ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೀನಿಕ್ಸ್‌ ಸಾಹೇಬರ ದರ್ಶನ ಭಾಗ್ಯ

Last Updated 11 ಜೂನ್ 2019, 20:09 IST
ಅಕ್ಷರ ಗಾತ್ರ

ಚುನಾವಣೆ ಆದಮೇಲೆ ನಮ್ಮೂರಿಗೆ ಬರೋ ಜನರ ಸಂಖ್ಯೆಯೇ ಕಮ್ಮಿ ಆಗಿಹೋಗಿದೆ. ಅಂತಹುದರಲ್ಲಿ ಇವರು ಯಾರಪ್ಪಾ ಹೊಸಬರು ಅಂತ ನೋಡಿದೆ. ಒಳ್ಳೆ ಹಕ್ಕಿ ಥರ ಕಾಣಿಸ್ತಾ ಇದೆ, ಪ್ರಾಣಿಯೋ ಅಥವಾ ಪಕ್ಷಿಯೋ ಅನ್ನುವ ಜಿಜ್ಞಾಸೆಯಾದಾಗ, ಕಂಡದ್ದು ಫೀನಿಕ್ಸ್ ಪಕ್ಷಿ.

‘ಇದೇನು ಫೀನಿಕ್ಸ್ ಅವರೇ, ಎಷ್ಟು ದೂರದಿಂದ ಇಲ್ಲಿಗೆ ದಯಮಾಡಿಸಿದ್ದೀರಲ್ಲಾ, ಏನ್ ಸಮಾಚಾರ’ ಅಂದೆ.

‘ಈ ರಾಜ್ಯದಲ್ಲಿ ಬಹಳ ಜನ ನನ್ನನ್ನು ನೆನಪಿಸಿಕೊಳ್ತಾ ಇದಾರೆ ಅಂತ ಗೊತ್ತಾಯ್ತು. ಚುನಾವಣೇಲಿ ಮಣ್ಣು ಮುಕ್ಕಿದ ಘಟಾನುಘಟಿಗಳೆಲ್ಲಾ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ, ಫೀನಿಕ್ಸ್‌ ಥರ ಮತ್ತೆ ಎದ್ದು ಬರ್ತೀನಿ ಅಂತ ಬಡಾಯಿ ಕೊಚ್ಚಿಕೊಳ್ತಾ ಇದಾರಂತೆ. ಹಾಗಾದ್ರೆ ಇವರಿಗೆಲ್ಲ ಚುನಾವಣೆಯಲ್ಲಿ ಮುಗ್ಗರಿಸಿದ ಮೇಲಷ್ಟೇ ನಾನು ನೆನಪಿಗೆ ಬರ್ತೀನಿ ಅಂತ ಆಯ್ತು’ ಎಂದಿತು.

‘ಹೌದು, ತಾವು ಸುಟ್ಟು ಬೂದಿಯಾದರೂ ಅದರಿಂದಲೇ ಮರುಹುಟ್ಟು ಪಡೀತೀರ ಅಂತ ಕಾಲೇಜಲ್ಲಿ ಓದಿದ್ದೆ. ತಮ್ಮ ದರ್ಶನ ಭಾಗ್ಯ ಸಿಕ್ಕಿದ್ದು ಒಳ್ಳೇದಾಯ್ತು, ಕೃತಾರ್ಥನಾದೆ’ ಅಂದೆ.

‘ನಾನು ಕೆಲವು ದಿನ ಈ ರಾಜ್ಯದಲ್ಲೇ ನೆಲೆಸಿ ಮುಂದಿನ ಬೆಳವಣಿಗೆಗಳನ್ನು ನೋಡೋಣ ಅಂದುಕೊಂಡಿದ್ದೀನಿ, ಚುನಾವಣಾ ಆಯೋಗದ ವೀಕ್ಷಕರ ಥರ’ ಎಂದು ನಕ್ಕಿತು. ‘ಬಹಳ ಒಳ್ಳೆಯ ನಿರ್ಧಾರ. ಆದರೆ, ಎಲ್ಲಿ ವಾಸ್ತವ್ಯ ಹೂಡಬೇಕೆಂದಿರುವಿರಿ? ನಮ್ಮ ರಾಜಕೀಯ ಧುರೀಣರ ದೃಷ್ಟಿಯೆಲ್ಲ ಈಗ ಮನೆಯಿಂದ ಶಾಲೆಗಳ ಕಡೆಗೆ ಹರಿದಿದೆ’ ಎಂದೆ.

‘ಮಂಡ್ಯದಲ್ಲಿ ಇರೋಣ ಅನ್ನೋ ಪ್ರೇರಣೆಯಾಗಿದೆ. ಅಲ್ಲಿನ ಮಂತ್ರಿಗಳು ನನಗೆ ಈ ನಿಟ್ಟಿನಲ್ಲಿ ಸಹಾಯ ಮಾಡಬಹುದಲ್ಲವೇ?’

‘ಏನಂದ್ರೀ, ಅವರು ಸಹಾಯ ಮಾಡೋದೆ. ನೀವು ಅವರ ಕಡೆಯೋರಿಗೆ ವೋಟು ಹಾಕಿದ್ದಿದ್ರೆ ಎಷ್ಟು ಬೇಕಾದ್ರೂ ಸಹಾಯ ಮಾಡೋರು. ಚುನಾವಣೆ ಸಮಯದಲ್ಲಿ ಎಲ್ಲಿದ್ರಿ ಅಂತ, ಸಹಾಯ ಕೇಳಿಕೊಂಡು ಬಂದವರನ್ನೆಲ್ಲಾ ತರಾಟೆಗೆ ತಗೋತಿದಾರೆ ಗೊತ್ತಾ’ ಎಂದೆ.

ಹೆದರಿದ ಫೀನಿಕ್ಸ್‌ ಅವರು ‘ಅಯ್ಯೋ ಹಾಗಾದ್ರೆ ಈ ಚುನಾವಣೇಲಿ ಮುಗ್ಗಿರಿಸಿದೋರ ಸಾವಾಸವೇ ಬೇಡ’ ಅನ್ನುತ್ತಾ, ಗುರುಗುಟ್ಟಿಕೊಂಡು ನೋಡಿ ತಾವೇ ಸುಟ್ಟು ಬೂದಿಯಾಗಿ ಅದೃಶ್ಯರಾದರು, ಯಾವ ಘಟಾನುಘಟಿಗಳ ಕಣ್ಣಿಗೂ ಬೀಳದಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT