ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕಾನೂನು ಶಿಕ್ಷಣಕ್ಕೆ ಕನ್ನಡ ಮಾಧ್ಯಮ ಬೇಡವೇ?

ಕಕ್ಷಿದಾರ ಅರಿಯದ ಭಾಷೆಯಲ್ಲಿ ಕೋರ್ಟ್‌ ವ್ಯವಹಾರ ನಡೆಸುವುದು ಅನ್ಯಾಯ
Last Updated 20 ಸೆಪ್ಟೆಂಬರ್ 2021, 18:58 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಪದವಿ ಅಧ್ಯಯನವನ್ನು ಕನ್ನಡ ಮಾಧ್ಯಮದಲ್ಲಿಯೂಆರಂಭಿಸಲಾಗುವುದು ಎಂಬ, ಉನ್ನತ ಶಿಕ್ಷಣ ಸಚಿವರ ಇತ್ತೀಚಿನ ಹೇಳಿಕೆಯು ನನ್ನನ್ನು ಆಲೋಚನೆಗೆ ಹಚ್ಚಿತು. ಇದಲ್ಲದೆ, ರಾಜ್ಯ ಕಾನೂನು ವಿಶ್ವವಿದ್ಯಾಲಯ ಆಯೋಜಿಸಿದ್ದ ಭಾಷಾಂತರ ಕಾರ್ಯಾಗಾರವು ಈ ವಿಷಯವಾಗಿ ಮತ್ತಷ್ಟು ಚಿಂತನೆಗೆ ಅವಕಾಶ ಒದಗಿಸಿತು.

ನ್ಯಾಯಾಲಯಕ್ಕೆ ಅಗತ್ಯ ಶುಲ್ಕ ಕಟ್ಟಿ, ವಕೀಲರಿಗೆ ಫೀಸು ತೆತ್ತು, ತನ್ನ ಆಸ್ತಿ ಪಾಸ್ತಿ, ದಂಡ, ಶಿಕ್ಷೆಗಳ ಭವಿಷ್ಯವನ್ನು ನ್ಯಾಯಾಧೀಶರಿಗೆ ಒಪ್ಪಿಸಿ, ಇಂಗ್ಲಿಷಿನಲ್ಲಿ ನಡೆಯುವ ವಾದ ವಿವಾದಗಳನ್ನು ಇಂಗ್ಲಿಷ್ ಚಲನಚಿತ್ರ ನೋಡಿದಂತೆ, ಮೂಕಪ್ರೇಕ್ಷಕನಾಗಿ ಕೋರ್ಟಿನ ಮೂಲೆಯಲ್ಲಿ ಬೆಂಚೊಂದರ ಮೇಲೆ ಕುಳಿತುಕೊಂಡು ವೀಕ್ಷಿಸುವ ಗಾಬರಿಗಣ್ಣಿನ ಕಕ್ಷಿದಾರನನ್ನು ಸ್ಮರಿಸಿಕೊಂಡಾಗ ಮರುಕವೆನಿಸುತ್ತದೆ. ಅವನನ್ನು ಅಜ್ಞಾನದಲ್ಲಿಟ್ಟು, ಕೋರ್ಟಿನ ವ್ಯವಹಾರಗಳನ್ನು ಅವನಿಗೆ ತಿಳಿಯದ ಭಾಷೆಯಲ್ಲಿ ನಡೆಸುವುದು ಅವನಿಗೆಸಗುವ ಮೊದಲನೆಯ ಅನ್ಯಾಯ ಎನಿಸುತ್ತದೆ.

ಒಂದು ಶುಭ ಪ್ರಾತಃಕಾಲದಲ್ಲಿ, ಅವನಿಗೆ ಅರ್ಥವಾಗುವ ಕನ್ನಡ ಭಾಷೆಯಲ್ಲಿ ತೀರ್ಪುಗಳನ್ನು ಬರೆಯುವುದು ನಾವೆಣಿಸಿದಷ್ಟು ಸುಲಭವಲ್ಲ. ಹಿಂದಿನ ಕಾಲದಿಂದ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸಿದ ಉಲ್ಲೇಖಗಳು ಬಹಳಷ್ಟಿವೆ. ಆದರೆ ಶಿಲಾಶಾಸನಗಳಲ್ಲಿ ಅಡಕವಾಗಿರುವ ಒಂದೆರಡು ತೀರ್ಪುಗಳನ್ನು ಬಿಟ್ಟರೆ ವಿಜಯನಗರದ ಅರಸರ ಪೂರ್ವಕಾಲದ ಕನ್ನಡ ತೀರ್ಪುಗಳು ನಮಗೆ ಲಭ್ಯವಿಲ್ಲ.

1864ರಲ್ಲಿ ಪ್ರಕಟವಾದ ರೇಮಂಡ್ ವೆಸ್ಟ್ ಅವರ ಬಾಂಬೆ ಹೈಕೋರ್ಟಿನ ತೀರ್ಪುಗಳ ಭಾಷಾಂತರವೇ ನಮಗೆ ಸಿಗುವ ಮೊದಲ ಕನ್ನಡ ತೀರ್ಪುಗಳ ಪುಸ್ತಕವೆಂದು ಹೇಳಬಹುದು. ಹೀಗೆ ಕನ್ನಡ ಮಾಧ್ಯಮದಲ್ಲಿ ಕಾನೂನು ಶಿಕ್ಷಣ ಪಡೆಯಬೇಕೆನ್ನುವ ವಿದ್ಯಾರ್ಥಿಗೇ ಆಗಲಿ, ಪ್ರಾಧ್ಯಾಪಕರು, ವಕೀಲರು ಅಥವಾ ನ್ಯಾಯಾಧೀಶರಿಗೇ ಆಗಲಿ ಸುಲಭವಾಗಿ ಬಳಸಿಕೊಳ್ಳಬಹುದಾದ ಭಾಷೆಯ ಪರಂಪರೆ ಇಲ್ಲದಿರುವುದೇ ಮುಖ್ಯವಾದ ಕೊರತೆ.

ರಾಜ್ಯ ಪುನರ್‌ವಿಂಗಡಣೆಯ ನಂತರ ಮೈಸೂರು, ಮುಂಬೈ, ಮದ್ರಾಸ್, ಹೈದರಾಬಾದ್, ಕೊಡಗು ಪ್ರಾಂತ್ಯದ ಪ್ರದೇಶಗಳು ರಾಜಕೀಯವಾಗಿ ಒಂದಾದವು. ಆದರೆ ಆ ಪ್ರದೇಶದಲ್ಲಿ ಪ್ರಚಲಿತವಿದ್ದ ಭಾಷೆ ಹಾಗೇ ಉಳಿದುಕೊಂಡಿತು. ಕೈಫಿಯತ್ ಎಂದರೆ ಬೆಳಗಾವಿಯಲ್ಲಿ ರಿಟನ್ ಸ್ಟೇಟ್‍ಮೆಂಟ್, ಮೈಸೂರಿನಲ್ಲಿ ಡಿಪೋಜಿಶನ್ ಎಂದರ್ಥ. ದರಖಾಸ್ತು ಎಂದರೆ ಬೆಳಗಾವಿಯಲ್ಲಿ ಎಕ್ಸಿಕ್ಯೂಶನ್, ಮೈಸೂರಿನಲ್ಲಿ ಗ್ರ್ಯಾಂಟ್‌ ಆಫ್‌ ಗೌರ್ನಮೆಂಟ್‌ ಲ್ಯಾಂಡ್‌. ಧಾರವಾಡ ಕರ್ನಾಟಕದ ‘ಮನಾಯಿ’, ‘ತುರ್ತಾ ತುರ್ತ ಮನಾಯಿ’ ಎಷ್ಟು ಜನರಿಗೆ ಅರ್ಥವಾಗುತ್ತದೆ? ಮನಾಯಿ ಎಂದರೆ ಇಂಜಕ್ಷನ್‌. ಹೀಗೆ ವಿವಿಧ ಪ್ರದೇಶಗಳಲ್ಲಿ ಪ್ರಚಲಿತವಿರುವ ಶಬ್ದಗಳನ್ನು ಸಂಗ್ರಹಿಸಿ ಪ್ರಕಟಿಸುವುದು ತೀರಾ ಅವಶ್ಯ. ಆದರೆ ಅವು ಸಂಸ್ಕೃತ ಅಥವಾಹಿಂದಿ ಭೂಯಿಷ್ಟವಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಆರಕ್ಷಕ ಅಂದರೆ ಏನು? ಬಾಯಿ ತಪ್ಪಿನಿಂದ ಆರಕ್ಷಕದಲ್ಲಿರುವ ‘ಆ’ ಎಂಬುದು ‘ಅ’ ಆಗಿಬಿಟ್ಟರೆ ಗತಿಯೇನು? ಅರಕ್ಷಕ!

ಕಾನೂನು ಪರಿಭಾಷೆಯ ಶಬ್ದಭಂಡಾರ ಬೆಳೆಯಬೇಕಾದರೆ ಒಂದು ಬೃಹತ್ ನಿಘಂಟಿನ (Law Lexicon) ತುರ್ತು ಅಗತ್ಯವಿದೆ. ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ ಬಳಸುವ ಭಾಷೆ ಕನ್ನಡವಾಗಿರುವುದು ಅವಶ್ಯಕವಾದ ಇನ್ನೊಂದು ಅಂಶ. ಈ ದಿಸೆಯಲ್ಲಿ ರಾಜ್ಯದ ಪೊಲೀಸ್ ಇಲಾಖೆ ಮೊದಲಿನಿಂದಲೂ ತನ್ನ ದಾಖಲೆಗಳನ್ನು, ಸಾಕ್ಷ್ಯ, ಪುರಾವೆಗಳನ್ನು ಕನ್ನಡದಲ್ಲಿ ಸಿದ್ಧಪಡಿಸುತ್ತಿರುವುದು ಪ್ರಶಂಸನೀಯ.

ಕನ್ನಡದಲ್ಲಿ ಹೆಚ್ಚಿನ ಕಾನೂನು ಗ್ರಂಥಗಳ ಅಗತ್ಯವಿದೆ. ಕನ್ನಡ ಪಠ್ಯಪುಸ್ತಕಗಳಿಲ್ಲದೇ ಕಾನೂನು ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಲಾಗದು. ಹೀಗಾಗಿ ಈ ಕೆಲಸ ಸಮರೋಪಾದಿಯಲ್ಲಿ ಆರಂಭವಾಗಬೇಕು. ವಿವಿಧ ಕೋರ್ಟುಗಳ ಮಹತ್ವದ ತೀರ್ಪುಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸುವ ನಿಯತಕಾಲಿಕದ ಅವಶ್ಯಕತೆ ಇದೆ.

1980ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಪ್ರಥಮವಾಗಿ ಕಾನೂನು ಸಾಹಿತ್ಯ ಗೋಷ್ಠಿ ಏರ್ಪಡಿಸಲಾಗಿತ್ತು. ಕಸಾಪದ ಆಗಿನ ಅಧ್ಯಕ್ಷ ಡಾ. ಹಂಪ ನಾಗರಾಜಯ್ಯ ಈ ಸಂದರ್ಭದಲ್ಲಿ, ರಾಜ್ಯದ ಐಎಲ್ಆರ್‌ಗಳಲ್ಲಿ (ಇಂಡಿಯನ್ ಲಾ ರಿಪೋರ್ಟರ್‌) ವರದಿಯಾಗುವ ತೀರ್ಪುಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲು ಕೋರಿದ್ದ ಮನವಿಗೆ ಹೈಕೋರ್ಟ್‌ ಒಪ್ಪಿತ್ತು. ಆದರೆ ಅಂಥ ಪ್ರಕಟಣೆ ಕಾರ್ಯಗತವಾಗಲೇ ಇಲ್ಲ. ಅದು ಹೋಗಲಿ, ಕಸಾಪ ಇದೀಗ ಹಾವೇರಿಯಲ್ಲಿ ಆಯೋಜಿಸಿರುವ ಸಾಹಿತ್ಯ ಸಮ್ಮೇಳನದಲ್ಲಿ ಕಾನೂನು ಸಾಹಿತ್ಯ ಗೋಷ್ಠಿಯ ಪ್ರಸ್ತಾಪವಿಲ್ಲ. ಅಂದರೆ ಕಳೆದ 40 ವರ್ಷಗಳಲ್ಲಿ ಎರಡು– ಮೂರು ಸಮ್ಮೇಳನಗಳಲ್ಲಿ ಮಾತ್ರ ಕಾನೂನು ಸಾಹಿತ್ಯ ಗೋಷ್ಠಿಯನ್ನು ಏರ್ಪಡಿಸಲಾಗಿದೆ. ಕಾನೂನು ತಜ್ಞರು ಮುಕ್ತವಾಗಿ ಚರ್ಚಿಸಲು ಈ ಬಗೆಯ ವೇದಿಕೆ ಅವಶ್ಯ.

ಕಾನೂನು ಪಧವೀಧರನಾಗಿ ನ್ಯಾಯಾಲಯಗಳಲ್ಲಿ ಇಂಗ್ಲಿಷಿನಲ್ಲಿ ವಾದ ಮಂಡಿಸಿ, ನ್ಯಾಯಾಧೀಶನಾಗಿ ಸತತ 30 ವರ್ಷ ಇಂಗ್ಲಿಷಿನಲ್ಲಿ ತೀರ್ಪುಗಳನ್ನಿತ್ತು, ನಾನು ನನ್ನ ಮುಂದೆ ಬಂದಿದ್ದ ಕಕ್ಷಿದಾರರಿಗೆ ಮೋಸ ಮಾಡಿದೆನೇ ಎನ್ನುವ ಪ್ರಾಮಾಣಿಕ ಅನಿಸಿಕೆ ನನ್ನನ್ನು ಕಾಡುತ್ತಿದೆ. ಇಂಥ ಪಾಪಪ್ರಜ್ಞೆ ಬಹಳಷ್ಟು ನ್ಯಾಯಾಧೀಶರನ್ನು ಕಾಡುತ್ತಿದೆ. ಅಂಥವರನ್ನು ಈ ಗೊಂದಲದಿಂದ ಪಾರು ಮಾಡುವ ಏಕೈಕ ಉಪಾಯವೆಂದರೆ, ಕಾನೂನು ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಕೊಡುವುದಾಗಿದೆ.

ಲೇಖಕ: ನಿವೃತ್ತ ಜಿಲ್ಲಾ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT