ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ಯಾ ರಾಜಕಾರಣಕ್ಕೆ ಜನಮಾನ್ಯತೆ ಯತ್ನ

Last Updated 21 ಮೇ 2019, 19:42 IST
ಅಕ್ಷರ ಗಾತ್ರ

ಮಹಾತ್ಮ ಗಾಂಧಿಯವರನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ದೇಶಭಕ್ತ ಎಂದುಪ್ರಜ್ಞಾ ಸಿಂಗ್ ಕರೆದ ಸುದ್ದಿ ರಾಷ್ಟ್ರದಾದ್ಯಂತ ಮಾಧ್ಯಮಗಳಲ್ಲಿ ಸಂಚಲನವನ್ನು ಉಂಟು ಮಾಡಿತು. ‘ಗೋಡ್ಸೆಯನ್ನು ಹೊಗಳಿದ ಪ್ರಜ್ಞಾರನ್ನು ನಾನೆಂದೂ ಕ್ಷಮಿಸುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಕ್ಷಮಿಸಲಾಗದ ಈ ಹೇಳಿಕೆ ನೀಡಿದ ವ್ಯಕ್ತಿಯು ಲೋಕಸಭಾ ಚುನಾವಣೆಗಾಗಿ ತಮ್ಮ ಪಕ್ಷವು ಆಯ್ದ ಅಭ್ಯರ್ಥಿ ಎಂಬುದನ್ನು ಮರೆತಂತೆ ಆ ಪಕ್ಷದ ಕೆಲವು ಮುಖಂಡರು ವರ್ತಿಸಿದ್ದಾರೆ.

‘ಅದು ಆಕೆಯ ವೈಯಕ್ತಿಕ ಹೇಳಿಕೆ, ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ’ ಎಂಬ ಭಂಡ ತರ್ಕವನ್ನು ಮಂಡಿಸಿ ಪಾರಾಗಲು ಯತ್ನಿಸಿದ್ದಾರೆ! ಆದರೆ ಆಕೆಯನ್ನು ಪಕ್ಷದಿಂದ ಹೊರಹಾಕುವ ಮಾತೇ ಈ ಮುಖಂಡರಿಂದ ಹೊರಬರದಿರುವುದು, ಆಕೆಯ ಹೇಳಿಕೆಯ ಬಗೆಗಿನ ತಮ್ಮ ಖಂಡನೆಗಳೆಲ್ಲ ಜನರ ಕಣ್ಣೊರೆಸುವ ತಂತ್ರ ಮಾತ್ರ ಎಂದು ತಮ್ಮ ಬೆಂಬಲಿಗರಿಗೆ ನೀಡಿರುವ ಪರೋಕ್ಷ ಸೂಚನೆಯೇ ಆಗಿದೆ.

ಇದು ಪ್ರಜ್ಞಾ ಅವರ ಅಭಿಪ್ರಾಯ ಮಾತ್ರವಲ್ಲ ಎಂಬುದೂ, ಓರ್ವ ಕೇಂದ್ರ ಮಂತ್ರಿಯೂ ಸೇರಿದಂತೆ ರಾಜ್ಯದ ಇಬ್ಬರು ಸಂಸದರು ಆಕೆಯ ಹೇಳಿಕೆಯನ್ನು ರಾಜಾರೋಷವಾಗಿ ಬೆಂಬಲಿಸಿ ಬರೆದ ಟ್ವೀಟ್‌ಗಳು ಕಾಣಿಸಿಕೊಂಡವು. ನಂತರ, ಅವರಲ್ಲಿ ಒಬ್ಬರು ತಮ್ಮ ಟ್ವಿಟರ್‌ ಖಾತೆ ಹ್ಯಾಕ್‌ ಆಗಿತ್ತು ಎಂದು ಜಾರಿಕೊಂಡರು.

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೊಡನೆ ಕೇಳಿಬಂದ, ಗೋಡ್ಸೆಗೆ ಗುಡಿ ಕಟ್ಟುವ ಕಾರ್ಯಕ್ರಮ, ಗೋಡ್ಸೆ, ಗಾಂಧಿಯನ್ನು ಕೊಲ್ಲುವ ಅಣಕು ಪ್ರದರ್ಶನ ಇತ್ಯಾದಿಗಳಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಗಾಂಧಿ ಚಾರಿತ್ರ್ಯ ಹನನದ ಪ್ರಯತ್ನಗಳು, ಗಾಂಧಿ ರೂಪಿಸಿಕೊಟ್ಟ ಭಾರತವನ್ನು ಕೆಡವಿ, ಅದಕ್ಕೆ ತದ್ವಿರುದ್ಧವಾದ ಕಲ್ಪನೆಯ ಭಾರತವನ್ನು ಕಟ್ಟಬಯಸುವ ಗುಪ್ತ ಕಾರ್ಯಕ್ರಮವೊಂದರ ಸೂಚನೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಅದು, ಇಂದಿನ ಬಿಜೆಪಿಯ ಮೂಲರೂಪವಾದ ಭಾರತೀಯ ಜನಸಂಘದ ನಾಯಕರು ಸಾವರ್ಕರ್, ಗೊಳವಲ್ಕರ್‌ರಂಥ ತಮ್ಮ ತಾತ್ವಿಕ ಮಾರ್ಗದರ್ಶಕರಿಂದ ಸ್ಫೂರ್ತಿಯಾಗಿ ಪಡೆದಿದ್ದ ಹಿಂದುತ್ವದ ಮೌಲ್ಯಗಳನ್ನು ಆಧರಿಸಿದ ಭಾರತ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಗಾಂಧಿ ಈ ದೇಶದ ಸಮಷ್ಟಿ ನೆನಪಿನಿಂದ ಅಳಿಸಿಹೋಗಿಲ್ಲ ಎಂಬುದು ಮೋದಿಯವರಂತಹ ಬಿಜೆಪಿ ನಾಯಕರಿಗೆ ಗೊತ್ತಿದೆ. ಹಾಗಾಗಿಯೇ ಅವರು ಸತ್ಯ- ಅಹಿಂಸೆ- ಸ್ವದೇಶಿ- ಸರಳ ಜೀವನ- ಧರ್ಮ ಸಮನ್ವಯದ ಪ್ರತೀಕವಾಗಿರುವ ಗಾಂಧಿಯವರನ್ನು ‘ಸ್ವಚ್ಛ ಭಾರತ’ ಎಂಬ ಭೌತಿಕ ಶುಚಿಯ ಪ್ರತೀಕಾತ್ಮಕತೆಗೆ ಕುಬ್ಜಗೊಳಿಸಿ, ಅವರಿಗೆ ಔಪಚಾರಿಕ ಮಾನ್ಯತೆ ನೀಡಿ ಕೈತೊಳೆದುಕೊಂಡಿದ್ದಾರೆ.

ಗಾಂಧಿ ಕುರಿತ ಬಿಜೆಪಿಯ ಧೋರಣೆ ಬಗ್ಗೆ ಇಷ್ಟೆಲ್ಲ ಹೇಳಿದ ಮೇಲೂ ಈ ಸಂದರ್ಭದ ಕೇಂದ್ರ ಪ್ರಶ್ನೆ ಹಾಗೇ ಉಳಿದಿದೆ. ಅದೆಂದರೆ, ಪ್ರಜ್ಞಾರ ಹೇಳಿಕೆಗೆ ದೇಶದಲ್ಲಿ ಸಾರ್ವಜನಿಕ ಪ್ರತಿಕ್ರಿಯೆ ಹೇಗಿತ್ತು ಎಂಬುದು. ಬಿಜೆಪಿ ವಿರೋಧಿ ನಾಯಕರ, ವಿಶೇಷವಾಗಿ ಕಾಂಗ್ರೆಸ್ ನಾಯಕರ ಹೊರತಾಗಿ ಈ ಬಗ್ಗೆ ಯಾವುದೇ ಸಾರ್ವಜನಿಕ ವೇದಿಕೆಯ ಪರವಾಗಿ ಖಂಡನೆ ಅಥವಾ ಪ್ರತಿಭಟನೆ ವ್ಯಕ್ತವಾಯಿತೇ? ಹೆಚ್ಚೂ ಕಡಿಮೆ ಇಲ್ಲವೆಂದೇ ಹೇಳಬೇಕು. ಈ ಪರಿಸ್ಥಿತಿಯೇ ಪ್ರಜ್ಞಾ ಮತ್ತವರ ಸ್ನೇಹಿತರಲ್ಲಿ ಗಾಂಧಿಯನ್ನು ಕೊಂದವನನ್ನು ಸ್ತುತಿಸುವ ಧೈರ್ಯವನ್ನು ತುಂಬಿರುವುದು. ಈ ಮರ್ಮವನ್ನು ಅರಿಯದೆ ಗಾಂಧಿ ನಿಂದಕರ ಮೇಲೆ ಮುಗಿಬೀಳುವ ಕಾಂಗ್ರೆಸ್ ನಾಯಕರು, ಜನರ ಕಣ್ಣಲ್ಲಿ ಹಾಸ್ಯಾಸ್ಪದರಾಗಿ ಕಾಣುತ್ತಿದ್ದಾರೆ.

ಗಾಂಧಿ ಮೌಲ್ಯ, ಪರಂಪರೆಯನ್ನು ಕಾಪಿಟ್ಟುಕೊಂಡು ಬರುವ ಹೊಣೆ ಹೊತ್ತ ಕಾಂಗ್ರೆಸ್, ಆ ಹೊಣೆಯಿಂದ ಬಹುದೂರ ಸರಿದುಹೋಗಿರುವುದೇ ಇಂದಿನ ತಲೆಮಾರಿನಲ್ಲಿ ಗಾಂಧಿ ಕುರಿತು ಅಪಪ್ರಚಾರ ಮಾಡಿ, ಅವರನ್ನು ಕೊಂದವನ ಗುಣಗಾನ ಮಾಡುವ ಪುಂಡಾಟಿಕೆಗೆ ಅವಕಾಶವಾಗಿದೆ. ಗಾಂಧಿಗೆ ಇಂದು ಯಾರೂ ನೈತಿಕ ವಾರಸುದಾರರು ಇಲ್ಲದಿರುವುದರಿಂದಲೇ ಅವರ ಬಗ್ಗೆ ಹೊಸ ತಲೆಮಾರಿನವರಲ್ಲಿ ತಪ್ಪು ಗ್ರಹಿಕೆ ಉಂಟು ಮಾಡುವವರ ಪ್ರಯತ್ನಗಳು ಯಶಸ್ವಿಯಾಗಿ ನಡೆದಿವೆ.

ಗಾಂಧಿ ಭಾರತವೆಂದು ಹೇಳಲಾಗುವ ಬಹುತ್ವದ ಭಾರತ, ಧರ್ಮ ಸಮನ್ವಯದ ಭಾರತ, ಸ್ವದೇಶಿ-ಸ್ವರಾಜ್ಯದ ಭಾರತ ನಾಶವಾಗುತ್ತಿದೆ ಎಂದು ಯಾರೇ ಗಂಟಲು ಹರಿದುಕೊಂಡು ಕೂಗಿಕೊಂಡ ಮಾತ್ರಕ್ಕೆ ಜನರ ಮನದಲ್ಲಿ ಗಾಂಧಿಯ ನಿಜ ಚಿತ್ರ ಮೂಡುವುದಿಲ್ಲ. ಏಕೆಂದರೆ, ಹೀಗೆ ಇಂದು ಕೂಗುವವರ ಬದುಕಿನ ಮಾದರಿ ಮತ್ತು ರಾಜಕಾರಣದ ಪರಿಗಳನ್ನು ನೋಡುತ್ತಿರುವ ಜನರಲ್ಲಿ ಮೂಡುವ ಗಾಂಧಿ ಚಿತ್ರ ವಿಕ್ಷಿಪ್ತವಾಗಿರುವುದು ಸಹಜವೇ ಸರಿ. ಹಾಗಾಗಿಯೇ ಹೊಸ ತಲೆಮಾರಿನ ಜನರಲ್ಲಿ ಗಾಂಧಿಯವರ ಬಗ್ಗೆ ವಿಶಿಷ್ಟ ಗೌರವವೇನೂ ಇದ್ದಂತಿಲ್ಲ. ಇದು ‘ಗಾಂಧಿ ಭಾರತ’ವನ್ನು ಹೊಡೆದುರುಳಿಸ ಬಯಸುವವರ ಕೆಲಸವನ್ನು ಸುಲಭ ಮಾಡಿದೆ.

ಆದರೆ, ಈ ಎಲ್ಲ ರಾಜಕಾರಣದ ಹಿಂದಿರುವ ಭಯಾನಕ ಸತ್ಯವೆಂದರೆ, ಇದು ಹತ್ಯಾ ರಾಜಕಾರಣಕ್ಕೆ ಒಂದು ಜನಮಾನ್ಯತೆ ಒದಗಿಸುವುದಾಗಿದೆ ಎಂಬುದು. ಈ ದೃಷ್ಟಿಯಿಂದ ಗಾಂಧಿ ವಿರೋಧಿಗಳು ಮಾತ್ರವಲ್ಲ, ಗಾಂಧಿ ವಾರಸುದಾರಿಕೆಯನ್ನು ಹೇಳಿಕೊಳ್ಳುವವರೂ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT