ಕುಟುಂಬ ಯೋಜನೆ: ಮಾಹಿತಿ ಕೊರತೆ ನೀಗುವುದು ಹೇಗೆ?

7
ಕುಟುಂಬ ಯೋಜನೆಯ ಅನುಕೂಲಗಳ ಬಗ್ಗೆ ಪ್ರತಿ ಮಹಿಳೆಯೊಂದಿಗೂ ಆಪ್ತ ಸಮಾಲೋಚನೆ ನಡೆಸುವುದು ಅಗತ್ಯ

ಕುಟುಂಬ ಯೋಜನೆ: ಮಾಹಿತಿ ಕೊರತೆ ನೀಗುವುದು ಹೇಗೆ?

Published:
Updated:
Deccan Herald

ಕರ್ನಾಟಕದ ಜನಸಂಖ್ಯೆ ಈಗ 6 ಕೋಟಿ ಮೀರಿದೆ. ಜನಸಂಖ್ಯೆಯ ದೃಷ್ಟಿಯಲ್ಲಿ ಇದು ಭಾರತದ ಆರನೇ ಅತಿದೊಡ್ಡ ರಾಜ್ಯ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಫಲವಂತಿಕೆ (fertility) ದರ ಕುಸಿತವಾಗಿದೆ. ರಾಜ್ಯದಲ್ಲಿ ಪ್ರತಿಯೊಬ್ಬ ಮಹಿಳೆ ಸರಾಸರಿ 1ರಿಂದ 2 ಮಕ್ಕಳಿಗೆ ಜನ್ಮ ನೀಡುವ ಸಾಮರ್ಥ್ಯವನ್ನು ಮಾತ್ರ ಪಡೆದಿದ್ದಾಳೆ. ಇದು, ದೇಶದ ಇತರ ರಾಜ್ಯಗಳ ಮಹಿಳೆಯರ ಫಲವಂತಿಕೆ ದರಕ್ಕಿಂತಲೂ ಕಡಿಮೆ.

‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ– 4’ರ (ಎನ್‌ಎಫ್‌ಎಚ್‌ಎಸ್‌) ಪ್ರಕಾರ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಮಹಿಳೆಯರ ಪ್ರಮಾಣ ಶೇ 48. ಅಲ್ಲದೆ, ಇಬ್ಬರು ಮಕ್ಕಳ ನಡುವೆ ಅಂತರ ಕಾಪಾಡಲು ಗುಳಿಗೆ ಸೇವನೆ, ಕಾಂಡೋಮ್‌ ಅಥವಾ ಇನ್ನಾವುದೇ ಗರ್ಭನಿರೋಧಕ ವಿಧಾನ ಅನುಸರಿಸುತ್ತಿರುವವರ ಪ್ರಮಾಣ ಶೇ 2.5 ರಷ್ಟಿದೆ. ಈ ಪ್ರಮಾಣವನ್ನು ಹೆಚ್ಚಿಸುವುದು ರಾಜ್ಯದಲ್ಲಿ ಸವಾಲಿನ ವಿಚಾರವೂ ಹೌದು. ಇದಕ್ಕೆ ಮುಖ್ಯವಾಗಿ ಮಾಹಿತಿಯ ಕೊರತೆ, ಸಮಗ್ರ ಕೌನ್ಸೆಲಿಂಗ್‌ ಇಲ್ಲದಿರುವುದು ಮತ್ತು ಕುಟುಂಬ ಯೋಜನೆಯ ವಿವಿಧ ವಿಧಾನಗಳ ಅರಿವಿನ ಕೊರತೆಯೂ ಕಾರಣ.

ಕುಟುಂಬ ಯೋಜನೆಗೆ ಸಂಬಂಧಿಸಿದ ಸೇವೆಗಳು ವ್ಯಾಪಕವಾಗದಿರಲು ಗರ್ಭನಿರೋಧಕ ಸಾಧನಗಳ ಪೂರೈಕೆದಾರರ ನಿರ್ಲಕ್ಷ್ಯವೂ ಒಂದು ಕಾರಣ. ಸಮೀಕ್ಷೆ ವರದಿಯ ಪ್ರಕಾರ, ರಾಜ್ಯದಲ್ಲಿ ಗರ್ಭನಿರೋಧಕಗಳನ್ನು ಬಳಸುತ್ತಿರುವ ಮಹಿಳೆಯರಲ್ಲಿ ಶೇ 50ರಷ್ಟು ಮಂದಿಗೆ ಮಾತ್ರ ಅದರ ಉಪಯೋಗ ಅಥವಾ ಅಡ್ಡಪರಿಣಾಮಗಳ ಬಗ್ಗೆ ಸಂಪೂರ್ಣ ಅರಿವು ಇದೆ. ಉಳಿದವರಿಗೆ ಆ ಬಗ್ಗೆ ತಿಳಿವಳಿಕೆಯೇ ಇಲ್ಲ. ಅಂದರೆ, ಗರ್ಭನಿರೋಧಕಗಳ ಲಭ್ಯತೆ ಮತ್ತು ಅವುಗಳ ಅಡ್ಡಪರಿಣಾಮಗಳ ಬಗ್ಗೆ ಪೂರೈಕೆದಾರರು ಗ್ರಾಹಕರಿಗೆ ಸಂಪೂರ್ಣ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಮಹಿಳೆಯರು ಈ ವಿಧಾನಗಳನ್ನು ಅಳವಡಿಸಿಕೊಳ್ಳಲು ಹಿಂಜರಿಯುತ್ತಾರೆ.

ಇಂಥ ಉತ್ಪನ್ನಗಳ ಪೂರೈಕೆದಾರರು ಅವುಗಳ ಉಪಯೋಗ ಮತ್ತು ಅಡ್ಡಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರಷ್ಟೇ ಸಾಲದು. ಕುಟುಂಬ ಯೋಜನೆಯ ಅನುಕೂಲಗಳ ಬಗ್ಗೆ ಪ್ರತಿ ಮಹಿಳೆಗೂ ಆಪ್ತ ಸಮಾಲೋಚನೆ ನಡೆಸಬೇಕು. ಅದಕ್ಕೆ ಪೂರಕವಾದ ಸಾಮಗ್ರಿಗಳನ್ನು ಒದಗಿಸುವ ಜವಾಬ್ದಾರಿಯೂ ಪೂರೈಕೆದಾರರ ಮೇಲಿದೆ. ಬಹಳಷ್ಟು ಮಹಿಳೆಯರಿಗೆ ಎರಡು ಮಕ್ಕಳ ಜನನದ ನಡುವೆ ಅಂತರ ಯಾಕೆ ಕಾಯ್ದುಕೊಳ್ಳಬೇಕು ಎಂಬುದೇ ಗೊತ್ತಿರುವುದಿಲ್ಲ. ಅಂತರ ಕಾಯ್ದುಕೊಳ್ಳದಿದ್ದರೆ ತಾಯಿ ಮತ್ತು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಆಗುತ್ತದೆ ಎಂಬುದನ್ನು ಮನವರಿಕೆ ಮಾಡುವುದು ಅವಶ್ಯಕ. ರಾಜ್ಯದಲ್ಲಿ ಶೇ 94ರಷ್ಟು ಹೆರಿಗೆಗಳು ಸಾಂಸ್ಥಿಕ ಅಂದರೆ ಆಸ್ಪತ್ರೆಗಳಲ್ಲೇ ಆಗುತ್ತವೆ. ಈ ಅವಕಾಶವನ್ನು ಬಳಸಿಕೊಂಡು, ಕುಟುಂಬ ಯೋಜನೆ, ಎರಡು ಮಕ್ಕಳ ನಡುವೆ ಅಂತರ ಕಾಯ್ದುಕೊಳ್ಳುವುದರ ಅಗತ್ಯ ಮುಂತಾದ ವಿಚಾರಗಳ ಬಗ್ಗೆ ಆಸ್ಪತ್ರೆಯಲ್ಲೇ ಬಾಣಂತಿಯರಿಗೆ ಸಮಗ್ರ ಮಾಹಿತಿ ನೀಡಬಹುದು. ಇಷ್ಟು ಒಳ್ಳೆಯ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂಬುದು ಬೇಸರದ ಸಂಗತಿ.

ಪ್ರಸೂತಿ ತಜ್ಞೆಯಾಗಿ ನಾನು ಗಮನಿಸಿರುವ ಅಂಶವೆಂದರೆ, ಮಹಿಳೆಯರ ಆರ್ಥಿಕ ಸ್ಥಿತಿಗತಿ, ಶಿಕ್ಷಣದ ಮಟ್ಟ ಏನೇ ಇರಲಿ, ಕುಟುಂಬ ಯೋಜನೆ ಬಗ್ಗೆ ಚರ್ಚಿಸಲು ಅವರು ಆರೋಗ್ಯ ಕೇಂದ್ರಕ್ಕಾಗಲೀ ಅಥವಾ ಆಸ್ಪತ್ರೆಗಾಗಲೀ ಸ್ವಇಚ್ಛೆಯಿಂದ ಬರುವುದಿಲ್ಲ. ಕುಟುಂಬ ಯೋಜನೆಯು ಬೇಡದ ಗರ್ಭಧಾರಣೆಯನ್ನು ತಡೆಗಟ್ಟಲು ಇರುವ ಆರೋಗ್ಯಕರ ಮತ್ತು ಉತ್ತಮ ಮಾರ್ಗ ಎಂದು ಯಾರೂ ಭಾವಿಸಿದಂತಿಲ್ಲ.

ಪ್ರಸವಪೂರ್ವ ಮತ್ತು ಪ್ರಸವ ನಂತರದ ಕೆಲ ದಿನಗಳ ಅವಧಿಯು ಮಹಿಳೆಗೆ ಅತ್ಯಂತ ಸೂಕ್ಷ್ಮವಾದುದು. ಈ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಆಪ್ತ ಸಮಾಲೋಚನೆ ಸರಿಯಾದ ಮಾರ್ಗ. ಬಹಳ ವರ್ಷಗಳಿಂದ ಗಮನಿಸುತ್ತಾ ಬಂದಿರುವ ಅಂಶವೆಂದರೆ, ಇದಕ್ಕಾಗಿಯೇ ಸಮರ್ಪಿತರಾದ ಸಮಾಲೋಚಕರು ನಮ್ಮಲ್ಲಿ ಇಲ್ಲ. ಇದರಿಂದಾಗಿ ಗರ್ಭನಿರೋಧಕ ಬಳಕೆ ಮಾಡುವವರ ಪ್ರಮಾಣ ಕುಸಿದು ಹೋಗಿದೆ. ಕೆಲವು ಕಡೆಗಳಲ್ಲಿ ಸಮಾಲೋಚಕರ ಉಪಸ್ಥಿತಿ ಶೂನ್ಯವೆಂದೇ ಹೇಳಬಹುದು. ಎಚ್‌ಐವಿ ಸೋಂಕಿಗೆ ಒಳಗಾದವರಿಗೆ ಸಲಹೆ– ಸೂಚನೆಗಳನ್ನು ನೀಡಲು ಆಪ್ತ ಸಮಾಲೋಚಕರಿದ್ದಾರೆ. ಕುಟುಂಬ ಯೋಜನೆ ಮತ್ತು ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಲಹೆ– ಸೂಚನೆಗಳನ್ನು ನೀಡಲು ಸಹ ಇವರ ಸೇವೆಯನ್ನು ಬಳಸಿಕೊಳ್ಳಬಹುದು. ಅದಕ್ಕಾಗಿ ಇವರಿಗೆ ಸ್ವಲ್ಪ ತರಬೇತಿ ನೀಡಬೇಕಾಗಬಹುದು ಅಷ್ಟೇ.

ಕುಟುಂಬ ಯೋಜನೆ ದೇಶದಲ್ಲಿ ಯಶಸ್ವಿ ಆಗಬೇಕಿದ್ದರೆ ರಾಜ್ಯಮಟ್ಟದಲ್ಲಿ ಬದ್ಧತೆಯಿಂದ ಕೂಡಿದ ನಾಯಕತ್ವ ಇರಬೇಕು. ಕರ್ನಾಟಕದಲ್ಲಿ ಪ್ರಸವ ನಂತರದ ಐಯುಸಿಡಿ (intrauterine contraceptive device) ಅಳವಡಿಕೆಯ ಪ್ರಮಾಣವು ಶೇ 24ಕ್ಕೆ ಏರಿಕೆಯಾಗಿದೆ ಎಂಬುದು ಗಮನಾರ್ಹ. ಇಲ್ಲಿ ಅನುಸರಿಸಿದ ವಿಧಾನವನ್ನೇ ರಾಷ್ಟ್ರಮಟ್ಟದಲ್ಲೂ ಅಳವಡಿಸುವ ಪ್ರಯತ್ನಗಳಾಗಬೇಕು. ಮೊದಲ ಬಾರಿಗೆ ಮಗುವನ್ನು ಪಡೆಯುವ ಮಹಿಳೆಯರಿಗೆ ಕುಟುಂಬ ಯೋಜನೆಯ ಮಹತ್ವವನ್ನು ತಿಳಿಸುವ ಕಾರ್ಯ ಆಗಬೇಕು. ಅವರು ಕುಟುಂಬ ಕಲ್ಯಾಣದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತಾಗಬೇಕು.

ಮಾಹಿತಿ ಪ್ರಸಾರಕ್ಕೆ ವಯಸ್ಸಿನ ಮಿತಿಯೇನಿಲ್ಲ. ಗರ್ಭಿಣಿಯರು ಮತ್ತು ಬಾಣಂತಿಯರು ಮಾತ್ರವಲ್ಲ ಎಲ್ಲ ವಯಸ್ಸಿನ ಮಹಿಳೆಯರಿಗೂ ಮಾಹಿತಿಯನ್ನು ನೀಡಬೇಕು ಮತ್ತು ಆಪ್ತ ಸಮಾಲೋಚನೆ ನಡೆಸಬೇಕು. ಇದನ್ನು ಒಂದು ಅವಕಾಶವೆಂದು ಪರಿಗಣಿಸಿ ಸಮಾಲೋಚನೆಗೆ ಕಟಿಬದ್ಧ ಆರೋಗ್ಯ ಆಪ್ತ ಸಮಾಲೋಚಕರು ಮುಂದಾಗಬೇಕು. ಈಗಾಗಲೇ ಗರ್ಭನಿರೋಧಕಗಳನ್ನು ಬಳಸಿ, ಆ ಬಗ್ಗೆ ತೃಪ್ತಿ ಹೊಂದಿದವರನ್ನು ಮತ್ತು ಪ್ರಯೋಜನ ಪಡೆದವರನ್ನು ಮಾದರಿಯಾಗಿ ಪರಿಗಣಿಸಿ ಅವರ ಮೂಲಕ ಇತರರ ಮನವೊಲಿಸುವ ಕಾರ್ಯ ಮಾಡುವುದು ಒಂದು ಒಳ್ಳೆಯ ವಿಧಾನ. ಇವರಿಂದ ಪ್ರೇರಣೆ ಪಡೆದು ಇನ್ನಷ್ಟು ಪುರುಷ– ಮಹಿಳೆಯರು ಗರ್ಭನಿರೋಧಕಗಳನ್ನು ಬಳಸಲು ಮುಂದಾಗಬಹುದು. ಕುಟುಂಬ ಯೋಜನೆಯನ್ನು ಮಾನವ ಹಕ್ಕು ಎಂದು ವಿಶ್ವಸಂಸ್ಥೆಯು ಪರಿಗಣಿಸಿರುವುದು ಉತ್ತಮ ಹೆಜ್ಜೆಯೇ ಸರಿ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !