ಮಂಗಳವಾರ, ನವೆಂಬರ್ 30, 2021
21 °C
ವರ್ತಮಾನವನ್ನು ಅರ್ಥೈಸಿಕೊಳ್ಳದೆ ಭವಿಷ್ಯ ಹಸನಾಗದು

ಪ್ರಜಾವಾಣಿ ಸಂಗತ– ‘ಭವಿಷ್ಯ ವಿಜ್ಞಾನ’ ದಾರಿದೀಪವಾಗಲಿ

ಯೋಗಾನಂದ Updated:

ಅಕ್ಷರ ಗಾತ್ರ : | |

Prajavani

‘ನಾಳೆಯೊಡನೆ ಜೂಜಾಟ ಬೇಡ, ಇಂದೇ ಬದುಕನ್ನು ಪರಿಷ್ಕರಿಸಿಕೊಳ್ಳಿ’- ಫ್ರಾನ್ಸ್‌ನ ಲೇಖಕಿ ಸಿಮೊನ್ ಡಿ ಬೊವಾ ಹೇಳಿದ ಈ ಮಾತು ‘ಕಾಲಜ್ಞಾನ’ದ ಬೆನ್ನೇರುವ ಪ್ರವೃತ್ತಿಗೆ ಚಾಟಿ ಬೀಸಿದಂತಿದೆ.

ವಾಸ್ತವವಾಗಿ ‘ನಾಳೆ’ ಎನ್ನುವುದೇ ಇಲ್ಲ! ಏಕೆಂದರೆ ‘ನಾಳೆ’ ಬಂದಾಗ ಅದು ಇಂದೇ ಆಗಿರುತ್ತದೆ. ಅತಿಯಾಗಿ ಹಚ್ಚಿಕೊಂಡರೆ ಗತವು ಖಿನ್ನತೆಗೂ ಭವಿತವ್ಯವು ಆತಂಕಕ್ಕೂ ಕಾರಣವಾಗಬಹುದು. ಜನಪದರು ಈ ದೃಷ್ಟಿಯಿಂದಲೇ ‘ನಾಳೆ ಮನೆ ಹಾಳು’ ಎನ್ನುತ್ತಾರೆ. ಬೆಳಗ್ಗೆ ಎದ್ದ ಕೂಡಲೆ ‘ಎಳ್ಳು-ಜೀರಿಗೆಕಬ್ಬು’ ಬೆಳೆಯುವವರ ಕೃತಜ್ಞತೆಯಿಂದ ನೆನೆಯುವ ಮೂಲಕ ಇಂದಿನ ದಿನವನ್ನು ಅವರು ಉತ್ಸಾಹದಿಂದ ಬರಮಾಡಿಕೊಳ್ಳುವುದರಲ್ಲಿ ಅರ್ಥವಿದೆ. ಹಾಗಾಗಿ ವರ್ತಮಾನವೊಂದೇ ನೆಮ್ಮದಿ, ಶಾಂತಿಯ ನೆಲೆ.

ದಾಸವರೇಣ್ಯರ ದೃಷ್ಟಿಯಲ್ಲಿ ಇಂದಿನ ದಿನವೇ ಶುಭದಿನ. ‘ಕಾಲಜ್ಞಾನ’ದ ಅಸಲಿಯತ್ತು ನಮಗೆ ಗೊತ್ತಿದ್ದೇ. ನಿಂತ ಗಡಿಯಾರವೂ ದಿನಕ್ಕೆರಡು ಬಾರಿ ನಿಖರ ಸಮಯ ತೋರಿಸುತ್ತದೆ. ವಿದ್ಯಮಾನಗಳು ನಡೆದ ನಂತರ ಚಿತ್ರ ವಿಚಿತ್ರ ಸಮರ್ಥನೆಗಳಿಂದ, ಮುನ್ನುಡಿದಂತೆಯೇ ಆಗಿವೆಯೆಲ್ಲ ಎಂದು ವಾದಕ್ಕಿಳಿಯುವುದಿದೆ.

ಒಂದು ವೃತ್ತಾಂತ ನೆನಪಿಗೆ ಬರುತ್ತದೆ. ಪಿಯು ಪರೀಕ್ಷೆಗೆ ಕೂತಿದ್ದ ವಿದ್ಯಾರ್ಥಿಯೊಬ್ಬ ನಾಲ್ಕು ಐಚ್ಛಿಕ ವಿಷಯಗಳ ಫಲಿತಾಂಶ ಹೇಗೆಂದು ಒಬ್ಬ ‘ಕಾಲ ಜ್ಞಾನಿ’ಯ ಮೊರೆ ಹೋದ. ಆತ ಮೌನ ಮುರಿಯದೆ ಬಲಗೈನ ಒಂದು ಬೆರಳು ತೋರಿದ. ಫಲಿತಾಂಶ ಪ್ರಕಟವಾಯಿತು. ವಿದ್ಯಾರ್ಥಿ ಎರಡು ವಿಷಯಗಳಲ್ಲಿ ನಪಾಸಾಗಿದ್ದ. ನಾನು ನಿನಗೆ ಒಂದರ್ಧದಷ್ಟು ವಿಷಯ ಗಳು ಮಾತ್ರ ಪಾಸು ಅಂತ ಹೇಳಿದ್ದೆ ತಾನೆ ಎಂದಿದ್ದ ಕಾಲಜ್ಞಾನಿ! ಇನ್ನು ವಿವರಿಸುವ ಅಗತ್ಯವಿಲ್ಲ. ಫಲಿತಾಂಶ ಏನೇ ಇದ್ದರೂ ಸಮರ್ಥನೆ ಇದ್ದೇ ಇತ್ತು.

ಮುಂದಾಗುವುದನ್ನು ಹೇಳಲು ಅಸಾಧ್ಯ. ಭೂಕಂಪ, ನೆರೆ, ಸುನಾಮಿ, ಅಗ್ನಿಪರ್ವತ ಸ್ಫೋಟ, ರೋಗ ರುಜಿನಗಳು, ಅನ್ಯ ಆಗಸಕಾಯಗಳ ಡಿಕ್ಕಿಗಳ ಮಾತಿರಲಿ ಮಳೆ, ಚಂಡಮಾರುತಗಳನ್ನೂ ನಿಖರವಾಗಿ ಅರಿಯಲಾಗದು. ನಿನ್ನೆ ನೋಡಿದ್ದಾಗಿದೆ, ಇಂದಿನ ದಿನ ಆಪ್ತವಾಗಿಸಿಕೊಂಡರೆ ನಾಳೆಗೆ ಹೆದರುವ ಅಗತ್ಯವಿಲ್ಲ. ಭವಿಷ್ಯದತ್ತ ಧಾವಿಸಿದಷ್ಟೂ ನಮ್ಮ ಮುಂಗಾಣ್ಕೆಗಳ ನಿಷ್ಕೃಷ್ಟತೆ ಕಡಿಮೆ. ನಾವು ಜೀವಿಸಿರುವುದು ವರ್ತಮಾನದಲ್ಲೇ, ನಾಳೆ ಕನ್ನಡಿಯೊಳಗಿನ ಗಂಟು. ನಾಳಿನ ಬಗ್ಗೆ ಕೊರಗು ಅನುಭವಿಸಬೇಕಾದ ತಾಕಲಾಟಗಳನ್ನೇನೂ ತಿಳಿಗೊಳಿಸದು. ನಮ್ಮನ್ನು ಕಾಡುವ ಅತಿ ಘೋರ ಭಯವೆಂದರೆ ನಮಗೆ ಗೊತ್ತಿಲ್ಲದ್ದು ಸೃಷ್ಟಿಸುವಂಥದ್ದು. ಹಾಗೆ ನೋಡಿದರೆ ಭವಿಷ್ಯವೆಂಬ ಪ್ರಶ್ನೆಪತ್ರಿಕೆ ರಹಸ್ಯವಾಗಿದ್ದರೇನೆ ಚಂದ.

ಎಡಿಸನ್‌ನನ್ನು ಭೇಟಿಯಾಗಲು ಮಾತೆಯೊಬ್ಬಳು ಹತ್ತು ವರ್ಷದ ಮಗನೊಡನೆ ಬರುತ್ತಾಳೆ. ‘ಅಣ್ಣ, ನೀನು ಒಂದಾದ ಮೇಲೊಂದರಂತೆ ಆವಿಷ್ಕಾರಗಳಲ್ಲಿ ಮಗ್ನನಾಗಿರುತ್ತಿ. ನನ್ನ ಮಗನಿಗೂ ನಿನ್ನ ಜಾಣ್ಮೆ ಹೇಳಿಕೊಡು’ ಎನ್ನುವಳು. ಅದಕ್ಕೆ ಎಡಿಸನ್‌ನ ಪ್ರತಿಕ್ರಿಯೆ ಮಾರ್ಮಿಕ: ‘ಬಹು ಸರಳ, ನಿನ್ನ ಮಗ ಗಡಿಯಾರ ನೋಡದೆ ವ್ಯಾಸಂಗ ಮಾಡಲಿ’. ಅಂತೆಯೆ ಐನ್‍ಸ್ಟೀನ್ ‘ಸಾಪೇಕ್ಷತಾ ಸಿದ್ಧಾಂತ’ದ ಭಾಷೆಯಲ್ಲೇ ‘ನಾಳೆ ಬಹು ಬೇಗನೆ ಬಂದುಬಿಡುತ್ತದೆ, ಅದನ್ನು ನಿರೀಕ್ಷಿಸಲೂ ನನಗೆ ಸಮಯವಿಲ್ಲ’ ಎಂದರು!

ಅಂದಹಾಗೆ ಭವಿಷ್ಯವನ್ನು ವೈಜ್ಞಾನಿಕವಾಗಿ ಅಂದಾಜಿಸುವ ‘ಭವಿಷ್ಯ ವಿಜ್ಞಾನ’ (futurology) ಎಂಬ ಅಂತರ್ಶಿಸ್ತೀಯ ವಿಷಯವಿದೆ. ಮೌಢ್ಯ, ಅತಿಶಯೋಕ್ತಿರಹಿತವಾಗಿ ಪ್ರಸ್ತುತ ವಿದ್ಯಮಾನಗಳನ್ನು ಕಲೆಹಾಕಿ ಅವುಗಳನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಲಾಗುತ್ತದೆ. ಹವಾಮಾನ, ಮಾರುತಗಳ ದಿಕ್ಕು, ದಿಶೆ ಮತ್ತು ವೇಗ ಆಧರಿಸಿ ತಕ್ಕಮಟ್ಟಿಗೆ ಮಳೆಯ ಮುನ್ನೋಟ ಇದಕ್ಕೊಂದು ನಿದರ್ಶನ. ಭೂತಕಾಲ ವರ್ತಮಾನವನ್ನು, ವರ್ತಮಾನವು ಭವಿಷ್ಯತ್ ಕಾಲವನ್ನು ಪ್ರೇರಿಸುವುದು ಸಹಜ. ಈ ದಿಸೆಯಲ್ಲಿ ವೈಜ್ಞಾನಿಕ ಕಥೆಗಳು ‘ಭವಿಷ್ಯ ವಿಜ್ಞಾನ’ಕ್ಕೆ ಪೂರಕವಾಗುವ ಉದಾಹರಣೆಗಳು ಇತಿಹಾಸದಲ್ಲಿ ಧಾರಾಳವಾಗಿವೆ.

ಇಸವಿ 1865. ಪ್ರಸಿದ್ಧ ವಿಜ್ಞಾನ ಸಾಹಿತಿ ಫ್ರಾನ್ಸಿನ ಜೂಲ್ಸ್ ವರ್ನೆ ಅವರ ಒಂದು ಕಥೆಯಲ್ಲಿ, ಅಲ್ಯೂಮಿನಿಯಂ ಗಗನನೌಕೆಯೊಂದು ಅಮೆರಿಕದ ಫ್ಲಾರಿಡಾದಿಂದ ಚಿಮ್ಮಿ ಚಂದ್ರನನ್ನು ತಾಸಿಗೆ 24,400 ಮೈಲಿಗಳ ವೇಗದಲ್ಲಿ ಸುತ್ತು ಹಾಕುವುದು. ನಂತರ ನೌಕೆ ಸುರಕ್ಷಿತವಾಗಿ ಧರೆಗೆ ಮರಳಿ ಪೆಸಿಫಿಕ್ ಸಾಗರದಲ್ಲಿ ತೇಲುತ್ತದೆ. 1968ರಲ್ಲಿ ಆತ ಬರೆದಂತೆಯೇ ಆಗಿತ್ತು. ಅಪೊಲೊ- 8ಯಾತ್ರೆ! ಒಂದೇ ವ್ಯತ್ಯಾಸವೆಂದರೆ, ನೌಕೆಯ ವೇಗ 200 ಮೈಲಿಗಳು ಕಡಿಮೆ. ವರ್ನೆ ಹೆಣೆದಿದ್ದು ಕಥೆಯಾದರೂ ಅದರಲ್ಲಿ ಕಾರ್ಯಕಾರಣ ಸಂಬಂಧಗಳು ವಿಜೃಂಭಿಸಿ ದ್ದವು. ತಾರ್ಕಿಕ ಲೆಕ್ಕಾಚಾರಗಳಿಗೆ ಸೋಲಿಲ್ಲ. ವರ್ನೆ ಕಾಲಜ್ಞಾನಿಯಾಗಿರಲಿಲ್ಲ!

ಅದು ಹಾಗೆಯೇ- ಮನುಷ್ಯನಿಗೆ ಪ್ರಕೃತಿಯೇ ದಾರಿ ದೀಪ. ವಿಮಾನಕ್ಕೆ ಹಾರಲು ಹಕ್ಕಿಯ, ಹಡಗಿಗೆ ತೇಲಿ ಸಾಗಲು ಮೀನಿನ ಕುಮ್ಮಕ್ಕು! ಮಹಾಭಾರತದ ಅರಣ್ಯಪರ್ವದಲ್ಲಿ ‘ಬೆಳಕಿಗಿಂತ ವೇಗವಾಗಿ ಧಾವಿಸುವುದು ಯಾವುದು’ ಎಂಬ ಯಕ್ಷನ ಪ್ರಶ್ನೆಗೆ ಧರ್ಮರಾಜನ ಸರಿ ಉತ್ತರ: ‘ಮನಸ್ಸು’. ಇದು ಬೆಳಕಿ ಗಿಂತ ವೇಗವಾಗಿ ಸಾಗುವ ಯಾವುದೇ ವಸ್ತುವಿಲ್ಲ ಎನ್ನುವ ಐನ್‍ಸ್ಟೀನ್ ವಾದಕ್ಕೆ ಸಡ್ಡು ಹೊಡೆದಂತಿದೆ.

ನಮ್ಮ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಾಲಾಮಟ್ಟದಿಂದಲೇ ‘ಭವಿಷ್ಯ ವಿಜ್ಞಾನ’ವನ್ನು ಒಂದು ವಿಷಯವನ್ನಾಗಿಡಬೇಕು. ಇದರಿಂದ ಮಕ್ಕಳಿಗೆ ವೈಜ್ಞಾನಿಕ ಚಿಂತನೆ, ವೈಚಾರಿಕತೆ ಮೈಗೂಡುತ್ತದೆ. ನಾಳೆಗಳನ್ನು ಅವರು ಮಿಥ್ಯ, ಮಾಯಾವಾದದ ಹಂಗಿಲ್ಲದೆ ಸಹಜವಾಗಿ ಎದುರು ನೋಡಿಯಾರು, ನಿರ್ವಹಿಸಿಯಾರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು