ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸ್ವಚ್ಛತೆ: ಆಗಬೇಕಿದೆ ಆಂದೋಲನ

ಸ್ವಚ್ಛತಾ ಕೆಲಸಗಳಿಗೆ ಸಾಮೂಹಿಕ ಸ್ಪರ್ಶ ದಕ್ಕಿದಾಗ ಬದ್ಧತೆ ಗಟ್ಟಿಗೊಳ್ಳುತ್ತದೆ
Published 29 ಜನವರಿ 2024, 23:30 IST
Last Updated 29 ಜನವರಿ 2024, 23:30 IST
ಅಕ್ಷರ ಗಾತ್ರ

ಶಾಲೆಯ ಸ್ವಚ್ಛತಾ ಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪರ-ವಿರೋಧದ ಅಭಿಪ್ರಾಯಗಳ ಸಹಿತ ಚರ್ಚೆ ನಡೆದಿದೆ. ಜಾಗತಿಕ ಮಟ್ಟದಲ್ಲಿ ರೂಪುಗೊಂಡಿರುವ ಸುಸ್ಥಿರ ಅಭಿವೃದ್ಧಿ ಗುರಿಯ ಅನುಸಾರ, ವಿಶ್ವದ ಪ್ರತಿ ಶಾಲೆಯಲ್ಲಿ ಸುರಕ್ಷಿತ, ಅಹಿಂಸಾತ್ಮಕ, ಒಳಗೊಳ್ಳುವ ಮತ್ತು ಪರಿಣಾಮಕಾರಿ ಕಲಿಕೆಯ ವಾತಾವರಣ ಇರಬೇಕು ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಪ್ರತಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರು, ಆರೋಗ್ಯ, ನೈರ್ಮಲ್ಯದ ವ್ಯವಸ್ಥೆ ಎಲ್ಲ ಮಕ್ಕಳಿಗೆ ಲಭ್ಯವಿರಬೇಕು.

ಯುನಿಸೆಫ್‌ನ 2021ರ ವರದಿಯ ಪ್ರಕಾರ, ವಿಶ್ವದ ಶೇಕಡ 71ರಷ್ಟು ಶಾಲೆಗಳಲ್ಲಿ ಕುಡಿಯುವ ನೀರು ಹಾಗೂ ಶೇ 72ರಷ್ಟು ಶಾಲೆಗಳಲ್ಲಿ ಶೌಚಾಲಯದ ಲಭ್ಯತೆ ಇದೆ. ಉಳಿದಂತೆ 54.60 ಕೋಟಿ ಮಕ್ಕಳಿಗೆ ಶಾಲೆಯಲ್ಲಿ ಕುಡಿಯುವ ನೀರಿನ ಲಭ್ಯತೆ ಇಲ್ಲ. 3.90 ಕೋಟಿ ಮಕ್ಕಳಿಗೆ ಶಾಲೆಯಲ್ಲಿ ಶೌಚಾಲಯ ಸೌಲಭ್ಯ ಇಲ್ಲ. ನಮ್ಮ ದೇಶದಲ್ಲಿನ 36.97 ಕೋಟಿ ಶಾಲಾ ಮಕ್ಕಳ ಪೈಕಿ ಶೇ 74ರಷ್ಟು ಮಕ್ಕಳಿಗೆ ಉತ್ತಮವಾದ ಕುಡಿಯುವ ನೀರಿನ ಲಭ್ಯತೆ ಇದೆ. ಶೇ 21ರಷ್ಟು ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಕನಿಷ್ಠ ಸೌಲಭ್ಯಗಳಷ್ಟೇ ಇವೆ. ಉಳಿದ ಶೇ 4ರಷ್ಟು ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯವೇ ಇಲ್ಲ. ಅದೇ ರೀತಿ ಶೇ 86ರಷ್ಟು ಶಾಲಾ ಮಕ್ಕಳಿಗೆ ಉಪಯೋಗಿಸಲು ಸಾಧ್ಯ ಆಗುವಂತಹ ಶೌಚಾಲಯ ವ್ಯವಸ್ಥೆ ಇದೆ. ಉಳಿದ ಶೇ 14ರಷ್ಟು ಮಕ್ಕಳಿಗೆ ಶೌಚಾಲಯ ಸೌಲಭ್ಯ ಇಲ್ಲ. ಇದನ್ನು ಗಮನಿಸಿದರೆ ಜಾಗತಿಕ ಮಟ್ಟದಲ್ಲಿ, ಅಂತೆಯೇ ನಮ್ಮ ದೇಶದ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ಲಭ್ಯತೆಯ ವ್ಯವಸ್ಥೆಗಳನ್ನು ಉತ್ತಮಗೊಳಿಸುವ ಅಗತ್ಯ ಇದೆ.

ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯ ಲಭ್ಯತೆಯು ಶಾಲಾ ಸ್ವಚ್ಛತೆಯ ಮೇಲೆ ಪ್ರಭಾವ ಬೀರುತ್ತದೆ. ನೀರಿನ ಸಮರ್ಪಕ ಲಭ್ಯತೆ ಇಲ್ಲದಿದ್ದಲ್ಲಿ ಶೌಚಾಲಯಗಳಲ್ಲಿ ಸ್ವಚ್ಛತೆಯನ್ನು ಖಾತರಿಪಡಿಸುವುದು
ಸಾಧ್ಯವಾಗದು. ಕೆಲವು ಪ್ರದೇಶಗಳ ಜನರು ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಂಡಾಗ್ಯೂ
ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಉತ್ಸಾಹ ತೋರಿಸುತ್ತಿಲ್ಲ ಎಂಬ ವರದಿಗಳಿವೆ. ತಮ್ಮ ಮನೆಯೊಳಗೆ ಶೌಚಾಲಯಗಳನ್ನು ಹೊಂದುವ ಕುರಿತೇ ಮಡಿವಂತಿಕೆ ಇರುವ ಜನರು, ಅವುಗಳನ್ನು ತಾವೇ ಮನಃಪೂರ್ವಕವಾಗಿ ಸ್ವಚ್ಛಗೊಳಿಸುತ್ತಾರೆ ಎನ್ನುವಂತಿಲ್ಲ. ಇಂತಹ ಮನಃಸ್ಥಿತಿಯು ನಿಧಾನವಾಗಿ ಬದಲಾಗುತ್ತಿರುವುದು ಆಶಾದಾಯಕ ಬೆಳವಣಿಗೆ.

ಜನ ತಮ್ಮ ಮನೆಯೊಳಗಿನ ಪ್ರದೇಶದ ಸ್ವಚ್ಛತೆಗೆ ಆದ್ಯತೆ ನೀಡಿದಷ್ಟು ಮನೆಯ ಹೊರಗಿನ ಪ್ರದೇಶವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇಂತಹ ಪರಿಸ್ಥಿತಿಯನ್ನು ಸುಧಾರಿಸಲು ಮಕ್ಕಳಿಗೆ ಶಾಲಾ ಹಂತದಿಂದಲೇ ತಿಳಿವಳಿಕೆ ನೀಡಬೇಕು. ನಾಗರಿಕರಲ್ಲಿ ಅರಿವು ಮೂಡಿಸಬೇಕು. ಮಕ್ಕಳಿಗೆ ಯಾವುದೇ ರೀತಿ ಬಾಧಕ ಆಗದ ರೀತಿಯಲ್ಲಿ, ಸಾಧ್ಯವಿರುವ ಕಡೆ ಮಕ್ಕಳನ್ನು ಶಾಲಾ ಹಂತದಲ್ಲಿ ಸ್ವಚ್ಛತೆಯ ಕೆಲಸಗಳಲ್ಲಿ ಸಹಭಾಗಿಗಳನ್ನಾಗಿ ಮಾಡಿಕೊಳ್ಳುವುದು ಪರಿಣಾಮಕಾರಿಯಾಗುತ್ತದೆ ಎಂಬ ಭಾವನೆ ಇದೆಯಾದರೂ ಮಕ್ಕಳನ್ನು ಸ್ವಚ್ಛತಾ ಕೆಲಸಗಳಲ್ಲಿ ಸಹಭಾಗಿ ಮಾಡಿಕೊಳ್ಳಲು ಪೋಷಕರು, ಸಮುದಾಯದ ಅಂಗೀಕಾರ ಅಗತ್ಯ. ಇದರ ಜೊತೆ ಸ್ವಚ್ಛತೆಗೆ ಅಗತ್ಯವಾದ ಪರಿಕರ ಹಾಗೂ ಸೌಲಭ್ಯಗಳ ಲಭ್ಯತೆಯೂ ಮುಖ್ಯವಾಗುತ್ತದೆ.

ಜಪಾನ್‌ ದೇಶದಲ್ಲಿ ಶಾಲಾ ಮಕ್ಕಳು ತಮ್ಮ ಶಾಲೆಗಳ ಆವರಣ, ಶಾಲಾ ಮೈದಾನ ಹಾಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಸುದ್ದಿ, ವಿಡಿಯೊಗಳು ಹರಿದಾಡುತ್ತಿವೆ. ಜಪಾನ್‌ ದೇಶವು ಹಲವಾರು ವರ್ಷಗಳಿಂದ ಶಾಲಾ ಮಕ್ಕಳನ್ನು ಸ್ವಚ್ಛತೆಯ ಕೆಲಸಗಳಲ್ಲಿ ಸಹಭಾಗಿಗಳನ್ನಾಗಿ ಮಾಡಿದೆ. ಅಂದಮಾತ್ರಕ್ಕೆ ಸ್ವಚ್ಛತೆಗೆ ಅಲ್ಲಿ ಕೆಲಸಗಾರರನ್ನೇ ನಿಯೋಜಿಸುವುದಿಲ್ಲ, ಮಕ್ಕಳೇ ಎಲ್ಲ ರೀತಿಯ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾರೆ ಎಂದಲ್ಲ. ಕೆಲವು ಶಾಲೆಗಳಲ್ಲಿ ಶೌಚಾಲಯಸಹಿತ ಶಾಲೆಯ ಎಲ್ಲ ಪ್ರದೇಶಗಳ ಸ್ವಚ್ಛತಾ ಕೆಲಸದಲ್ಲಿ ಮಕ್ಕಳ ತೊಡಗುವಿಕೆ ಇದೆ. ಕೆಲವು ಶಾಲೆಗಳಲ್ಲಿ ಶೌಚಾಲಯ ಹೊರತುಪಡಿಸಿ ಶಾಲೆಯ ತರಗತಿ ಕೋಣೆ ಹಾಗೂ ಇತರ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ಮಕ್ಕಳು ಸಹಭಾಗಿ ಆಗುವುದಿದೆ.

ಮಕ್ಕಳಿಗೆ ತಮ್ಮ ತರಗತಿಯ ಜೊತೆ ಶಾಲೆಯ ಇತರ ಎರಡು ಜಾಗಗಳಲ್ಲಿ ಸ್ವಚ್ಛತೆ ಕೈಗೊಳ್ಳುವ ಜವಾಬ್ದಾರಿ ನೀಡಲಾಗುತ್ತದೆ. ಚಿಕ್ಕ ತಂಡಗಳಲ್ಲಿ ಮಕ್ಕಳು ಖುಷಿ, ಸಂತಸದಿಂದ ಜೊತೆಗೂಡಿ ಮಾತನಾಡುತ್ತಾ ವಾರಕ್ಕೆ ನಾಲ್ಕು ಬಾರಿ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುತ್ತಾರೆ. ವರ್ಷಕ್ಕೆ ಮೂರು ಬಾರಿ ಇಡೀ ಶಾಲೆಯ ಎಲ್ಲ ವಿದ್ಯಾರ್ಥಿಗಳು ಸೇರಿ ಸಂಪೂರ್ಣ ಶಾಲೆಯನ್ನು ಸಾಮೂಹಿಕವಾಗಿ ಸ್ವಚ್ಛಗೊಳಿಸುತ್ತಾರೆ. ಜಪಾನ್‌ ದೇಶದಿಂದ ಸ್ಫೂರ್ತಿ ಪಡೆದ ಸಿಂಗಪುರ ಸಹ 2016ರಲ್ಲಿ ಶೌಚಾಲಯ ಹೊರತುಪಡಿಸಿ, ತರಗತಿ ಕೋಣೆ ಹಾಗೂ ಶಾಲೆಯ ಆವರಣವನ್ನು ಮಕ್ಕಳಿಂದ ಸ್ವಚ್ಛಗೊಳಿಸುವ ಕಾರ್ಯವನ್ನು ಪ್ರಾರಂಭಿಸಿದೆ.

ಸ್ವಚ್ಛತೆಯನ್ನು ಸಾಮೂಹಿಕ ಕ್ರಿಯೆಯಾಗಿ ಅಳವಡಿಸಿಕೊಳ್ಳುವ ದಿಸೆಯಲ್ಲಿ ನಾವು ಕೂಡ ಚಿಂತಿಸಬಹುದು. ಶಾಲಾಕಾಲೇಜು ಆವರಣಗಳು ಮಾತ್ರವಲ್ಲದೆ, ಕಚೇರಿಗಳು, ಗ್ರಾಮ ಪಂಚಾಯಿತಿ ಆವರಣಗಳು, ಮೈದಾನಗಳಂತಹ ಎಲ್ಲ ಕಡೆಗೂ ಇದನ್ನು ವಿಸ್ತರಿಸಬಹುದು. ಮಕ್ಕಳು, ಶಿಕ್ಷಕರು, ಶಾಲಾಕಾಲೇಜು, ಕಚೇರಿಗಳ ಸಿಬ್ಬಂದಿ ಜೊತೆ ಆಸಕ್ತ ಸಾರ್ವಜನಿಕರೂ ಸೇರಿ ಸಾಮೂಹಿಕವಾಗಿ ಇಂತಹ ಕೆಲಸಗಳಲ್ಲಿ ತೊಡಗಿಕೊಂಡಾಗ ಅದರ ಪರಿಣಾಮ ದೊಡ್ಡ ಮಟ್ಟದಲ್ಲಿ ಇರುತ್ತದೆ. ಸ್ವಚ್ಛತೆಯ ಬಗೆಗಿನ ನಮ್ಮ ಬದ್ಧತೆಯನ್ನೂ ಗಟ್ಟಿಗೊಳಿಸುತ್ತದೆ. ಆದರೆ ಈ ಕೆಲಸ ಒಂದು ದಿನಕ್ಕೆ, ಯಾವುದೋ ಒಂದು ಸಂದರ್ಭಕ್ಕೆ ಸೀಮಿತವಾಗಬಾರದು. ನಿರಂತರವಾಗಿ ಜರುಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT