ಗುರುವಾರ , ಮೇ 19, 2022
23 °C
ವಿದ್ಯಾರ್ಥಿಗಳ ಆಸಕ್ತಿ ಹಾಗೂ ಸಾಮರ್ಥ್ಯಗಳನ್ನು ಗಣನೆಗೆ ತೆಗೆದುಕೊಳ್ಳುವ ಅವಕಾಶಗಳು ಇಲ್ಲದ ಕಾರಣ, ದೇಶದ ಅಮೂಲ್ಯ ಪ್ರತಿಭೆಗಳು ಕಮರಿಹೋಗುತ್ತಿವೆ

ಸಂಗತ| ಕಲಿಕೆ, ಆಸಕ್ತಿ, ಆಯ್ಕೆಗೆ ಅವಕಾಶ

ಡಾ. ಎಚ್.ಬಿ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

Prajavani

ರಾಷ್ಟ್ರೀಯ ಶಿಕ್ಷಣ ನೀತಿ- 2020, ಮಕ್ಕಳ ಕೇಂದ್ರಿತವಾದ ಅನೇಕ ಅಂಶಗಳನ್ನು ಒಳಗೊಂಡಿದೆ. ಅವುಗಳಲ್ಲಿ 10 ಹಾಗೂ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಎಲ್ಲಾ ವಿಷಯಗಳನ್ನು ಎರಡು ಹಂತಗಳಲ್ಲಿ ಕಲಿಯಲು ಮಕ್ಕಳಿಗೆ ಅವಕಾಶ ನೀಡುವ ಅಂಶವೂ ಒಂದು. ಮೊದಲಿಗೆ ಗಣಿತ ವಿಷಯದಲ್ಲಿ ಈ ಅಂಶವನ್ನು ಅಳವಡಿಸುವ ಪ್ರಸ್ತಾಪ ಇದೆ.

ವಿದ್ಯಾರ್ಥಿಗಳು ಕೆಲವು ವಿಷಯಗಳನ್ನು ಸಾಮಾನ್ಯ ಹಂತದಲ್ಲಿ ಕಲಿಯಲು ಇಚ್ಛಿಸಬಹುದು ಹಾಗೂ ಇನ್ನೂ ಕೆಲವು ವಿಷಯಗಳನ್ನು ಉನ್ನತ ಹಂತದಲ್ಲಿ ಕಲಿಯಬಹುದಾಗಿದೆ. ಉದಾಹರಣೆಗೆ, ಗಣಿತ ವಿಷಯವನ್ನು ಕಲಿಯಲು ಆಸಕ್ತಿ ಇಲ್ಲದ ವಿದ್ಯಾರ್ಥಿಗಳು ಅದನ್ನು ಸಾಮಾನ್ಯ ಹಂತದಲ್ಲಿ ಕಲಿಯಲು ಆಯ್ಕೆ ಮಾಡಿಕೊಳ್ಳಬಹುದು. ಅದೇ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯಲ್ಲಿ ಆಸಕ್ತಿ ಇದ್ದಲ್ಲಿ ಅವರು ಆ ವಿಷಯವನ್ನು ಉನ್ನತ ಹಂತದಲ್ಲಿ ಆಯ್ಕೆ ಮಾಡಿಕೊಂಡು ಕಲಿಯಲು ಅವಕಾಶ ಇರುತ್ತದೆ. ಮಕ್ಕಳ ಶೈಕ್ಷಣಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ಅಂಶವು ಮಹತ್ವಪೂರ್ಣವಾಗಿದೆ.

ಅನೇಕ ವಿದ್ಯಾರ್ಥಿಗಳಿಗೆ ವಿವಿಧ ಕಾರಣಗಳಿಂದ ಗಣಿತ ಮತ್ತು ಇಂಗ್ಲಿಷ್ ಭಾಷಾ ವಿಷಯಗಳು ಕಠಿಣ ವಾಗಿರುತ್ತವೆ. ನಾನು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕನಾಗಿದ್ದಾಗ, ಗ್ರಾಮೀಣ ಭಾಗದಿಂದ ಬಂದ ಕಲಾ ವಿಭಾಗದ ಹೆಚ್ಚಿನ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದುದನ್ನು ಗಮನಿಸಿದ್ದೆ. ಅಂತಹ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆ ಹೊರತುಪಡಿಸಿ ಇತರ ಎಲ್ಲಾ ವಿಷಯಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿರುತ್ತಿದ್ದರು. ಈ ರೀತಿ ಇಂಗ್ಲಿಷ್ ಭಾಷೆ, ಗಣಿತ ಅಥವಾ ಇನ್ನಿತರ ನಿರ್ದಿಷ್ಟ ವಿಷಯಗಳು ಪೂರ್ಣವಾಗಿ ಒಲಿಯದ ಕಾರಣ ವಿದ್ಯಾಭ್ಯಾಸ ಮುಂದುವರಿಸಲಾಗದೆ ಅನೇಕ ಪ್ರತಿಭೆಗಳು ಕಮರಿ ಹೋಗುವ ಸನ್ನಿವೇಶವಿದೆ.

ಮೂರು ವರ್ಷಗಳ ಕೆಳಗೆ ಬಾಂಬೆ ಹೈಕೋರ್ಟ್‌ ಪೀಠವು ಪ್ರಕರಣವೊಂದರ ವಿಚಾರಣೆಯ ವೇಳೆ, ಹತ್ತನೇ ತರಗತಿಯಲ್ಲಿ ಗಣಿತ ಕಲಿಕೆಯನ್ನು ಐಚ್ಛಿಕ ವನ್ನಾಗಿ ಪರಿಗಣಿಸಬಾರದೇಕೆ ಎಂಬ ಪ್ರಶ್ನೆಯನ್ನು ಹತ್ತನೇ ತರಗತಿಯ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಮಂಡಳಿಗಳಿಗೆ ಹಾಕಿತ್ತು. ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾ ದ ವಿ.ಎಂ.ಕಾನಡೆ ಮತ್ತು ಎ.ಎಂ.ಬಾದರ್‌ ಅವರು, ‘ಹತ್ತನೇ ತರಗತಿಯಲ್ಲಿ ಅನೇಕ ವಿದ್ಯಾರ್ಥಿಗಳು ಗಣಿತ ಹಾಗೂ ಕೆಲವು ಭಾಷಾ ವಿಷಯಗಳಲ್ಲಿ
ಉತ್ತೀರ್ಣರಾಗದೇ ಶಾಲೆ ತೊರೆಯುತ್ತಾರೆ. ಅದರಲ್ಲೂ ಪದವಿ ಹಂತದಲ್ಲಿ ಕಲೆ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್‌ಗಳಿಗೆ ಗಣಿತ ಕಲಿಕೆಯ ಅವಶ್ಯಕತೆಯೇ ಬೀಳುವುದಿಲ್ಲ. ಈ ಕಾರಣದಿಂದ ಗಣಿತ ಕಲಿಕೆಯನ್ನು ಕಡ್ಡಾಯಗೊಳಿಸಿರುವುದರಿಂದ ವಿನಾಯಿತಿ ನೀಡಿದಲ್ಲಿ ಅವರು ಪದವಿ ಪೂರೈಸಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದರು ಮತ್ತು ಈ ಬಗ್ಗೆ ಪರಿಶೀಲಿಸಲು ಸೂಚಿಸಿದ್ದರು.

ಎಲ್ಲ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳನ್ನು ಕಲಿಯುವ ಅಗತ್ಯ ಬೀಳುವುದಿಲ್ಲ. ವಿದ್ಯಾರ್ಥಿಗಳಿಗೆ ಬೇಕೋ ಬೇಡವೋ ಕಲಿಯಲು ಸಾಧ್ಯವಿದೆಯೋ ಇಲ್ಲವೋ ಎಂಬುದನ್ನು ಗಮನಿಸದೆ ಎಲ್ಲಾ ವಿಷಯಗಳನ್ನು ಒಂದು ಪ್ಯಾಕೇಜ್ ರೀತಿ ಮಾಡಿ ಕಲಿಸು ತ್ತಿದ್ದೇವೆ. ಪ್ರಸ್ತುತ ಇರುವ ಪಠ್ಯಕ್ರಮದಂತೆ 10ನೇ ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ನಿಗದಿತವಾದ ಆರೂ ವಿಷಯಗಳನ್ನು ಕಲಿತು, ಪರೀಕ್ಷೆಯಲ್ಲಿ
ಉತ್ತೀರ್ಣಗೊಳ್ಳಲೇಬೇಕಿದೆ. ವಿದ್ಯಾರ್ಥಿಗಳ ಆಸಕ್ತಿ, ಸಾಮರ್ಥ್ಯಗಳನ್ನು ಗಣನೆಗೆ ತೆಗೆದುಕೊಳ್ಳುವ ಅವಕಾಶಗಳು ಇಲ್ಲದ ಕಾರಣ ದೇಶದ ಅಮೂಲ್ಯ ಪ್ರತಿಭೆಗಳು ವ್ಯರ್ಥವಾಗುತ್ತಿವೆ.

ಅಮೆರಿಕದ ಕೆಲವು ತಜ್ಞರು ಬೀಜಗಣಿತದ ಕಡ್ಡಾಯ ಕಲಿಕೆಯಿಂದ ವಿನಾಯಿತಿ ನೀಡಬೇಕೆಂದು ಕೆಲ ವರ್ಷಗಳಿಂದ ಅಲ್ಲಿಯ ಸರ್ಕಾರವನ್ನು
ಒತ್ತಾಯಿಸುತ್ತಿದ್ದಾರೆ. ಅಧ್ಯಯನ ವರದಿಗಳಂತೆ, ಅಮೆರಿಕದಲ್ಲಿ ಉನ್ನತ ಹಂತದ ಗಣಿತವನ್ನು ಕಲಿಯಲು ಸಾಧ್ಯವಾಗದೇ ನಾಲ್ವರಲ್ಲಿ ಒಬ್ಬ ವಿದ್ಯಾರ್ಥಿ (ಶೇ 25ರಷ್ಟು) 9ನೇ ತರಗತಿಯಲ್ಲಿ ಉತ್ತೀರ್ಣ ವಾಗಲು ವಿಫಲವಾಗುವುದಾಗಿ ಹೇಳಲಾಗಿದೆ. ನಮ್ಮ ಲ್ಲಿಯೂ ಇಂತಹ ಅಧ್ಯಯನಗಳು ನಡೆದಲ್ಲಿ ವಿವಿಧ ತರಗತಿಗಳ ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳ ಅನುತ್ತೀರ್ಣತೆಯ ಪ್ರಮಾಣವನ್ನು ಕಂಡುಕೊಳ್ಳ
ಬಹುದು. ತಜ್ಞರು ಅಭಿಪ್ರಾಯಪಟ್ಟಂತೆ, ಲೆಕ್ಕಾಚಾರ, ದಶಮಾಂಶ, ಅನುಪಾತ, ಅಂದಾಜಿಸುವಿಕೆ ಗಳಂತಹ ಅಂಕಗಣಿತದ ಮೂಲಭೂತ ಕೌಶಲಗಳ ಕಲಿಕೆಯನ್ನು ಎಲ್ಲರಿಗೂ ಸಮರ್ಪಕವಾಗಿ ಕಲಿಸುವ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ, ಸಾಮಾನ್ಯ ಹಂತದಲ್ಲಿ ರೂಪಿಸಲಾಗುವ ವಿಷಯಗಳನ್ನು ಸರಳ, ಆಳ ಹಾಗೂ ಆಸಕ್ತಿಕರವಾಗಿರುವಂತೆ ವಿನ್ಯಾಸಗೊಳಿಸಬೇಕು.

ಗಣಿತ, ವಿಜ್ಞಾನದ ಕಲಿಕೆ ಬೇಡವೆನ್ನುವವರು ಕಲಾ ವಿಷಯಗಳನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡು ಕಲಿಯಲು 60ರ ದಶಕದಲ್ಲಿ ಅವಕಾಶವಿತ್ತು. ಆದಾಗ್ಯೂ ಗಣಿತವನ್ನು ಮೂಲವಿಷಯವನ್ನಾಗಿ (ಸರಳ ಗಣಿತ) ಕಲಿಯುವುದು ಕಡ್ಡಾಯವಾಗಿದ್ದ ಬಗ್ಗೆ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಚರಿತ್ರೆ ಪುನರಾವರ್ತನೆಯಾಗುತ್ತದೆ ಎಂಬ ಮಾತಿನಂತೆ, ಈಗಲೂ ಅಂತಹ ಉತ್ತಮ ವ್ಯವಸ್ಥೆ ಜಾರಿಗೆ ಬರುವುದರಲ್ಲಿದೆ. ವಿದ್ಯಾರ್ಥಿಗಳ ಆಸಕ್ತಿ, ಸಾಮರ್ಥ್ಯಗಳಿಗೆ ತಕ್ಕಂತೆ ಕಲಿಯಲು ಅವಕಾಶ ಕಲ್ಪಿಸಿದಲ್ಲಿ, ಬಾಲ್ಯದಲ್ಲೇ ಕಮರಿಹೋಗಬಹುದಾದ ಎಷ್ಟೋ ಪ್ರತಿಭೆಗಳು ಬೆಳಗುವುದರಲ್ಲಿ ಸಂಶಯವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು