ಬುಧವಾರ, ಏಪ್ರಿಲ್ 8, 2020
19 °C

ಚುರುಮುರಿ | ಐಷಾರಾಮಿ ಐಸೊಲೇಶನ್

ಕೆ.ವಿ.ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

‘ಕಂಠಿ ಇಲ್ವಾ?’

ನನ್ನನ್ನು ನೋಡುತ್ತಲೇ, ಮುಖಗವುಸು ಹಾಕಿದ್ದ ನಾಯಿ ಕ್ಷೀಣವಾಗಿ ಬೌಗುಟ್ಟಿತು.

‘ಇಲ್ದೇ ಎಲ್ಲಿ ಹೋಗೋಕ್ಕಾಗುತ್ತೆ? ನಮ್ಮ ವರ್ಕ್ ಅಟ್ ಹೋಮ್ ನಿರಂತರ, ನರಕಸದೃಶ. ಕೆಲಸದವಳಿಗೂ ಲೀವ್ ವಿಥ್ ಪೇ ಕೊಟ್ಟಾಯ್ತು. ಬೇಯಿಸು, ತೊಳಿ, ಬಳಿ ಇಷ್ಟೇ ಆಗ್‌ಹೋಗಿದೆ ಲೈಫು. ಕೊನೆಗೆ ತೀರ್ಥಯಾತ್ರೆ ಮಾಡೋಕ್ಕೂ ಬಸ್, ರೈಲ್‌ಗಳಿಲ್ಲ. ನಮ್ಮನ್ನು ಕೇಳೋವ್ರು ಯಾರೂ ಇಲ್ಲ’– ಭುಸುಗುಟ್ಟಿದ್ದು ಕಂಠಿಯ ಶ್ರೀಮತಿ.

ಯಾಕೋ ವಾತಾವರಣವೇ ಗರಂ ಆಗಿದೆ ಅನ್ನಿಸಿತು.

‘ನಾನು ಟೆರೇಸ್‌ನಲ್ಲಿ ಇದ್ದೀನಿ ಬಾ’ ಕಂಠಿಯ ಮೊಬೈಲ್ ಸಂದೇಶ ನೋಡಿ ಅಲ್ಲಿಗೇ ಹೋದೆ. ಪಿಲ್ಲರ್‌ಗಳ ಕಂಬಿಗಳಿಗೆ ಬಿಗಿದಿದ್ದ ಸೊಳ್ಳೆಪರದೆಯ ಲಾಡಿಗಳು! ಅರ್ಥಾತ್ ಪರದೆಯ ಗುಡಾರದೊಳಗೆ ಕಂಠಿ.

‘ಏನಾಯ್ತು? ಹೀಗೆ ಐಸೊಲೇಟ್ ಆಗಿ ಯಾಕಿದ್ದೀಯಾ?’ ಕರ್ಚೀಫ್ ಬಾಯಿಗೆ ಸುತ್ತಿಕೊಂಡು ಕೇಳಿದೆ.

‘ಅಯ್ಯೋ ಅಂತಾದ್ದೇನಿಲ್ಲ, ಮೊನ್ನೆ ಮಸಾಲೆ ಬಜ್ಜಿ ಮಾಡೋಕ್ಕೆ ಹೋಗಿ, ಹೇಗೋ ಹಸಿ ಖಾರದಪುಡಿ ಮೂಗಿನ ಹೊಳ್ಳೆ ಸೇರಿ ಕಣ್ಣು, ಮೂಗಲ್ಲೆಲ್ಲ ನೀರು, ಆಕ್ಷೀಗಳ ಅಕ್ಷಯ. ಅಂದಿನಿಂದ ಮನೆಯವರ ಕೋರಿಕೆಯ ಮೇರೆಗೆ ಈ ಕಡ್ಡಾಯ ಬೇರ್ಪಡಿಕೆ ಪಾಲನೆ... ಒಂದು ರೀತಿ ಐಷಾರಾಮಿ ಐಸೊಲೇಶನ್... ನೈಸರ್ಗಿಕ ಗಾಳಿ, ಬೆಳಕು... ಟೈಮ್ ಟೈಮ್‌ಗೆ ಸರಿಯಾಗಿ ಬಿಸಿಬಿಸಿ ತಿಂಡಿ, ಊಟ ಇಲ್ಲಿಗೇ ಸಪ್ಲೈ, ದೊಡ್ಡ ಫ್ಲಾಸ್ಕ್‌ನಲ್ಲಿ ಕಾಫಿ, ದಿನಪತ್ರಿಕೆ, ಮೊಬೈಲ್ ಇಷ್ಟು ಸಾಲದೇ? ಮನೆಗೆಲಸದ ಗೊಡವೆ ಇಲ್ಲದೆ, ಕಣ್ಣೆಳೆದಾಗ ನಿದ್ದೆ ಮಾಡ್ತೀನಿ. ಬಾ ನಿನಗೂ ಒಂದು ತೊಟ್ಟು ಕಾಫಿ ಕೊಡ್ತೀನಿ’ ಎನ್ನುತ್ತಾ ಪೇಪರ್ ಕಪ್‌ನಲ್ಲಿ ಕಾಫಿ ಸುರಿದ.

ಗುಡ್ ಐಡಿಯಾ! ನಾನೂ ಪ್ರಯತ್ನಿಸಲೇ ಅನ್ನಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)