ಭಾನುವಾರ, ಮೇ 31, 2020
27 °C
ಮೇಲ್ಜಾತಿಗಳಲ್ಲಿನ ಬಡವರಿಗೆ ಮೀಸಲಾತಿ ಕಲ್ಪಿಸಿರುವುದನ್ನು ಚುನಾವಣಾ ರಾಜಕೀಯದ ಕಾರಣಕ್ಕೆ ನಡೆಯುತ್ತಿರುವ ವಿದ್ಯಮಾನ ಎಂಬ ಸರಳೀಕೃತ ಚರ್ಚೆಗಳ ಆಚೆಗೆ ನೋಡಬೇಕಿದೆ

ಮೀಸಲಾತಿ ಮತ್ತು ಮಾರುಕಟ್ಟೆ ಆರ್ಥಿಕತೆ

ಡಾ. ಕಿರಣ್ ಎಂ. ಗಾಜನೂರು Updated:

ಅಕ್ಷರ ಗಾತ್ರ : | |

Prajavani

ಜಾಗತಿಕ ಆರ್ಥಿಕ ನೀತಿಗಳನ್ನು ಒಪ್ಪಿಕೊಂಡಿರುವ ಭಾರತದಲ್ಲಿ ‘ರಾಜಕೀಯ ಅಧಿಕಾರದ ಚರ್ಚೆ ಆರ್ಥಿಕ ವೈಚಾರಿಕತೆಯ ಚೌಕಟ್ಟಿನೊಳಗೆ ನಡೆಯುತ್ತಿದೆ’. ಈ ಸಂಕುಚಿತ ನೋಟದಲ್ಲಿ ನಡೆಸುವ ಅಧಿಕಾರದ ಚರ್ಚೆ ಎಷ್ಟು ಪ್ರಬಲವಾಗುತ್ತಿದೆ ಎಂದರೆ ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯದಂತಹ ಸಂವಿಧಾನದ ಮೂಲ ಆಶಯಗಳನ್ನು ಆರ್ಥಿಕತೆಯ ಚೌಕಟ್ಟಿನೊಳಗೆ ವಿಶ್ಲೇಷಿಸುವ, ನಿರ್ವಹಿಸುವ ಪ್ರಕ್ರಿಯೆಗಳನ್ನು ಪ್ರಭುತ್ವ ನಡೆಸುತ್ತಿದೆ. ಇದರ ಪರಿಣಾಮ, ಈ ನೆಲದಲ್ಲಿ ಬಡತನಕ್ಕೆ ‘ಆರ್ಥಿಕ ಹಿಂದುಳಿದಿರುವಿಕೆ ಮಾತ್ರ ಕಾರಣ’ ಎಂಬ ಸರಳೀಕೃತ ವಿವರಣೆಯನ್ನು ಆಳುವವರು ಜನರ ಮುಂದಿಟ್ಟು ಅವರ ಒಪ್ಪಿಗೆಯನ್ನು ಉತ್ಪಾದಿಸಿಕೊಳ್ಳಲಾಗುತ್ತಿದೆ.

ರಾಜಕೀಯ ಅಧಿಕಾರವನ್ನು ಕುರಿತ ಈ ನಕಾರಾತ್ಮಕ ಧೋರಣೆಯು 1980–90ರ ದಶಕಗಳಿಂದ ಈಚೆಗೆ ಮುನ್ನೆಲೆಗೆ ಬಂತು. ಮೇಲ್ಜಾತಿಯಲ್ಲಿನ ಬಡವರ ಏಳಿಗೆಗಾಗಿ ಉದ್ಯೋಗ ಮತ್ತು ಶಿಕ್ಷಣದ ಅವಕಾಶದಲ್ಲಿ ಶೇಕಡ ಹತ್ತರಷ್ಟು ಮೀಸಲು ಕಲ್ಪಿಸಲು ಸಂವಿಧಾನ ತಿದ್ದುಪಡಿ ಮಸೂದೆಗೆ ಶಾಸನಸಭೆಗಳು ಒಪ್ಪಿಗೆ ಸೂಚಿಸಿದ ಅಂಶವನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕಿದೆ. ಮಂಡಲ್ ವರದಿ ಆಧರಿಸಿ ಜಾರಿಯಾದ ಜಾತಿ ಆಧಾರಿತ ಮೀಸಲು ನೀತಿಯನ್ನು ಯಾವ ಶಕ್ತಿಗಳು ವಿರೋಧಿಸುತ್ತಿದ್ದವೋ ಇಂದು ಅವೇ ಧ್ವನಿಗಳು ಪ್ರಸ್ತಾಪಿತ ಮೇಲ್ಜಾತಿಗಳ ಮೀಸಲು ನೀತಿಯ ಬೆಂಬಲಕ್ಕೆ ನಿಂತಿವೆ. ಆಶ್ಚರ್ಯ ಎಂದರೆ, ಮಂಡಲ್ ವರದಿಯ ನಂತರ ದೇಶದಲ್ಲಿ ಎದ್ದಿದ್ದ ಜಾತಿ ಮೀಸಲಾತಿ ವಿರೋಧಿ ಕೂಗು ಇಂದು ತನ್ನ ಸ್ವರೂಪ ಬದಲಿಸಿಕೊಂಡು, ಸ್ವತಃ ಮೇಲ್ಜಾತಿ ಮೀಸಲಾತಿಯ ಪರವಾಗಿ ನಿಂತಂತೆ ಕಾಣುತ್ತಿದೆ.

ಈ ಒಟ್ಟು ಚರ್ಚೆಯಲ್ಲಿ ಕಾಣೆಯಾಗಿರುವುದು ಸಾಂವಿಧಾನಿಕ ಆಶಯವಾದ ‘ಸಾಮಾಜಿಕ ನ್ಯಾಯ’ದ ಪ್ರಶ್ನೆ. ಸಮಾನತೆಯನ್ನು ಮೂಲಭೂತ ಹಕ್ಕಾಗಿ ಪ್ರಸ್ತಾಪಿಸುವ ಸಂವಿಧಾನದ 15ನೇ ವಿಧಿಯ 4ನೇ ಉಪವಿಧಿ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳು ಅಥವಾ ಪರಿಶಿಷ್ಟ ಜಾತಿ– ಪಂಗಡಗಳ ಏಳಿಗೆಗಾಗಿ ವಿಶೇಷ ಯೋಜನೆಗಳನ್ನು ಸರ್ಕಾರ ರೂಪಿಸಬಹುದು ಎಂಬ ಅವಕಾಶವನ್ನು ಕೊಡಮಾಡಿದೆ. ಆದರೆ, ಈ ವಿಧಿಯಲ್ಲಿ ಎಲ್ಲಿಯೂ ಸಮುದಾಯಗಳ ಆರ್ಥಿಕ ಹಿಂದುಳಿದಿರುವಿಕೆಗೆ ವಿಶೇಷ ನೀತಿಯನ್ನು ಸರ್ಕಾರ ರೂಪಿಸಬೇಕು ಎಂಬ ಅಂಶ ಪ್ರಸ್ತಾಪವಾಗಿಲ್ಲ! ಅಂದರೆ ಭಾರತದಲ್ಲಿ ಸಾಮಾಜಿಕ ನ್ಯಾಯದ ಪ್ರಶ್ನೆಯು ಸಮುದಾಯಗಳು ಹೊಂದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳೊಂದಿಗೆ ಸಂಬಂಧ ಹೊಂದಿದೆಯೇ ಹೊರತು ಅವುಗಳ ಆರ್ಥಿಕತೆಯ ಜೊತೆಗೆ ಅಲ್ಲ!

ಸಮುದಾಯಗಳ ಆರ್ಥಿಕ ಹಿಂದುಳಿದಿರುವಿಕೆಯು ಜಾತಿಯ ಕಾರಣಕ್ಕೆ ಅಸ್ತಿತ್ವದಲ್ಲಿ ಇರುವ ಸಾಮಾಜಿಕ ತರತಮದ ಕಾರಣಕ್ಕೆ ಸೃಷ್ಟಿಯಾದ ಉಪಉತ್ಪನ್ನ. ಹಾಗಾಗಿ, ಮೀಸಲಾತಿಯ ಮೂಲ ತತ್ವ ಆರ್ಥಿಕವಾಗಿ ಸಮುದಾಯಗಳಿಗೆ ನೆರವಾಗುವುದಲ್ಲ. ಬದಲಾಗಿ ಶ್ರೇಣೀಕೃತ ವ್ಯವಸ್ಥೆಯ ಕಾರಣಕ್ಕೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅವರುಗಳ ಸಾಂವಿಧಾನಿಕ ಹಕ್ಕಾದ ಸಾಮಾಜಿಕ ನ್ಯಾಯ ಮತ್ತು ಅವಕಾಶವನ್ನು ಒದಗಿಸುವುದು ಎಂಬುದಾಗಿದೆ. 

ಹಾಗೆ ನೋಡುವುದಾದರೆ, ದೇಶದಲ್ಲಿನ ಸಾಮಾಜಿಕ ಸಂರಚನೆ ಕಾರಣಕ್ಕೆ ಜಾತಿಯೊಂದು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂಬುದನ್ನು ಸಾಧಿಸಲು ಸಾಕಷ್ಟು ಸಂಶೋಧನೆಗಳು, ವರದಿಗಳು ಲಭ್ಯವಿವೆ. ಸ್ವತಃ ಕೇಂದ್ರ ಸರ್ಕಾರ ರಚಿಸಿದ ಕಾಕಾ ಕಾಲೇಲ್ಕರ್ (1953), ಮಂಡಲ್ (1979) ವರದಿಗಳಿವೆ. ಕರ್ನಾಟಕದಲ್ಲಿ ದೇವರಾಜ ಅರಸು 1977ರಲ್ಲಿ ಜಾರಿಗೊಳಿಸಿದ ಹಾವನೂರು ವರದಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ‍ಪ್ರಶ್ನಿಸಲಾಗಿತ್ತು. ಈ ಪ್ರಕರಣದಲ್ಲಿ, ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಗೆ ಜಾತಿಯನ್ನು ಒಂದು ಮಾನದಂಡವಾಗಿ ಪರಿಗಣಿಸಬೇಕು ಎಂಬ ಮಾರ್ಗದರ್ಶಿ ಸೂತ್ರವನ್ನು ನ್ಯಾಯಾಲಯ ನೀಡಿತ್ತು. ಇದನ್ನು ಆಧರಿಸಿ ಅಧ್ಯಯನ ನಡೆಸಿದ ವೆಂಕಟಸ್ವಾಮಿ ಅವರು ಕರ್ನಾಟಕದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳನ್ನು ಹಿಂದುಳಿದವರ ಪಟ್ಟಿಯಿಂದ ಹೊರಗಿಡುವುದರ ಜೊತೆಗೆ, ಮೊದಲ ಬಾರಿಗೆ ಹಿಂದುಳಿದ ವರ್ಗಗಳಲ್ಲಿ ಒಳಮೀಸಲಾತಿಯನ್ನು ಅಳವಡಿಸುವ ಅಗತ್ಯವನ್ನು ಪ್ರಸ್ತಾಪಿಸಿದ್ದರು. ಆದರೆ, ಅಂದಿನ ಪ್ರಬಲ ಜಾತಿಗಳ ವಿರೋಧದಿಂದ ಆ ವರದಿ ಜಾರಿಗೊಳ್ಳಲಿಲ್ಲ.

ಆದರೆ, ಇಂದು ಮೇಲ್ಜಾತಿಗಳಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವ ವೇಳೆ, ಸಮುದಾಯಗಳ ಆರ್ಥಿಕ ಹಿಂದುಳಿಯುವಿಕೆಗೆ ಜಾತಿ ಹೇಗೆ ಕಾರಣವಾಗುತ್ತದೆ, ಸಮುದಾಯಗಳ ಆರ್ಥಿಕ ಅಭಿವೃದ್ಧಿಗೆ ಜಾತಿ ಮೀಸಲಾತಿಯ ಅಗತ್ಯವೇನು, ತಾಂತ್ರಿಕ ಶಿಕ್ಷಣದಲ್ಲಿ ಪ್ರವೇಶ ಪಡೆಯುವ ಮೇಲ್ಜಾತಿಯ ಬಡವರಿಗೆ ಶುಲ್ಕ ವಿನಾಯಿತಿ ಘೋಷಿಸಿದ ಆಂಧ್ರಪ್ರದೇಶ ಮಾದರಿಯ ಆರ್ಥಿಕ ನೀತಿಗಳು ಸಾಕಲ್ಲವೇ ಎಂಬಂತಹ ಕನಿಷ್ಠ ಪ್ರಶ್ನೆಗಳನ್ನೂ ವಿವರಿಸುವ ಗೋಜಿಗೆ ಹೋಗಲಿಲ್ಲ.

ಈ ಒಟ್ಟು ಬೆಳವಣಿಗೆಯನ್ನು ಕೇವಲ ಚುನಾವಣಾ ರಾಜಕೀಯದ ಕಾರಣಕ್ಕೆ ನಡೆಯುತ್ತಿರುವ ವಿದ್ಯಮಾನ ಎಂಬ ಸರಳೀಕೃತ ಚರ್ಚೆಗಳ ಆಚೆಗೆ ನಾವು ನೋಡಬೇಕಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಮೇಲೆ ಮಾರುಕಟ್ಟೆ ಆರ್ಥಿಕತೆಯು ಹಿಡಿತ ಸಾಧಿಸಲು ಯತ್ನಿಸುತ್ತಿರುವ ರಾಜಕಾರಣದ ಭಾಗವಾಗಿ ಇದನ್ನು ನೋಡಬೇಕಿದೆ. ದೇಶದ ನಾಗರಿಕ ಸಮುದಾಯ ಮತ್ತು ಸಾಮಾಜಿಕ ಚಳವಳಿಗಳು ಜಾಗೃತವಾಗಿ, ಸಾಂವಿಧಾನಿಕ ಮೌಲ್ಯಗಳಿಗೆ ಧಕ್ಕೆಯಾಗದಂತಹ ನೀತಿಗಳನ್ನು ರೂಪಿಸುವಂತೆ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು