ಗುರುವಾರ , ಜುಲೈ 29, 2021
24 °C

ಸಂಗತ | ಆನೆ ಹತ್ಯೆಗೆ ನಾನಾ ಆಯಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೇರಳದಲ್ಲಿ ನಡೆದಿರುವ ಆನೆ ಹತ್ಯೆ ಪ್ರಕರಣ ನಮ್ಮೆಲ್ಲರನ್ನೂ ಧೃತಿಗೆಡಿಸಲು ಮುಖ್ಯವಾದ ಒಂದು ಕಾರಣವಿದೆ. ಅದು, ಮಹಾಮೇಧಾವಿ ಬರ್ಟ್ರಂಡ್ ರಸೆಲ್, ಮನುಷ್ಯನ ಮನಸ್ಸಿನ ಜಗತ್ತಿನ ಕುರಿತು ಹೇಳಿರುವ ಒಳನೋಟಗಳ ಹಿನ್ನೆಲೆಯಲ್ಲಿ ನಮ್ಮ ಅರಿವಿಗೆ ಬರುತ್ತವೆ.

ರಸೆಲ್ ಹೇಳುತ್ತಾರೆ: ಮನುಷ್ಯನಿಗೆ ಬೇಸರ ಕಳೆಯಲು ಮೋಜಿನ ಅಗತ್ಯ ಇರುತ್ತದೆ. ಮೋಜಿನ ಪ್ರಮಾಣವನ್ನು ಶಾರೀರಿಕ ಶ್ರಮದ ಅಂಶವೂ ನಿರ್ಧರಿಸುತ್ತದೆ. ಹೆಚ್ಚು ಶಾರೀರಿಕ ಶ್ರಮಪಡುವ ವ್ಯಕ್ತಿಗೆ ತೀವ್ರ ತರದ ಮೋಜಿನ ಅವಶ್ಯಕತೆ ಇರುವುದಿಲ್ಲ. ಉದಾಹರಣೆಗೆ, ದಿನಾಲೂ ಕಿಲೊಮೀಟರ್‌ಗಟ್ಟಲೆ ನಡೆಯುವ ವ್ಯಕ್ತಿಗೆ ಬೇಸರ ಬರುವುದಿಲ್ಲ. ಆದರೆ ಶಾರೀರಿಕ ಶ್ರಮ ಕಡಿಮೆಯಾಗಿ ಬೇಸರ ಜಾಸ್ತಿಯಾಗುತ್ತಾ ಹೋದಂತೆ ಮನುಷ್ಯನ ಮೋಜಿನ ಅವಶ್ಯಕತೆ ತೀವ್ರವಾಗುತ್ತದೆ. ಆಗ ಮೋಜು ವಿಪರೀತ ಆಯಾಮಗಳನ್ನು ಪಡೆದುಕೊಳ್ಳಬಹುದು. ಕ್ರೌರ್ಯದ ರೂಪವನ್ನೂ ತಾಳಬಹುದು. ಹೀಗಾಗಿ ಹಲವೊಮ್ಮೆ ಮನುಷ್ಯನ ಮನಸ್ಸು ತೀವ್ರ ಕ್ರೌರ್ಯವನ್ನು ನೋಡಿ ಆನಂದಿಸುತ್ತದೆ. ಗೂಳಿ ಕಾಳಗವನ್ನು, ರಕ್ತ ಚೆಲ್ಲುವ ಮತ್ತಿತರ ಆಟಗಳನ್ನು ನೋಡಿ ಸಂತೋಷಪಡುವುದು. ಅಂತಲ್ಲಿ ಹುಟ್ಟಿಕೊಳ್ಳುವ ಆನಂದಕ್ಕೆ ಇಂತಹ ಹಿನ್ನೆಲೆ ಇರುತ್ತದೆ.

ಬಹುಶಃ ಆನೆಯೊಂದನ್ನು ಕೊಂದ ಮಾನಸಿಕ ಸ್ಥಿತಿಯ ಹಿಂದೆ ಕೊರೊನಾ ಸೋಂಕಿನ ತೀವ್ರ ಆತಂಕ ಹಾಗೂ ದೀರ್ಘಕಾಲದ ಲಾಕ್‌ಡೌನ್‌ ತಂದಿಟ್ಟಿರುವ ಅಪಾರ ಬೇಸರ, ಶಾರೀರಿಕ ಶ್ರಮದ ಕೊರತೆ ಕೂಡ ಇದ್ದಿರಬಹುದೇನೊ. ಒಂದೊಮ್ಮೆ ಇದು ಹೌದೇ ಆಗಿದ್ದಲ್ಲಿ ನಮ್ಮ ಸಮಾಜ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಏಕೆಂದರೆ ದೇಶದ ಜನ, ಮುಖ್ಯವಾಗಿ ಯುವಜನ ಲಾಕ್‌ಡೌನ್‌ನಿಂದಾಗಿ ಮನೆಗಳಲ್ಲಿಯೇ ಬಂದಿಯಾಗಿ ವಿಪರೀತ ಬೇಸರ ಅನುಭವಿಸಿದ್ದಾರೆ. ಅಪಾರ ಚೈತನ್ಯ ಹೊಂದಿದವರ ಶರೀರಗಳು ಚಟುವಟಿಕೆಗಳಿಗೆ ಕಾಯುತ್ತ ಕುದಿದು ಹೋಗಿರಲು ಸಾಧ್ಯವಿದೆ.

ಅಮೆರಿಕವು ಕೊರೊನೋತ್ತರದ ದಿನಗಳಲ್ಲಿ ಕಪ್ಪುವರ್ಣೀಯರು ಹಾಗೂ ಶ್ವೇತವರ್ಣೀಯರ ನಡುವಿನ ಹಿಂಸೆಯ ಸುಳಿಯಲ್ಲಿ ಸಿಲುಕಿದೆ. ಹಾಗೆಯೇ ಯಾವುದೋ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತಮ್ಮ ಡೀನ್ ಕಂಪ್ಯೂಟರನ್ನು ಹ್ಯಾಕ್ ಮಾಡಿ ಸುಳ್ಳು ಸಂದೇಶಗಳನ್ನು ಹಬ್ಬಿಸಿದ ಸುದ್ದಿ ಇದೆ.

ನಮ್ಮಲ್ಲಿನ ಯುವಕ–ಯುವತಿಯರಲ್ಲಿ ಹೆಚ್ಚಿನವರು ಶಾಂತ ಸ್ವಭಾವದವರಾಗಿರುತ್ತಾರೆ. ಆದರೆ ಮೇಲೆ ಹೇಳಲಾದ ಮಾನಸಿಕ ಕಾರಣಗಳಿಂದಾಗಿ ಕೆಲವರು ರಸೆಲ್ ಹೇಳಿರುವ ರೀತಿಯಲ್ಲಿ ವರ್ತಿಸಿದರೆ, ಸಮಾಜ ತೀವ್ರ ಸಂಕಟದಲ್ಲಿ ಸಿಲುಕಬಹುದು. ಹೀಗಾಗಿ, ಬೇಸರದಿಂದ ತಪ್ಪಿಸಿಕೊಳ್ಳಲು ಯುವಜನ ಹುಡುಕುವ ಮೋಜಿನಾಟಗಳ ಮೇಲೆ ಕಣ್ಣಿಡುವುದು ಒಳ್ಳೆಯದು.
-ಡಾ. ಆರ್.ಜಿ.ಹೆಗಡೆ, ದಾಂಡೇಲಿ

***

ಹಳಿ ತಪ್ಪಿದ ಚರ್ಚೆ
ಕೇರಳದಲ್ಲಿ ನಡೆದ ಆನೆಯ ಸಾವಿಗೆ ಮರುಗುವುದು ಮನುಷ್ಯ ಸಹಜ ಸ್ವಭಾವ. ಆದರೆ, ಅರಣ್ಯ ನಾಶದಿಂದ ಉಲ್ಬಣಗೊಳ್ಳುತ್ತಿರುವ ಮಾನವ– ಕಾಡುಪ್ರಾಣಿಗಳ ನಡುವಿನ ಸಂಘರ್ಷದ ಕುರಿತು ವಾಸ್ತವಿಕ ನೆಲೆಗಟ್ಟಿನಲ್ಲಿ ಈ ವಿದ್ಯಮಾನವನ್ನು ಪರಾಮರ್ಶಿಸಬೇಕಿದೆ. ಅದು, ಆಗುತ್ತಿಲ್ಲ. ಇದನ್ನೊಂದು ಬಿಡಿ ಘಟನೆಯಾಗಷ್ಟೇ ಪರಿಗಣಿಸುವ ಮೂಲಕ ಎಂದಿನ ಆತ್ಮವಂಚಕ ಪ್ರವೃತ್ತಿಯನ್ನೇ ಮುನ್ನೆಲೆಗೆ ತಂದಿದ್ದೇವೆ.

ಆನೆ ಮತ್ತು ಮಾನವರ ನಡುವಿನ ಸಂಘರ್ಷವು ತೀವ್ರ ಸ್ವರೂಪದಲ್ಲಿರುವ ಹಾಸನ ಜಿಲ್ಲೆಯ ಆಲೂರು ಮತ್ತು ಸಕಲೇಶಪುರ ಭಾಗದತ್ತ ಒಮ್ಮೆ ತಿರುಗಿ ನೋಡಿದರೆ, ಆನೆಯೊಂದರ ಸಾವು ಹುಟ್ಟುಹಾಕಿರುವ ಚರ್ಚೆ ಯಾವೆಲ್ಲ ಅಂಶಗಳನ್ನು ಪ್ರಧಾನವಾಗಿ ಇರಿಸಿಕೊಳ್ಳಬೇಕಿತ್ತು ಎಂಬುದರ ಅರಿವಾಗಬಹುದು. ಗೊರೂರು ಗ್ರಾಮದಲ್ಲಿ ಹೇಮಾವತಿ ನದಿಗೆ ಅಣೆಕಟ್ಟು ನಿರ್ಮಿಸಿದ ನಂತರ ತಮ್ಮ ಸ್ವಾಭಾವಿಕ ನೆಲೆ ಕಳೆದುಕೊಂಡ ಆನೆಗಳು, ಆಹಾರಕ್ಕಾಗಿ ಬೆಳೆ ನಾಶ ಮಾಡುವುದು ಮೂರ್ನಾಲ್ಕು ದಶಕಗಳಿಂದ ಜರುಗುತ್ತಲೇ ಇದೆ. ಆನೆ ದಾಳಿಗೆ ಸಿಲುಕಿ ಜನ ಸಾವನ್ನಪ್ಪುವುದು ಕೂಡ ಮುಂದುವರಿದಿದೆ. ಈ ಆನೆಗಳಿಂದ ಪಾರಾಗಲು ಕೆಲ ವರ್ಷಗಳ ಹಿಂದೆ ರೈತರು ಕಂಡುಕೊಂಡಿದ್ದ ತಂತಿ ಬೇಲಿಗೆ ವಿದ್ಯುತ್ ಹಾಯಿಸುವ ವಿಧಾನ ಕೆಲವು ಆನೆಗಳ ಸಾವಿಗೂ ಕಾರಣವಾಗಿದೆ.

ಕಾಡುಪ್ರಾಣಿಗಳ ಬಗೆಗಿನ ನಮ್ಮ ಕಾಳಜಿ ನೈಜವೇ ಆಗಿದ್ದರೆ, ಮೊದಲು ನಾವು ವಿರೋಧಿಸಬೇಕಿರುವುದು ಅರಣ್ಯ ನಾಶಕ್ಕೆ ಕಾರಣವಾಗುವ ಯೋಜನೆಗಳನ್ನು. ಪರಿಸರ ತಜ್ಞರ ವಿರೋಧದ ನಡುವೆಯೂ ಅನುಮತಿ ದೊರೆತಿರುವ ಅಂಕೋಲ- ಹುಬ್ಬಳ್ಳಿ ರೈಲು ಮಾರ್ಗ ಯೋಜನೆಯಿಂದ ಕಾಡುಪ್ರಾಣಿಗಳು ತಮ್ಮ ನೆಲೆ ಕಳೆದುಕೊಳ್ಳುವುದಿಲ್ಲವೇ?

ಆನೆ ದಾಳಿಗೆ ಸಿಲುಕಿ ಜನ ಸಾವನ್ನಪ್ಪಿದಾಗ ಜನಾಕ್ರೋಶ ತಣಿಸುವ ಸಲುವಾಗಿ, ಅರಣ್ಯ ಇಲಾಖೆಯು ಆನೆ ಸೆರೆ ಮತ್ತು ಆನಂತರ ಅದನ್ನು ಪಳಗಿಸಲು ಅನುಸರಿಸುವ ವಿಧಾನ ಅದೆಷ್ಟು ಹಿಂಸಾತ್ಮಕವಾಗಿರುತ್ತದೆ ಎನ್ನುವುದನ್ನು ಪರಿಶೀಲಿಸುವ ಆಸಕ್ತಿ ನಮಗಿದೆಯೇ? ಆನೆಗಳು ಸಹಜವಾಗಿ ಬದುಕಲು ಅನುವು ಮಾಡಿಕೊಡದ ಪ್ರತೀ ಬೆಳವಣಿಗೆಯೂ ಅವುಗಳ ಮೇಲೆ ಮನುಷ್ಯ ಎಸಗುವ ದೌರ್ಜನ್ಯವಲ್ಲವೇ?

ಪರಿಸರ ಸಂಬಂಧಿ ಬಿಕ್ಕಟ್ಟುಗಳ ಕುರಿತ ಚರ್ಚೆಯನ್ನು ಭಾವುಕ ಆಕ್ರೋಶವಷ್ಟೇ ಆವರಿಸಿಕೊಂಡರೆ, ಅದರಿಂದ ಪ್ರಾಣಿಗಳಿಗೂ ಮನುಷ್ಯರಿಗೂ ಪರಿಸರಕ್ಕೂ ಪೂರಕವಾದ ಪರಿಹಾರ ಮಾರ್ಗಗಳು ತೆರೆದುಕೊಳ್ಳಲಾರವು.
-ಎಚ್.ಕೆ.ಶರತ್, ಹಾಸನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು