ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಲ್ಪನಾ ಸಾಮರ್ಥ್ಯಕ್ಕೆ ಸಾಣೆ

Last Updated 30 ಜೂನ್ 2018, 4:21 IST
ಅಕ್ಷರ ಗಾತ್ರ

ತೆರೆದ ಪುಸ್ತಕ (ಓಪನ್‌ ಬುಕ್‌) ಪರೀಕ್ಷಾ ವ್ಯವಸ್ಥೆ ಕುರಿತಂತೆ ಶಿಕ್ಷಣ ಸಚಿವರು ನೀಡಿದ್ದ ಹೇಳಿಕೆ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ‘ಈ ಕ್ರಮ ಸರಿಯಲ್ಲ’ ಎಂದು ಅನೇಕರು ವಾದಿಸಿದ್ದರೆ, ಹಲವರು ಇದನ್ನು ಸ್ವಾಗತಿಸಿದ್ದಾರೆ. ತೆರೆದ ಪುಸ್ತಕ ಪರೀಕ್ಷೆಯನ್ನು ವಿಶ್ಲೇಷಿಸುವ ಭರದಲ್ಲಿ ಹೆಚ್ಚಿನವರು ಪರೀಕ್ಷೆಯ ಹಂತವನ್ನು ಮಾತ್ರ ಗಮನದಲ್ಲಿಟ್ಟು ಮಾತನಾಡಿದ್ದಾರೆ. ಈ ಕ್ರಮವನ್ನು ಟೀಕಿಸುವವರು, ‘ಫೇಲಾದವರನ್ನು ಪಾಸು ಮಾಡಲು ಈ ವಿಧಾನ ಜಾರಿಗೆ ತರಲಾಗುತ್ತಿದೆ’ ಎಂದು ಕುಹಕ, ಲೇವಡಿ ಮಾಡುತ್ತಿರುವುದನ್ನು ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಕಾಣುತ್ತೇವೆ. ಈ ವಿಧಾನದ ಪರವಾಗಿ ಮಾತನಾಡುವವರ ಧ್ವನಿ ಕ್ಷೀಣವಾಗಿರುವುದನ್ನೂ ಕಾಣಬಹುದು.

ತೆರೆದ ಪುಸ್ತಕ ಪರೀಕ್ಷೆಯು ತೀರಾ ಹೊಸತೇನಲ್ಲ. ಈಗಾಗಲೇ ಅದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಅನುಷ್ಠಾನದಲ್ಲಿರುವ, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ (ಸಿ.ಸಿ.ಇ) ಒಂದು ಭಾಗವಾಗಿದೆ. ನಲಿ- ಕಲಿ ಜಾರಿಯಲ್ಲಿರುವ 1 ರಿಂದ 3ನೇ ತರಗತಿಯವರೆಗೆ ಪರೀಕ್ಷೆ ಎಂಬುದೇ ಇಲ್ಲ. ಕಲಿಕಾ ಚಟುವಟಿಕೆಗಳು ಸಾಗಿದಂತೆ ಮೌಲ್ಯಮಾಪನವೂ ನಡೆಯುತ್ತಾ ಹೋಗುತ್ತದೆ. ಇನ್ನು 4 ರಿಂದ 9ನೇ ತರಗತಿಯವರೆಗೂ ಸಿ.ಸಿ.ಇ. ಜಾರಿಯಲ್ಲಿದೆ. ನವೋದಯ ಶಾಲೆಗಳ ಪ್ರವೇಶಕ್ಕೆ ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ಒಂದು ಟಿಪ್ಪಣಿಯನ್ನು ಓದಲು ನೀಡಿ, ಅದರ ಆಧಾರದ ಮೇಲೆ ಕೆಲವು ಪ್ರಶ್ನೆಗಳನ್ನು ಕೇಳುವ ಮಾದರಿ ಇರುತ್ತದೆ. ಇದೂ ಒಂದು ರೀತಿಯ ತೆರೆದ ಪುಸ್ತಕದ ಪರೀಕ್ಷೆ ಇದ್ದಂತೆಯೇ. ಕಾನೂನು ಪರೀಕ್ಷೆ ಹಾಗೂ ಇಲಾಖಾ ಪರೀಕ್ಷೆಗಳಲ್ಲಿ ಈ ಕ್ರಮ ಜಾರಿಯಲ್ಲಿದೆ. ಈಗಾಗಲೇ ಕೆಲವು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ವಿಧಾನ ಜಾರಿಯಲ್ಲಿದೆ. ಕೆಲವು ಆಸಕ್ತ, ತಜ್ಞ ಶಿಕ್ಷಕರು ಮತ್ತು ಉಪನ್ಯಾಸಕರು ಈ ಕ್ರಮದ ಮೂಲಕ ಪರೀಕ್ಷೆಗಳನ್ನು ನಡೆಸುವುದೇ ಅಲ್ಲದೆ, ಮೌಲ್ಯಮಾಪನವನ್ನೂ ವಿದ್ಯಾರ್ಥಿಗಳ ಮೂಲಕವೇ ಮಾಡಿಸುವ ಸ್ವಯಂ ಮೌಲ್ಯಮಾಪನ ಪದ್ಧತಿಯನ್ನೂ ಅಳವಡಿಸಿಕೊಂಡಿದ್ದಾರೆ. ಇಂತಹ ಕ್ರಮಗಳಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಆಲೋಚನಾ ವಿಧಾನದಲ್ಲಷ್ಟೇ ಪ್ರೌಢತೆ ಹೊಂದದೆ ಅಂಕ ಗಳಿಕೆಯ ಮಾನದಂಡಗಳ ವಿಷಯದಲ್ಲಿಯೂ ಔದಾರ್ಯ ತೋರುವ ಮನಸ್ಥಿತಿ ಉಳ್ಳವರಾಗಿರುತ್ತಾರೆ.

ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸುವ ಬಗ್ಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯೂ ಪರಿಶೀಲನೆ ನಡೆಸುತ್ತಿದೆ. ಕೆಲವು ದೇಶಗಳಲ್ಲಿ ಈ ವಿಧಾನ ಜಾರಿಯಲ್ಲಿದೆ. ‘ತೆರೆದ ಪುಸ್ತಕ ಪರೀಕ್ಷೆಯಲ್ಲಿ ಪುಸ್ತಕ ನೋಡಿ ವಿದ್ಯಾರ್ಥಿಗಳು ಸುಲಭವಾಗಿ ಪರೀಕ್ಷೆ ಬರೆಯಬಹುದು. ನೇರವಾಗಿ ಪುಸ್ತಕ ನೀಡಿಯೇ ಉತ್ತರ ಬರೆಸುವುದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ’ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಾರೆ. ಆದರೆ ಪ್ರಸ್ತುತ ಜಾರಿಯಲ್ಲಿರುವ ಪರೀಕ್ಷೆಗಳು ನೆನಪಿನ ಸಾಮರ್ಥ್ಯವನ್ನು ಅಳೆಯುವುದಕ್ಕೆ ಮತ್ತು ಅಂಕಗಳಿಕೆಗೆ ಪ್ರಾಶಸ್ತ್ಯ ನೀಡಿವೆ. ಈ ಕಾರಣ ವಿದ್ಯಾರ್ಥಿಗಳು ಕಂಠಪಾಠ ಮಾಡಿ, ಪರೀಕ್ಷೆಗಳಲ್ಲಿ ಅಧಿಕ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದರೂ ಕೆಲವೊಮ್ಮೆ ಸಾಮಾನ್ಯ ಜ್ಞಾನ, ಕಲಿತ ವಿಷಯಗಳನ್ನು ಅನ್ವಯಿಸುವುದು ಹಾಗೂ ಸಮಸ್ಯಾ ಪರಿಹಾರ ಸಾಮರ್ಥ್ಯಗಳಲ್ಲಿ ಗಣನೀಯವಾಗಿ ಹಿಂದಿರುವುದನ್ನು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಪರೀಕ್ಷಾ ವಿಧಾನದಲ್ಲಿ ಮಾರ್ಪಾಡುಗಳು ಅಗತ್ಯವೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ತೆರೆದ ಪುಸ್ತಕ ಪರೀಕ್ಷೆಗಳು ವಿದ್ಯಾರ್ಥಿಗಳ ಆನ್ವಯಿಕತೆ, ತಾರ್ಕಿಕ ಮತ್ತು ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಕಲ್ಪನಾ ಸಾಮರ್ಥ್ಯಗಳನ್ನು ಪರೀಕ್ಷಿಸಲು ನೆರವಾಗುತ್ತವೆ. ಈ ರೀತಿಯ ಪರೀಕ್ಷೆಗಳಲ್ಲಿ ಪುಸ್ತಕಗಳನ್ನು ಪರಿಶೀಲಿಸಿ, ಸ್ವಲ್ಪ ಮಾಹಿತಿ ಸಂಗ್ರಹಿಸಬಹುದಾದರೂ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ವಿದ್ಯಾರ್ಥಿಯು ತನ್ನ ತರ್ಕವನ್ನು ಯಾವ ರೀತಿ ಲಿಖಿತವಾಗಿ ಮಂಡಿಸುತ್ತಾನೆ ಎಂಬುದನ್ನು ನಿರ್ಣಯಿಸಬಹುದು. ಉದಾಹರಣೆಗೆ: ‘ಸಮಾನತೆಯ ಹಕ್ಕು ಕುರಿತಾದ ಸಂವಿಧಾನದ 14ನೇ ವಿಧಿಯನ್ನು ವಿವರಿಸಿ’ ಎಂಬುದು ಸಾಮಾನ್ಯವಾಗಿ ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಯಾದರೆ, ತೆರೆದ ಪುಸ್ತಕ ಪರೀಕ್ಷೆಯಲ್ಲಿ ‘ನಿದರ್ಶನಗಳ ಸಹಿತ ವಿಶ್ಲೇಷಿಸಿ’ ಎಂದು ಕೇಳಲಾಗುತ್ತದೆ. ಈ ನಿಟ್ಟಿನಿಂದ ಈ ಪದ್ಧತಿಯು ವಿದ್ಯಾರ್ಥಿಗಳ ಬುದ್ಧಿಶಕ್ತಿ, ವಿಮರ್ಶಾತ್ಮಕ ಮನೋಭಾವಕ್ಕಷ್ಟೇ ಸವಾಲೊಡ್ಡದೆ, ಮೌಲ್ಯಮಾಪನ ಮಾಡುವ ಶಿಕ್ಷಕರಿಗೂ ಸವಾಲೊಡ್ಡುತ್ತದೆ. ಪ್ರಸ್ತುತ ಹೆಚ್ಚು ಬಳಕೆಯಲ್ಲಿರುವ ಬಹು ಆಯ್ಕೆಯ ಪ್ರಶ್ನೆಗಳ ಕಾರಣದಿಂದ ಬರವಣಿಗೆಯ ಸಾಮರ್ಥ್ಯ ಮಿತಿಗೊಳ್ಳುವ ಅಪಾಯವಿರುವ ಸನ್ನಿವೇಶದಲ್ಲಿ ತಮ್ಮ ಆಲೋಚನೆಗಳನ್ನು ಬರಹದ ರೂಪದಲ್ಲಿ ಮಂಡಿಸಲು ಅವಕಾಶವಿರುವ ತೆರೆದ ಪುಸ್ತಕದ ಪರೀಕ್ಷೆಗಳು ವರದಾನವಾಗಬಲ್ಲವು.

ಕಷ್ಟದ ಪ್ರಶ್ನೆಗಳಿಗೆ ಉತ್ತರಿಸಲು ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿ ಮಾಡಬೇಕೆಂದರೆ ಬೋಧನಾ ಪದ್ಧತಿಯಲ್ಲಿಯೂ ಮಾರ್ಪಾಡುಗಳಾಗಬೇಕಾದುದು ಅನಿವಾರ್ಯ. ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕರ ಬೋಧನೆ ಆಲಿಸುವುದು, ಪಾಠದ ಸಾರಂಶದ ಟಿಪ್ಪಣಿಮಾಡಿಕೊಳ್ಳುವುದೇ ಮುಂತಾದವುಗಳಿಗೆ ಸೀಮಿತಗೊಳಿಸದೆ ಚರ್ಚೆ, ಯೋಜನಾ ಕಾರ್ಯ, ನಿಯೋಜಿತ ಕಾರ್ಯ, ಸಣ್ಣ ಗುಂಪು ಚಟುವಟಿಕೆ, ವಿಚಾರ ಮಂಡನೆಗಳಿಗೆ ಅವಕಾಶವಿರುವ ಮುಕ್ತ ತರಗತಿಗಳನ್ನು ಸೃಷ್ಟಿಸಬೇಕು. ಈ ಎಲ್ಲಾ ಚಟುವಟಿಕೆಗಳು ಈಗಾಗಲೇ ಸಿ.ಸಿ.ಇ. ಪದ್ಧತಿಯಲ್ಲಿ ಇವೆ. ಸಿ.ಸಿ.ಇ.ಯನ್ನು ಎಲ್ಲಾ ತರಗತಿಗಳಲ್ಲಿ ಬಲಪಡಿಸುವುದರ ಜೊತೆ ವಾರ್ಷಿಕ ಪರೀಕ್ಷೆಯಲ್ಲಿ ತೆರೆದ ಪುಸ್ತಕ ಪರೀಕ್ಷಾ ವಿಧಾನವನ್ನು ಪರಿಣಾಮಕಾರಿಯಾಗಿ ಅಳವಡಿಸಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಹಂತಗಳಿಗೂ ಇದನ್ನು ಹಂತ ಹಂತವಾಗಿ ವಿಸ್ತರಿಸುವ ಮೂಲಕ ಭದ್ರ ಕೋಟೆಯಲ್ಲಿ ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸುವ ಪರೀಕ್ಷಾ ಪದ್ಧತಿಗೆ ಮುಕ್ತಿ ಕೊಡಬಹುದು. ಪ್ರಶ್ನೆಪತ್ರಿಕೆ ಸೋರಿಕೆ, ನಕಲು ಮಾಡುವಂತಹ ವಿದ್ಯಮಾನಗಳಿಗೂ ಅಂತ್ಯ ಹಾಡಬಹುದು.

ಪ್ರಸ್ತುತ ಮಾಹಿತಿ ಮತ್ತು ಅಂಕ ಗಳಿಕೆ ಕೇಂದ್ರಗಳಂತಾಗಿರುವ ನಮ್ಮ ವಿದ್ಯಾಕೇಂದ್ರಗಳನ್ನು ನಿಜಾರ್ಥದಲ್ಲಿ ಜ್ಞಾನದ ಕೇಂದ್ರಗಳನ್ನಾಗಿ ರೂಪುಗೊಳಿಸಲು ತೆರೆದ ಪುಸ್ತಕದ ಪರೀಕ್ಷಾ ವಿಧಾನವು ನೆರವಾಗುವ ಎಲ್ಲ ಸಾಧ್ಯತೆಗಳೂ ಇವೆ. ನಮ್ಮ ಜಡ್ಡುಗಟ್ಟಿರುವ ಮನೋಧೋರಣೆಯನ್ನು ಬದಲಿಸಿ, ಹೊಸತನಕ್ಕೆ ತೆರೆದುಕೊಂಡು ಮುನ್ನಡೆಯಬೇಕಾಗಿದೆ. ಯಾವುದೇ ಹೊಸ ವ್ಯವಸ್ಥೆಯನ್ನು ಗೆಲ್ಲಿಸುವ ಅಥವಾ ಸೋಲಿಸುವ ಸಾಮರ್ಥ್ಯ ಇರುವುದು ನಮ್ಮ ಶಿಕ್ಷಕರಲ್ಲಿ ಮಾತ್ರ. ಈ ನಿಟ್ಟಿನಲ್ಲಿ ಶಿಕ್ಷಕರ ಸಿದ್ಧತೆ ಹಾಗೂ ತಯಾರಿಯ ಮೇಲೆ ಈ ಪದ್ಧತಿಯ ಯಶಸ್ಸು ಅವಲಂಬಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT