ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕಲಿಕೆಯ ಹಾದಿ– ತಾಳ್ಮೆಯೇ ಬುನಾದಿ

ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಕರು ಅಥವಾ ಸಹಪಾಠಿಗಳು ಆಡುವ ಮೂದಲಿಕೆಯ ಮಾತುಗಳು ಅವರು ಇನ್ನಷ್ಟು ಹಿಂದುಳಿಯುವಂತೆ ಮಾಡುತ್ತವೆ
Published 24 ಆಗಸ್ಟ್ 2023, 2:41 IST
Last Updated 24 ಆಗಸ್ಟ್ 2023, 2:41 IST
ಅಕ್ಷರ ಗಾತ್ರ

–ಎಚ್‌.ಬಿ.ಚಂದ್ರಶೇಖರ್‌

ಪ್ರತಿ ಮಗುವೂ ಅನನ್ಯ ಎಂದು ತಿಳಿದಿದ್ದರೂ ಶಾಲಾ ಭೇಟಿಗಳ ಸಂದರ್ಭದಲ್ಲಿ ನಾನು ಗಮನಿಸಿದಂತೆ, ಕೆಲವು ಶಿಕ್ಷಕರು ಕಲಿಕೆಯ ವಿಷಯದಲ್ಲಿ ಒಬ್ಬ ವಿದ್ಯಾರ್ಥಿಯನ್ನು ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ ಹೋಲಿಸುತ್ತಾರೆ. ಮಕ್ಕಳ ಕಲಿಕೆಯ ಮಾಪನ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಓದಲು, ಬರೆಯಲು ಅಥವಾ ಲೆಕ್ಕ ಮಾಡಲು ಹೇಳಿದಾಗ ಕೆಲವು ಶಿಕ್ಷಕರು ಥಟ್ಟನೆ ‘ಸರ್, ಈ ಹುಡುಗನಿಗೆ ಏನೂ ಬರುವುದಿಲ್ಲ’, ‘ಈ ಹುಡುಗಿ ಶಾಲೆಗೆ ಪದೇಪದೇ ಗೈರುಹಾಜರಾಗುತ್ತಾಳೆ’, ‘ಇವನು ಲೆಕ್ಕದಲ್ಲ ಸ್ವಲ್ಪ ವೀಕು’ ಎಂದುಬಿಡುತ್ತಾರೆ. ಕೆಲವೊಮ್ಮೆ ವಿದ್ಯಾರ್ಥಿಯ ಸ್ನೇಹಿತರು, ‘ಸರ್ ಅವನಿಗೆ ಏನೂ ಬರುವುದಿಲ್ಲ’ ಎಂದು ಕುಹಕವಾಡುತ್ತಾರೆ.

ಕಲಿಕೆಯಲ್ಲಿ ಮೊದಲೇ ಒಂದಷ್ಟು ಹಿಂದಿರುವ ವಿದ್ಯಾರ್ಥಿಯ ಮನಸ್ಸಿಗೆ ಇದರಿಂದ ಗಾಸಿಯಾಗುತ್ತದೆ. ಆರಂಭದಲ್ಲಿ ಮಾನಸಿಕ ನೋವು, ಬೇಸರ ಅನುಭವಿಸುವ ವಿದ್ಯಾರ್ಥಿಯ ಮನಸ್ಸು ಕಾಲಕ್ರಮೇಣ ಜಡ್ಡುಗಟ್ಟುತ್ತದೆ. ‘ನಾನು ದಡ್ಡನೇ ಇದ್ದೇನೆ. ಇನ್ನೇಕೆ ಪ್ರಯತ್ನಪಡಲಿ’ ಎಂಬ ಧೋರಣೆ ಹೊಂದುತ್ತಾನೆ. ಇದರಿಂದ ಕಲಿಕೆಯಲ್ಲಿ ಹಿಂದುಳಿಯುವಿಕೆ ಹೆಚ್ಚಾಗಿ ಶಾಲೆಗೆ ಪದೇಪದೇ ಗೈರುಹಾಜರಾಗುತ್ತಾನೆ. ಇಂತಹ ವಿದ್ಯಾರ್ಥಿಗಳಿಗೆ ಶಾಲೆ, ಶಿಕ್ಷಣ ರುಚಿಸದೇ ಹೋಗುತ್ತದೆ. ಮೂದಲಿಕೆಗಳಿಂದಾಗಿ ಗೆಳೆತನವೂ ಬೇಡವಾಗುತ್ತದೆ.

ಶಿಕ್ಷಕರ ದೈನಂದಿನ ತರಗತಿ ಬೋಧನೆಯಲ್ಲಿ ಅಥವಾ ಇನ್ನಿತರ ಅನೇಕ ಸಂದರ್ಭಗಳಲ್ಲಿ ‘ಇವನಿಗೆ ಲೆಕ್ಕ ತಲೆಗೆ ಹತ್ತದು’, ‘ಇವಳಿಗೆ ಓದಲು ಬಾರದು’ ಎಂಬಂತಹ ಮಾತುಗಳು ಮಕ್ಕಳ ಮನಸ್ಸಿನಾಳದಲ್ಲಿ ಕುಳಿತು, ಅವರ ಆತ್ಮವಿಶ್ವಾಸ ಕುಸಿಯುವಂತೆ ಮಾಡುತ್ತವೆ. ಇಂತಹ ನಕಾರಾತ್ಮಕ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನಕಾರಾತ್ಮಕ ಸ್ವಬಿಂಬವನ್ನು ಅವರು ರಚಿಸಿಕೊಳ್ಳುತ್ತಾರೆ. ತಂದೆ, ತಾಯಿ, ಸಹೋದರ ಸಹೋದರಿಯರು, ಮನೆಯ ಇತರ ಸದಸ್ಯರು, ನೆರೆಯವರು, ಶಾಲಾ ಶಿಕ್ಷಕರು ಹಾಗೂ ಸ್ನೇಹಿತರು ತನ್ನ ಬಗ್ಗೆ ಏನು ಹೇಳುತ್ತಾರೆ, ಯಾವ ಅಭಿಪ್ರಾಯ ಹೊಂದಿದ್ದಾರೆ, ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂಬುದರ ಆಧಾರದ ಮೇಲೆ ಪ್ರತಿಯೊಬ್ಬರೂ ತಮ್ಮದೇ ಆದ ಸ್ವಬಿಂಬವನ್ನು ರಚಿಸಿಕೊಂಡು ಅದಕ್ಕೆ ತಕ್ಕಂತೆ ಸ್ಪಂದಿಸುತ್ತಾರೆ. ಒಮ್ಮೆ ರಚನೆಯಾದ ಸ್ವಬಿಂಬವನ್ನು ಬದಲಾಯಿಸುವುದು ಕಠಿಣ. ಈ ಕಾರಣದಿಂದ, ಮಕ್ಕಳೊಂದಿಗೆ ಒಡನಾಡುವಾಗ ನಕಾರಾತ್ಮಕ ಮಾತುಗಳನ್ನು ಆಡುವುದರ ಬದಲಾಗಿ ‘ನೀನು ಲೆಕ್ಕದಲ್ಲಿ ಜಾಣೆ’, ‘ನಿನಗೆ ಓದಲು ಬರುತ್ತದೆ, ಪ್ರಯತ್ನಿಸು’ ಎಂಬಂಥ ಆತ್ಮವಿಶ್ವಾಸದ ಮಾತುಗಳನ್ನು ಆಡಬೇಕು.

ಸಾಮಾನ್ಯವಾಗಿ ನಿಧಾನಗತಿಯಲ್ಲಿ ಕಲಿಯುವ ಮಕ್ಕಳು ಒತ್ತಕ್ಷರಗಳಿಲ್ಲದ ಸರಳ ಪದಗಳನ್ನು ಓದುತ್ತಾರೆ. ಗುಣಿತಾಕ್ಷರ ಮತ್ತು ಒತ್ತಕ್ಷರಗಳು ಇರುವ ಪದಗಳು ಬಂದರೆ ಓದಲು ಕಷ್ಟಪಡುತ್ತಾರೆ. ಈ ಹಂತದಲ್ಲಿ ಅವರಿಗೆ ನೆರವು ಬೇಕಾಗುತ್ತದೆ. ಇನ್ನು ಕೆಲವರು ಗುಣಿತಾಕ್ಷರ ಮತ್ತು ಒತ್ತಕ್ಷರಗಳನ್ನು ಗುರುತಿಸುವುದನ್ನು ಕಲಿತರೂ ಪದಗಳನ್ನು ಜೋಡಿಸಿಕೊಂಡು ವಾಕ್ಯಗಳಾಗಿ ಓದಲು ಕಷ್ಟಪಡುತ್ತಾರೆ. ಈ ಹಂತದಲ್ಲಿ ಸಮಾಧಾನ, ತಾಳ್ಮೆಯಿಂದ ಅವರದೇ ಗತಿಯಲ್ಲಿ ಕಲಿಯಲು ಅವಕಾಶ ಮಾಡಿಕೊಡದೇಹೋದರೆ ಅವರು ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ.

ಇನ್ನು ಲೆಕ್ಕದ ವಿಷಯಕ್ಕೆ ಬಂದರೆ, ದಶಕ ರಹಿತವಾಗಿ ಕೂಡುವ, ಕಳೆಯುವ ಲೆಕ್ಕಗಳನ್ನು ಮಾಡಿದರೂ ದಶಕ ತೆಗೆದುಕೊಂಡು ಕೂಡುವ ಕಳೆಯುವ ಲೆಕ್ಕಗಳನ್ನು ಮಾಡಲು ಕಷ್ಟಪಡುತ್ತಾರೆ. ಕೂಡುವುದಕ್ಕಿಂತ ಕಳೆಯುವುದು ಕಠಿಣ, ಕಳೆಯುವುದಕ್ಕಿಂತ ಗುಣಾಕಾರ ಹಾಗೂ ಗುಣಕಾರಕ್ಕಿಂತ ಭಾಗಾಕಾರ ಮಕ್ಕಳಿಗೆ ಕಠಿಣವೆನಿಸುತ್ತದೆ. ಒಂದು ನಿರ್ದಿಷ್ಟ ಹಂತದ ಕಲಿಕೆಗೆ ಬಂದು ಮುಂದಿನ ಕಲಿಕೆ ಸಾಧ್ಯವಾಗದೇ ನಿಂತ ಮಕ್ಕಳಿಗೆ ‘ಸರಳತೆಯಿಂದ ಕಠಿಣತೆಗೆ’ ಸಾಗುವ ಸೂತ್ರ ಮತ್ತು ಮಕ್ಕಳ ಆತ್ಮವಿಶ್ವಾಸ ಉದ್ದೀಪನಗೊಳಿಸುವ ಕಾರ್ಯ ಪರಿಣಾಮಕಾರಿ.

ಇದಕ್ಕೊಂದು ಒಳ್ಳೆಯ ಉದಾಹರಣೆಯನ್ನು ಸ್ವಾಮಿ ಜಗದಾತ್ಮಾನಂದ ಅವರ ‘ಬದುಕಲು ಕಲಿಯಿರಿ’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. 7ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಲೆಕ್ಕದಲ್ಲಿ ಬಲು ಹಿಂದೆ ಹಾಗೂ ನಕಲು ಮಾಡುವುದರಲ್ಲಿ ಮುಂದೆ ಎಂಬ ಕುಖ್ಯಾತಿ ಪಡೆದಿರುತ್ತಾನೆ. ಅವನ ಗಣಿತದ ಜ್ಞಾನ 3ನೇ ತರಗತಿಯಷ್ಟು. ಅವನು ಒಮ್ಮೆ ಸ್ವಾಮೀಜಿಯನ್ನು ಭೇಟಿ ಮಾಡಿ, ‘ನನಗೆ ಖಾಸಗಿಯಾಗಿ ಲೆಕ್ಕ ಹೇಳಿಕೊಡಿ’ ಎನ್ನುತ್ತಾನೆ. ದಿನವೂ ರಾತ್ರಿ ಗಣಿತ ಪಾಠ ನಡೆಯುತ್ತದೆ. ಆರಂಭದಲ್ಲಿ ಅವನಿಗೆ ಸುಲಭವಾಗಿ ಬರುವ ಲೆಕ್ಕಗಳನ್ನು ಮಾಡಿಸುತ್ತಾ, ಅವನು ಸರಿ ಲೆಕ್ಕ ಮಾಡಿದಾಗಲೆಲ್ಲಾ ‘ನೀನು ಲೆಕ್ಕದಲ್ಲಿ ಜಾಣ, ನಿನಗೆ ಗಣಿತ ಬಾರದು ಎಂದವರಾರು’ ಎನ್ನುತ್ತಾ ಸ್ವಾಮೀಜಿ ಅವನಲ್ಲಿ ಆತ್ಮವಿಶ್ವಾಸ ತುಂಬುತ್ತಾರೆ. ಮೂರು ತಿಂಗಳಲ್ಲಿ ಕಠಿಣ ಲೆಕ್ಕಗಳನ್ನು ಮಾಡುವುದನ್ನು ಕಲಿತು, ವಾರ್ಷಿಕ ಪರೀಕ್ಷೆಯಲ್ಲಿ ನಕಲು ಮಾಡದೆ ಶೇ 70ರಷ್ಟು ಅಂಕ ಪಡೆಯುತ್ತಾನೆ.

ನಕಾರಾತ್ಮಕ ಸ್ವಬಿಂಬವನ್ನು ಹೊಂದಿರುವ ನಿಧಾನಗತಿಯ ಕಲಿಕೆಯ ಮಕ್ಕಳಿಗೆ ಒಳ್ಳೆಯ ಮಾತುಗಳನ್ನು ಆಡುತ್ತಾ ಆತ್ಮವಿಶ್ವಾಸ ಮೂಡಿಸಿ, ಕಲಿಯುವ ಹುಮ್ಮಸ್ಸು ಬರುವಂತೆ ಶಿಕ್ಷಕರು ತಾಳ್ಮೆ, ಸಹನೆಯನ್ನು ಹೊಂದಿ ಕಾರ್ಯನಿರ್ವಹಿಸಿದಲ್ಲಿ ಹೆಚ್ಚಿನ ಮಕ್ಕಳು ಕಲಿಕೆಯ ಹಾದಿಗೆ ಮರಳುತ್ತಾರೆ.

ಲೇಖಕ: ಹಿರಿಯ ಉಪನ್ಯಾಸಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)‌, ಬೆಂಗಳೂರು ನಗರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT