ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸಭೆ ಮತ್ತು ಲೈಂಗಿಕ ಹಗರಣ

ಆಧುನಿಕ ಕಾಲದ ಅಪರಿಮಿತ ಸವಲತ್ತುಗಳು, ಧನ ಬಲ, ಅಧಿಕಾರ ಬಲ... ನೈತಿಕ ಅಧಃಪತನಕ್ಕೆ ಕಾರಣವಾಗುತ್ತಿವೆಯೇ?
Last Updated 16 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಆಧ್ಯಾತ್ಮಿಕ ಮಾರ್ಗದರ್ಶನದ ಜೊತೆಗೆ ಲೌಕಿಕ ಚಪಲಗಳನ್ನೂ ತೀರಿಸಿಕೊಳ್ಳುವ ಆರೋಪ ಹೊತ್ತ ಸ್ವಯಂಘೋಷಿತ ಗುರುಗಳ ಪಟ್ಟಿಯಲ್ಲಿ ಗುರ್ಮೀತ್‌ ರಾಮ್ರಹೀಮ್, ಅಸಾರಾಂ ಬಾಪು, ಸಂತ ರಾಮ್‌ ಪಾಲ್,ನಿತ್ಯಾನಂದ ಸ್ವಾಮಿ, ಆಶು ಮಹರಾಜ್ ಮೊದಲಾದವರ ಹೆಸರುಗಳಿವೆ. ಶತಮಾನಗಳ ಇತಿಹಾಸ ಹೊಂದಿದ ಕೆಲವು ಮಠಗಳ ಮಠಾಧಿಪತಿಗಳು ಭಕ್ತರ ಮೇಲೆ ತಮ್ಮ ಆಶ್ರಮಗಳಲ್ಲೇ ಅತ್ಯಾಚಾರಗಳನ್ನು ನಡೆಸಿ, ನ್ಯಾಯಾಲಯಗಳಿಂದ ಶಿಕ್ಷಿತರಾಗಿದ್ದಿದೆ. ಇನ್ನೂ ಕೆಲವರು ನ್ಯಾಯಾ
ಲಯಗಳಲ್ಲಿ ವಿಚಾರಣೆಗಳನ್ನು ಎದುರಿಸುತ್ತಿದ್ದಾರೆ.

ಕಾಯಿಲೆ ಗುಣಪಡಿಸುವೆನೆಂದು ರೋಗಿಗಳನ್ನು ವಂಚಿಸುತ್ತಿದ್ದ ಅಸ್ಲಂ ಬಾಬಾನಂಥ ಬ್ಲೇಡ್ ಬಾಬಾಗಳು ಜೈಲು ಸೇರಿದ್ದಾರೆ. ದೇಶದಲ್ಲಿ ಸಮಾಜ ಸುಧಾರಣೆ, ಆರೋಗ್ಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಹೆಸರು ಮಾಡಿರುವ ಕ್ರೈಸ್ತ ಸಮುದಾಯದ ಪಾದ್ರಿಗಳು ಸಹ ಈಗ ‘ನಮ್ಮನ್ನೇಕೆ ಬಿಟ್ಟಿದ್ದೀರಿ’ ಎನ್ನುವಂತೆ ಇಂಥ ಪ್ರಕರಣಗಳಲ್ಲಿ ಸಿಲುಕಿ ಸುದ್ದಿಯಾಗತೊಡಗಿದ್ದಾರೆ.

ನಮ್ಮ ನಾಡಿನಲ್ಲಿ ಒಂದೇ ಊರಲ್ಲಿ ಹಲವಾರು ಮಠಗಳಿರುತ್ತವೆ, ಗುರುಗಳಿರುತ್ತಾರೆ. ಕೆಲವು ಮಠಗಳಿಗೆ ಶತಮಾನಗಳ ಇತಿಹಾಸವಿದೆ. ಕೆಲವಕ್ಕೆ ದೇಶವ್ಯಾಪಿ ಭಕ್ತರೂ ಇದ್ದಾರೆ. ಸಕಲ ಸಮುದಾಯಗಳು ಆದರಿಸುವ ಜಗದ್ಗುರುಗಳೂ ಇದ್ದಾರೆ. ಆದರೆ, ಕ್ಯಾಥೊಲಿಕ್‌ ಕ್ರೈಸ್ತರಿಗೆ ಪೋಪ್‌ ಒಬ್ಬರೇ ಜಗದ್ಗುರು. ಅವರು ಇಟಲಿ ದೇಶದ ರೋಮ್ ಪಟ್ಟಣದಲ್ಲಿ (ವ್ಯಾಟಿಕನ್ ನಿವಾಸ) ನೆಲೆಸಿರುತ್ತಾರೆ. ಸ್ಥೂಲವಾದ ಅಧಿಕಾರದ ಪಿರಮಿಡ್‌ನಲ್ಲಿ ನಂತರದ ಸ್ಥಾನದಲ್ಲಿ ಕಾರ್ಡಿನಲ್‌, ಆರ್ಚ್ ಬಿಷಪ್‌, ಬಿಷಪ್‌, ವಿಕಾರ್‌ ಜನರಲ್‌, ಡೀನರಿ, ವಿಚಾರಣಾ ಗುರುಗಳು, ಸಹಾಯಕ ಗುರುಗಳು ಇರುತ್ತಾರೆ. ಇವರೆಲ್ಲಾ ಸನ್ಯಾಸ ದೀಕ್ಷೆ ಪಡೆದ ಯಾಜಕರು. ಈ ಯಾಜಕರನ್ನು ಗುರು, ಸ್ವಾಮಿ, ಫಾದರ್, ಪ್ರೀಸ್ಟ್, ಪಾದ್ರಿ ಎನ್ನುತ್ತಾರೆ. ಅಲ್ಲದೇ ಕ್ಯಾಥೊಲಿಕರಲ್ಲಿ ವಿವಿಧ ಸನ್ಯಾಸಿ ಸಭೆಗಳ ಗುರುಗಳು, ಸಹೋದರರು, ಕನ್ಯಾಮಠಗಳ (ಕಾನ್ವೆಂಟ್) ಕ್ರೈಸ್ತ ಸನ್ಯಾಸಿನಿಯರೂ ಇದ್ದಾರೆ.

ಕ್ರೈಸ್ತರ ಇನ್ನೊಂದು ಪಂಥ ‘ಪ್ರೊಟೆಸ್ಟಂಟ್’. ಕ್ರೈಸ್ತರಲ್ಲಿರುವ ಪೂಜಾರಿಗಳು ಗುರುಗಳೂ ಆಗಿರುತ್ತಾರೆ.ಸಂಸಾರಿಗಳಾಗಿರುವ ಈ ಪ್ರೊಟೆಸ್ಟಂಟ್ ಪಂಥದ ಗುರುಗಳನ್ನು ಅಯ್ಯಾ, ಪಾದ್ರಿ, ಪಾಸ್ಟರ್ ಎಂದು ಕರೆಯುತ್ತಾರೆ. ನಾಡಿನ ಸನ್ಯಾಸಿಗಳು ಕಾವಿ ತೊಟ್ಟರೆ, ಕ್ರೈಸ್ತ ಯಾಜಕ ಸಮುದಾಯದ ಸಮವಸ್ತ್ರವು ಬಿಳಿ ಬಣ್ಣದ ಪೋಷಾಕು.

‘ತಾವು ಯೇಸುಸ್ವಾಮಿಯ ಶಿಷ್ಯ, ಸಂತ ಥಾಮಸ್‌ರಿಂದಲೇ ನೇರವಾಗಿ ಜ್ಞಾನಸ್ನಾನ ಪಡೆದ ಕ್ರೈಸ್ತರು’ ಎಂದು ಹೇಳಿಕೊಳ್ಳುವ, ದೇಶವಿದೇಶಗಳಿಗೂ ಕ್ರೈಸ್ತ ಯಾಜಕರು ಮತ್ತು ಕ್ರೈಸ್ತ ಸನ್ಯಾಸಿನಿಯರನ್ನು ರವಾನಿಸುವ ಕೇರಳ ರಾಜ್ಯದಿಂದ ಈಚೆಗೆ ಲೈಂಗಿಕ ಅತ್ಯಾಚಾರದ ಹಗರಣಗಳು ಒಂದಾದ ಮೇಲೊಂದರಂತೆ ವರದಿಯಾಗತೊಡಗಿವೆ. ಅವುಗಳಲ್ಲಿ ಬಹಳಷ್ಟು ಪ್ರಕರಣಗಳು ಪೊಲೀಸ್ ಠಾಣೆ ತಲುಪಿ ಸ್ಥಳೀಯವಾಗಿ ಮಾತ್ರ ಸದ್ದು ಮಾಡಿದವು. ಆದರೆ, ಮಹಿಳೆಯೊಬ್ಬಳು ತನ್ನ ಪಾಪನಿವೇದನೆಯಲ್ಲಿ ಪ್ರಸ್ತಾಪಿಸಿದ ಅನೈತಿಕ ಸಂಬಂಧವನ್ನು ಬಂಡವಾಳವಾಗಿರಿಸಿಕೊಂಡು, ಪಾಪನಿವೇದನೆ ಕೇಳಿದ ಪಾದ್ರಿಯು ಅವಳನ್ನು ಹೆದರಿಸಿ ತನ್ನ ಲೈಂಗಿಕ ಆಸೆಗೆ ಬಳಸಿದ್ದಲ್ಲದೇ, ಸಹೋದ್ಯೋಗಿಗಳಲ್ಲೂ ಹಂಚಿಕೊಂಡ ಆರೋಪದ ಪ್ರಕರಣ ದೇಶದ ಉದ್ದಗಲಕ್ಕೂ ಸಂಚಲನ ಮೂಡಿಸಿತು. ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿತು. ಆರೋಪಿತ ಪಾದ್ರಿಗಳನ್ನು ಧರ್ಮಸಭೆ ಅಮಾನತಿನಲ್ಲಿರಿಸಿದೆ. ಮಹಿಳಾ ಆಯೋಗವಂತೂ ಪಾಪನಿವೇದನೆ ಸಂಸ್ಕಾರವನ್ನೇ ರದ್ದುಪಡಿಸುವಂತೆ ಆಗ್ರಹಿಸಿತ್ತು. ಇದಾಗಿ ಸ್ವಲ್ಪ ಸಮಯದ ನಂತರ, ‘ಬಿಷಪ್ ಅವರೇ ತನ್ನ ಮೇಲೆ ಎರಡು ವರ್ಷಗಳಲ್ಲಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾರೆ’ ಎಂದು ಕ್ರೈಸ್ತ ಸನ್ಯಾಸಿನಿಯೊಬ್ಬರು ಆರೋಪ ಮಾಡಿದರು. ಈ ಎರಡು ಘಟನೆಗಳು ಕ್ರೈಸ್ತ ಸಮುದಾಯದಲ್ಲಿ ತಲ್ಲಣ ಮೂಡಿಸಿವೆ.

33 ವರ್ಷಗಳ ಹಿಂದಿನ ಘಟನೆಯೊಂದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 1990ರ ಜುಲೈ 13ರಂದು, ಉತ್ತರ ಪ್ರದೇಶದ ಗಜರೌಲ ಎಂಬ ಊರಲ್ಲಿನ ಕಾನ್ವೆಂಟ್‌ಗೆ ನುಗ್ಗಿದ ದುಷ್ಕರ್ಮಿಗಳಿಬ್ಬರು ಇಬ್ಬರು ಕ್ರೈಸ್ತ ಸನ್ಯಾಸಿನಿಯರ ಮೇಲೆ ಅತ್ಯಾಚಾರ ನಡೆಸಿದ್ದರು. ಮರುದಿನವೇ ದೆಹಲಿಯ ಇಂಡಿಯಾ ಗೇಟ್ ಎದುರು, ಸಿಬಿಸಿಐ (ಕ್ಯಾಥೊಲಿಕ್‌ ಬಿಷಪ್ಸ್ ಕಾನ್ಫರನ್ಸ್ ಆಫ್ ಇಂಡಿಯಾ) ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.

ಇಂದು, ‘ಜಲಂಧರ್‌ನ ಬಿಷಪ್ ಒಬ್ಬರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಕ್ರೈಸ್ತ ಸನ್ಯಾಸಿನಿಯೊಬ್ಬರು ಆರೋಪಿಸಿದರೆ, ‘ಆರೋಪ ಸಿದ್ಧವಾಗುವವರೆಗೆ ಆರೋಪಿ ತಪ್ಪಿತಸ್ಥನಲ್ಲ’ ಎಂಬ ವಾದದ ಗುರಾಣಿಯನ್ನು ಹಿಡಿದು, ಭಾರತದ ಬಿಷಪ್‌ರ ಒಕ್ಕೂಟವು ಆರೋಪಿ ಬಿಷಪ್‌ರನ್ನು ರಕ್ಷಿಸುತ್ತಿದೆ. ಬೆಂಕಿಯಿಲ್ಲದೆ ಹೊಗೆಯಾಡದು ಎಂಬುದು ನಿಜವೆನ್ನುವಂತೆ, ಬಿಷಪ್‌ರ ಆಪ್ತವಲಯದ ಸಭೆಯೊಂದು ಸಂತ್ರಸ್ತ ಸನ್ಯಾಸಿನಿಯ ಗುರುತು ಬಹಿರಂಗಪಡಿಸಿ, ಆ ಸಂಬಂಧದ ಕಾನೂನನ್ನು ಕೆಣಕುವ
ಕುಚೇಷ್ಟೆ ಮಾಡಿದ ಪ್ರಸಂಗವೂ ನಡೆದಿದೆ.

ಲೈಂಗಿಕ ಶೋಷಣೆಗೊಳಗಾದ ಕ್ರೈಸ್ತ ಸನ್ಯಾಸಿನಿಯು ಕೋಟಯಂ ಕಾನ್ವೆಂಟ್‌ಗೆ ಸೇರಿದವರು. ಇಲ್ಲಿನ ಐವರು ಸನ್ಯಾಸಿನಿಯರು ಹಲವು ಸಂಘಟನೆಗಳ ಜೊತೆ ಸೇರಿ, ತ್ವರಿತ ಹಾಗೂ ಪಾರದರ್ಶಕ ತನಿಖೆಗೆ ಒತ್ತಾಯಸಿ ಸೆ. 8
ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ವಿಳಂಬಿತ ತನಿಖೆಗೆ ರಾಜಕೀಯ ಮತ್ತು ಹಣದ ಪ್ರಭಾವ ಕೆಲಸ ಮಾಡುತ್ತಿದೆ ಎಂಬುದು ಪ್ರತಿಭಟನಾಕಾರರ ಆತಂಕ. ಈ ಕುರಿತು ನ್ಯಾಯಾಲಯದ ಬಾಗಿಲನ್ನೂ ತಟ್ಟಲಾಗಿದೆ.

ವಿವಾದಗ್ರಸ್ತ ಬಿಷಪ್‌ರು, ತಮ್ಮ ಮೇಲೆ ಆರೋಪ ಬಂದ ಕೂಡಲೇ ತಮ್ಮ ಸ್ಥಾನದಿಂದ ಕೆಳಗಿಳಿದು ಮುಕ್ತವಾದ ತನಿಖೆಗೆ ಅವಕಾಶ ಮಾಡಿಕೊಟ್ಟಿದ್ದರೆ ಅವರದು ಆದರ್ಶದ ನಡೆಯಾಗುತ್ತಿತ್ತು. ಆಧುನಿಕ ಕಾಲದ ಅಪರಿ
ಮಿತ ಸವಲತ್ತುಗಳು, ಧನ ಬಲ, ಅಧಿಕಾರ ಬಲ ಕ್ಯಾಥೊಲಿಕರ ಯಾಜಕ ಬಳಗದ ಸನ್ಯಾಸಿ ಜೀವನದ ‘ವಿಧೇಯತೆ, ಬಡತನ ಮತ್ತು ಬ್ರಹ್ಮಚರ್ಯೆ’ಯ ಪ್ರತಿಜ್ಞೆಗಳ ನೈತಿಕ ಅಧಃಪತನಕ್ಕೆ ಮೂಲವಾದವೇ? ಯಾರೂ ಮುಟ್ಟರು ಎಂಬ ಭಂಡ ಧೈರ್ಯವೇ? ಪ್ರಕರಣಗಳು ಹೆಚ್ಚಲು, ಮರ್ಯಾದೆಗಂಜುವ ಸ್ಥಳೀಯ ಕ್ರೈಸ್ತ ಸಮುದಾಯ ಕಾರಣವಾಯಿತೇ?

ಕಾವಿಗೆ ಕೊಳೆ ಅಂಟಿದಂತೆ, ಬಿಳಿ ಬಟ್ಟೆಗೂ ಅಳಿಸಲಾಗದ ಕಪ್ಪು ಬಣ್ಣ ಮೆತ್ತಿಕೊಳ್ಳತೊಡಗಿದೆ. ಪೋಪ್ ಫ್ರಾನ್ಸಿಸ್ ಅವರು ಈಚೆಗೆ ಐರ್ಲೆಂಡ್‌ಗೆ ಭೇಟಿಕೊಟ್ಟಾಗ ಆಡಿದ್ದ, ‘(ಲೈಂಗಿಕ ಹಗರಣಗಳ ಕುರಿತ) ದೂರುಗಳನ್ನು ನ್ಯಾಯ
ಬದ್ಧವಾಗಿ ಪರಿಹರಿಸದಿದ್ದರೆ, ಅದು ಕ್ಯಾಥೊಲಿಕ್‌ ಸಮಾಜಕ್ಕೆ ನಾಚಿಕೆ ತರುವ ಸಂಗತಿ’ ಎಂಬ ಮಾತು ಸಮಾಜದ ಆತ್ಮಾವಲೋಕನದಂತಿದೆ. ಯಾಜಕರು ಯೇಸುಕ್ರಿಸ್ತರ ಪ್ರತಿರೂಪ ಎಂಬ ಕ್ಯಾಥೋಲಿಕ್‌ ಕ್ರೈಸ್ತರ ವಿಶ್ವಾಸಕ್ಕೆ ಧಕ್ಕೆ ಉಂಟಾಗುವುದನ್ನು ತಡೆಯಲು ಪ್ರಗತಿಪರ ಧೋರಣೆಯ ಪೋಪ್ ಫ್ರಾನ್ಸಿಸ್ ಅವರು ಸುಧಾರಣಾ ಕ್ರಮಗಳನ್ನು ಜರುಗಿಸಿಯಾರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT