಕಾಡು ಬರಿದಾಗುತ್ತಿದೆ. ವಿಜ್ಞಾನಿಗಳು ಲೋಹಗಳಿಗಾಗಿ ಕ್ಷುದ್ರ ಗ್ರಹಗಳ ಕಡೆ ನೋಡತೊಡಗಿದ್ದಾರೆ.

ಅರ್ಥವ್ಯವಸ್ಥೆ ಸತತವಾಗಿ ಏರುಮುಖವಾಗಿಯೇ ಇರಬೇಕೆಂಬ ಕಲ್ಪನೆಯೇ ಅಸಹಜವಾದುದು. ಎಲ್ಲರನ್ನೂ ಕೊಳ್ಳುಬಾಕರನ್ನಾಗಿ ಮಾಡಿ, ಇದರಿಂದ ಅರ್ಥವ್ಯವಸ್ಥೆ ನಡೆಯುವಂತೆ ಮಾಡಿರುವುದೇ ಅವಾಸ್ತವವಾದುದು. ಇದು ಬಿದ್ದುಹೋಗುತ್ತದೆ ಎನ್ನುವಾಗ ಜನರಿಗೆ ಸಾಲ ಕೊಟ್ಟು, ಕೊಳ್ಳಿ, ಕೊಳ್ಳಿ ಎನ್ನುವ ವ್ಯವಸ್ಥೆ ಇದು. ಈ ಅರ್ಥವ್ಯವಸ್ಥೆ ಬಿದ್ದು ಹೋಗುತ್ತದೆ ಎಂದು ಗಾಬರಿಯಾಗಿ, ಅದನ್ನು ಉಳಿಸಿಕೊಳ್ಳಲು ಸರ್ಕಾರಗಳು ಪರದಾಡುವ ಪರಿಯನ್ನು ನೋಡಿದರೆ, ಈ ಟೊಳ್ಳು ವ್ಯವಸ್ಥೆಯನ್ನು ಅವು ಎಷ್ಟು ಅವಲಂಬಿಸಿಬಿಟ್ಟಿವೆ ಎಂಬುದು ಅರ್ಥವಾಗುತ್ತದೆ. ತೀವ್ರ ನಿಗಾ ಘಟಕದಲ್ಲಿರುವ ವ್ಯಕ್ತಿಯಂತೆ ಇರುವ ಈ ಅರ್ಥವ್ಯವಸ್ಥೆಯನ್ನು ಉಳಿಸಿಕೊಳ್ಳಲು ನಾವು ಏಕೆ ಇಷ್ಟು ಪ್ರಯತ್ನ ನಡೆಸಿದ್ದೇವೆ? ಇದು ಎಂದಿದ್ದರೂ ಸಾಯುವ ವ್ಯವಸ್ಥೆ. ಅದನ್ನು ಸಾಯಲು ಬಿಡುವುದೇ ವಾಸಿ. ಇದರ ಸಾವು, ಅಹಿಂಸಾತ್ಮಕವಾದ ಶಾಶ್ವತವಾದ ಅರ್ಥವ್ಯವಸ್ಥೆಗೆ ದಾರಿ ಮಾಡಕೊಡಬಹುದು. ಇದನ್ನು ಸಾಯಲು ಬಿಡದಿದ್ದರೆ ಹೊಸದು ಸೃಷ್ಟಿಯಾಗದು. ಈ ವ್ಯವಸ್ಥೆಯನ್ನು ಉಳಿಸಲು ಪ್ರಯತ್ನಿಸುತ್ತಿರುವವರಾದರೂ ಯಾರು? ಸಾಯುತ್ತಿದ್ದರೂ ಸಾಯಲು ಬಿಡದೆ, ತೀವ್ರ ನಿಗಾ ಘಟಕದಲ್ಲಿ ರೋಗಿ ಇದ್ದಷ್ಟು ಕಾಲವೂ ಲಾಭ ಮಾಡಬಹುದು ಎಂಬ ಮನಃಸ್ಥಿತಿಯ ಆಸ್ಪತ್ರೆಯ ಮಾಲೀಕರು, ವೈದ್ಯರು, ಔಷಧಿ ಅಂಗಡಿಯವರು, ಪ್ರಯೋಗಾಲಯದವರಂತೆ, ಈ ವ್ಯವಸ್ಥೆಯನ್ನು ಹೀಗೆಯೇ ಉಳಿಸಿ ಹಣ ಮಾಡುತ್ತಿರುವವರು, ವ್ಯಾಪಾರಸ್ಥರು, ಬ್ಯಾಂಕಿನವರು, ಬಹುರಾಷ್ಟ್ರೀಯ ಕಂಪನಿಗಳು, ರಾಜಕಾರಣಿಗಳು ಮುಂತಾದ ಲಾಭಬಡುಕರು.

ಈ ವ್ಯವಸ್ಥೆ ಸತ್ತು ಹೋದರೆ ಎಂದು ನಾವು ಸಾಮಾನ್ಯ ಜನ ಹೆದರಬೇಕಿಲ್ಲ. ಅದಕ್ಕೆ ನಮಗೆ ಬೇಕಾದ್ದು ಧೈರ್ಯ. ಸರಳವಾಗಿ ಬದುಕುತ್ತೇನೆ ಎಂಬ ತೀರ್ಮಾನ. ಅಷ್ಟು ನಮಗೆಲ್ಲಾ ಬಂದುಬಿಟ್ಟರೆ, ಇದು ಸತ್ತುಹೋಗಲಿ ಎಂಬ ಗಟ್ಟಿ ತೀರ್ಮಾನಕ್ಕೆ ಬರಬಹುದು. ಅದರೆ ಅದು ಅಷ್ಟು ಸುಲಭವಿಲ್ಲ. ಅರ್ಥಶಾಸ್ತ್ರಜ್ಞ ಜೆ.ಸಿ. ಕುಮಾರಪ್ಪನವರು ಹೇಳುವಂತೆ, ನಾವು ಪರಾವಲಂಬಿ ಮತ್ತು ಕೃತಘ್ನತಾ ಅರ್ಥವ್ಯವಸ್ಥೆಗೆ ಹೊಂದಿಕೊಂಡವರು. ಇನ್ನೊಬ್ಬರ ದುಡಿತದ ಮೇಲೆ ನಮ್ಮ ಬದುಕನ್ನು ಕಟ್ಟಿಕೊಂಡವರು. ಹೀಗೆ ಹಲವು ದಶಕಗಳ ಕಾಲ ಬದುಕಿ ನಮ್ಮ ಕೆಲಸವನ್ನು ನಾವು ಮಾಡಿಕೊಳ್ಳಲಾಗದ, ಎಲ್ಲದಕ್ಕೂ ಇನ್ನೊಬ್ಬರನ್ನುಅವಲಂಬಿಸುವ, ನಮ್ಮ ಅವಲಂಬನಕ್ಕೆ ಒಂದಿಷ್ಟು ದುಡ್ಡು ಎಸೆದುಬಿಡುವ, ಎಸೆಯಲು ಬೇಕಾದ ದುಡ್ಡಿಗಾಗಿ ಶ್ರಮವಿಲ್ಲದೆ ಹಣ ಮಾಡುವ ವಿಧಾನಗಳಿಗಾಗಿ ಸದಾ ಹುಡುಕಾಟದಲ್ಲಿ ಇರುವವರು.

ಪ್ರಭುತ್ವಕ್ಕೆ ಜನಪರ, ಪರಿಸರಪರ ಅರ್ಥವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಿಲ್ಲ. ಅದಕ್ಕೆ ಅದರಲ್ಲಿ ಲಾಭವಿಲ್ಲ. ಉತ್ತಮವಾದ, ಶಾಶ್ವತವಾದ ಅರ್ಥವ್ಯವಸ್ಥೆಯನ್ನು ನಾವು ಜನರು ಸೃಷ್ಟಿಸಿಕೊಳ್ಳಬೇಕು. ಇಂದು ಸರಳವಾಗಿ, ಕೊಳ್ಳುಬಾಕನಾಗದೆ ಬದುಕುತ್ತೇನೆ ಎಂಬುದೇ ಒಂದು ರಾಜಕೀಯ ನಿಲುವು. ಈ ಮಾರುಕಟ್ಟೆ ಅರ್ಥವ್ಯವಸ್ಥೆಯನ್ನು ಕೆಡವಲು ಇರುವ ಏಕೈಕ ಮಾರ್ಗವೆಂದರೆ, ನಾವು ವಸ್ತುಗಳನ್ನು ಆದಷ್ಟು ಕಡಿಮೆ ಕೊಳ್ಳುವುದು, ಸ್ಥಳೀಯ ಉತ್ಪಾದಕರಿಂದ ಕೊಳ್ಳುವುದು, ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳ ಕಡೆಗೆ ತಿರುಗಿಯೂ ನೋಡದಿರುವುದು. ಪರಿಸರದ ಪರಿಸ್ಥಿತಿ ದಿನದಿಂದ ದಿನಕ್ಕೆ ನಾಜೂಕು ಆಗುತ್ತಿದೆ. ಭೂಮಿಯನ್ನು ಉಳಿಸಿಕೊಳ್ಳಲು ವ್ಯಕ್ತಿಗತವಾಗಿ ಮಾಡುವ ಪ್ರಯತ್ನಗಳು ಮಹತ್ವದ್ದಾಗಿವೆ. ಉತ್ಪಾದನಾ ಕೇಂದ್ರಿತ ಅರ್ಥವ್ಯವಸ್ಥೆಯಿಂದ ಗ್ರಾಹಕಕೇಂದ್ರಿತ ಅರ್ಥವ್ಯವಸ್ಥೆಯೇ ಇದಕ್ಕೆ ಕಾರಣ. ಈ ವ್ಯವಸ್ಥೆಗೆ ಕಾರಣನಾಗಿರುವವನು ತಿಳಿವಳಿಕೆಯಿಲ್ಲದ ಗ್ರಾಹಕ. ಈ ವ್ಯವಸ್ಥೆ ಸರಿ ಹೋಗಬೇಕೆಂದರೆ ಅದು ಗ್ರಾಹಕನಿಂದಲೇ ಪ್ರಾರಂಭವಾಗಬೇಕು.

ನಾವು ಕಡಿಮೆ ಕೊಂಡಷ್ಟೂ ಅರ್ಥವ್ಯವಸ್ಥೆ ಹೆಚ್ಚಿನ ಸ್ಥಿರತೆಯತ್ತ ಚಲಿಸತೊಡಗುತ್ತದೆ. ನಮ್ಮ ಚಿಂತನೆಯಲ್ಲೂ ಸಾಕಷ್ಟು ಬದಲಾವಣೆ ಆಗಬೇಕಿದೆ. ವಾಹನ ಉದ್ಯಮ ಬಿದ್ದು ಹೋಗುತ್ತಿದೆ ಎಂದು ಆತಂಕಪಡುವವರೂ ನಾವೇ, ವಾಹನ ಹೆಚ್ಚಿದ್ದರಿಂದ ನಾವು ಉಸಿರಾಡುವ ಗಾಳಿಯು ಹದಗೆಡುತ್ತಿದೆ ಎಂದು ಕೊರಗುವವರೂ ನಾವೇ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು