ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪಿತೃಪ್ರಭುತ್ವದ ನೆರಳಲ್ಲಿ...

ಹೆಣ್ಣುಮಕ್ಕಳ ಚಾರಿತ್ರ್ಯವಧೆಗೆ ಇಳಿಯುವ ಲಿಂಗದ್ವೇಷ ರಾಜಕಾರಣ ಒಂದು ಸಾಮಾಜಿಕ ರೋಗ
Last Updated 22 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಲೋಹಿಯಾ ಒಂದು ಕಡೆ ಹೇಳುತ್ತಾರೆ: ‘ಈ ದೇಶದ ಸ್ತ್ರೀಯರಿಗೆ ಸೀತೆ ಅಥವಾ ಸಾವಿತ್ರಿ ಆದರ್ಶವಾಗಬಾರದು, ದ್ರೌಪದಿ ಆದರ್ಶವಾಗಬೇಕು’. ಏಕೆಂದರೆ, ದ್ರೌಪದಿ ಬೌದ್ಧಿಕ ಮಟ್ಟದಲ್ಲಿ ಯಾವ ಗಂಡಿಗಿಂತಲೂ ಕಡಿಮೆಯೆನಿಸಿದವಳಲ್ಲ. ಆದರೆ, ಪುರುಷಪ್ರಧಾನ ವ್ಯವಸ್ಥೆಯು ಒಪ್ಪಿಕೊಂಡಿದ್ದ ‘ಆದರ್ಶ ಸ್ತ್ರೀ’ಯ ಪ್ರತಿಮೆಗಳು ಅವಳನ್ನು ಹಿಂದಕ್ಕೆ ತಳ್ಳಿವೆ.

ಮಹಿಳೆಯರಿಗೆ ಸಿಗಬೇಕಾಗಿದ್ದ ಸಮಾನತೆ, ಸಬಲೀಕರಣದ ಬಗ್ಗೆ ಲೋಹಿಯಾ ಅವರಿಗಿದ್ದ ಆದರ್ಶ ಹಾಗೂ ಆಶಯಗಳನ್ನು ಅವರ ಪ್ರಬಂಧ ‘ದ್ರೌಪದಿ ಅಥವಾ ಸಾವಿತ್ರಿ’ಯಲ್ಲಿ ಕಾಣಬಹುದು. ಮಹಿಳೆಯನ್ನು ಸದಾಕಾಲ ವಿಧೇಯಳಾದ ಸೀತೆಯಂತೆ ಕೇವಲ ತ್ಯಾಗ ಮತ್ತು ಹೊಂದಾಣಿಕೆಯ ಸಂಕೇತವಾಗಿ ತೆಗೆದುಕೊಳ್ಳಬಾರದು, ಆಕೆ ದುಃಖ ಮತ್ತು ಪ್ರತಿಭಟನೆಯನ್ನೂ ಸಂಕೇತಿಸುತ್ತಾಳೆ ಎನ್ನುತ್ತಾರೆ.

ಇತ್ತೀಚಿನ ಲಾಕ್‌ಡೌನ್‌ ಸಂದರ್ಭದಲ್ಲಿ ಹೆಚ್ಚಾದ ಅತ್ಯಾಚಾರಗಳು, ಕೌಟುಂಬಿಕ ದೌರ್ಜನ್ಯಗಳನ್ನು ಗಮನಿಸಿದಾಗ, ಈ ದೇಶದ ಸಂರಚನೆಯಲ್ಲಿಯೇ ಹಾಸುಹೊಕ್ಕಾಗಿರುವ ಪಿತೃಪ್ರಭುತ್ವದ ಪರಂಪರೆಯ ಪಂಜರದಲ್ಲಿ ಮಹಿಳೆಯು ಬಿಡುಗಡೆಯೇ ಇಲ್ಲದಂತೆ ಸಿಕ್ಕಿಕೊಂಡಿದ್ದಾಳೇನೋ ಎನಿಸುತ್ತದೆ. ರಿಯಾ, ಸಂಜನಾ, ರಾಗಿಣಿ, ಐಂದ್ರಿತಾ... ಇವರುಗಳ ಸುತ್ತ ನಿತ್ಯವೂ ಗಿರಕಿ ಹೊಡೆಯುತ್ತಿರುವ ಸುದ್ದಿಮಾಧ್ಯಮವನ್ನು ನೋಡಿದರೆ, ಪುರುಷಪ್ರಧಾನ ವ್ಯವಸ್ಥೆ, ಲಿಂಗ ರಾಜಕಾರಣ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೆನೆಸಿಕೊಂಡರೆ ಭಯಪಡುವಂತಾಗಿದೆ.

ಸ್ವತಂತ್ರವಾಗಿ ಬದುಕಬಲ್ಲ, ಆರ್ಥಿಕವಾಗಿ ಸಬಲ ರಾದ ಮಹಿಳೆಯರು ಪಿತೃಪ್ರಧಾನ ಸಮಾಜದ ಬಲಾಢ್ಯರ ಕೆಂಗಣ್ಣಿಗೆ ಬಹುಬೇಗ ಗುರಿಯಾಗುತ್ತಾರೆ. ಅದೇ ಒಂದು ಊರು, ಒಂದು ಕೇರಿಯೊಳಗಿನ ಹೆಣ್ಣಿನ ಸಂಕಟ ಇವರಿಗಿಂತ ಸ್ವರೂಪದಲ್ಲಿ ಭಿನ್ನವಾಗಿರಬಹುದೇ
ಹೊರತು, ಯಾತನೆಯ ತೀವ್ರತೆ ಒಂದೇ.

ನನ್ನ ಪರಿಚಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹೆಣ್ಣೊಬ್ಬಳ ಕತೆಯನ್ನು ಈ ಸಂದರ್ಭದಲ್ಲಿ ಹೇಳಲೇಬೇಕಿದೆ. ಬಾಲ್ಯವನ್ನು ನೇಪಾಳದಲ್ಲಿ ಕಳೆದು, ದೆಹಲಿಗೆ ಹೊಟ್ಟೆಪಾಡಿಗಾಗಿ ವಲಸೆ ಬಂದಿದ್ದ ಬಿಹಾರದ ಅನಕ್ಷರಸ್ಥ ಮಹಿಳೆ, ಕಂಪನಿಯ ಗುತ್ತಿಗೆದಾರನಲ್ಲಿ ದಿನಗೂಲಿ ಮಾಡುತ್ತಿದ್ದಳು. ನಗರಜೀವನ ಬಯಸುವ ಚಾಲಾಕಿತನ ಅರಿಯದ, ಸರಳ ಸ್ವಭಾವ, ವಿಧೇಯತೆಯಿಂದ ಕೂಡಿದ್ದ ಆಕೆಯನ್ನು ಗುತ್ತಿಗೆದಾರನಿಂದ ಬಿಡಿಸಿ, ಕಂಪನಿಯ ವೃದ್ಧ ಮಾಲೀಕರು ಕಂಪನಿಯಲ್ಲಿ ಜವಾನಳನ್ನಾಗಿ ನೇಮಿಸಿಕೊಂಡರು. ಆಕೆ ಸಂಜೆ ನಾಲ್ಕರವರೆಗೆ ಕಂಪನಿಯಲ್ಲಿ ದುಡಿದು ನಂತರ ಅವರ ಮನೆಗೆಲಸಕ್ಕೆ ಹೋಗುತ್ತಿದ್ದಳು. ಆತ ಎಂಬತ್ತೈದು ವರ್ಷದ ಹಿರಿಯ, ಆತನ ಪತ್ನಿಯೂ ಅಷ್ಟೇ. ಆಕೆ ಇವರನ್ನು ತನ್ನ ತಂದೆ-ತಾಯಿ ಸಮಾನರೆಂದೇ ಭಾವಿಸಿದ್ದಳು.

ಅದುವರೆಗೂ ಒಳ್ಳೆಯತನದಿಂದಲೇ ಇದ್ದ ಈ ವೃದ್ಧ ಆಗಸ್ಟ್‌ ಹದಿನೈದರಂದು ಶುಭಾಶಯ ಕೋರುವ ನೆಪದಲ್ಲಿ ಆಕೆಯ ಕೈ ಕುಲುಕಿದರು. ನಂತರ ಅವಳ ಬಡತನ, ಅಸಹಾಯಕತೆ, ಅವಲಂಬನೆ, ದೈನ್ಯವನ್ನೇ ದುರುಪಯೋಗಪಡಿಸಿಕೊಂಡ ಆತನ ಕಾಮುಕತೆಗೆ ಈ ಹೆಣ್ಣು ಬಲಿಯಾಗಬೇಕಾಯಿತು. ಈ ಕೃತ್ಯವನ್ನು ಪ್ರತ್ಯಕ್ಷವಾಗಿಯೇ ನೋಡಿದ ಆತನ ಪತ್ನಿ, ಈ ಬಡವಿಯನ್ನೇ ಚರಿತ್ರೆಹೀನಳೆಂದೂ ಆಕೆ ಕಂಪನಿಯಲ್ಲಿ ಇರಕೂಡದೆಂದೂ ತಕ್ಷಣವೇ ಹೊರದಬ್ಬಿದರು. ಗಂಡಸು ಎಂಬ ಕಿರೀಟವನ್ನು ಹೊತ್ತಿದ್ದ ವ್ಯಕ್ತಿಗೆ ಏನೂ ಆಗಲಿಲ್ಲ. ಸತ್ತೇ ಹೋಗುವಂಥ ಅವಮಾನವನ್ನು ಅನುಭವಿಸಿದ್ದು, ಎಲ್ಲರ ಬಾಯಿಗೆ ಆಹಾರವಾಗಿದ್ದು ಆ ಮಹಿಳೆ.

ಮೀ–ಟೂ ಆಂದೋಲನದ ಕಾಳ್ಗಿಚ್ಚು, ತದನಂತರದ ಪರಿಣಾಮಗಳನ್ನು ನೋಡಿದ್ದೇವೆ. ದನಿಯೆತ್ತಿದ ಹೆಣ್ಣುಮಕ್ಕಳನ್ನೇ ಅನುಮಾನಾಸ್ಪದವಾಗಿ ನೋಡುವ, ನೇರವಾಗಿ ಅವರ ಚಾರಿತ್ರ್ಯವಧೆಗೆ ಇಳಿಯುವ ಕೀಳುಮಟ್ಟದ ಲಿಂಗದ್ವೇಷ ರಾಜಕಾರಣವು ಸಮಾಜದಲ್ಲಿನ ಒಂದು ದೊಡ್ಡ ರೋಗ.

ಜೆಎನ್‌ಯು ಹಳೆ ವಿದ್ಯಾರ್ಥಿ ಉಮರ್ ಖಾಲಿದ್‌ ಅವರಿಗೆ ಸಂಬಂಧಿಸಿದ 11 ಲಕ್ಷ ಪುಟಗಳಷ್ಟು ದತ್ತಾಂಶ ಸರ್ಕಾರದ ಬಳಿ ಇದೆಯಂತೆ. ಆದರೆ ಲಾಕ್‌ಡೌನ್ ನಂತರ ಕೆಲಸ ಬಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಮಾಹಿತಿ ಇಲ್ಲ! ನಿರ್ಭೀತವಾಗಿ ದನಿಯೆತ್ತುವ, ನ್ಯಾಯಕ್ಕಾಗಿ ಹೋರಾಡುವ ಮಹಿಳೆಯರು ಈ ದೇಶಕ್ಕೆ ಬೇಡ. ಹನ್ನೆರಡನೇ ಶತಮಾನದ ಮಹಿಳೆಯರಿಗೆ ಇದ್ದ ಸ್ವಾತಂತ್ರ್ಯ ಮತ್ತು ಸಮಾನತೆ ಈಗಿನ ಮಹಿಳೆಯರಿಗೆ ಇಲ್ಲದಂತಹ ಸ್ಥಿತಿ ಇದೆ. ನಾವು ಇಪ್ಪತ್ತೊಂದನೆಯ ಶತಮಾನದವರು ಐವತ್ತು ವರ್ಷಗಳಷ್ಟು ಹಿಂದೆ ಹೋಗಿದ್ದೇವೆ ಅನಿಸುತ್ತದೆ.

ಸುಶಾಂತ್‌ ಸಿಂಗ್‌ ರಜಪೂತ್‌ ಪ್ರಕರಣದಲ್ಲಿ ವಿಚಾರಣೆಗೆ ಒಳಗಾಗಲು ತೆರಳುತ್ತಿದ್ದ ಸಂದರ್ಭದಲ್ಲಿ ರಿಯಾ ಚಕ್ರವರ್ತಿ ಟಿ ಶರ್ಟ್‌ ಮೇಲೆ ಬರೆದಿದ್ದ ‘ನಾನು ಮತ್ತು ನೀವು ಪಿತೃಪ್ರಭುತ್ವವನ್ನು ಒಡೆಯೋಣ’ ಎಂಬ ಸಾಲುಗಳು ಸ್ತ್ರೀಪರ ಚಿಂತನೆಗಳಿಗೆ ಮರುಜೀವ ತುಂಬಿವೆ. ವಾಸ್ತವವಾಗಿ ಪಿತೃಪ್ರಭುತ್ವವನ್ನು ಒಡೆದುಹಾಕುವ ಮಹಿಳೆಯ ಪ್ರಯತ್ನಗಳು ಇಂದಿನವಲ್ಲ. ಈ ದೇಶದ ವ್ಯವಸ್ಥೆಯ ವೈರುಧ್ಯಗಳ ನಡುವೆಯೇ ಮಹಿಳೆ ಹಲವು ದಶಕಗಳಿಂದ ತನ್ನ ಹಕ್ಕುಗಳಿಗಾಗಿ ತಾನೇ ಎದ್ದು ನಿಂತು ದನಿಯೆತ್ತುತ್ತಲೇ ಇದ್ದಾಳೆ. ಸ್ತ್ರೀವಾದವೆಂದರೆ ಪುರುಷದ್ವೇಷವಲ್ಲ, ಲಿಂಗ ಸಮಾನತೆಯ ಆಚರಣೆ. ಹುತ್ತವ ಬಡಿದರೆ ಹಾವು ಸಾಯಬಲ್ಲದೇ? ಅಂತರಂಗದಲ್ಲಿ ಸ್ತ್ರೀದ್ವೇಷಿಯಾಗಿರುವ ಆಧುನಿಕೋತ್ತರ ಸಮಾಜ ಬದಲಾಗುವುದು ಎಂತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT