ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಕ್ಕಳ ರಕ್ಷಕರಿಗೆಲ್ಲಿ ರಕ್ಷಣೆ?

ಸಂಕಷ್ಟದಲ್ಲಿರುವ ಮಕ್ಕಳನ್ನು ರಕ್ಷಿಸುವ ಹೊಣೆ ಹೊತ್ತವರಲ್ಲಿ ಭವಿಷ್ಯದ ಬಗ್ಗೆ ಭದ್ರತೆ ಮೂಡಿಸುವ ಕೆಲಸ ಮೊದಲು ಆಗಬೇಕಾಗಿದೆ
Last Updated 23 ಡಿಸೆಂಬರ್ 2020, 21:01 IST
ಅಕ್ಷರ ಗಾತ್ರ

ಭಾರತ ಮಕ್ಕಳ ದೇಶ! ಇಲ್ಲಿ ಶೇಕಡ 40ರಷ್ಟು ಜನಸಂಖ್ಯೆ 18 ವರ್ಷದೊಳಗಿನವರದು. ಆದರೆ ನಮ್ಮ ಸರ್ಕಾರಗಳು ಈ ಬಹುದೊಡ್ಡ ಸಂಖ್ಯೆಯ ಮಕ್ಕಳ ರಕ್ಷಣೆ, ಸುರಕ್ಷತೆ, ಸುಗಮ ಭವಿಷ್ಯಕ್ಕಾಗಿ ತಕ್ಕಷ್ಟು ಕಾಳಜಿ ವಹಿಸಿವೆಯೇ? ಈ ದಿಸೆಯಲ್ಲಿ ಕೆಲಸ ಮಾಡುತ್ತಿವೆಯೇ?- ಇಲ್ಲ. ಪರಿಸ್ಥಿತಿ ಆಶಾದಾಯಕವಾಗಿಲ್ಲ.

ಮಕ್ಕಳು ಅನೇಕ ಕಾರಣಗಳಿಗಾಗಿ ಅನಾಥರಾಗುವುದು, ಪರಿತ್ಯಕ್ತರಾಗುವುದು, ದೌರ್ಜನ್ಯ ಮತ್ತು ಶೋಷಣೆಗಳಿಗೆ ಬಲಿಯಾಗುವುದು, ಬಾಲಕಾರ್ಮಿಕರಾಗುವುದು, ಬಾಲ್ಯವಿವಾಹಗಳಿಗೆ ತುತ್ತಾಗುವುದು ನಡೆಯುತ್ತಲೇ ಇದೆ. ಬದಲಾಗುತ್ತಿರುವ ಜೀವನಶೈಲಿ, ಕೌಟುಂಬಿಕ ಸಮಸ್ಯೆಗಳು, ಮಾಹಿತಿ ತಂತ್ರಜ್ಞಾನದ ಹೆಚ್ಚಿನ ಬಳಕೆಯಿಂದ ಇಂದಿನ ಮಕ್ಕಳು ಹೊಸ ರೀತಿಯ ಸಮಸ್ಯೆಗಳಿಗೆ, ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಲು ಎಲ್ಲ ದಿಕ್ಕುಗಳಿಂದಲೂ ಕೆಲಸಗಳು ವ್ಯಾಪಕವಾಗಿ ಆಗಬೇಕಾಗಿದೆ.

ಈ ದಿಸೆಯಲ್ಲಿ ಸದ್ಯ ಜಾರಿಯಲ್ಲಿರುವ ಬಾಲನ್ಯಾಯ ಕಾಯ್ದೆ ದೊಡ್ಡ ಭರವಸೆ. ಈ ಕಾಯ್ದೆಯಡಿ, ಪಾಲನೆ-ಪೋಷಣೆ ಅವಶ್ಯಕತೆ ಇರುವ ಮಕ್ಕಳು ಹಾಗೂ ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳಿಗೆ ಸೂಕ್ತ ಪುನರ್ವಸತಿ, ಆಪ್ತ ಸಮಾಲೋಚನೆ, ಸಹಕಾರ ನೀಡಲು ಸಾಧ್ಯವಾಗುತ್ತದೆ. ಈ ಕಾಯ್ದೆಯ ಸಮರ್ಪಕ ಅನುಷ್ಠಾನದಿಂದ ಲಕ್ಷಾಂತರ ಮಕ್ಕಳ ಬದುಕಿನಲ್ಲಿ ಬೆಳಕು ಮೂಡಿಸಬಹುದು.

ಕಾಯ್ದೆಯ ಭಾಗವಾಗಿ 2009ರಿಂದ ‘ಸಮಗ್ರ ಮಕ್ಕಳ ರಕ್ಷಣಾ ಯೋಜನೆ’ಯನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಮಕ್ಕಳ ಪಾಲನೆ-ಪೋಷಣೆ-ರಕ್ಷಣೆಗಾಗಿ ಸಾಂಸ್ಥಿಕ ಮತ್ತು ಅಸಾಂಸ್ಥಿಕ ಸೇವೆಯನ್ನು ಒದಗಿಸುತ್ತಿದೆ. ಒಮ್ಮೆ ತಪ್ಪು ಮಾಡಿದ ಮಕ್ಕಳೂ ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಬೇಕಾದ ಆಪ್ತ ಸಮಾಲೋಚನೆ, ಮನಃಪರಿವರ್ತನಾ ಚಟುವಟಿಕೆಗಳನ್ನು ಒದಗಿಸಲಾಗುತ್ತಿದೆ. ಇವೆಲ್ಲವೂ ಎಲ್ಲಾ ಹಂತದಲ್ಲಿ ಸಮರ್ಪಕವಾಗಿ ದೊರೆಯುವಂತಾಗಲು ರಾಜ್ಯ ಮಟ್ಟದಲ್ಲಿ ಸೊಸೈಟಿ, ಜಿಲ್ಲಾ ಮಟ್ಟದಲ್ಲಿ ಮಕ್ಕಳ ರಕ್ಷಣಾ ಘಟಕಗಳು ಶ್ರಮಿಸುತ್ತಿವೆ.

ವಿಕೇಂದ್ರೀಕರಣಗೊಂಡಿರುವ ಈ ಘಟಕಗಳು ಬಾಲನ್ಯಾಯ ಕಾಯ್ದೆಯಡಿ ಬರುವ ಶಾಸನಬದ್ಧ ಅಂಗರಚನೆಗಳಾಗಿವೆ. ಆದರೆ ಇಲ್ಲಿ ಕಾರ್ಯನಿರ್ವಹಿಸುವ ಹೆಚ್ಚಿನ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ನಿಜವಾದ ಸೇವಾ ಮನೋಭಾವ ಇರುವ ಕ್ರಿಯಾಶೀಲ ಅಧಿಕಾರಿಗಳು, ಸಿಬ್ಬಂದಿ ಈ ಘಟಕಗಳಲ್ಲಿ ದುಡಿಯುತ್ತಿದ್ದಾರೆ. ಆದರೆ ದುರಂತವೆಂದರೆ, 2015ರಿಂದ ಗೌರವಧನದ ಆಧಾರದ ನೇಮಕಾತಿಯನ್ನೂ ರದ್ದುಪಡಿಸಿ, ಹೊರಗುತ್ತಿಗೆಯ ಆಧಾರದ ನೇಮಕಾತಿಗೆ ಸರ್ಕಾರ ಆದೇಶ ನೀಡಿದೆ. ಇದು ಎಲ್ಲ ರೀತಿಯಲ್ಲೂ ಅವೈಜ್ಞಾನಿಕ, ಮಕ್ಕಳಸ್ನೇಹಿ ಅಲ್ಲದ, ಸಂವೇದನಾರಹಿತ ತೀರ್ಮಾನವಾಗಿದೆ.

ಸೇವಾ ಶುಲ್ಕದ ಷರತ್ತಿನಡಿ ಸಿಬ್ಬಂದಿಯನ್ನು ಪೂರೈಸುವ ಏಜೆನ್ಸಿಗಳು ಟೆಂಡರ್ ಷರತ್ತುಗಳನ್ನು ಉಲ್ಲಂಘಿಸುತ್ತಿವೆ. ಯಾವುದೋ ಒಂದು ಕೆಲಸ ಸಿಕ್ಕರೆ ಸಾಕು ಎಂಬ ಆಸೆಯಲ್ಲಿ ಇರುವ ನಿರುದ್ಯೋಗಿಗಳಿಂದ ಹಾಗೂ ಹಾಲಿ ಇರುವ ಸಿಬ್ಬಂದಿಯಿಂದ ವೇತನದಲ್ಲಿ ದೊಡ್ಡ ಮೊತ್ತವನ್ನು ಇವು ಲಪಟಾಯಿಸುತ್ತಿವೆ. ಪಿ.ಎಫ್ ಮತ್ತು ಇ.ಎಸ್.ಐ ಹೆಸರಿನಲ್ಲಿ ವೇತನದಲ್ಲಿ ಕಡಿತ ಮಾಡುವ ಮೊತ್ತವನ್ನು ಕೂಡ ನಿಯಮಿತವಾಗಿ ಪಾವತಿಸುವುದಿಲ್ಲ. ಕೆಲವು ಜಿಲ್ಲೆಗಳಲ್ಲಿ ಏಜೆನ್ಸಿ ಬದಲಾದರೆ, ಹೊಸ ಏಜೆನ್ಸಿಗಳು ₹ 10 ಸಾವಿರದಿಂದ 20 ಸಾವಿರದವರೆಗೆ ಹಣ ನೀಡಬೇಕು ಎಂದು ಒತ್ತಾಯಿಸುವುದೂ ಇದೆ.

ಮಕ್ಕಳ ಕ್ಷೇತ್ರಕ್ಕೆ ಅವಶ್ಯಕತೆ ಇರುವ ಕೌಶಲಭರಿತ ಹುದ್ದೆಗಳನ್ನೂ ಹೊರಗುತ್ತಿಗೆ ಆಧಾರದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇಂತಹ ಹಲವು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿರುವ ಸಿಬ್ಬಂದಿ, ತಮ್ಮ ಭವಿಷ್ಯಕ್ಕೆ ಭದ್ರತೆಯೇ ಇಲ್ಲದ ವಿಷಮ ವಾತಾವರಣದಲ್ಲಿ ಮಕ್ಕಳಿಗೆ ನೀಡಬೇಕಾದ ಕಾಳಜಿ ಮತ್ತು ಗಮನವನ್ನು ಸಮರ್ಪಕವಾಗಿ ನೀಡಲು ಎಲ್ಲಿ ಸಾಧ್ಯವಾಗುತ್ತದೆ?

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅತಿ ಹೆಚ್ಚಿನ ಕಾಯಂ ಹುದ್ದೆಗಳು ದಶಕಗಳಿಂದ ಖಾಲಿ ಬಿದ್ದಿವೆ. ಈ ಹುದ್ದೆಗಳಿಗೆ ಹಾಗೂ ಮಕ್ಕಳ ಸುಧಾರಣಾ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಕ್ಕಳ ರಕ್ಷಣಾ ಘಟಕದಲ್ಲಿ ದಶಕದಿಂದ ದುಡಿಯುತ್ತಿರುವ ಅರ್ಹ ಸಿಬ್ಬಂದಿಯನ್ನು ಭರ್ತಿ ಮಾಡಬೇಕಿದೆ. 2015ರಿಂದಲೂ ಏರಿಕೆಯಾಗದ ಇವರ ವೇತನವನ್ನು ತುರ್ತಾಗಿ ಹೆಚ್ಚಿಸಬೇಕು. ಈ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಸಿಬ್ಬಂದಿ ಒತ್ತಾಯಿಸುತ್ತಲೇ ಇದ್ದಾರೆ. ಮಕ್ಕಳ ಸಮಗ್ರ ರಕ್ಷಣಾ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ 300ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ಸೇರಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಇತ್ತೀಚೆಗೆ ಪ್ರತಿಭಟನೆ ಕೂಡ ನಡೆಸಿದ್ದಾರೆ. ಯಥಾಪ್ರಕಾರ ಸರ್ಕಾರ ಮಿಸುಕಿಲ್ಲ!

ತಾದಾತ್ಮ್ಯ ಮತ್ತು ವಿಶೇಷ ಕಾಳಜಿ ವಹಿಸಿ ಮಕ್ಕಳ ರಕ್ಷಣಾ ಕೇತ್ರದಲ್ಲಿ ಸೇವೆ ಸಲ್ಲಿಸಬೇಕಾದವರಿಗೆ ಕನಿಷ್ಠ ಗೌರವಧನವನ್ನೂ ನೀಡದೆ ಗುಲಾಮರಂತೆ ದುಡಿಸಿಕೊಳ್ಳುವುದು ಅಕ್ಷಮ್ಯ. ಅತ್ಯಂತ ಸಮರ್ಪಕವಾದ ಇವರ ಬೇಡಿಕೆಗಳನ್ನು, ಮಕ್ಕಳ ರಕ್ಷಣೆಯ ವಿಶೇಷ ಹಿತದೃಷ್ಟಿಯಿಂದ ಸರ್ಕಾರ ತಕ್ಷಣವೇ ಈಡೇರಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT