ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಮುಳ್ಳೂರು ಅರಣ್ಯದಂಚಿನ ಪೊದೆಯಲ್ಲಿ ಹೆಣ್ಣು ಹುಲಿಯೊಂದು ತಿಂಗಳ ಕೂಸಿನೊಂದಿಗೆ ಸುರಕ್ಷಿತ ಜಾಗ ಹುಡುಕಿಕೊಂಡಿತ್ತು. ಜಾನುವಾರು ಹುಡುಕಿಕೊಂಡು ಹೋದ ಗ್ರಾಮಸ್ಥರೊಬ್ಬರು ಪೊದೆಯ ಬಳಿ ಹೋದರು. ತಾಯಿ ಹುಲಿಯ ಸಿಟ್ಟಿಗೆ ರೈತ ಸ್ಥಳದಲ್ಲೇ ಮೃತಪಟ್ಟರು.

ಮಲೆಮಹದೇಶ್ವರ ವನ್ಯಜೀವಿ ವಲಯದ ಹೂಗ್ಯಂ ವಲಯ ವ್ಯಾಪ್ತಿಯಲ್ಲಿ ನಾಲ್ಕು ತಿಂಗಳ ಹಿಂದೆ ನಾಲ್ಕು ಮರಿಗಳೊಂದಿಗೆ ತಾಯಿ ಹುಲಿಯ ಸಂಚಾರವಿತ್ತು. ಮರಿಗಳಿಗೆ ನೆಲೆ ಹುಡುಕಿಕೊಡುವ ಸಮಯ. ಆ ವೇಳೆ ಎದುರಾದ ಜಾನುವಾರುಗಳನ್ನು ಹುಲಿ ಕೊಂದಿತ್ತು. ಹುಲಿ ಹಾಗೂ ಮರಿಗಳ ಚಲನವಲನದ ಮಾಹಿತಿ ಅರಿತಿದ್ದ ಸ್ಥಳೀಯರು ವಿಷವಿಕ್ಕಿ ಐದು ಹುಲಿಗಳ ಸಾವಿಗೆ ಕಾರಣವಾದರು.

ಬಂಡೀಪುರ ವ್ಯಾಪ್ತಿಯ ಬಡಗಲಪುರ ಬಳಿಯೂ ಮೂರು ಮರಿಗಳೊಂದಿಗೆ ತಾಯಿ ಸಂಚಾರವಿತ್ತು. ಹುಲಿ ದಾಳಿಗೆ ತುತ್ತಾಗಿ ರೈತ ಕಣ್ಣು ಕಳೆದುಕೊಂಡ. ಸೆರೆಗೆ ಮುಂದಾದ ಅರಣ್ಯ ಇಲಾಖೆಗೆ ಸಿಕ್ಕಿದ್ದು ಮರಿ. ಮತ್ತೊಂದು ದಾಳಿಯಾದ ಮೇಲೆ ಇನ್ನೊಂದು ಹುಲಿಯನ್ನು ಸೆರೆ ಹಿಡಿಯಲಾಯಿತು. ತಾಯಿ ಹಾಗೂ ಮರಿಗಳು ಬೇರ್ಪಟ್ಟವು.

ಮೂರ್ನಾಲ್ಕು ತಿಂಗಳುಗಳಿಂದ ಕರ್ನಾಟಕದಲ್ಲಿ ವರದಿಯಾಗುತ್ತಿರುವ ಹುಲಿ ಮರಿಗಳ ಸಾವಿನ ಪ್ರಕರಣಗಳು ಇವು. ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಮಲೆ ಮಹದೇಶ್ವರ, ಕಾವೇರಿ, ಬಿಳಿರಂಗನಬೆಟ್ಟ ಹಾಗೂ ಬಂಡೀಪುರ ಭಾಗದಲ್ಲಿಯೇ ಎಂಟು ಹುಲಿ ಮರಿಗಳು ನಿರ್ವಹಣೆಯ ಕೊರತೆಯಿಂದ ಪ್ರಾಣ ಕಳೆದುಕೊಂಡಿವೆ.

ಹೆಚ್ಚು ಹುಲಿಗಳಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಮಧ್ಯಪ್ರದೇಶದ ನಂತರ ದೇಶದಲ್ಲಿ ಎರಡನೇ ಸ್ಥಾನ. ಅರಣ್ಯಪ್ರದೇಶ, ಹುಲಿಗಳ ಆವಾಸಸ್ಥಾನದ ನೆಲೆಯಲ್ಲಿ ನೋಡುವುದಾದರೆ ಹುಲಿಗಳ ಸಾಂದ್ರತೆ ಕರ್ನಾಟಕದಲ್ಲಿಯೇ ಜಾಸ್ತಿಯಿದೆ. 2022ರ ಹುಲಿ ಗಣತಿಯಂತೆ ಬಂಡೀಪುರದಲ್ಲಿ 140 ಹುಲಿಗಳಿದ್ದರೆ, ಅದರಲ್ಲಿ ಮರಿಗಳ ಸಂಖ್ಯೆ 32. ಮೂರು ವರ್ಷದಲ್ಲಿ ಇದು ಮತ್ತಷ್ಟು ಹೆಚ್ಚಾಗಿರುವ ಸಾಧ್ಯತೆ ಇದೆ. ನಾಗರಹೊಳೆಯಲ್ಲಿ 149, ಬಿಳಿಗಿರಿರಂಗನಬೆಟ್ಟ ಹುಲಿಧಾಮದಲ್ಲಿ 39 ಹುಲಿ ಇರುವ ಮಾಹಿತಿ ಬಿಡುಗಡೆ ಮಾಡಲಾಗಿತ್ತು.

ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಮುಖ್ಯ ವಿಷಯವಾದರೂ, ಅವುಗಳ ನಿರ್ವಹಣೆಯಲ್ಲಿ ಅರಣ್ಯ ಇಲಾಖೆ ನಿರಂತರವಾಗಿ ಎಡವುತ್ತಿದೆ. ಈಗಿನ ಅಧಿಕಾರಿಗಳು, ಸಿಬ್ಬಂದಿಗೆ ಪುಸ್ತಕ ಆಧಾರಿತ ಮಾಹಿತಿ ಇದೆಯೇ ಹೊರತು, ಸನ್ನಿವೇಶ ಎದುರಿಸಿ ಕೆಳ ಹಂತದಲ್ಲಿ ಪರಿಸ್ಥಿತಿ ಸುಧಾರಿಸುವ, ಹುಲಿ ಸಂತತಿ ರಕ್ಷಿಸುವ ಕೌಶಲದ ಕೊರತೆ ಕಾಡುತ್ತಿದೆ.

ವನ್ಯಜೀವಿಗಳು ಹೆಚ್ಚಿರುವ, ಸಫಾರಿಗೆ ಬೇಡಿಕೆ ಇರುವ ಕರ್ನಾಟಕದ ಬಂಡೀಪುರ, ನಾಗರಹೊಳೆಯಂತಹ ಹುಲಿಧಾಮಗಳಲ್ಲಿ ಈಗ ಸಫಾರಿಗೆ ಹೆಚ್ಚು ಬೇಡಿಕೆಯಿದೆ. ಹಿಂದೆ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಆಪ್ತರಾಗಿದ್ದ ಛಾಯಾಗ್ರಾಹಕರಿಗೆ ಮಾತ್ರ ವನ್ಯ ಬದುಕಿನ ಹತ್ತಿರದ ಕ್ಷಣಗಳನ್ನು ಸೆರೆಹಿಡಿಯುವ ಅವಕಾಶವಿತ್ತು. ಹುಲಿಯನ್ನು ಮರಿಗಳೊಂದಿಗೆ ಸೆರೆಹಿಡಿದ ಚಿತ್ರಗಳು ಆಗ ಗಮನ ಸೆಳೆದಿದ್ದವು. ಪರಿಸರ ಪ್ರವಾಸೋದ್ಯಮ, ಸಫಾರಿ ಸೌಲಭ್ಯ ವಿಸ್ತರಣೆಗೊಂಡು ಈಗ ಇಂತಹ ಹೆಚ್ಚಿನ ಛಾಯಾಚಿತ್ರ, ವಿಡಿಯೊಗಳನ್ನು ನೋಡುವ ಅವಕಾಶ ಸಿಗುತ್ತಿರುವುದು ಖುಷಿದಾಯಕವೇ. ಆದರೆ, ಇದರ ಇನ್ನೊಂದು ಆಯಾಮವನ್ನೂ ನೋಡಲೇಬೇಕು.

ತಾಯಿ ಹುಲಿ ಒಂದು ವರ್ಷದವರೆಗೂ ಮರಿಯನ್ನು ಜತನದಿಂದ ಕಾಪಾಡುತ್ತದೆ. ಗಂಡಾದರೆ ಒಂದೂವರೆ ವರ್ಷ, ಹೆಣ್ಣು ಮರಿ ಎರಡು ವರ್ಷದವರೆಗೂ ತಾಯಿಯೊಂದಿಗೆ ಬೆಳೆಯುತ್ತದೆ. ಇದರ ನಡುವೆ ಮರಿಗಳು ಬೇರ್ಪಟ್ಟು ಮನುಷ್ಯ ಸಂಪರ್ಕಕ್ಕೆ ಬಂದಿವೆ ಎನ್ನುವ ಅನುಮಾನ ಬಂದರೆ ಮರಿಗಳನ್ನು ದೂರ ಮಾಡಿಬಿಡುತ್ತದೆ. ಅಂತಹ ಹುಲಿಗಳು ಜೀವಬಿಡುವ ಸನ್ನಿವೇಶವೂ ಎದುರಾಗಬಹುದು.

ಹುಲಿ ಮರಿಗಳ ನಿರ್ವಹಣೆಗೆಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ 2015ರಲ್ಲಿ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್ಒಪಿ) ಬಿಡುಗಡೆ ಮಾಡಿದೆ. ಇದರಂತೆ ಹುಲಿಯನ್ನು ವನ್ಯ ನೆಲೆಯಲ್ಲಿ ರಕ್ಷಿಸಿದಾಗ ಹೇಗೆ ನಿರ್ವಹಣೆ ಮಾಡಬೇಕು, ಮೃಗಾಲಯದಲ್ಲಿ ಹೇಗೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ದಶಕದ ನಂತರ ಹುಲಿಗಳ ಸಂಖ್ಯೆ ಹೆಚ್ಚಿದೆ. ಇಲಾಖೆಗೆ ಹೊಸ ಅಧಿಕಾರಿಗಳು, ಸಿಬ್ಬಂದಿ ಬಂದಿದ್ದಾರೆ. ಎಲ್ಲವನ್ನೂ ಸೆರೆ ಹಿಡಿದು ಸಾಮಾಜಿಕ ಮಾಧ್ಯಮಕ್ಕೆ ಹಾಕಿ ಬಿಡಬೇಕು ಎನ್ನುವ ಜನರ ಧಾವಂತವೂ ಹೆಚ್ಚಿದೆ. ಹೀಗಿರುವಾಗ ಕರ್ನಾಟಕ ಅರಣ್ಯ ಇಲಾಖೆಯು ಹುಲಿಧಾಮಗಳ ವ್ಯಾಪ್ತಿಯ ಅಧಿಕಾರಿಗಳು, ಸಿಬ್ಬಂದಿಗೆ ಹುಲಿ ಹಾಗೂ ಮರಿಗಳ ನಿರ್ವಹಣೆಯ ಪಾಠವನ್ನು ಹೊಸದಾಗಿ ಹೇಳಿಕೊಡಲೇಬೇಕು.

ಹುಲಿ ಮಾತ್ರವಲ್ಲದೆ, ಜನರನ್ನೂ ನಿಯಂತ್ರಿಸುವ ಸೂಕ್ಷ್ಮಗಳನ್ನೂ ಹೇಳಿಕೊಡುವುದು ಸೂಕ್ತ. ಸಂಘರ್ಷ ಪ್ರಮಾಣ ಮುಂದಿನ ದಿನಗಳಲ್ಲಿ ಹೆಚ್ಚಬಹುದು. ಆಗಲೂ ಇದೆಲ್ಲವನ್ನೂ ಎದುರಿಸಬಲ್ಲ ಕೆಳ ಹಂತದ ಸಿಬ್ಬಂದಿ, ಅನುಭವದ ಪಾಠ ಧಾರೆ ಎರೆಯಬಲ್ಲ ಹಿರಿಯ ಅಧಿಕಾರಿಗಳು, ಪರಿಣತಿ ಇರುವವರ ಪಡೆಯನ್ನು ರೂಪಿಸಿದರೆ ಇದು ‘ಕರ್ನಾಟಕದ ಮಾದರಿ’ಯೂ ಆಗಬಹುದು. ಇಲ್ಲದೇ ಇದ್ದರೆ ಹುಲಿ– ಮರಿಗಳ ಸಾವಿನ ಘಟನೆಗಳು, ಅರಣ್ಯದಂಚಿನ ಕುಟುಂಬದವರ ರೋದನದ ಸನ್ನಿವೇಶಗಳೇ ಮತ್ತೆ ಮತ್ತೆ ಎದುರಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.