ಸೋಮವಾರ, ಡಿಸೆಂಬರ್ 9, 2019
22 °C

ಎನ್‌ಪಿಎಸ್ ರದ್ದತಿಯ ಔಚಿತ್ಯ

Published:
Updated:
Deccan Herald

ಚಿಕ್ಕಮಗಳೂರಿನಲ್ಲಿ ನಿವೃತ್ತ ಶಿಕ್ಷಕರೊಬ್ಬರಿದ್ದಾರೆ. 1997ರಿಂದ ಕೆಲಸ ಮಾಡುತ್ತಿದ್ದರು, 2012ರಲ್ಲಿ ಅವರ ಉದ್ಯೋಗ ಕಾಯಂ ಆಯಿತು. 2017ರಲ್ಲಿ ಅವರು ನಿವೃತ್ತರಾದಾಗ ₹ 32 ಸಾವಿರ ವೇತನ ಪಡೆಯುತ್ತಿದ್ದರು. ನಿವೃತ್ತಿ ವೇತನ ಪದ್ಧತಿಯಲ್ಲಿರುತ್ತಿದ್ದರೆ ಅವರಿಗೆ ₹ 16 ಸಾವಿರ ಪಿಂಚಣಿ ಬರುತ್ತಿತ್ತು. ಆದರೆ ಅವರು ಎನ್‌ಪಿಎಸ್ ನೌಕರರಾಗಿದ್ದರು. ಈಗ ನಿವೃತ್ತಿ ಸೌಲಭ್ಯವಾಗಿ ₹ 665 ಪಡೆಯುತ್ತಿದ್ದಾರೆ!

ಎನ್‌ಪಿಎಸ್ ಪದ್ಧತಿಯಲ್ಲಿ ನಿವೃತ್ತಿಯಾದ ನಂತರ ನೌಕರನಿಗೂ ಸರ್ಕಾರಕ್ಕೂ ಯಾವ ಸಂಬಂಧವೂ ಇಲ್ಲ. ನಿವೃತ್ತಿ ನಂತರ ಎನ್‌ಎಸ್‌ಡಿಎಲ್ ಎಂಬ ಕಂಪನಿಗೂ ನೌಕರನಿಗೂ ಸಂಬಂಧ. ನೌಕರನೂ ಸರ್ಕಾರವೂ ನೌಕರನ ಹೆಸರಿನಲ್ಲಿ ಹೂಡಿಕೆ ಮಾಡಿದ ಹಣದಲ್ಲಿ ಎನ್‌ಎಸ್‌ಡಿಎಲ್, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಬಂದ ಹಣದಲ್ಲಿ ಶೇ 60ರಷ್ಟನ್ನು ನಿವೃತ್ತಿಯ ವೇಳೆ ನೌಕರನಿಗೆ ಕೊಡುತ್ತದೆ. ಉಳಿದ ಶೇ 40ರಷ್ಟು ಮೊತ್ತದ ಆಧಾರದಲ್ಲಿ ತಿಂಗಳ ನಿವೃತ್ತಿ ಸೌಲಭ್ಯ ಸಿಗುತ್ತದೆ. ಅದು ಒಮ್ಮೆ ನಿಗದಿ ಮಾಡಲ್ಪಟ್ಟರೆ ಶಾಶ್ವತವಾಗಿ ಅಷ್ಟೇ ಇರುತ್ತದೆ. ಹಳೆಯ ನಿವೃತ್ತಿ ವೇತನ ಪದ್ಧತಿಯಲ್ಲಾದರೆ ಜೀವನಾವಶ್ಯಕ ವೆಚ್ಚ ಏರಿದಂತೆ ನೌಕರರ ವೇತನದಲ್ಲಿ ತುಟ್ಟಿ ಭತ್ಯೆ ಏರಿಕೆಯಾಗಿ, ಪಿಂಚಣಿಯಲ್ಲೂ ಏರಿಕೆಯಾಗುತ್ತಿತ್ತು.

2006ರ ಏಪ್ರಿಲ್‌ನಿಂದ ರಾಜ್ಯದಲ್ಲಿ ಎನ್‌ಪಿಎಸ್ ಜಾರಿಗೆ ಬಂತು. ಈಗ ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದೆಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ, ನಿಗಮ-ಮಂಡಳಿಗಳ ನೌಕರರಿಗೆ ಎನ್‌ಪಿಎಸ್ ಜಾರಿಯಾಗಿದೆ. ರಕ್ಷಣಾ ಇಲಾಖೆಯಲ್ಲಿ ಮತ್ತು ಶಾಸಕ– ಸಂಸದರಿಗೆ ಮಾತ್ರ ಹಳೆಯ ನಿವೃತ್ತಿ ವೇತನ ಪದ್ಧತಿ ಉಳಿಸಿಕೊಳ್ಳಲಾಗಿದೆ. ಎನ್‌ಪಿಎಸ್ ರದ್ದು ಮಾಡಿ ಹಳೆಯ ಪದ್ಧತಿ ಜಾರಿಗೊಳಿಸುವುದಾಗಿ ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ರಾಜ್ಯದಲ್ಲಿ ಈಗ ಸುಮಾರು ಮೂರೂವರೆ ಲಕ್ಷ ಎನ್‌ಪಿಎಸ್‌ ನೌಕರರು ಇದ್ದಾರೆ.

ಹಳೆಯ ಪದ್ಧತಿ ಜಾರಿಗೆ ಬಂದೊಡನೆ ನೌಕರರಿಗೆ ಜಿಪಿಎಫ್ ಪ್ರಾರಂಭವಾಗುವುದರಿಂದ ಎನ್‌ಎಸ್‌ಡಿಎಲ್‌ನಲ್ಲಿ ಸರ್ಕಾರ ಮತ್ತು ನೌಕರರು ಮಾಡಿರುವ ಹೂಡಿಕೆ ಹಿಂತೆಗೆದುಕೊಳ್ಳಬಹುದು. ಆಗ ಸರ್ಕಾರದ ಕೈಗೆ ದೊಡ್ಡ ಬಂಡವಾಳ ಸಿಗುತ್ತದೆ.

ಮಾರುಕಟ್ಟೆಯಲ್ಲಿ ಹೂಡಿಕೆ ಜಾಸ್ತಿಯಾಗಬೇಕು ಎಂಬ ಹೊಸ ಚಿಂತನೆಯಿಂದ ಎನ್‌ಪಿಎಸ್ ಬಂತು. ಆದರೆ ಕಾನೂನುಗಳು ಹಳೆಯವೇ ಇವೆ. ಉದಾಹರಣೆಗೆ ಒಂದು ಕಚೇರಿಯಲ್ಲಿ ಹತ್ತು ಸಿಬ್ಬಂದಿ ಇರಬೇಕಾದಲ್ಲಿ ನಾಲ್ವರೇ ಸಿಬ್ಬಂದಿ ಇರುತ್ತಾರೆ. ಆಗ ಉಳಿದ ಆರು ಮಂದಿಯ ಕೆಲಸಗಳನ್ನೂ ನಾಲ್ವರೇ ಮಾಡಬೇಕು. ಅದಕ್ಕಾಗಿ ಹೆಚ್ಚುವರಿ ವೇತನವಿಲ್ಲ. ನೌಕರನ ಇಡೀ ಜೀವನದ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಂಡಾಗ ಹೆಚ್ಚುವರಿ ವೇತನ ಕೊಡದೆಯೇ ಹೆಚ್ಚುವರಿ ಕೆಲಸ ತೆಗೆದುಕೊಳ್ಳುವುದು ಸರಿ. ಸರ್ಕಾರಕ್ಕೆ ಉದ್ಯೋಗಿಯ ಮೇಲೆ ಬದ್ಧತೆ ಇಲ್ಲ ಎಂದಾಗ ಇನ್ನೊಬ್ಬ ನೌಕರನ ಕೆಲಸವನ್ನು ಮಾಡುವವನಿಗೆ ಇನ್ನೊಬ್ಬನ ವೇತನವನ್ನೂ ಕೊಡಬೇಕಾಗಿದ್ದು ಸಹಜನ್ಯಾಯ. ಆದರೆ ಪ್ರಸ್ತುತ ಕಾನೂನು ಇದನ್ನು ಮಾಡಿಲ್ಲ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವ ಪಿಂಚಣಿ ಯೋಜನೆಗಳು ಎನ್‌ಪಿಎಸ್ ಮಾದರಿಯಲ್ಲಿವೆ. ಆದರೆ ಅಲ್ಲಿ ನಿರ್ದಿಷ್ಟ ಕೆಲಸಕ್ಕೆ ನೇಮಕಗೊಂಡವರು ಆ ಕೆಲಸ ಮಾಡಿದ ನಂತರದ ಅವಧಿಯಲ್ಲಿ ಬೇರೆ ಉದ್ಯೋಗ ಮಾಡಿ ಆದಾಯ ಗಳಿಸುವ ಅವಕಾಶವಿದೆ. ವೇತನವು ಜೀವನಾವಶ್ಯಕತೆಗಿಂತ ಜಾಸ್ತಿ ಇರುತ್ತದೆ. ಭಾರತದಲ್ಲಿ ಹಾಗಿಲ್ಲ. ಎನ್‌ಪಿಎಸ್‌ ನೌಕರನೂ ಹಳೆಯ ಪಿಂಚಣಿ ವ್ಯವಸ್ಥೆ ನೌಕರನೂ ಯಾವ ವೇಳೆಯಲ್ಲೇ ಆದರೂ ಸರ್ಕಾರ ವಹಿಸಿದ ಕೆಲಸ ಮಾಡಬೇಕು. ಹೀಗಿರುವಾಗ ಹಳೆಯ ವ್ಯವಸ್ಥೆಯ ನೌಕರನ ಮೇಲೆ ಸರ್ಕಾರ ತೋರಿಸುವ ಬದ್ಧತೆಯನ್ನೇ ಇವನ ಮೇಲೂ ತೋರಿಸಬೇಕಲ್ಲವೇ?

ವೇತನದ ಏರಿಕೆ ಜೀವನಾವಶ್ಯಕತೆಯ ಆಧಾರದಲ್ಲಿ ನಡೆಯುತ್ತದೆ. ಅದು ನಿವೃತ್ತಿ ವೇತನ ಪಡೆಯುವವನಿಗೂ ಎನ್‌ಪಿಎಸ್ ನೌಕರನಿಗೂ ಸಮಾನ. ಆದರೆ ಎನ್‌ಪಿಎಸ್ ನೌಕರ ಶೇ 10ರಷ್ಟನ್ನು ಎನ್‌ಎಸ್‌ಡಿಎಲ್‌ನಲ್ಲಿ ಹೂಡಿಕೆ ಮಾಡಿದಾಗ ನಿವೃತ್ತಿ ವೇತನ ಪಡೆಯುವ ನೌಕರನಿಗೆ ಎನ್‌ಪಿಎಸ್‌ ನೌಕರನಿಗಿಂತ ಜಾಸ್ತಿ ವೇತನ ಕೈಗೆ ಸಿಗುತ್ತದೆ. ವೇತನ ಮತ್ತು ನಿವೃತ್ತಿ ವೇತನಗಳೆರಡೂ ಜಾಸ್ತಿ ಸಿಗುವುದು ಹಳೆಯ ನಿವೃತ್ತಿ ವೇತನದವರಿಗೆ. ಇಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸಾಂವಿಧಾನಿಕ ತಾತ್ವಿಕತೆಯೇ ನಾಶವಾಗುತ್ತದೆ. ನೌಕರರ ವೇತನದ ಭಾಗವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿ ಪಿಂಚಣಿ ಕೊಡುವ ಕಂಪನಿಗಳು ಹಲವು ದೇಶಗಳಲ್ಲಿ ದಿವಾಳಿಯಾಗಿವೆ. ‘ಪಿಂಚಣಿಯು ಸರ್ಕಾರಿ ನೌಕರರಿಗೆ ಇಳಿವಯಸ್ಸಿನಲ್ಲಿ ನೀಡುವ ಹಕ್ಕಿನ ಅಂಶ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಒಟ್ಟು ಸಾಮಾಜಿಕ ಸನ್ನಿವೇಶದಲ್ಲಿ 2006ರ ನಂತರ ನೇಮಕಗೊಂಡ ಸರ್ಕಾರಿ ನೌಕರರಿಗೆ ನಿವೃತ್ತಿ ವೇತನವಿಲ್ಲವೇ ಎನ್ನುವುದು ಸ್ಪಷ್ಟವಾಗಿಲ್ಲ. ಆದ್ದರಿಂದ ಎನ್‌ಪಿಎಸ್‌ನ ಸಂಕಷ್ಟದ ಬಗೆಗಿನ ಚಿಂತನೆ ವ್ಯಾಪಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಇದೇ 12ರಂದು ಎನ್‌ಪಿಎಸ್ ನೌಕರರ ಸಂಘ ನಡೆಸುತ್ತಿರುವ ‘ಬೆಳಗಾವಿ ಚಲೋ’ ಪ್ರಯತ್ನವನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು