ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ: ಮಾಹಿತಿಗಷ್ಟೇ ಅಲ್ಲ

ಸಾರ್ವಜನಿಕ ಗ್ರಂಥಾಲಯಗಳನ್ನು ಮತ್ತಷ್ಟು ಸಶಕ್ತಗೊಳಿಸುವ ಅನಿವಾರ್ಯ ಇದೆ
Last Updated 11 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

‘ಪೋಸ್ಟ್-ಟ್ರೂತ್’ ಎನ್ನುವ ಪದವನ್ನು ಕನ್ನಡದಲ್ಲಿ ಸತ್ಯೋತ್ತರ ಕಾಲಘಟ್ಟ ಎಂದು ಹೆಸರಿಸಲಾಗಿದೆ. 2016ರಲ್ಲಿ ಈ ಪದವನ್ನು ‘ವರ್ಷದ ಪದ’ ಎಂದು ಪ್ರಸಿದ್ಧ ಆಕ್ಸ್‌ಫರ್ಡ್ ನಿಘಂಟು ಗುರುತಿಸಿತು. ಫೇಸ್‌ ಬುಕ್, ಟ್ವಿಟರ್, ಯುಟ್ಯೂಬ್, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಯಾವ ಮಾಹಿತಿಯನ್ನು ಬೇಕಾದರೂ ಹಂಚಿಕೊಳ್ಳುವ ಅವಕಾಶ ದೊರೆತಾಗ, ಅನೇಕರು ಇವುಗಳ ಮೂಲಕ ಸುಳ್ಳಿನ ಸರಮಾಲೆಗಳನ್ನೇ ಪಸರಿಸಲು ಪ್ರಾರಂಭಿಸಿದರು. ಇದರಿಂದ, ಅಸಂಖ್ಯ ಜನಸಮುದಾಯಕ್ಕೆ ಸತ್ಯ ಮತ್ತು ಸುಳ್ಳಿನ ನಡುವಿನ ಅಂತರವನ್ನು ಗುರುತಿಸಲು ಸಾಧ್ಯವಾಗದ ಪರಿಸ್ಥಿತಿ ತಲೆದೋರಿತು. ಜನರನ್ನು ವಾಸ್ತವಾಂಶಗಳಿಂದ ವಿಮುಖಗೊಳಿಸಿ, ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗದಂತಹ ಪರಿಸ್ಥಿತಿಯನ್ನು ಸೃಷ್ಟಿಸಲಾಯಿತು.

ಇದು, ಮತದಾನಕ್ಕೆ ಸಂಬಂಧಿಸಿದ ಜನರ ಮನೋಭಾವವನ್ನೂ ಬದಲಿಸಿತು. ಇದರಿಂದ ಅನೇಕ ದೇಶಗಳ ಚುನಾವಣಾ ಫಲಿತಾಂಶಗಳೇ ಬದಲಾದ ಉದಾಹರಣೆಗಳಿವೆ. ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ರಾಜಕಾರಣದಲ್ಲಿ ಸುಳ್ಳು ಮಾಹಿತಿಗಳನ್ನು ಸತ್ಯವೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದವು. ಕೆಲವರು, ವಾಟ್ಸ್‌ಆ್ಯಪ್‍ ಮೂಲಕ ಸುಳ್ಳು ಸುದ್ದಿಗಳನ್ನು ಹಂಚಿಕೊಂಡು ಗುಂಪುಹತ್ಯೆಗಳಿಗೆ ಕಾರಣರಾದರು. ಉತ್ತರ ಭಾರತದ ಕೆಲವೆಡೆ ಮಕ್ಕಳನ್ನು ಅಪಹರಿಸುವ ಗುಂಪುಗಳೆಂದು ಬಗೆದು ಅಪರಿಚಿತ ವ್ಯಕ್ತಿಗಳನ್ನು ಗುಂಪುಹತ್ಯೆ ಮಾಡಲಾಯಿತು. ಇಂತಹ ಬೆಳವಣಿಗೆಗೆ ಕಡಿವಾಣ ಹಾಕುವಂತೆ ಸರ್ಕಾರವು ಪತ್ರಿಕೆಗಳ ಮೂಲಕ ಜಾಹೀರಾತು ನೀಡು ವಂತಾಯಿತು. ಈ ಬಗೆಯ ಸುಳ್ಳುಸುದ್ದಿಗಳ ಪ್ರಸರಣತಡೆಗಟ್ಟುವಲ್ಲಿ ಈಗಿನ ಸತ್ಯೋತ್ತರ ಕಾಲಘಟ್ಟದಲ್ಲಿ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸಬೇಕಾಗಿದೆ.

ಭಾರತದಂತಹ ದೇಶಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಜನಸಾಮಾನ್ಯರಿಗೆ ಮಾಹಿತಿ ತಲುಪಿ ಸುವಲ್ಲಿ ಅಥವಾ ಅವರನ್ನು ಜವಾಬ್ದಾರಿಯುತ ಪ್ರಜೆ ಗಳನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸು ತ್ತಿವೆ. ಈ ಕಾರಣಕ್ಕೆ ಅವುಗಳನ್ನು ಜನಸಾಮಾನ್ಯರ ವಿಶ್ವವಿದ್ಯಾಲಯಗಳೆಂದು ಕರೆಯಲಾಗಿದೆ. ರಾಜಾರಾಮ್‍ ಮೋಹನರಾಯ್ ಗ್ರಂಥಾಲಯ ಪ್ರಾಧಿಕಾರದ ಪ್ರಕಾರ, ದೇಶದಲ್ಲಿ ವಿವಿಧ ಪ್ರಕಾರದ 46,746 ಸಾರ್ವಜನಿಕ ಗ್ರಂಥಾಲಯಗಳಿವೆ. ಎಲ್ಲ ವಯೋಮಾನದ, ಅನೇಕ ಧರ್ಮ, ಜಾತಿಗಳ ಜನರು ವಿವಿಧ ಬಗೆಯ ಮಾಹಿತಿಗಳನ್ನು ಪಡೆಯಲು ಇಲ್ಲಿಗೆ ಭೇಟಿ ನೀಡುತ್ತಾರೆ. ಇವು ನಿಖರ ಮತ್ತು ಅಧಿಕೃತ ಮಾಹಿತಿಗಳನ್ನು ಓದುಗರಿಗೆ ತಲುಪಿ ಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿವೆ.

ಇಂದು ಈ ಕಾರ್ಯ ಮತ್ತಷ್ಟು ಅನಿವಾರ್ಯವಾಗಿದೆ. ಸುಳ್ಳು ಸುದ್ದಿಗಳನ್ನು ಪರಾಮರ್ಶಿಸುವ ಸಂಬಂಧ ಗ್ರಂಥಾಲಯಗಳು ತಮ್ಮ ಓದುಗರಿಗೆ ಅನೇಕ ರೀತಿಯಲ್ಲಿ ನೆರವಾಗಬಹುದಾಗಿದೆ. ಚಿತ್ರಪಟಗಳ ಪ್ರದರ್ಶನ, ಸೈನೆಜ್ ಅಥವಾ ಸಂಕೇತಗಳ ಅಳವಡಿಕೆ, ಸಂಬಂಧಿಸಿದ ಪುಸ್ತಕಗಳು, ಲೇಖನಗಳ ಪಟ್ಟಿಯನ್ನು ಒದಗಿಸಬಹುದಾಗಿದೆ. ಚಿಕ್ಕ ಚಿಕ್ಕ ವಿಡಿಯೊಗಳ ಮೂಲಕ ಮಾಹಿತಿಯ ನಿಖರತೆಯನ್ನು ಗುರುತಿಸಲು ಸಾಧ್ಯವಾಗುವಂತೆ ಮಾಡಬಹುದಾಗಿದೆ. ಸ್ವತಃ ಅಥವಾ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿಶೇಷ ಉಪನ್ಯಾಸಗಳನ್ನು ಆಯೋಜಿಸಬಹುದಾಗಿದೆ. ಅಮೆರಿಕ, ಕೆನಡಾ ಮತ್ತು ಇಂಗ್ಲೆಂಡ್‍ನ ಅನೇಕ ಗ್ರಂಥಾಲಯಗಳು ಸುಳ್ಳು ಸುದ್ದಿಗಳ ವಿಶ್ಲೇಷಣೆಗೆ ಪೂರಕವಾಗಿ ಮಾಹಿತಿಗಳನ್ನು ಒದಗಿಸುತ್ತಿವೆ.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳಿಗೆ ಹಣಕಾಸು ಮೂಲಗಳನ್ನು ಕಡಿತಗೊಳಿಸಲಾಗುತ್ತಿದೆ. ಇದರಿಂದ ಅವು ಸಮುದಾಯದ ಅಭ್ಯುದಯ ಕಾರ್ಯದಲ್ಲಿ ತೊಡಗಲು ಕಷ್ಟವಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಬೀರುತ್ತಿರುವ ನಕಾರಾತ್ಮಕವಾದ ಸಾಮಾಜಿಕ ಮತ್ತು ರಾಜಕೀಯ ಪರಿಣಾಮಗಳನ್ನು ಗಮನಿಸಿದರೆ, ಸಾರ್ವಜನಿಕ ಗ್ರಂಥಾಲಯಗಳನ್ನು ಮತ್ತಷ್ಟು ಸಶಕ್ತಗೊಳಿಸುವ ಅನಿವಾರ್ಯ ಇರುವುದರ ಅರಿವಾಗುತ್ತದೆ. ಈ ತಾಣಗಳಿಗೆ ಜನಸಮುದಾಯಗಳನ್ನು ಜ್ಞಾನಸಂಪನ್ನರನ್ನಾಗಿ ರೂಪಿಸುವ ಅಪಾರ ಶಕ್ತಿ ಇದೆ ಎನ್ನುವುದನ್ನು ನಾವು ಮರೆಯಬಾರದು.

ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯವು ಸುಳ್ಳು ಸುದ್ದಿಗಳ ಬಗ್ಗೆ ತನ್ನ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಆ ಬಗ್ಗೆ ಸವಿವರವಾದ ಮಾಹಿತಿಯ ಮೂಲಗಳನ್ನು ತನ್ನ ಅಂತರ್ಜಾಲ ತಾಣದಲ್ಲಿ ನೀಡಿದೆ. ಸುತ್ತಮುತ್ತಲಿನ ಸಮುದಾಯಗಳನ್ನು ಒಳಗೊಂಡು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರಲ್ಲಿ, ವಿಶ್ವವಿದ್ಯಾಲಯದ ಗ್ರಂಥಾಲಯ ಮಹತ್ತರ ಪಾತ್ರ ವಹಿಸಿದೆ.

ಕೇರಳದಲ್ಲಿ ಕಣ್ಣೂರಿನ ಜಿಲ್ಲಾಧಿಕಾರಿ ಮಿರ್ ಮಹಮದ್ ಅಲಿ ಅವರು ‘ಸತ್ಯಮೇವ ಜಯತೆ’ ಎನ್ನುವ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ದೇಶದ ಅನೇಕ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳು ಹಮ್ಮಿಕೊಳ್ಳಬೇಕಾಗಿದೆ. ಆರೋಗ್ಯದಂತಹ ಪ್ರಮುಖ ವಿಷಯಗಳ ಬಗ್ಗೆ ಜನರಲ್ಲಿ ಭೀತಿ ಉಂಟು ಮಾಡುತ್ತಿರುವುದು, ಧರ್ಮಾಧಾರಿತ ಮಾಹಿತಿಗಳನ್ನು ತಿರುಚಿ ಕೋಮು ಗಲಭೆಗಳಿಗೆ ಅವಕಾಶ ಮಾಡಿಕೊಡುವುದಕ್ಕೆ ಸಾಮಾ ಜಿಕ ಜಾಲತಾಣಗಳು ದೊಡ್ಡ ಮಟ್ಟದಲ್ಲಿ ವೇದಿಕೆಗಳಾಗಿರುವುದು ನಮ್ಮ ಮುಂದಿದೆ. ಇಂತಹ ಸಮಯದಲ್ಲಿ, ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳುವಂತೆ ಮಾಡಲು ನಮ್ಮ ಗ್ರಂಥಾಲಯಗಳು ಮುಂದೆ ಬರಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಅಂದಹಾಗೆ, ಇಂದು (ಆ. 12) ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ

ಲೇಖಕ: ಗ್ರಂಥಪಾಲಕ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಲಕಾಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT