ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನೈತಿಕ ನೆಲೆಗಟ್ಟು– ಶಿಕ್ಷಕರದೂ ಪಾಲಿದೆ

ಶಿಕ್ಷಕರು ಮತ್ತು ಪಾಲಕರು ಜೊತೆಗೂಡಿ ಶಿಕ್ಷಣದ ನೈತಿಕ ನೆಲೆಗಟ್ಟನ್ನು ಗಟ್ಟಿಗೊಳಿಸಬೇಕಾದದ್ದು ಇಂದಿನ ತುರ್ತು ಅಗತ್ಯ
Published 23 ಫೆಬ್ರುವರಿ 2024, 19:33 IST
Last Updated 23 ಫೆಬ್ರುವರಿ 2024, 19:33 IST
ಅಕ್ಷರ ಗಾತ್ರ

ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯವೊಂದರ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ರೋಗಿಗಳಎದುರು ವಿವಿಧ ಭಾಷೆಗಳ ಸಿನಿಮಾ ಹಾಡುಗಳಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಸುದ್ದಿಯಾಗಿತ್ತು. ಈ ಪ್ರಕರಣದ ಹಿಂದೆಯೇ, ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರೊಬ್ಬರು ತಮ್ಮೊಂದಿಗೆ ಮದುವೆ ನಿಶ್ಚಯವಾದ ವೈದ್ಯೆ ಜೊತೆಗೆ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಪ್ರೀ ವೆಡ್ಡಿಂಗ್ ಚಿತ್ರೀಕರಣ ಮಾಡಿದ್ದು ಪತ್ರಿಕೆಯಲ್ಲಿ ಪ್ರಕಟವಾಗಿ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾದವು. ಶಾಲೆಯೊಂದರಲ್ಲಿ ತನಗೆ ಮಧ್ಯಾಹ್ನದ ಊಟ ತಂದುಕೊಡಲಿಲ್ಲವೆಂದು ಕೋಪಗೊಂಡ ಶಿಕ್ಷಕಿ, ವಿದ್ಯಾರ್ಥಿಗಳನ್ನು ತರಗತಿಯ ಕೋಣೆಯಲ್ಲಿ ಕೂಡಿಹಾಕಿ ಥಳಿಸಿದ ಅಮಾನವೀಯ ಕೃತ್ಯ ಪಾಲಕರನ್ನು ಆತಂಕಕ್ಕೆ ಒಳಗಾಗಿಸಿದೆ.

ಈ ಮೇಲಿನ ಪ್ರಕರಣಗಳು ಇಂದಿನ ಯುವ ವಿದ್ಯಾವಂತರ ಅನಾರೋಗ್ಯಕರ ಮನಃಸ್ಥಿತಿಗೆ ಕನ್ನಡಿ ಹಿಡಿಯುವಂತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಅನುಚಿತ ವರ್ತನೆ, ಯುವ ವೈದ್ಯರ ಸಂವೇದನಾರಹಿತ ನಡೆ ಮತ್ತು ಶಾಲೆಯಲ್ಲಿ ಶಿಕ್ಷಕಿಯ ದುರ್ನಡತೆಗೆ ಯಾರನ್ನು ಹೊಣೆಯಾಗಿಸಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಸಹಜವಾಗಿಯೇ ಸಮಾಜವು ವಿದ್ಯಾವಂತರ ಆಕ್ಷೇಪಾರ್ಹ ವರ್ತನೆಗೆ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಹೊಣೆಯಾಗಿಸುತ್ತದೆ. ವಿದ್ಯಾಕೇಂದ್ರ
ಗಳಾದ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಚಿತ ವರ್ತನೆ ಹಾಗೂ ಹಿಂಸಾಪ್ರವೃತ್ತಿಯು ಆಗಿಂದಾಗ್ಗೆ ವ್ಯಕ್ತವಾಗುತ್ತಲೇ ಇರುತ್ತವೆ.

ಇಂತಹ ಅನುಚಿತ ವರ್ತನೆಗಳಿಗೆ ಶಿಕ್ಷಣ ವ್ಯವಸ್ಥೆ
ಯನ್ನು ಗುರಿಯಾಗಿಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸುವ ಶಿಕ್ಷಕರ ಸಂಖ್ಯೆ ಬಹಳಷ್ಟಿದೆ. ವ್ಯಕ್ತಿಯ ನಡೆ– ನುಡಿಯನ್ನು ರೂಪಿಸುವಲ್ಲಿ ಶಿಕ್ಷಣವೇ ನೆಲೆಗಟ್ಟು. ಪ್ರತಿಯೊಬ್ಬ ಮನುಷ್ಯ ತನ್ನ ವಿದ್ಯಾರ್ಥಿ ಬದುಕಿನಲ್ಲಿ ದಿನದ ಬಹುಪಾಲು ಸಮಯವನ್ನು ಕಳೆಯುವುದು ಶಾಲೆ, ಕಾಲೇಜುಗಳ ವಾತಾವರಣದಲ್ಲಿ ಎನ್ನುವುದು ಸತ್ಯಕ್ಕೆ ಹತ್ತಿರವಾದ ಮಾತು. ಹೀಗಾಗಿ, ಶಿಕ್ಷಕರು ತಮ್ಮ ಕರ್ತವ್ಯವು ಪಾಠ ಬೋಧಿಸುವುದಕ್ಕೆ ಮಾತ್ರ ಸೀಮಿತ ಎಂದು ನುಣುಚಿಕೊಳ್ಳುವಂತಿಲ್ಲ. ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆ ಶಿಕ್ಷಣದ ಉದ್ದೇಶವಾಗಿರುವುದರಿಂದ, ಪಾಠ ಬೋಧನೆಯ ಜೊತೆಗೆ ಮಕ್ಕಳ ನಡೆ– ನುಡಿಯನ್ನು ತಿದ್ದುವ ಕೆಲಸವನ್ನೂ ಶಿಕ್ಷಕರು ಮಾಡಬೇಕಾಗುತ್ತದೆ.

ಶಿಕ್ಷಕ ವೃತ್ತಿಯಲ್ಲಿ ಬದ್ಧತೆಯಿಂದ ತೊಡಗಿಕೊಂಡವರ ನಡುವೆ ಅಪ್ರಾಮಾಣಿಕರು, ಅನೀತಿವಂತರೂ ಸೇರಿಕೊಂಡಿರುವುದರಿಂದ ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ತನ್ನ ಮೊದಲಿನ ಗೌರವವನ್ನು ಉಳಿಸಿಕೊಳ್ಳಲು ಆಗಿಲ್ಲ. ಶಿಕ್ಷಕರು ಪಡೆಯುತ್ತಿರುವ ಆಕರ್ಷಕ ಸಂಬಳದ ಹೊರತಾಗಿಯೂ ಹಣ ಗಳಿಸುವ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಆದರ್ಶ ಶಿಕ್ಷಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಶಿಕ್ಷಣ ಕ್ಷೇತ್ರದ ಇಂದಿನ ಬಹುಮುಖ್ಯ ಸಮಸ್ಯೆಯಾಗಿದೆ. ಹಿಂದಿನ ದಿನಗಳಲ್ಲಿ ಶಾಲಾ ಅವಧಿಯ ನಂತರವೂ ಶಿಕ್ಷಕರು ವಿದ್ಯಾರ್ಥಿ
ಗಳೊಂದಿಗೆ ಸಮಯ ಕಳೆಯುತ್ತಿದ್ದರು.

ಪಠ್ಯಕ್ರಮದಾಚೆ ಬದುಕಿನ ಮೌಲ್ಯಗಳನ್ನು ಬೋಧಿಸುತ್ತಿದ್ದರು. ಆದರೆ ಅಂಥ ಮನೋಭಾವದ ಶಿಕ್ಷಕರು ಇಂದು ನೋಡಲು ಸಿಗುತ್ತಿಲ್ಲ. ಇರುವೆಯೊಂದು ಪಾರಿವಾಳದ ಜೀವ ಉಳಿಸಿದ್ದು, ಶಿಬಿ ಚಕ್ರವರ್ತಿಯ ತ್ಯಾಗ, ಪುಣ್ಯಕೋಟಿಯ ಪ್ರಾಮಾಣಿಕತೆ, ಗಾಂಧೀಜಿಯ ಸತ್ಯಸಂಧತೆ... ಇಂತಹ ಕಥೆಗಳನ್ನೆಲ್ಲ ಆಗ ನೀತಿ ಶಿಕ್ಷಣದ ಮೂಲಕ ಬೋಧಿಸಲಾಗುತ್ತಿತ್ತು. ನೀತಿ ಶಿಕ್ಷಣಕ್ಕೆ ವೇಳಾಪಟ್ಟಿಯಲ್ಲಿ ಆದ್ಯತೆ ನೀಡಲಾಗುತ್ತಿತ್ತು. ಒಟ್ಟಾರೆ, ಮಕ್ಕಳಲ್ಲಿ ನೈತಿಕ ಮತ್ತು ವೈಚಾರಿಕ ಪ್ರಜ್ಞೆಯನ್ನು ಬೆಳೆಸಲು ಪೂರಕವಾದ ಶೈಕ್ಷಣಿಕ ವಾತಾವರಣ ಇರುತ್ತಿತ್ತು. ಆದರೆ ಇಂದು ನೀತಿ ಶಿಕ್ಷಣ ಶಾಲಾ ಕಾಲೇಜುಗಳ ವೇಳಾಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ.

ಶಾಲಾ ಕಾಲೇಜುಗಳಲ್ಲಿನ ಶೈಕ್ಷಣಿಕ ವಾತಾವರಣ ಹದಗೆಡುತ್ತಿರುವುದರಲ್ಲಿ ಸಿನಿಮಾ ಮಾಧ್ಯಮದ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ‘ಸ್ವಾಮಿದೇವನೆ ಲೋಕಪಾಲನೆ’ ಎನ್ನುವ ಸಿನಿಮಾ ಹಾಡು ಒಂದು ಕಾಲದಲ್ಲಿ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿತ್ತು. ಮುಂದೊಂದು ದಿನ ಇದೇ ಸಿನಿಮಾ ಮಾಧ್ಯಮ ‘ಒಓಔಅಂ...ಆಃ...’ ಎಂದು ಶಿಕ್ಷಕಿ ಪಾತ್ರದ ನಟಿಯ ಮೂಲಕ ಮಾದಕವಾಗಿ ಹಾಡಿಸಿ ಹೆಜ್ಜೆ ಹಾಕಿಸಿದ್ದನ್ನು ಮರೆಯುವಂತಿಲ್ಲ. ಇಂದು ಶಾಲೆ ಮತ್ತು ಕಾಲೇಜುಗಳ ಆವರಣಗಳಲ್ಲಿ ಲೀಲಾಜಾಲವಾಗಿ ಹರಿದಾಡುತ್ತಿರುವ ಮತ್ತು ಶಬ್ದಕೋಶದಲ್ಲೂ ನೋಡಲು ಸಿಗದ ಪದಗಳು ಸಿನಿಮಾ ಮಾಧ್ಯಮದ ಕೊಡುಗೆಗಳಾಗಿವೆ.

ಗಾಂಧೀಜಿ ಅವರು ಸಪ್ತ ಸಾಮಾಜಿಕ ಪಾಪಗಳಲ್ಲಿ ಶಿಕ್ಷಣದ ಕುರಿತು ಪ್ರಸ್ತಾಪಿಸಿದ್ದಾರೆ. ಶಿಕ್ಷಣದಲ್ಲಿ ಮೌಲ್ಯದ ಅವಶ್ಯಕತೆಗೆ ಮಹತ್ವ ನೀಡಿದ್ದಾರೆ. ಎಸ್‌.ಎಲ್‌.ಭೈರಪ್ಪ ಅವರ ‘ತಂತು’ ಕಾದಂಬರಿಯಲ್ಲಿ ಹೀಗೊಂದು ಮಾತಿದೆ- ‘ಜನರು ಮೂಲತಃ ಒಳ್ಳೆಯವರು, ಕೆಟ್ಟೋರು ಅನ್ನೂ ವಿಂಗಡಣೆ ಸರಿಯಲ್ಲ. ಅವರು ಗೊಬ್ಬರದ ಥರ ಇದ್ದಾರೆ. ಗೊಬ್ಬರ ಒಯ್ದು ತೆಂಗಿನ ಮರಕ್ಕೆ ಹಾಕಿದರೆ ಅದೂ ಫಲ ಕೊಡುತ್ತೆ. ಪಾಪಾಸುಕಳ್ಳಿಗೆ ಹಾಕಿದರೆ ಅದೂ ಹೊರವಾಗಿ ಬೆಳೆಯುತ್ತೆ. ಗೊಬ್ಬರದ ಹಂಗಿರೊ ಅವರನ್ನು ನಿಜವಾದ ಜನರ ಹಂಗೆ ಮನುಷ್ಯರ ಹಂಗೆ ಮಾಡೂದೇ ಮೂಲ ಪ್ರಶ್ನೆ’.

ವಿದ್ಯಾರ್ಥಿಗಳನ್ನು ಪಾಪಾಸುಕಳ್ಳಿಗಳನ್ನಾಗಿಸದೆ ಅವರನ್ನು ತೆಂಗಿನ ಮರದಂತೆ ಮಾಡುವುದು ಇಂದಿನ ಶಿಕ್ಷಣ ವ್ಯವಸ್ಥೆ, ಶಿಕ್ಷಕರು ಮತ್ತು ಪಾಲಕರ ಜವಾಬ್ದಾರಿಯಾಗಿದೆ. ಪರಿಣಾಮವಾಗಿ, ಶಿಕ್ಷಕರು ಮತ್ತು ಪಾಲಕರು ಜೊತೆಗೂಡಿ ಶಿಕ್ಷಣದ ನೈತಿಕ ನೆಲೆಗಟ್ಟನ್ನು ಗಟ್ಟಿಗೊಳಿಸಬೇಕಾದದ್ದು ಇಂದಿನ ತುರ್ತು ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT