ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಠಗಳ ಪೋಷಣೆ ಮತ್ತು ಭಕ್ತರು

ಸರ್ಕಾರದಿಂದ ಧನಸಹಾಯ ಪಡೆದರೆ ಭಕ್ತರಿಗೆ ಮುಜುಗರವಾಗುತ್ತದೆ ಎಂದು ಭಾವಿಸಿದ ಅಪರೂಪದ ಪ್ರಸಂಗ...
Last Updated 23 ಫೆಬ್ರುವರಿ 2021, 19:45 IST
ಅಕ್ಷರ ಗಾತ್ರ

ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಈಚೆಗೆ ವಿಜಯಪುರಕ್ಕೆ ಭೇಟಿ ನೀಡಿದಾಗ, ಒಂದು ಅಪರೂಪದ ಸಂಗತಿಯನ್ನು ಬಹಿರಂಗಪಡಿಸಿದರು. ಸಚಿವರು ಹೇಳಿದ ವಿವರ ಇಷ್ಟು: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2019- 20ರ ಬಜೆಟ್‍ನಲ್ಲಿ ಘೋಷಿಸಿದ ಪ್ರಕಾರ, ಮಠ, ಮಂದಿರ, ಆಶ್ರಮಗಳಿಗೆ ಒಟ್ಟು ₹ 45.75 ಕೋಟಿ ಅನುದಾನ ನೀಡಿದ್ದಾರೆ. ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ ಅವರ ಜ್ಞಾನಯೋಗಾಶ್ರಮಕ್ಕೂ ₹ 50 ಲಕ್ಷ ಪಾವತಿ ಮಾಡಲಾಗಿತ್ತು. ಆದರೆ ಶ್ರೀಗಳು ಈ ಹಣವನ್ನು ಸರ್ಕಾರಕ್ಕೆ ವಾಪಸ್‌ ಮಾಡಿದ್ದಾರೆ’.

‘ಸಿದ್ಧೇಶ್ವರ ಶ್ರೀಗಳ ಪರವಾಗಿ ಆಶ್ರಮದ ಬಸವಲಿಂಗ ಸ್ವಾಮಿಗಳು ಸರ್ಕಾರಕ್ಕೆ ಪತ್ರ ಬರೆದು, ಜನರಿಗೆ ಸಾಮಾಜಿಕ, ನೈತಿಕ ಮೌಲ್ಯದ ಶಿಕ್ಷಣ ನೀಡಲು ಹಾಗೂ ಯೋಗ ತರಬೇತಿ ನೀಡುವ ಉದ್ದೇಶದಿಂದ ಜ್ಞಾನಯೋಗಾಶ್ರಮವನ್ನು ಆರಂಭಿಸಲಾಗಿದೆ. ಆಶ್ರಮದ ಭಕ್ತರಿಂದ ಅವಶ್ಯವಿದ್ದಾಗ ಸಹಾಯ ಪಡೆಯುತ್ತೇವೆ. ಭಕ್ತರು ಆಶ್ರಮಕ್ಕೆ ಉದಾರವಾಗಿ ಎಲ್ಲ ರೀತಿಯ ನೆರವು ನೀಡುತ್ತಿದ್ದಾರೆ. ಸರ್ಕಾರದ ಸಹಾಯಧನದ ಅವಶ್ಯಕತೆ ಇಲ್ಲ. ಆದಕಾರಣ, ಸರ್ಕಾರ ನೀಡಿದ ಅನುದಾನವನ್ನು ಗೌರವಪೂರ್ವಕವಾಗಿ ವಾಪಸ್‌ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

‘ಈ ಹಿಂದೆ ಜ್ಞಾನಯೋಗಾಶ್ರಮದ ಒಂದು ಶಾಖಾ ಮಠಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 5 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಆಗಲೂ ಶ್ರೀಗಳು ನಮ್ರತೆಯಿಂದ ಹಣವನ್ನು ಸರ್ಕಾರಕ್ಕೆ ವಾಪಸ್‌ ಮಾಡಿದ್ದರು. ನಿಜಕ್ಕೂ ಇದೊಂದು ಮಾದರಿ ಸಂದೇಶ’ ಎಂದು ಸಚಿವರು ಹೇಳಿದ್ದಾರೆ.

ಸಿದ್ಧೇಶ್ವರ ಶ್ರೀಗಳು ತಮ್ಮ ಆತ್ಮಸಾಕ್ಷಿಗೆ ಬದ್ಧರಾಗಿರುವ ಸರಳ ಸಂತರು. ಮೂರು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಪ್ರಕಟಿಸಿದಾಗ, ‘ನಾವು ಸನ್ಯಾಸಿಗಳು. ನಮಗೆ ಬಿರುದು, ಪದವಿಗಳು ಬೇಡ’ ಎಂದು ನಿರಾಕರಿಸಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌ ಕೊಡಲು ಬಂದಾಗಲೂ ಅವರು ಇದೇ ಮಾತು ಹೇಳಿದ್ದರು.

ಈ ಸಂದರ್ಭದಲ್ಲಿ ಧಾರವಾಡ ಮುರುಘಾಮಠದ ಸಂಸ್ಥಾಪಕ ಗುರುಗಳಾದ ಮೃತ್ಯುಂಜಯ ಸ್ವಾಮಿಗಳ ಸಂಗತಿ ನೆನಪಿಗೆ ಬರುತ್ತದೆ. ಮೃತ್ಯುಂಜಯ ಸ್ವಾಮಿಗಳು ತಮ್ಮ ಮಠದಲ್ಲಿ ವಿದ್ಯಾರ್ಥಿಗಳಿಗಾಗಿ ಉಚಿತ ಪ್ರಸಾದ ನಿಲಯ ನಡೆಸುತ್ತಿದ್ದರು. ರಾಜ್ಯ ಸರ್ಕಾರ ಅವರಿಗೆ ಸಹಾಯಧನ ನೀಡಲು ಮುಂದಾಯಿತು. ಇದು ಗೊತ್ತಾಗುತ್ತಲೇ ಸ್ವಾಮೀಜಿ ಹೀಗೆ ಹೇಳಿದ್ದರು: ‘ಧಾರವಾಡ ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ಮಠದ ಭಕ್ತರು ಪ್ರತಿವರ್ಷ ಸಾಕಷ್ಟು ದವಸ ಧಾನ್ಯ ಪೂರೈಸುತ್ತಾರೆ. ಹಾಲು, ಮೊಸರು, ಬೆಣ್ಣೆ, ಬೆಲ್ಲ ತಂದುಕೊಡುತ್ತಾರೆ. ಹೀಗಿರುವಾಗ, ಸರ್ಕಾರದ ಸಹಾಯ ಪಡೆದರೆ ಮಠದ ಭಕ್ತರಿಗೆ ಅಪಮಾನ ಮಾಡಿದಂತಾಗುತ್ತದೆ. ಆದ್ದರಿಂದ ಸರ್ಕಾರದ ಸಹಾಯ ಬೇಡ’.

ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್‌ 1960ರಲ್ಲಿ ಈ ಮಠಕ್ಕೆ ಭೇಟಿ ನೀಡಿದ್ದರು. ಆ ದಿನ ಮೃತ್ಯುಂಜಯ ಸ್ವಾಮೀಜಿ ಸಮೀಪದ ಹಳ್ಳಿಗೆ ಧಾನ್ಯ ತರಲು ಚಕ್ಕಡಿ ತೆಗೆದುಕೊಂಡು ಹೋಗಿದ್ದರು. ‘ರಾಷ್ಟ್ರಪತಿಗಳು ಮಠ ನೋಡಿಕೊಂಡು ಹೋಗಲಿ. ನನಗೆ ಬರುವುದಕ್ಕೆ ಆಗುವುದಿಲ್ಲ. ವಿದ್ಯಾರ್ಥಿಗಳ ಊಟಕ್ಕೆ ಧಾನ್ಯ ಸಂಗ್ರಹಿಸುವುದು ನನಗೆ ಬಹಳ ಮುಖ್ಯವಾದ ಕೆಲಸ’ ಎಂದು ಸಹಾಯಕರ ಮೂಲಕ ಸಂದೇಶ ಕಳುಹಿಸಿದ್ದರು. ರಾಷ್ಟ್ರಪತಿ ಬಂದಿದ್ದಾರೆ ಎಂದು ಅವರು ಓಡಿ ಬರಲಿಲ್ಲ. ಗಣ್ಯರು, ರಾಜಕಾರಣಿಗಳಿಂದ ಅವರು ಸದಾ ದೂರ ಇರುತ್ತಿದ್ದರು. ಬಡ ಮಕ್ಕಳಿಗೆ ಒಳ್ಳೆಯ ಊಟ ಮತ್ತು ವಸತಿ ಒದಗಿಸುವುದನ್ನೇ ಒಂದು ತಪಸ್ಸು ಎಂದು ಅವರು ಭಾವಿಸಿದ್ದರು.

ನಾಲ್ಕನೆಯ ತರಗತಿವರೆಗೆ ಮಾತ್ರ ಓದಿದ್ದ ಮೃತ್ಯುಂಜಯ ಶ್ರೀಗಳು, 1918ರಿಂದ 1964ರವರೆಗಿನ ಅವಧಿಯಲ್ಲಿ ಲಕ್ಷಾಂತರ ಬಡ ಮಕ್ಕಳ ಓದಿಗೆ ನೆರವಾದದ್ದು ಒಂದು ಸ್ಮರಣೀಯ ಸಂಗತಿ.

2008- 10ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಮಠ-ಮಂದಿರಗಳಿಗೆ ಧಾರಾಳವಾಗಿ ಅನುದಾನ ನೀಡುವ ಸಂಪ್ರದಾಯ ಆರಂಭಿಸಿದರು. ಮಠಗಳನ್ನು ಸಬಲಗೊಳಿಸುವುದು ಅವರ ಉದ್ದೇಶವಾಗಿರಬಹುದು. ಆದರೆ ಅವರ ಉದ್ದೇಶ ಈಡೇರಿದಂತಿಲ್ಲ. ಈಗ ಅನೇಕ ಮಠಾಧಿಪತಿಗಳು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಹಣಸಹಾಯ ಪಡೆಯಲು ಪೈಪೋಟಿ ನಡೆಸಿದ್ದಾರೆ. ಈ ಎಲ್ಲರ ನಡುವೆ ಸಿದ್ಧೇಶ್ವರ ಶ್ರೀಗಳು ಒಂದು ಬೆಳಕಿನ ರೇಖೆಯಂತೆ ಕಾಣಿಸುತ್ತಾರೆ.

ಮಠ-ಮಂದಿರಗಳು ಭಕ್ತರಿಂದ ಪೋಷಣೆಗೊಳ್ಳಬೇಕು. ಜನ ತಮ್ಮ ದುಡಿಮೆಯಿಂದ ಕೊಟ್ಟ ಹಣಕ್ಕೆ ವಿಶೇಷ ಮಹತ್ವವಿದೆ. ಇದರಿಂದ, ತಾವು ಕಟ್ಟಿದ ಸಂಸ್ಥೆ ಎಂಬ ಅಭಿಮಾನ ಮೂಡುತ್ತದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿ ‘ಪೈಸಾ ಫಂಡ್’ ಆರಂಭಿಸಿದ್ದರು. ಅದರ ಲೆಕ್ಕಪತ್ರವನ್ನು ಪ್ರತಿದಿನ ಬಹಿರಂಗಪಡಿಸುತ್ತಿದ್ದರು.

ಸಾರ್ವಜನಿಕ ಕೆಲಸಗಳಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯವಾದದ್ದು. ಸರ್ಕಾರದಿಂದ ಹಾಗೂ ಕೆಲವೇ ಶ್ರೀಮಂತರಿಂದ ಹಣ ತಂದು ಕಟ್ಟುವ ಮಠ– ಮಂದಿರಗಳು ಸಮಷ್ಟಿ ಭಾವನೆಯಿಂದ ವಂಚಿತವಾಗುತ್ತವೆ. ಈ ಸರಳ ಸತ್ಯವನ್ನು ಮಠಾಧಿಪತಿಗಳು, ಧಾರ್ಮಿಕ ಮುಖಂಡರು ಅರಿತುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT