ಶನಿವಾರ, ಸೆಪ್ಟೆಂಬರ್ 19, 2020
22 °C

ಯಾರನ್ನು ನಂಬಿ ಯಾರು ಕೆಟ್ಟರು?

ಪ್ರೊ. ಜಿ.ಕೆ. ಗೋವಿಂದ ರಾವ್ Updated:

ಅಕ್ಷರ ಗಾತ್ರ : | |

Prajavani

ಸುಮಾರು 14 ತಿಂಗಳು ನಕ್ಕು ನಗಿಸಿದ ಅಸಂಬದ್ಧ ರಾಜಕೀಯ ಪ್ರಹಸನ ಈಗ ಉತ್ಕರ್ಷದ ಹಂತ ತಲುಪಿದೆ. ತಮ್ಮ ಈ ಅಧಿಕಾರದ ಅವಧಿಯಲ್ಲಿ ಮುಖ್ಯಮಂತ್ರಿ, ಸಕುಟುಂಬ ಪರಿವಾರ ಸಮೇತರಾಗಿ ನಾಡಿನ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ, ಫಲ ಮಂತ್ರಾಕ್ಷತೆಗಳನ್ನು ಸ್ವೀಕರಿಸಿ, ಐದು ವರ್ಷದ ತಮ್ಮ ಆಡಳಿತಕ್ಕೆ ಶುಭ ಆಶೀರ್ವಾದ ಕೇಳಿಕೊಂಡದ್ದೇ ಅವರ ಪ್ರಧಾನ ಆಡಳಿತ ಚಟುವಟಿಕೆಯಾಗಿತ್ತು. ಜೊತೆಗೆ ಇತ್ತೀಚೆಗೆ ಗ್ರಾಮ ವಾಸ್ತವ್ಯ, ಅಮೆರಿಕ ಯಾತ್ರೆ ಮತ್ತು ಆಡಳಿತ ನಡೆಸಿದ್ದರ ಗುರುತಾಗಿ ಆಗಾಗ ಸಾರ್ವಜನಿಕವಾಗಿ ಸುರಿಸಿದ ಹತಾಶೆಯ ಕಣ್ಣೀರು ಕೂಡ ಸೇರಿವೆ.

ಎಚ್‌.ಡಿ. ದೇವೇಗೌಡರು ರಾಹುಲ್ ಗಾಂಧಿಯವರನ್ನು ಇತ್ತೀಚೆಗೆ ಭೇಟಿಯಾಗಿ ಕಾಂಗ್ರೆಸ್ ಮುಖಂಡರ ನಡತೆಯ ಕುರಿತಾದ ತಮ್ಮ ನಿರಾಸೆ ಹೇಳಿಕೊಳ್ಳುತ್ತಲೇ ‘ಹೀಗೇ ಆದರೆ ಈ ಸರ್ಕಾರದಿಂದ ದೂರ ಸರಿದು ನಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತೇವೆ’ ಎಂಬ ಬೆದರಿಕೆ ಒಡ್ಡಿ ಬಂದಿದ್ದರು ಎನ್ನಲಾಗಿದೆ. ಕಾಂಗ್ರೆಸ್ಸಿಗರಿಗೆ ರಾಹುಲ್‌ ಬುದ್ಧಿಮಾತು ಹೇಳಬಹುದು. ಆದರೆ, ಜೆಡಿಎಸ್‍ನವರಿಗೆ ಬುದ್ಧಿ ಹೇಳಬೇಕಾದವರು ಯಾರು? ಪಕ್ಷದ ಹಿರಿಯ ನಾಯಕರೂ ಮಾಜಿ ಪ್ರಧಾನಿಯೂ ಆದ ದೇವೇಗೌಡರೇ ಆ ಕೆಲಸ ಮಾಡಬೇಕು ಎಂದು ನಾವು ಭಾವಿಸುವುದು ತಪ್ಪಲ್ಲ ತಾನೇ? 

ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಎಂಬ ಹೆಣ್ಣುಮಗಳು ಚುನಾವಣೆಗೆ ನಿಂತಾಗ, ಗೌಡರ ಮಕ್ಕಳಾದ ರೇವಣ್ಣ ಮತ್ತು ಸ್ವತಃ ಮುಖ್ಯಮಂತ್ರಿ ಆಗಿರುವ ಕುಮಾರಸ್ವಾಮಿಯವರೇ ಆಡಿದ ಮಾತುಗಳು ಗೌಡರ ಕಿವಿಗೆ ಮುಟ್ಟಲಿಲ್ಲವೇ? ‘ಗಂಡನನ್ನು ಕಳೆದುಕೊಂಡಿರುವ ಆಕೆಗೆ ಇಷ್ಟು ಬೇಗ ಚುನಾವಣೆಗೆ ನಿಲ್ಲುವ ಬಯಕೆಯೇ?’ ಎಂಬ ಮಾತು, ‘ಆಕೆ ಒಕ್ಕಲಿಗಳಲ್ಲ, ನಾಯ್ಡು’ ಎಂದು ಪ್ರಚಾರ ಮಾಡುವ ಪ್ರಯತ್ನಗಳು, ಆಕೆಯನ್ನು ಬೆಂಬಲಿಸಿದ ಚಿತ್ರನಟರಿಬ್ಬರಿಗೆ ಮತ್ತೊಬ್ಬ ಶಾಸಕ ಐ.ಟಿ ದಾಳಿಯ ಬೆದರಿಕೆ ಹಾಕಿದ್ದು, ಇವ್ಯಾವುವೂ ಗೌಡರ ಕಿವಿಗೆ ಬೀಳಲಿಲ್ಲವೇ? ಹೀಗೆ ಮಾತಾಡಬಾರದು ಎಂಬ ಖಡಕ್ ಎಚ್ಚರಿಕೆಯನ್ನು ಅವರು ನೀಡಲಿಲ್ಲವೇಕೆ?

2006-07ರ ಮತ್ತೊಂದು ದೋಸ್ತಿ ಸರ್ಕಾರದ ಸಮಯದಲ್ಲಿ ಮಗ ಮುಖ್ಯಮಂತ್ರಿಯಾಗಿದ್ದಾಗ ಅದೆಷ್ಟೋ ದಿವಸ ಭೂಗತವಾಗಿದ್ದ ಜಾತ್ಯತೀತ ಗುಣ, 20 ತಿಂಗಳು ಕಳೆದ ಕೂಡಲೇ ಭುಗಿಲ್ಲೆಂದು ಸ್ಫೋಟಗೊಂಡು, ಒಂದು ರೀತಿಯಲ್ಲಿ ಸಂಘ ಪರಿವಾರ ಈ ನೆಲದಲ್ಲಿ ಚಿಗುರೊಡೆದು ಆಳವಾಗಿ ಬೇರೂರುವುದಕ್ಕೆ ಕಾರಣವಾದದ್ದು ಯಾರು?

ಈ ಮಧ್ಯೆ ರೇವಣ್ಣನವರ ‘ವಿಷಯಗಳು ಹೀಗೇ ಮುಂದುವರಿದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ’ ಎಂಬ ಎಚ್ಚರಿಕೆಯ ಮಾತು ಬೇರೆ. ಎಲ್ಲರಿಗೂ ತಮ್ಮ ‘ಅಸ್ಮಿತೆ’ಯೇ ಪ್ರಧಾನ ಕಾಳಜಿಯಾದರೆ, ನತದೃಷ್ಟ ಜನರ ಅಸ್ಮಿತೆಯನ್ನು ಕಾಪಾಡುವವರು ಯಾರು?

ಇನ್ನು ಕಾಂಗ್ರೆಸ್ ಪಕ್ಷದ ಅಡಾವುಡಿಗಳನ್ನು ನೋಡಿ ಸುಮಾರು ವರ್ಷವೇ ಆಯಿತೇನೋ! ಇಷ್ಟು ದಿವಸ ‘ರಮೇಶ ಜಾರಕಿಹೊಳಿ ಎಲ್ಲಿ?’ ಎಂಬ ಹುಡುಕಾಟದಲ್ಲಿ ತಲ್ಲೀನರಾಗಿದ್ದು, ಆಗಿಂದಾಗ್ಗೆ ‘ಅವರು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾರೆ’, ‘ಇಲ್ಲೇ ಇರುತ್ತಾರೆ’, ‘ನಮ್ಮನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ’ ಎಂಬ ಸುದ್ದಿ ತುಣುಕುಗಳನ್ನು ಹರಿಬಿಡುತ್ತ ಕಾದು ಕುಳಿತಿದ್ದವರಿಗೆ, ಕೊನೆಗೆ ರಮೇಶ ಜಾರಕಿಹೊಳಿ ತಮ್ಮ ದೋಸ್ತಿಗಳೊಡನೆ ಕಂಡದ್ದು ಮುಂಬೈನ ಪಂಚತಾರಾ ಹೋಟೆಲಿನಲ್ಲಿ.

ಮತ್ತೊಂದು ಕಡೆ, ಎಚ್‌.ವಿಶ್ವನಾಥ್‌ ಅವರು ಮಾಡಿದ್ದೇನು? ನಿರಂತರವಾಗಿ ಸಿದ್ದರಾಮಯ್ಯನವರ ದೂಷಣೆ ಅಥವಾ ‘ರಾಹುಲ್ ಅಲ್ಲ, ಪ್ರಿಯಾಂಕಾ ನಮಗೆ ಅವಶ್ಯ ನಾಯಕಿ’ ಎಂಬ ಹಳಹಳಿಕೆ. ಬಳಿಕ ಪ್ರಿಯಾಂಕಾ ಅವರನ್ನು ಮರೆತು ದೇವೇಗೌಡರನ್ನು ಆಶ್ರಯಿಸಿ, ಮತ್ತೆ ರಾಜಕೀಯ ಅಸ್ವಸ್ಥ ಸ್ಥಿತಿ ತಲುಪಿ, ಈಗ ಹೊರರಾಜ್ಯದಲ್ಲಿ ಸಮುದ್ರದ ಗಾಳಿ ಸೇವಿಸುತ್ತಾ ಹೊಸ ದೋಸ್ತಿಗಳ ಸಹವಾಸದಲ್ಲಿ ಸಂಭ್ರಮಿಸುತ್ತಿದ್ದಾರೆ. ಇವರಿಗೆ ಬೇಕಿರುವುದು ಪ್ರಜಾಸತ್ತಾತ್ಮಕ ನಾಯಕರಲ್ಲ, ಕಟ್ಟಾ ಹಿಟ್ಲರ್ ಮನಃಸ್ಥಿತಿಯ ದಂಡಾಧಿಕಾರಿಗಳು. ಇಂದಿರಾ ಗಾಂಧಿ, ಜಯಲಲಿತಾ ಅಥವಾ ಸದ್ಯದ ನರೇಂದ್ರ ಮೋದಿ ಅಂತಹವರು.

ಜನತಾದಳದ ವರಿಷ್ಠರ ವಲಯದಿಂದ ನಿನ್ನೆ ಮೊನ್ನೆ ಮತ್ತೊಂದು ಆಣಿಮುತ್ತು ಉರುಳಿದೆ. ‘ಕಾಂಗ್ರೆಸ್ ಸಖ್ಯ ಮಾಡಿ ಕೆಟ್ಟೆವು’ ಎಂದು. ‘ಗೌಡರಂಥ ನಾಯಕರು ಬೆಳೆಸಿದ ಪಕ್ಷವನ್ನು ನಂಬಿ ನಾವು ಕೆಟ್ಟೆವು’ ಎಂದು ಜನರೂ ವಿಷಾದಿಸುತ್ತಿದ್ದಾರೆ. ಮತದಾರನಿಗೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಹ ಪರಿಸ್ಥಿತಿ ನಿರ್ಮಿಸಿದ್ದರೆ, ಅದಕ್ಕೆ ನೈತಿಕ ಜವಾಬ್ದಾರಿ ಹೊತ್ತುಕೊಳ್ಳುವ ಪ್ರಾಮಾಣಿಕ ಮನಃಸ್ಥಿತಿ ಈ ನಾಯಕರಲ್ಲಿ ಯಾರಿಗಾದರೂ ಇದೆಯೇ?

ಹೀಗೆಲ್ಲ ಮಾತನಾಡಿದರೆ ರಾಜಕಾರಣಿಗಳ ಉತ್ತರ ಸದಾ ಸಿದ್ಧವಿರುತ್ತದೆ. ‘ನಿಮಗೆ ರಾಜಕಾರಣ ಅರ್ಥವಾಗೋಲ್ಲ ಬಿಡಿ ಸಾರ್’. ಈ ನಾಯಕರಿಗೆ ನನ್ನ ನಮ್ರ ಉತ್ತರ: ‘ನಾವು ಇಲ್ಲಿ ನಿಮ್ಮ ರಾಜಕಾರಣವನ್ನು ಅರ್ಥ ಮಾಡಿಕೊಳ್ಳೋಕೆ ಜನ್ಮ ತಾಳಿಲ್ಲ. ನಾವು ಜನ್ಮ ತಾಳಿರುವುದು ಪ್ರಜಾತಂತ್ರವಾದಿ ಸಮಾನತಾ ಮತ್ತು ಜಾತ್ಯತೀತ ತತ್ವಗಳಿಗೆ ನಿಷ್ಠರಾಗಿ ಜೀವಿಸುವುದು ಹೇಗೆ ಎಂದು ತಿಳಿಯುವುದಕ್ಕೆ. ಹಾಗೆ ಬದುಕಲು ಯತ್ನಿಸುವುದಕ್ಕೆ ಹಾಗೂ ಸುತ್ತಲಿನವರೊಡನೆ ಕಲಿಯುತ್ತಲೇ ಬೆಳೆಯುವುದಕ್ಕೆ’.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು