ಭಾನುವಾರ, ಜೂಲೈ 5, 2020
27 °C

ಆನ್‌ಲೈನ್‌ ಶಿಕ್ಷಣ ಮತ್ತು ಜ್ಞಾನದಾಹ

ಸಂಗತ Updated:

ಅಕ್ಷರ ಗಾತ್ರ : | |

ಈ ಮಾಧ್ಯಮದ ಗುಣಮಟ್ಟ ವೃದ್ಧಿಗೆ ಪ್ರಯತ್ನಗಳು ನಡೆಯಬೇಕಿದೆ

ಔಪಚಾರಿಕ ಶಿಕ್ಷಣ ಕ್ಷೇತ್ರದಲ್ಲಿ ಆನ್‍ಲೈನ್ ಮಾಧ್ಯಮ ಹೇಗೆ ಕಾರ್ಯ ನಿರ್ವಹಿಸಬಹುದು ಎಂಬ ವಿಷಯದಲ್ಲಿ ಈಗ ಬಹಳಷ್ಟು ಗೊಂದಲಗಳಿವೆ. ಔಪಚಾರಿಕ ಶಿಕ್ಷಣವನ್ನು ಕೊರೊನಾ ಮುಳುಗಿಸಲಿದೆ ಎಂಬ ಭೀತಿ ಕಾಲಕ್ರಮೇಣ ಮನೆ ಮಾಡುತ್ತಿದೆ. ಉದ್ಯೋಗಾಧಾರಿತ ಶಿಕ್ಷಣವನ್ನು ನೀಡುವ ದಿಸೆಯಲ್ಲಿ ನಿಧಾನವಾಗಿ ತೆರೆದುಕೊಳ್ಳುತ್ತಿರುವ ಈ ಸನ್ನಿವೇಶದಲ್ಲಿ, ಔಪಚಾರಿಕ ಶಿಕ್ಷಣವು ಹೊಸಕ್ರಮ ಅಥವಾ ಮಾಧ್ಯಮಗಳಿಗೆ ತೆರೆದುಕೊಳ್ಳಬಾರದೇಕೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿರುವುದು ಸಹಜವಾಗಿದೆ. ಈ ಹಿಂದೆ ಪ್ಲೇಗ್ ಅಥವಾ ಕ್ಷಾಮ ಬಂದ ಕಾಲದಲ್ಲಿ ಜನಜೀವನ ಕುಸಿದು ಬಿದ್ದಿತ್ತಾದರೂ ಅದು ಚೇತರಿಸಿಕೊಂಡಿದ್ದು ಜನರ ಸಕಾರಾತ್ಮಕ ಚಿಂತನೆ ಮತ್ತು ಧೋರಣೆಗಳಿಂದ ಎಂಬುದನ್ನು ನಾವು ನೆನಪಿಡಬೇಕು.

ವಾಟ್ಸ್‌ಆ್ಯಪ್‌ ಮೂಲಕ ವಿದ್ಯಾರ್ಥಿಗಳಿಗೆ ಈಗಾಗಲೇ ನೋಟ್ಸ್‌ ರವಾನೆಯಾಗಿದೆ. ಕೆಲವರು ತಮ್ಮ ವಿದ್ಯಾರ್ಥಿಗಳಿಗೆ ಯುಟ್ಯೂಬ್ ಚಾನೆಲ್‍ಗಳ ಲಿಂಕ್‍ಗಳನ್ನು ಕಳುಹಿಸಿದ್ದಾರೆ. ವಿಡಿಯೊ ಪಾಠಗಳಿಗೆ ಹೋಲಿಸಿದರೆ ಆಡಿಯೊ ಪಾಠಗಳು ವಿಷಯವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ವಿಡಿಯೊಗಳನ್ನು ವೀಕ್ಷಿಸುವ ಸಮಯದಲ್ಲಿ ಅಲ್ಲಿನ ಚಿತ್ರಗಳ ಹಾವಭಾವಗಳು ವಿದ್ಯಾರ್ಥಿಗಳ ಗಮನವನ್ನು ಬೇರೆಡೆ ಸೆಳೆದುಬಿಡಬಹುದಾದ ಸಾಧ್ಯತೆ ಇರುತ್ತದೆ. ಆಡಿಯೊ ಕೇಳಿದಲ್ಲಿ ನೇರವಾಗಿ ಮೆದುಳಿಗೆ ತಲುಪಿ ಅರ್ಥ ಮಾಡಿಕೊಳ್ಳುವ ಕ್ರಿಯೆ ಪ್ರಾರಂಭವಾಗುತ್ತದೆ ಎಂಬುದು ಕ್ರಿಕೆಟ್ ಕಾಮೆಂಟರಿ ಅಥವಾ ರೇಡಿಯೊ- ಟ್ರಾನ್ಸಿಸ್ಟರ್‌ಗಳಲ್ಲಿ ಭಾಷಣ, ಹಾಡು, ಪ್ರವಚನ ಮೊದಲಾದವನ್ನು ಕೇಳಿ ಭಾಷೆಯ ಮೇಲೆ ಹಿಡಿತ ಸಾಧಿಸಿ ಬೆಳೆದಿರುವ ನಮ್ಮ ಅನೇಕ ಹಿರಿಯರ ಅನುಭವವಾಗಿದೆ.

ಕಾಲೇಜುಗಳು ಪಠ್ಯಕ್ರಮ ಆಧಾರಿತ ವಿಷಯಗಳನ್ನು ಪ್ರಾಯೋಗಿಕವಾಗಿ 15 ಅಥವಾ 30 ನಿಮಿಷಗಳ ಕ್ಯಾಪ್ಸೂಲ್‍ಗಳಲ್ಲಿ ಧ್ವನಿಮುದ್ರಿಸಿ, ವಿದ್ಯಾರ್ಥಿಗಳು ಮೊಬೈಲ್‍ಗಳಲ್ಲಿ ಕೇಳುವಂತೆ ಮಾಡಬಹುದು. ಕಮ್ಯುನಿಟಿ ರೇಡಿಯೊ ತಂತ್ರಜ್ಞಾನ
ವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸರ್ಕಾರ ಪ್ರಯತ್ನಿಸಲಿ. ಸ್ವಯಂಸೇವಾ ಸಂಸ್ಥೆಗಳು ಮುಂದೆ ಬಂದಲ್ಲಿ ಈ ಪ್ರಯತ್ನ ಸಂಘಟನೆಗೊಂಡು ಒಂದು ಸಾಂಸ್ಥಿಕ ರೂಪ ಪಡೆಯುವುದರಲ್ಲಿ ಸಂದೇಹವಿಲ್ಲ.

ಡಾ. ಎಸ್.ನರೇಂದ್ರಪ್ರಸಾದ್, ಮೈಸೂರು

 

ಜಾಗ್ರತೆ ಇರಲಿ

ಆನ್‍ಲೈನ್ ತರಗತಿಯು ತೀರಾ ಹೊಸ ಕಲ್ಪನೆಯೇನಲ್ಲ. ಆದರೆ ತಂತ್ರಜ್ಞಾನದ ಸಹಾಯದಿಂದ ನವನವೀನ ಮಾದರಿಗಳೊಡನೆ ಜಗತ್ತಿನ ಮೂಲೆ ಮೂಲೆಗೂ ತಲುಪುತ್ತಿರುವುದರಿಂದ, ಇಂದು ಅಧ್ಯಯನಾಸಕ್ತರ ಗಮನವನ್ನು ತುಸು ಹೆಚ್ಚೇ ತನ್ನೆಡೆಗೆ ಸೆಳೆದುಕೊಂಡಿದೆ.

ಬದಲಾದ ಕಾಲಘಟ್ಟದಲ್ಲಿ, ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿಯೂ ಆನ್‍ಲೈನ್ ತರಗತಿಗಳಿಗೆ ಸಂಬಂಧಿಸಿದಂತೆ ಕ್ಷಿಪ್ರ ತೆರನಾದ ಕ್ರಾಂತಿಯಾಗಿದೆ. ಇದರ ಭಾಗವಾಗಿಯೇ ಭಾರತ ಸರ್ಕಾರ ‘ಡಿಜಿಟಲ್ ಇಂಡಿಯಾ’ ಅಭಿಯಾನದ ಅಡಿಯಲ್ಲಿ 2017ರಲ್ಲಿ ‘ಸ್ವಯಂ’ ಎನ್ನುವ ಆನ್‍ಲೈನ್ ತರಗತಿಗಳ ಸಮುಚ್ಚಯವೊಂದಕ್ಕೆ ಅಡಿಪಾಯ ಹಾಕಿದೆ. ಸ್ವಯಂನ ಅಡಿಯಲ್ಲಿ ಭಾರತದ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಬುದ್ಧ ಅಧ್ಯಾಪಕರು ಸಂಸ್ಕೃತ, ಜರ್ಮನ್ ಮುಂತಾದ ಭಾಷೆಗಳೂ ಸೇರಿದಂತೆ ನಾನಾ ವಿಷಯಗಳನ್ನು ಕಲಿಸುತ್ತಿದ್ದಾರೆ. ಇಲ್ಲಿ ಚರ್ಚೆಗಳಿಗೂ ಅವಕಾಶವಿದ್ದು, ನಿಯಮಿತ ಮೌಲ್ಯಮಾಪನವೂ ನಡೆಯುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಉಪನ್ಯಾಸಕರಿಗೂ ವಿವಿಧ ಕೋರ್ಸ್‌ಗಳು ಲಭ್ಯವಿವೆ.

ಇದೇ ಮಾದರಿಯಲ್ಲಿ ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆಯು ಎಲ್ಲ ಭಾಗದ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಆಶಯದೊಡನೆ ‘ಜ್ಞಾನನಿಧಿ’ ಎಂಬ ಯುಟ್ಯೂಬ್ ಚಾನೆಲ್ ಅಭಿವೃದ್ಧಿಪಡಿಸಿದೆ. ಪದವಿ ಕಾಲೇಜುಗಳ ಉಪನ್ಯಾಸಕರು, ತಂತಮ್ಮ ವಿಷಯಗಳ ಕುರಿತು ಮಾಡುವ ಪಾಠಗಳ ವಿಡಿಯೊ ಚಿತ್ರೀಕರಿಸಿ ಅಪ್‍ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಪ್ರಸ್ತುತ ಕೊರೊನಾ ಬಿಕ್ಕಟ್ಟಿನ ಸನ್ನಿವೇಶದಿಂದ ಕಾಲೇಜುಗಳು ಮುಚ್ಚಿರುವುದರಿಂದ, ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗದಂತೆ ಹಾಗೂ ಅವರ ಜ್ಞಾನದಾಹ ತಣಿಸುವಂತೆ ಅದ್ಭುತಗಳನ್ನು ಜ್ಞಾನನಿಧಿ ಸೃಷ್ಟಿಸುತ್ತದೆ ಎಂದು ಇಲಾಖೆಯ ಆಡಳಿತವರ್ಗ ಭಾವಿಸಿದೆ.

ಆದರೆ ನೈಜ ಚಿತ್ರಣ ಬೇರೆಯೇ ಇದೆ. ಈ ಚಾನೆಲ್‍ನಲ್ಲಿ ಸುಮಾರು 1,500 ವಿಡಿಯೊ ಉಪನ್ಯಾಸಗಳಿವೆ. ಆದರೆ, ಅದರಲ್ಲಿ ಹೆಚ್ಚಿನವುಗಳ ಗುಣಮಟ್ಟ ಹೇಳಿಕೊಳ್ಳುವಂತಿಲ್ಲ. ವಿಷಯ ಮತ್ತು ಭಾಷಾ ಜ್ಞಾನವಿಲ್ಲದ, ಸ್ಪಷ್ಟ ಉಚ್ಚಾರವಿಲ್ಲದ, ವ್ಯಾಕರಣದ ಮೇಲೆ ಹಿಡಿತವಿಲ್ಲದ ಅನೇಕ ಉಪನ್ಯಾಸಕರು ಬೋಧಿಸಿರುವ ರೀತಿ ಹಾಸ್ಯಾಸ್ಪದವಾಗಿದ್ದು ಇವರ ನೇಮಕವಾದರೂ ಹೇಗಾಯಿತು ಎಂದು ಆಶ್ಚರ್ಯವಾಗುತ್ತದೆ. ಸಹಾಯಕ ಪ್ರಾಧ್ಯಾಪಕರೊಬ್ಬರನ್ನು ಇದಕ್ಕೆ ಸಂಚಾಲಕರನ್ನಾಗಿ ನಿಯೋಜಿಸಿದ್ದು, ಅವರು ತಮ್ಮ ಲೈವ್ ವಿಡಿಯೊದಲ್ಲಿ ಅಲ್ಲಲ್ಲಿ ತಮ್ಮ ಘನಘೋರ ಆಂಗ್ಲಭಾಷಾ ಪಾಂಡಿತ್ಯವನ್ನು ಪ್ರದರ್ಶಿಸಿದ್ದಾರೆ!

ಪರಾಮರ್ಶೆ ಮಾಡದ, ಸ್ವಾಧ್ಯಾಯದ ಮಹತ್ವ ಅರಿಯದ, ತಮ್ಮ ಉಪನ್ಯಾಸಕರ ಮಾತುಗಳನ್ನೇ ವೇದವಾಕ್ಯವೆಂದು ಪಾಲಿಸುವ ಹಲವು ವಿದ್ಯಾರ್ಥಿಗಳಿಗೆ ಇಂತಹ ಉಪನ್ಯಾಸಗಳು ದಾರಿ ತಪ್ಪಿಸುತ್ತವೆ. ಎಲ್ಲರಿಗೂ ಮಾಹಿತಿ ತಲುಪಬೇಕೆಂಬ ಸದಾಶಯದಿಂದ ತಂತ್ರಜ್ಞಾನದೆಡೆಗೆ ಇಲಾಖೆ ಮುಖ ಮಾಡಿರುವುದು ಅಭಿನಂದನಾರ್ಹ. ಆದರೆ ಹೆಚ್ಚಿನ ಉಪನ್ಯಾಸಗಳು ಅಷ್ಟೇ ಕ್ಷಿಪ್ರಗತಿಯಲ್ಲಿ ಅಪಹಾಸ್ಯಕ್ಕೂ ಈಡಾಗುವ ಸಾಧ್ಯತೆ ಇರುವುದರಿಂದ ಇಲಾಖೆ ಆ ದಿಸೆಯಲ್ಲಿ ಜಾಗೃತವಾಗಬೇಕು.

ಕೆ.ಜಿ.ತಿರುಮಲೇಶ, ದಾವಣಗೆರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು