ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕಲಿಕೆಗೆ ಬಹುಭಾಷಾ ಶಕ್ತಿ

ಮಕ್ಕಳ ಮಾತೃಭಾಷೆಯ ಮೂಲಕ ಪಠ್ಯಕ್ಕೆ ಸಂಪರ್ಕ ಕಲ್ಪಿಸಬೇಕಾದ ಸವಾಲಿದೆ
Last Updated 16 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

2020ನೇ ಸಾಲಿನ ಪ್ರತಿಷ್ಠಿತ ‘ಜಾಗತಿಕ ಶಿಕ್ಷಕ’ ಪ್ರಶಸ್ತಿಯನ್ನು ಪಡೆದ ಮಹಾರಾಷ್ಟ್ರದ ರಂಜಿತ್‍ಸಿಂಹ ದಿಸಳೆಯವರ ಯಶೋಗಾಥೆಯು ಶೈಕ್ಷಣಿಕವಾಗಿ ಅನೇಕ ಹೊಳಹುಗಳನ್ನು ನಮಗೆ ನೀಡುತ್ತದೆ. ಒಂದರಿಂದ ನಾಲ್ಕನೇ ತರಗತಿಯವರೆಗೆ ಬೋಧಿಸುವ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಧನೆಗಾಗಿ ಗುರುತಿಸಲ್ಪಟ್ಟಿರುವುದು ಮಹತ್ವದ ಸಂಗತಿಯಾಗಿದೆ.

ಸಾಮಾನ್ಯವಾಗಿ ಕಿರಿಯ ಪ್ರಾಥಮಿಕ ಹಂತದ ತರಗತಿಗಳಿಗೆ ಬೋಧಿಸಲು ಅನೇಕ ಶಿಕ್ಷಕರು ಹಿಂಜರಿಯುತ್ತಾರೆ. ತಮ್ಮ ಜ್ಞಾನ ಹಾಗೂ ಕೌಶಲಗಳನ್ನು ಈ ಹಂತದ ತರಗತಿಗಳಲ್ಲಿ ಅಭಿವ್ಯಕ್ತಗೊಳಿಸಲು ಸಾಧ್ಯವಾಗುವುದಿಲ್ಲ ಎಂಬ ಭಾವನೆ ಇದಕ್ಕೆ ಕಾರಣ ಇರಬಹುದು. ಇಂತಹ ಸನ್ನಿವೇಶದಲ್ಲಿ, ಬೋಧಿಸುವ ತರಗತಿ ಯಾವುದೇ ಆದರೂ ಅದರಲ್ಲಿ ನಾವೀನ್ಯ, ಸಾಮಾಜಿಕ ಕಾಳಜಿ, ಬದ್ಧತೆಯಿಂದ ನಿರಂತರ ಪ್ರಯತ್ನಗಳನ್ನು ಕೈಗೊಂಡಲ್ಲಿ ಸಾಧನೆ ಸಾಧ್ಯ ಎಂಬುದನ್ನು ದಿಸಳೆ ಅವರು ನಿರೂಪಿಸಿದ್ದಾರೆ.

ಮಕ್ಕಳ ಮಾತೃಭಾಷೆ ಅಥವಾ ಪರಿಸರ ಭಾಷೆಯ ಮೂಲಕ ಶಿಕ್ಷಣ ನೀಡುವುದರ ಮಹತ್ವವನ್ನು ದಿಸಳೆಯವರ ಪ್ರಯತ್ನದಿಂದ ಗುರುತಿಸಬಹುದಾಗಿದೆ. ಅವರು ತಮ್ಮ ತರಗತಿಗಳಲ್ಲಿ ಕನ್ನಡ ಮಾತೃಭಾಷೆಯ ಮಕ್ಕಳಿಗೆ ಕನ್ನಡದ ಮೂಲಕ ಮರಾಠಿ ಭಾಷೆಯನ್ನು ಕಲಿಸುವ ಪ್ರಯತ್ನ ಮಾಡಿ ಯಶ ಕಂಡಿದ್ದಾರೆ. ಆಧುನಿಕ ತಂತ್ರಜ್ಞಾನದಿಂದ ಕಲಿಕೆಗೆ ಪೂರಕವಾದ ಸಂಪನ್ಮೂಲ ಸಾಮಗ್ರಿಗಳನ್ನು ಸೃಜಿಸಿ, ಶೈಕ್ಷಣಿಕ ಪ್ರಕ್ರಿಯೆಯನ್ನು ಆಕರ್ಷಣೀಯಗೊಳಿಸಿದ್ದಾರೆ.

ಭಾರತದಂತಹ ಬಹುಭಾಷಾ ಸನ್ನಿವೇಶವನ್ನು ಹೊಂದಿದ ಶಾಲಾ ತರಗತಿಗಳಲ್ಲಿ ಶಿಕ್ಷಕರು ಮಕ್ಕಳ ಮಾತೃಭಾಷೆಯ ಮೂಲಕ ಪಠ್ಯಭಾಷೆಗೆ ಸಂಪರ್ಕ ಕಲ್ಪಿಸಿ, ಮಕ್ಕಳು ಯಶಸ್ವಿಯಾಗಿ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡುವ ಸವಾಲು ಇದೆ. ಈ ದಿಸೆಯಲ್ಲಿ ಯಶ ಕಾಣಲು ಸಾಧ್ಯವಿದೆ ಎಂಬುದನ್ನು ದಿಸಳೆಯವರ ಯಶೋಗಾಥೆ ಸೂಚಿಸುತ್ತದೆ.

ನೂತನವಾಗಿ ಜಾರಿಗೆ ಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ– 2020, ವಿವಿಧ ಭಾಷೆಗಳ ಶಕ್ತಿಯನ್ನು ಹಾಗೂ ಬಹುಭಾಷೆಗಳ ಕಲಿಕೆಯನ್ನು ಪ್ರತಿಪಾದಿಸಿದೆ. ಜೊತೆಗೆ ಶಿಕ್ಷಕರು ದ್ವಿಭಾಷಾ ಪದ್ಧತಿಯನ್ನು ಬಳಸಲು ಹಾಗೂ ದ್ವಿಭಾಷೆಗಳಿಗೆ ಸಂಬಂಧಿಸಿದ ಬೋಧನಾ ಕಲಿಕಾ ಸಂಪನ್ಮೂಲಗಳನ್ನು ಸೃಜಿಸಲು ಉತ್ತೇಜನ ನೀಡುವ ಅಂಶ ಕುರಿತು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.

ನಮ್ಮ ದೇಶದ ಅನೇಕ ಶಾಲೆಗಳ ತರಗತಿಗಳಲ್ಲಿ ದ್ವಿಭಾಷಾ ಪದ್ಧತಿ ಬಳಕೆ ಮಾಡಬೇಕಾದ ಅನಿವಾರ್ಯ ಸ್ಥಿತಿ ಇದೆ. ರಾಜ್ಯದ ಅನೇಕ ಪ್ರದೇಶಗಳಲ್ಲಿ ಕನ್ನಡ, ಇಂಗ್ಲಿಷ್‌ ಭಾಷೆಯ ಬೋಧನಾ ಮಾಧ್ಯಮ ಇರುವೆಡೆ, ತರಗತಿಯಲ್ಲಿ ಶಿಕ್ಷಕರು ಇತರ ಸ್ಥಳೀಯ ಸಮುದಾಯದ ಭಾಷೆಯನ್ನು ಕಲಿತು, ಮಕ್ಕಳಿಗೆ ಕಲಿಕಾ ಮಾಧ್ಯಮದ ಭಾಷೆ ಹಾಗೂ ಮನೆಯ ಭಾಷೆಗೆ ಸೇತುವೆಯನ್ನು ನಿರ್ಮಾಣ ಮಾಡಬೇಕಿದೆ. ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಹಂತದ ತರಗತಿಗಳಲ್ಲಿ ಈ ಕಾರ್ಯವು ಆದಲ್ಲಿ ಮಕ್ಕಳಲ್ಲಿ ಶಾಲಾ ಕಲಿಕೆಯ ಕುರಿತು ಆಸಕ್ತಿ, ನಿರಾಳ ಹಾಗೂ ಸುರಕ್ಷತಾ ಮನೋಭಾವ ಬರುತ್ತದೆ.

ಈ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ತಮಿಳು ಹಾಗೂ ಸೋಲಿಗ, ಕೊಡಗಿನಲ್ಲಿ ಕೊಡವ, ಕರಾವಳಿಯಲ್ಲಿ ತುಳು, ಬೆಳಗಾವಿ, ಬೀದರ್ ಜಿಲ್ಲೆಯ ಗಡಿ ಭಾಗಗಳಲ್ಲಿ ಮರಾಠಿ, ಕಲಬುರ್ಗಿ ಜಿಲ್ಲೆಯ ಗಡಿ ಭಾಗಗಳಲ್ಲಿ ಉರ್ದು, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳ ಗಡಿ ಭಾಗಗಳಲ್ಲಿ ತೆಲುಗು... ಹೀಗೆ ಅನೇಕ ಭಾಷೆಗಳ ಮೂಲ ಕೌಶಲಗಳನ್ನು ಶಿಕ್ಷಕರು ಕಲಿಯಬೇಕಾದ ಅಗತ್ಯ ಬರುತ್ತದೆ.

ಇನ್ನು ಬೆಂಗಳೂರಿನಂತಹ ಮಹಾನಗರಗಳಲ್ಲಿ ಬಹುಭಾಷಾ ತರಗತಿಗಳ ಸನ್ನಿವೇಶದ ಸವಾಲು ಶಿಕ್ಷಕರಿಗೆ ಇದ್ದೇ ಇದೆ. ಕಟ್ಟಡ ನಿರ್ಮಾಣ ಹಾಗೂ ಇತರ ಉದ್ಯೋಗಗಳ ಕಾರಣದಿಂದ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶದಂತಹ ಅನೇಕ ರಾಜ್ಯಗಳ ಜನ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಕುಟುಂಬದಲ್ಲಿ ಪೋಷಕರಿಂದ ಶೈಕ್ಷಣಿಕ ಬೆಂಬಲ ದೊರೆಯದ ಕೆಳವರ್ಗದ ಮಕ್ಕಳು ತಮ್ಮ ಮಾತೃಭಾಷೆಯಿಂದ ಹೊರತಾದ ಕಲಿಕಾ ಮಾಧ್ಯಮದ ಕಾರಣಕ್ಕಾಗಿ ಶಾಲಾ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಕುಟುಂಬಗಳ ಅನೇಕ ಮಕ್ಕಳು ಶಾಲೆಗೆ ದಾಖಲಾದರೂ ಕಲಿಯಬೇಕಾದ ವಿಷಯಗಳನ್ನು ಭಾಷೆಯ ಕಾರಣದಿಂದ ಸ್ಪಷ್ಟವಾಗಿ ಗ್ರಹಿಸಲಾಗದೆ ಶಾಲೆಯನ್ನು ಅರ್ಧದಲ್ಲಿಯೇ ಬಿಡುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಶಿಕ್ಷಕರು ತಮ್ಮ ತರಗತಿಗಳ ವಿದ್ಯಾರ್ಥಿಗಳ ಮಾತೃಭಾಷೆಯ ವಿವರವನ್ನು ಸಂಗ್ರಹಿಸಿ, ಅವರ ಮಾತೃಭಾಷೆಗೆ ಸಂಬಂಧಿಸಿದ ಕೆಲವು ಮುಖ್ಯ ಪದಗಳನ್ನು ಒಳಗೊಂಡ ಪದಸಂಪತ್ತನ್ನು ಕಲಿತು, ಕೆಲವು ಕಲಿಕಾ ಸಂಪನ್ಮೂಲಗಳನ್ನು ಅಭಿವೃದ್ಧಿಗೊಳಿಸಬೇಕಾದ ಅಗತ್ಯ ಇದೆ.

ಆರಂಭದಲ್ಲಿ ವಿದ್ಯಾರ್ಥಿಗಳೊಂದಿಗೆ ಅವರ ಮಾತೃಭಾಷೆಯ ಕೆಲವು ಪದಗಳ ಮೂಲಕ ಸಂವಹನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಕರ ಬಗ್ಗೆ ಭರವಸೆ, ಸುರಕ್ಷತೆಯ ಭಾವ ಮೂಡುತ್ತದೆ. ಹಲವು ವರ್ಷಗಳ ಹಿಂದೆ ಸೋಲಿಗ ಭಾಷೆ, ಕನ್ನಡ ಭಾಷೆಯ ಸಮಾನಾರ್ಥಕ ಪದಗಳ ಶಬ್ದಕೋಶವನ್ನು ಅಭಿವೃದ್ಧಿಪಡಿಸಲಾಗಿತ್ತು. ಇದೇ ರೀತಿ ಲಂಬಾಣಿ ಹಾಗೂ ಇತರ ಭಾಷೆಗಳಿಗೂ ಶಬ್ದಕೋಶವನ್ನು ಅಭಿವೃದ್ಧಿಪಡಿಸಿ ಬಳಕೆ ಮಾಡಬಹುದು.

ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ದ್ವಿಭಾಷಾ ಅಥವಾ ಬಹುಭಾಷಾ ಪದ್ಧತಿಯ ಅಳವಡಿಕೆ ಪರಿಣಾಮಕಾರಿ ಆಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT