ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೋರೋಗದ ಮದ್ದಿಗೆ ಬಲ

ಮಾನಸಿಕ ರೋಗಗಳಿಗೆ ಮಷೀನ್‌ ಲರ್ನಿಂಗ್‌ ಕಲ್ಪಿಸಲಿರುವ ಪರಿಹಾರ
Last Updated 2 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಮನೋರೋಗ ಇಂದಿಗೂ ಒಂದು ಮಟ್ಟದಲ್ಲಿ ಒಗಟಾಗಿಯೇ ಉಳಿದಿದೆ. ಇದಕ್ಕೆ ಒಳಗಾದವರು ಸಮಾಜದ ಅಲಕ್ಷ್ಯಕ್ಕೆ ಒಳಗಾಗುವುದು ವಿಷಾದಕರ. ಹಿಂದೆಲ್ಲಾ ದೆವ್ವ ಬಿಡಿಸುವವರ ಕ್ಷೇತ್ರಕ್ಕೆ ಸೇರಿದ್ದೆಂದು ಪರಿಗಣಿಸಲಾಗುತ್ತಿದ್ದ ಮಾನಸಿಕ ಬೇನೆ ಇಂದು ವೈದ್ಯಕೀಯ ವಿಜ್ಞಾನದ ಕೈಯಲ್ಲಿ ಸುರಕ್ಷಿತವಾಗಿದೆ ಎನ್ನುವುದೊಂದು ಸಮಾಧಾನ.

ಮನೋರೋಗ ಗಂಭೀರವಾದ ಸಮಸ್ಯೆ ಎನ್ನುವುದನ್ನು ನಾವು ಅರಿಯಬೇಕು. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಕಾರ, ಜಗತ್ತಿನಲ್ಲಿ ಇಂದು ಖಿನ್ನತೆಯೊಂದೇ 30 ಕೋಟಿ ಜನರನ್ನು ಬಾಧಿಸುತ್ತಿದೆ. ಇಬ್ಬಗೆ ವ್ಯಕ್ತಿತ್ವದ ಕಾಯಿಲೆ (bipolar disorder) 6 ಕೋಟಿ ಜನರನ್ನೂ ಭ್ರಮೆಯ ಬೇನೆ (schizophrenia) 2.3 ಕೋಟಿ ಜನರನ್ನೂ ಹಿಡಿತದಲ್ಲಿ ಇಟ್ಟುಕೊಂಡಿವೆ. ಈ ಸಮಸ್ಯೆಗಳಿಗೆ ಇದುವರೆಗೂ ಪರಿಹಾರವನ್ನು ಆಪ್ತ ಸಮಾಲೋಚನೆ ಮತ್ತು ಔಷಧಗಳ ಸಹಾಯದಿಂದ ನಿಭಾಯಿಸಲಾಗುತ್ತಿದೆ.

ಮಾನಸಿಕ ಬೇನೆಯನ್ನು ಪತ್ತೆ ಹಚ್ಚುವ ಮತ್ತು ವಾಸಿ ಮಾಡುವ ಪ್ರಕ್ರಿಯೆಗೆ ಇತ್ತೀಚೆಗೆ ಹೊಸ ತಂತ್ರಜ್ಞಾನದ ಬಲ ಸಿಕ್ಕಿದೆ. ಅದೇ ಮಷೀನ್ ಲರ್ನಿಂಗ್ ಅಥವಾ ಯಂತ್ರ ಕಲಿಕೆ! ಸರಳವಾಗಿ ಹೇಳಬೇಕೆಂದರೆ, ರೋಗಿಗಳ ಮಾಹಿತಿಯನ್ನು ದೊಡ್ಡ ಪ್ರಮಾಣದಲ್ಲಿ ಕಂಪ್ಯೂಟರಿಗೆ ಒದಗಿಸಿ, ವಿಶೇಷ ಅಲ್ಗಾರಿದಮ್‌ಗಳ (ಕಂಪ್ಯೂಟರ್ಪ್ರೋ ಗ್ರಾಮ್‌ಗಳು ಬಳಸುವ ವಿಶಿಷ್ಟ ವಿಧಾನಗಳು) ಸಹಾಯದಿಂದ ಬೇನೆಯ ಇರುವಿಕೆಯನ್ನೂ ಅದರ ಪ್ರಭೇದವನ್ನೂ ಪತ್ತೆ ಹಚ್ಚುವುದು ಈ ತಂತ್ರಜ್ಞಾನದ ಉದ್ದೇಶ. ಇದಕ್ಕೆಲೆಕ್ಕ ಬಳಸುವ ಮನೋವೈದ್ಯ ಶಾಸ್ತ್ರ (computational psychiatry) ಎನ್ನುತ್ತಾರೆ. ಸಾಂಪ್ರದಾಯಿಕವಾದ ವಿಧಾನದಲ್ಲಿ, ರೋಗಿಗಳ ಬಗೆಗಿನ ಮಾಹಿತಿಯನ್ನು ಒಟ್ಟು ಹಾಕಿ, ರೋಗಲಕ್ಷಣಗಳ ಆಧಾರದ ಮೇಲೆ ಮಾನಸಿಕ ಬೇನೆಯ ಇರುವಿಕೆ, ತೀವ್ರತೆ ಮತ್ತು ಪ್ರಭೇದವನ್ನು ತೀರ್ಮಾನಿಸಲಾಗುತ್ತಿತ್ತು. ಈಗ ಈ ಪ್ರಕ್ರಿಯೆಗೆ ಯಂತ್ರಕಲಿಕೆಯ ಅಪಾರಶಕ್ತಿಯನ್ನು ಒದಗಿಸಿದಾಗ ಈ ಕೆಲಸ ಇನ್ನೂ ಹೆಚ್ಚು ಸಮರ್ಥವಾಗಿ ನಡೆಯಲು ಸಾಧ್ಯವಾಗಬಹುದು ಎನ್ನುವ ಆಶಯ ಇದೆ.

ಅಮೆರಿಕದ ಫ್ರಾಲೀನ್ ಬಯೊಮೆಡಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಹ್ಯೂಮನ್ ನ್ಯೂರೊ ಇಮೇಜಿಂಗ್ ಲ್ಯಾಬ್ (ಡಾ. ಚಿಯು ಲ್ಯಾಬ್) ಈ ದಿಸೆಯಲ್ಲಿ ಸಂಶೋಧನೆ ಮಾಡುತ್ತಾ ಪ್ರಯೋಗಗಳನ್ನು ನಡೆಸುತ್ತಿರುವ ಸಂಸ್ಥೆಗಳಲ್ಲಿ ಮುಖ್ಯವಾದುದು.

ಅಲ್ಗಾರಿದಮ್‌ಗಳು ತಮ್ಮ ಲೆಕ್ಕಾಚಾರವನ್ನು ನಡೆಸುವುದಕ್ಕೆ ಬೇಕಿರುವುದು ದೊಡ್ಡ ಪ್ರಮಾಣದ ಮಾಹಿತಿ ಸಂಗ್ರಹ. ಇದಕ್ಕಾಗಿ, ರೋಗ ಲಕ್ಷಣ ಇರುವವರ ಮತ್ತು ಆರೋಗ್ಯವಂತರ ಎರಡು ಬಗೆಯ ಮಾಹಿತಿಗಳನ್ನು ಕಲೆಹಾಕಲಾಗುತ್ತದೆ. ಮೊದಲನೆಯದಾಗಿ, ಅವರೊಡನೆ ಸಮಾಲೋಚನೆ ನಡೆಸಿದಾಗ ಕಂಡುಬಂದ ವಿವರಗಳು, ಪ್ರಶ್ನೆಗಳಿಗೆ ಅವರು ನೀಡಿದ ಉತ್ತರಗಳು ಮತ್ತು ಅವರ ನಡತೆಯಲ್ಲಿನ ಅಂಶಗಳನ್ನು ಒಳಗೊಂಡ ಮಾಹಿತಿ. ಇನ್ನು ಎರಡನೆಯ ಬಗೆಯ ಮಾಹಿತಿ ಸಂಗ್ರಹ ಹೆಚ್ಚು ಕುತೂಹಲಕರವಾಗಿದೆ. ಇಲ್ಲಿ, ಪ್ರಯೋಗಕ್ಕೆ ಒಳಗಾಗುವವರನ್ನು, ಎಫ್‌ಎಂಆರ್‌ಐ ಎನ್ನುವ ಒಂದು ವಿಶಿಷ್ಟ ಬಗೆಯ ಸ್ಕ್ಯಾನರಿನ ಒಳಗೆ ಕಳುಹಿಸಲಾಗುತ್ತದೆ ಮತ್ತು ಅಲ್ಲಿ ಅವರಿಗೆ ಸಾಮಾಜಿಕ ಸನ್ನಿವೇಶಗಳನ್ನು ಕೃತಕವಾಗಿ ಉಂಟುಮಾಡುವ ಕಂಪ್ಯೂಟರ್ ಆಟಗಳನ್ನು ಆಡಿಸಲಾಗುತ್ತದೆ. ಈ ವೇಳೆಯಲ್ಲಿ ಅವರ ಮಿದುಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಗುತ್ತದೆ. ಆಗ ಕಂಡುಬರುವ ವಿವರವಾದ ಮಾಹಿತಿಯನ್ನು ಅಲ್ಗಾರಿದಮ್‌ಗೆ ಒದಗಿಸಲಾಗುತ್ತದೆ. ವಿಧ ವಿಧವಾದ ಸಾಮಾಜಿಕ ಸನ್ನಿವೇಶಗಳು ಎದುರಾದಾಗ ಆ ವ್ಯಕ್ತಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಇಲ್ಲಿ ದಾಖಲಾಗುತ್ತದೆ. ಅಂದರೆ ಮಿದುಳಿನ ಯಾವ ಯಾವ ಭಾಗಗಳು ಹೇಗೆ ಸ್ಪಂದಿಸುತ್ತವೆ ಎನ್ನುವುದನ್ನು ಈ ಮಾಹಿತಿಯು ಒಳಗೊಂಡಿರುತ್ತದೆ. ಈ ಮಾಹಿತಿಯ ಮೇಲೆ ಅಲ್ಗಾರಿದಮ್ ತನ್ನ ಲೆಕ್ಕಾಚಾರ ನಡೆಸಿದಾಗ, ಸ್ವಸ್ಥವಾಗಿರುವವರ ಮಿದುಳಿನ ಸ್ಪಂದನೆಗೂ ಮಾನಸಿಕ ರೋಗಿಗಳ ಮಿದುಳಿನ ಸ್ಪಂದನೆಗೂ ಹೋಲಿಕೆ ಮತ್ತು ವ್ಯತ್ಯಾಸಗಳು ತೋರಿಬರುತ್ತವೆ. ಹಾಗೆಯೇ, ರೋಗಿಗಳು ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಿದ್ದಾರೆ ಎನ್ನುವುದನ್ನೂ ಸ್ವಸ್ಥ ವ್ಯಕ್ತಿಗಳ ಸ್ಕ್ಯಾನ್ ಮಾಹಿತಿಯ ಹೋಲಿಕೆಯ ಸಹಾಯದಿಂದ ತೀರ್ಮಾನಿಸಲು ಸಾಧ್ಯವಾಗುತ್ತದೆ. ಇದರಿಂದ ಈ ರೀತಿಯ ಮಾನಸಿಕ ಸ್ಥಿತಿಗೆ ವ್ಯಕ್ತಿಗಳು ಜಾರುವುದನ್ನು ತಡೆಗಟ್ಟಲು ಎಂಥ ಚಿಕಿತ್ಸೆ ಅಗತ್ಯ ಎನ್ನುವುದನ್ನೂ ನಿರ್ಧರಿಸಬಹುದು. ಒಟ್ಟಿನಲ್ಲಿ ಇದು ಮಾನವರ ಜ್ಞಾನ ಮತ್ತು ಯಂತ್ರಗಳ ಜಾಣ್ಮೆಯ ನಿರಂತರ ಕೊಡುಕೊಳ್ಳುವಿಕೆಯಿಂದ ನಡೆಯುವ ಒಂದು ಚಮತ್ಕಾರ!

ಹೀಗೆ ಮಾನಸಿಕ ಬೇನೆಯನ್ನು ಮಿದುಳಿನಲ್ಲಿ ಉಂಟಾಗಿರುವ ಏರುಪೇರುಗಳ ದೃಷ್ಟಿಯಿಂದ ನೋಡುವುದರಲ್ಲಿ ಇನ್ನೊಂದು ಪ್ರಯೋಜನವಿದೆ. ಅದೇನೆಂದರೆ, ಮಾನಸಿಕ ಬೇನೆಗಳ ಬಗ್ಗೆ ಜನರಿಗಿರುವ ಅಜ್ಞಾನ, ತಿರಸ್ಕಾರ ಭಾವನೆಗಳನ್ನು ಹೋಗಲಾಡಿಸುವುದು. ಯಾರಿಗಾದರೂ ಹೃದಯದ ತೊಂದರೆಯಿದ್ದರೆ ನಾವು ಅವರನ್ನು ಕೀಳಾಗಿ ನೋಡಿ ಅವಮಾನಿಸುವುದಿಲ್ಲ ಅಲ್ಲವೇ? ಅದನ್ನು ಔಷಧಿಯಿಂದಲೋ ಶಸ್ತ್ರಚಿಕಿತ್ಸೆಯಿಂದಲೋ ಗುಣಪಡಿಸಲು ನೋಡುತ್ತೇವೆ. ಹಾಗೆಯೇ ಮಾನಸಿಕ ಬೇನೆಯನ್ನು ನಾವು ಮಿದುಳಿನಲ್ಲಿ ಉಂಟಾದ ದೈಹಿಕ ಸಮಸ್ಯೆ ಎಂದೇ ಪರಿಗಣಿಸಿ, ಅದನ್ನು ಗುಣಪಡಿಸುವತ್ತಗಮನ ಹರಿಸಬೇಕು. ಈ ಕ್ಷೇತ್ರದಲ್ಲಿ ಯಂತ್ರಕಲಿಕೆಯಂಥ ತಂತ್ರಜ್ಞಾನಗಳ ಬಳಕೆ ಈ ದಿಸೆಯಲ್ಲಿ ನಮಗೆ ಎಚ್ಚರವನ್ನು ನೀಡುವುದರಲ್ಲಿಯೂ ಸಹಕಾರಿಯಾಗಬಲ್ಲದು.

ಲೇಖಕ: ಸಿಇಒ, ಮೈಲ್ಯಾಂಗ್ ಬುಕ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT