ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ನಿಸರ್ಗದ ಒಡನಾಟ: ಆಗಲಿ ಆದ್ಯತೆ

Last Updated 13 ಅಕ್ಟೋಬರ್ 2022, 4:25 IST
ಅಕ್ಷರ ಗಾತ್ರ

ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನಿತ್ಯ ಒಂದೂವರೆ ತಾಸು ಮೊಬೈಲ್ ಫೋನ್‌ ಹಾಗೂ ಟಿ.ವಿ. ಬಂದ್ ಮಾಡುವ ಸುದ್ದಿಯು ಚಿಂತನಾರ್ಹವಾಗಿದೆ. ಟಿ.ವಿ. ಮತ್ತು ಮೊಬೈಲ್‌ ಅತಿಬಳಕೆ ಮೇಲೆ ನಿಯಂತ್ರಣ ಸಾಧಿಸಲು ಕೈಗೊಂಡ ಗ್ರಾಮದ ಜನರ ಈ ಗಟ್ಟಿ ನಿರ್ಧಾರ ಸ್ವಾಗತಾರ್ಹವಾದುದು. ಹೀಗೆ ಹೇರಿಕೊಂಡ ಈ ನಿರ್ಬಂಧ ಎಷ್ಟು ಕಾಲ ಯಶಸ್ವಿಯಾಗುತ್ತದೆ ಎಂಬುದು ಕುತೂಹಲದ ಸಂಗತಿ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಅಭೂತಪೂರ್ವ ಎನಿಸಬಹುದಾದ ಆವಿಷ್ಕಾರಗಳು ಮಾನವನ ಬದುಕನ್ನು ಹಸನು ಮಾಡುವುದರ ಜೊತೆಗೆ ಅನೇಕ ಸಮಸ್ಯೆ, ಸವಾಲುಗಳನ್ನೂ ಹೊತ್ತು ತಂದಿವೆ. ತಂತ್ರಜ್ಞಾನದ ಸಾಧನಗಳು ಮನುಷ್ಯನ ದೈಹಿಕ ಶ್ರಮವನ್ನು ಬಹಳಷ್ಟು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿವೆ ಎಂಬುದೇನೋ ನಿಜ. ಆದರೆ ಇದರಿಂದ ದೈಹಿಕ ಚಟುವಟಿಕೆ ತೀವ್ರವಾಗಿ ಕಡಿಮೆಯಾದ ಕಾರಣ ಅನೇಕ ಆರೋಗ್ಯ ಸಮಸ್ಯೆಗಳು ಕಾಡತೊಡಗಿವೆ.

ದುಡಿತದಿಂದ ಕಂಗೆಟ್ಟ ಜೀವಗಳಿಗೆ ನಾಟಕ, ಯಕ್ಷಗಾನ, ಹಾಡು, ಸಂಗೀತ, ನೃತ್ಯವು ದೈಹಿಕ ಮತ್ತು ಮಾನಸಿಕ ಚೈತನ್ಯ ನೀಡಿ, ಮನರಂಜನೆ ಒದಗಿಸುತ್ತಿದ್ದವು. ಇವು ಜನರಿಗೆ ಖುಷಿ, ಸಂತಸದ ಜೊತೆ ಶಿಕ್ಷಣವನ್ನೂ ನೀಡುತ್ತಿದ್ದವು. ನಂತರ ಬಂದ ಸಿನಿಮಾ ತಂತ್ರಜ್ಞಾನವು ಜನರನ್ನು ಚಿತ್ರಮಂದಿರಗಳತ್ತ ಸೆಳೆದು, ರಂಜಿಸತೊಡಗಿತು. ಮನೆ ಮನೆಯಲ್ಲಿ ನೆಲೆಗೊಂಡ ಟಿ.ವಿ. ವೀಕ್ಷಣೆಗೆ ತಮ್ಮ ಬಹುಪಾಲು ಸಮಯವನ್ನು ಮೀಸಲಿಡುತ್ತಿದ್ದ ಜನರ ಕೈಗಳನ್ನು ಈಗ ಮೊಬೈಲ್‍ ಫೋನ್‌ಗಳು ಅಲಂಕರಿಸಿವೆ. ಮೊಬೈಲ್‍ ಮಾಯೆಯಿಂದ ಹೊರಬರುವುದು ಹೆಚ್ಚಿನ ಜನರಿಗೆ ಕಷ್ಟಸಾಧ್ಯ ಎನಿಸುವಂತಾಗಿದೆ.

ವಿಶ್ವದಾದ್ಯಂತ 380 ಕೋಟಿಗೂ ಅಧಿಕ ಜನ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ. ಚೀನಾದಲ್ಲಿ 144 ಕೋಟಿ ಮಂದಿ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ವಿಚಾರದಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಭಾರತ ಇದೆ.

ಹೆಚ್ಚಿನ ದೈನಂದಿನ ಕೆಲಸಗಳ ನಿರ್ವಹಣೆಗೆ ಸ್ಮಾರ್ಟ್‌ಫೋನ್ ಬಳಕೆ ಸಾಧ್ಯವಾದ ನಂತರ ಅದರ ಮೇಲಿನ ಅವಲಂಬನೆ ತೀವ್ರವಾಗಿ ಹೆಚ್ಚಾಗಿದೆ. ಅತಿ ಎನಿಸುವಷ್ಟು ಸಾಮಾಜಿಕ ಮಾಧ್ಯಮಗಳ ಬಳಕೆಯು ಜನರ ಸಂತಸ, ನಿದ್ರೆ, ನೆಮ್ಮದಿ, ದೈಹಿಕ ಕ್ಷಮತೆ, ಆರೋಗ್ಯಕ್ಕೆ ಕನ್ನ ಹಾಕುವುದರ ಜೊತೆಗೆ ವಿವಿಧ ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿದೆ.

ಮುಂಜಾನೆಯ ನಡಿಗೆ, ಊಟ– ಉಪಾಹಾರ ಸೇವನೆಯಂತಹ ದೈನಂದಿನ ಕಾರ್ಯಗಳ ನಿರ್ವಹಣೆಯ ವೇಳೆಯಲ್ಲೂ ಮೊಬೈಲ್ ಬಳಕೆ ಸಾಮಾನ್ಯ ಎನಿಸುವಂತಾಗಿದೆ. ಅನೇಕರು ಶೌಚಾಲಯ, ಸ್ನಾನಗೃಹಗಳಿಗೂ ಮೊಬೈಲ್ ಫೋನ್‌ ಕೊಂಡೊಯ್ಯುತ್ತಾರೆ. ಇಂಟರ್‌ನೆಟ್ ಹೊಂದಿದ ಸ್ಮಾರ್ಟ್ ಟಿ.ವಿ.ಗಳಲ್ಲಿ ಚಲನಚಿತ್ರ, ಧಾರಾವಾಹಿಗಳನ್ನು ನಿರಂತರವಾಗಿ ನೋಡುವ ಅಭ್ಯಾಸ ಅನೇಕರಲ್ಲಿ ಪ್ರಾರಂಭವಾಗಿದೆ. ಮಕ್ಕಳು, ಯುವಕರು ಮೊಬೈಲ್, ಲ್ಯಾಪ್‍ಟಾಪ್‍ನಲ್ಲಿ ಕಂಪ್ಯೂಟರ್ ಗೇಮ್ಸ್ ಆಡುವುದನ್ನು ಚಟವಾಗಿಸಿಕೊಂಡಿರುತ್ತಾರೆ.

ಎರಡು–ಮೂರು ಗಂಟೆ ಕಾಲ ಮೊಬೈಲ್ ಬಳಸದೇ ಇರಲು ಸಾಧ್ಯ ಎನ್ನುವವರಲ್ಲಿ ಮನೋನಿಗ್ರಹ ಸಾಮರ್ಥ್ಯ ಉತ್ತಮವಾಗಿದೆ ಎನ್ನಬಹುದು. ಹೆಚ್ಚಿನವರು ಪ್ರತೀ 5ರಿಂದ 10 ನಿಮಿಷಗಳಿಗೊಮ್ಮೆ ತಮ್ಮ ವಾಟ್ಸ್ಆ್ಯಪ್, ಫೇಸ್‍ಬುಕ್ ಅಥವಾ ಇನ್ನಿತರ ಸಾಮಾಜಿಕ ಜಾಲತಾಣವನ್ನು ನೋಡುವ ಅಭ್ಯಾಸ ಬೆಳೆಸಿ ಕೊಂಡಿರುತ್ತಾರೆ. ಕೆಲ ಹೊತ್ತು ಮೊಬೈಲ್ ಬಳಸದಿದ್ದಲ್ಲಿ ತೀವ್ರ ರೀತಿಯ ಅಸಹನೆ, ಚಡಪಡಿಕೆ, ಬೇಸರವುಂಟಾಗುತ್ತದೆ ಎಂದಾದಲ್ಲಿ ಮೊಬೈಲ್ ಬಳಕೆಗೆ ಕಡಿವಾಣ ಹಾಕುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಶಾಂತಿ– ಸಮಾಧಾನದಿಂದ ಇರಲು, ಆರೋಗ್ಯದ ಕಡೆ ಒಂದಷ್ಟು ಹೆಚ್ಚು ಗಮನಹರಿಸಲು ಹಾಗೂ ಗುರಿ ತಲುಪಲು, ಕನಸುಗಳನ್ನು ನನಸು ಮಾಡಿಕೊಳ್ಳಲು ಮೊಬೈಲ್‌ನಂತಹ ತಂತ್ರಜ್ಞಾನ ಸಾಧನಗಳ ಬಳಕೆಯಲ್ಲಿ ಸ್ವಯಂ ನಿಗ್ರಹ ಸಾಧಿಸುವುದು ಅತ್ಯಗತ್ಯ. ಎಳೆಯ ವಯಸ್ಸಿನಿಂದಲೇ ಮೊಬೈಲ್ ಹಾಗೂ ಇತರ ತಂತ್ರಜ್ಞಾನವನ್ನು ಅವಶ್ಯಕತೆ ಆಧಾರಿತವಾಗಿ ಬಳಕೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಲು ಅಗತ್ಯವಾದ ಶಿಕ್ಷಣ, ತರಬೇತಿಯನ್ನು ನೀಡುವ ಅಗತ್ಯವಿದೆ.

ನಿಸರ್ಗದ ಒಡನಾಟವನ್ನು ಹೆಚ್ಚಿಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ಸೂರ್ಯೋದಯ, ಚಂದ್ರೋದಯ, ನಕ್ಷತ್ರಗಳನ್ನು ವೀಕ್ಷಿಸಿ, ಆನಂದಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ತಂಗಾಳಿ ಸೇವಿಸುತ್ತಾ, ಆಕಾಶದೆಡೆ ದಿಟ್ಟಿಸುತ್ತಾ, ಹಕ್ಕಿಗಳ ಚಿಲಿಪಿಲಿ ಗಾನ ಆಲಿಸುತ್ತಾ, ಪ್ರಕೃತಿಯಲ್ಲಿ ಮನಸ್ಸನ್ನು ತಲ್ಲೀನಗೊಳಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವತ್ತ ನಮ್ಮ ಚಿತ್ತ ಹರಿಸಬೇಕಿದೆ.

ಇಷ್ಟದ ಪತ್ರಿಕೆ, ಪುಸ್ತಕದ ಓದು, ನೆಚ್ಚಿನ ಸಂಗೀತ ಆಲಿಸುವಿಕೆ, ಮೈ ಮನಗಳನ್ನು ಹಗುರಾಗಿಸುವ ವ್ಯಾಯಾಮ, ಆಟಗಳಲ್ಲಿ ಸಕ್ರಿಯವಾಗುವ ಚಟು ವಟಿಕೆಗಳು ನಮ್ಮ ಆರೋಗ್ಯಕ್ಕೆ ಇಂಬು ಕೊಡುತ್ತವೆ. ದಿನದ ಒಂದಷ್ಟು ಸಮಯ ನಮ್ಮ ಉಸಿರಾಟದ ಲಯದ ಕಡೆ ಮನಸ್ಸನ್ನು ತಿರುಗಿಸುತ್ತಾ ಮೌನ, ಧ್ಯಾನದಲ್ಲಿ ತೊಡಗಿಕೊಳ್ಳುವುದು ಪ್ರಯೋಜನಕಾರಿ.

ಸಾಮಾಜಿಕ ಜಾಲತಾಣಗಳ ಅತಿಬಳಕೆಯಿಂದ ಅಡ್ಡಪರಿಣಾಮಗಳು ಹೆಚ್ಚುತ್ತಿವೆ. ಮಕ್ಕಳಿಗೆ ಇದನ್ನು ಮನಗಾಣಿಸುವ ಕೆಲಸವನ್ನು ಪೋಷಕರು ಮಾಡ ಬೇಕು. ಆರೋಗ್ಯಕರ ಹವ್ಯಾಸಗಳನ್ನು ಎಳೆಯರಲ್ಲಿ ರೂಢಿಸಲು ಗಂಭೀರವಾಗಿ ಪ್ರಯತ್ನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT