ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ತೆರೆಯಲಿ, ಬವಣೆ ನೀಗಲಿ

1ರಿಂದ 12ರವರೆಗಿನ ಎಲ್ಲಾ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಬೇಕಾಗಿದೆ
Last Updated 22 ಜನವರಿ 2021, 19:31 IST
ಅಕ್ಷರ ಗಾತ್ರ

ಮಕ್ಕಳು-ಪಾಲಕರ ಅಭಿಯಾನ ಮತ್ತು ಮಾಧ್ಯಮಗಳ ಒತ್ತಾಸೆಯ ಫಲವಾಗಿ ರಾಜ್ಯ ಸರ್ಕಾರವು ಶಾಲೆಗಳನ್ನು ಪ್ರಾರಂಭಿಸಬೇಕಾದ ಅನಿವಾರ್ಯ ಬಂದೊದಗಿತು. ಸರ್ಕಾರ ಅರೆಮನಸ್ಸಿನಿಂದಲೇ 6ರಿಂದ 9ನೇ ತರಗತಿಯವರೆಗೆ ವಿದ್ಯಾಗಮ, 10 ಮತ್ತು 12ನೇ ತರಗತಿಗಳಿಗೆ ಅರ್ಧ ದಿನದವರೆಗೆ ಪೂರ್ಣ ಪ್ರಮಾಣದ ತರಗತಿಗಳನ್ನು ಇದೇ ಒಂದರಿಂದ ಪ್ರಾರಂಭಿಸಿತು.

ಶಾಲೆಗಳನ್ನು ತೆರೆದು ಮೂರು ವಾರಗಳು ಕಳೆದಿವೆ. ಈವರೆಗೆ ಶಾಲೆಗಳಿಗೆ ಬಂದಿರುವ ಮಕ್ಕಳು, ಪಾಲಕರು ಅಥವಾ ಶಿಕ್ಷಕರನ್ನು ಕೊರೊನಾ ಸೋಂಕು ಬಾಧಿಸಿಲ್ಲ. ಶಾಲೆಗಳನ್ನು ತೆರೆಯುವುದರಿಂದ ಯಾವುದೇ ಸಮಸ್ಯೆಯೂ ಆಗುವುದಿಲ್ಲ ಎಂಬುದನ್ನು ‘ವಿದ್ಯಾರ್ಥಿಗಳ ನಡೆ ಶಾಲೆಯ ಕಡೆ’ ಅಭಿಯಾನವು ಪ್ರತಿಪಾದಿಸುತ್ತಲೇ ಬಂದಿದ್ದು, ಅದು ಈಗ ಸ್ಪಷ್ಟವಾಗಿದೆ.

ಇಂತಹ ಭಯ ಅನಗತ್ಯ ಎಂಬುದು ಈಗ ಸಾಬೀತಾಗಿರುವುದರಿಂದ, 1ರಿಂದ 12ನೇ ತರಗತಿಯವರೆಗೆ ಎಲ್ಲಾ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುವುದಕ್ಕೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮುದಾಯದ ಕಡೆಯಿಂದ ಒತ್ತಾಯ ಕೇಳಿಬರುತ್ತಿದೆ.

ಶಾಲೆ ಪ್ರಾರಂಭವಾಗದ ಕಾರಣ ಮಕ್ಕಳು ಹೇಗೆ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಸಾಗಾಣಿಕೆ, ಭಿಕ್ಷಾಟನೆಯಂತಹ ಸಾಮಾಜಿಕ ಅನಿಷ್ಟಗಳಿಗೆ ಗುರಿಯಾಗುತ್ತಿದ್ದಾರೆ ಎಂಬುದನ್ನು ಮಾಧ್ಯಮಗಳು ಅಂಕಿ-ಅಂಶಗಳ ಸಮೇತ ಮನಮುಟ್ಟುವಂತೆ ವರದಿ ಮಾಡಿವೆ. ಇದಲ್ಲದೆ, ಕೂಲಿ ಕಾರ್ಮಿಕರು ಮತ್ತು ಅತ್ಯಂತ ಬಡವರ್ಗದ ಜನರು ಕೂಲಿಗೆ ಹೋದ ಸಂದರ್ಭದಲ್ಲಿ ತಮ್ಮ ಮಕ್ಕಳ ರಕ್ಷಣೆ ಮತ್ತು ಆರೈಕೆಗೆ ಪರ್ಯಾಯ ವ್ಯವಸ್ಥೆಗಳಿಲ್ಲದ ಕಾರಣ ಪರಿತಪಿಸುವಂತಾಗಿದೆ. ಎಲ್ಲಾ ತರಗತಿಗಳನ್ನು ಪೂರ್ಣವಾಗಿ ಪ್ರಾರಂಭಿಸಿ, ಮಧ್ಯಾಹ್ನದ ಬಿಸಿಯೂಟ, ರೋಗನಿರೋಧಕ ಮಾತ್ರೆ ಮತ್ತು ಕಳೆದ 10 ತಿಂಗಳಿನಿಂದ ಮಕ್ಕಳಲ್ಲಿ ಉಂಟಾಗಿರುವ ಏಕಾಂಗಿತನ, ಖಿನ್ನತೆಯನ್ನು ತೊಡೆದುಹಾಕಲು ಕ್ರಮ ವಹಿಸುವಂತೆ ಸರ್ಕಾರಕ್ಕೆ ನಿರಂತರವಾಗಿ ಮನವಿ ಮಾಡುತ್ತಿದ್ದಾರೆ. ಆದರೆ ಈ ಬಡಜನರು ಹಾಗೂ ಕೃಷಿ- ಕೂಲಿಕಾರ್ಮಿಕರ ನೋವಿನ ಕೂಗು, ಅದರ ಹಿಂದಿರುವ ತುಮುಲ ನಮ್ಮ ಸರ್ಕಾರಕ್ಕೆ ಏಕೆ ಅರ್ಥವಾಗುತ್ತಿಲ್ಲ?

ಕೊರೊನಾದಿಂದ ಬದುಕು, ಜೀವನಾಧಾರ ಮತ್ತು ನೆಮ್ಮದಿಯನ್ನು ಕಳೆದುಕೊಂಡಿರುವ ಲಕ್ಷಾಂತರ ಬಡ ಕೃಷಿ ಕೂಲಿ ಕಾರ್ಮಿಕ ಕುಟುಂಬಗಳು ಹಿಂದೆಂದೂ ಕಾಣದಂತಹ ಸಂಕಷ್ಟಕ್ಕೆ ಗುರಿಯಾಗಿವೆ. ದಿನನಿತ್ಯದ ಬದುಕು ಮತ್ತು ಜೀವನಾಧಾರಕ್ಕಾಗಿ ಹೋರಾಡುತ್ತಿವೆ. ಇಂತಹ ಸಂದರ್ಭದಲ್ಲಿ ಪೂರಕ ವ್ಯವಸ್ಥೆಗಳಾದ ಶಾಲೆ, ಆರೋಗ್ಯ ಕೇಂದ್ರ, ಪಡಿತರ ವ್ಯವಸ್ಥೆ ಎಲ್ಲವನ್ನೂ ಸಮರ್ಪಕವಾಗಿ ಮತ್ತು ಸುರಕ್ಷಿತವಾಗಿ ನಡೆಯುವಂತೆ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ ತನ್ನ ಜವಾಬ್ದಾರಿ ಮೆರೆಯಬೇಕಾಗಿದೆ.

ಈ ಮಧ್ಯೆ, ಅಂಗನವಾಡಿಗಳನ್ನು ದೀರ್ಘಕಾಲದಿಂದ ಮುಚ್ಚಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಲಾಯಿತು. ದೇಶದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಕೂಡಲೇ ಪುನಃ ತೆರೆಯುವಂತೆ ಮತ್ತು ಲಾಕ್‌ಡೌನ್‌ಗೆ ಮುಂಚಿನಂತೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಕಾರ ಅಂಗನವಾಡಿ ಸೇವೆಯನ್ನು ಒದಗಿಸಲು ನಿರ್ದೇಶನ ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು. ಇತ್ತೀಚೆಗೆ ತೀರ್ಪು ನೀಡಿದ ಕೋರ್ಟ್‌, ಕೇಂದ್ರ ಸರ್ಕಾರ, ಎಲ್ಲಾ ರಾಜ್ಯ ಸ‌ರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 2013ರ ಆಹಾರ ಭದ್ರತಾ ಕಾಯ್ದೆಯ ಶಾಸನಬದ್ಧ ಅವಶ್ಯಕತೆಗಳನ್ನು ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಉದಾಹರಣೆಗೆ, ಅಂಗನವಾಡಿಗಳನ್ನು ತೆರೆಯುವುದು, ಅಂಗನವಾಡಿಗಳ ಮೂಲಕ ಪೌಷ್ಟಿಕ ಆಹಾರವನ್ನು ಒದಗಿಸುವುದು, ಬಿಸಿಯೂಟ ಯೋಜನೆಯಂತಹ ಕಾರ್ಯಗಳನ್ನು ಅರ್ಥಪೂರ್ಣವಾಗಿಸಲು ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಪೌಷ್ಟಿಕ ಆಹಾರವನ್ನು ನಿಜವಾದ ಅರ್ಥದಲ್ಲಿ ಪೂರೈಸಬೇಕು ಎಂದು ಅಭಿಪ್ರಾಯಪಟ್ಟಿದೆ.

ಜೊತೆಗೆ, ಕೇಂದ್ರ ಸರ್ಕಾರವು ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ಅನುಮತಿ ನೀಡಿದೆ. ಅದರಂತೆ ಹಲವಾರು ರಾಜ್ಯಗಳು ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಿವೆ. ನಿರ್ದಿಷ್ಟ ಕಾರಣಗಳಿಲ್ಲದಿದ್ದರೆ ಕ್ವಾರಂಟೈನ್‌ ವಲಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಡೆ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಕಳೆದ ನವೆಂಬರ್‌ನಲ್ಲಿ ಹೊರಡಿಸಿದ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಅಂಗನವಾಡಿ ಕೇಂದ್ರಗಳನ್ನು ಇನ್ನೂ ತೆರೆಯದಿರುವ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಇದೇ 31ರಂದು ಅಥವಾ ಅದಕ್ಕೂ ಮೊದಲು ತೆರೆಯುವ ನಿರ್ಧಾರ ತೆಗೆದುಕೊಳ್ಳಬೇಕೆಂದು ನಿರ್ದೇಶನ ನೀಡಿದೆ.

ಹೀಗಿರುವಾಗ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಸರ್ಕಾರ 1ರಿಂದ 12ನೇ ತರಗತಿಯವರೆಗೆ ಎಲ್ಲಾ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿ, ಮಕ್ಕಳಿಗೆ ಕಲಿಕೆಯ ಜೊತೆಗೆ ಬಿಸಿಯೂಟ ಮತ್ತು ಪೂರಕ ರೋಗನಿರೋಧಕ ಮಾತ್ರೆಗಳನ್ನು ಒದಗಿಸಲು ಏಕೆ ಹಿಂದೆಮುಂದೆ ನೋಡುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಸರ್ಕಾರ ತನ್ನ ಜವಾಬ್ದಾರಿಯ ಭಾಗವಾಗಿ ಕೂಡಲೇ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕಾಗಿರುವುದು ಇಂದಿನ ತುರ್ತು ಅಗತ್ಯ.

ಲೇಖಕ: ಅಭಿವೃದ್ಧಿ ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT