ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ನಮ್ಮೊಳು ಒಬ್ಬ ಶಾಸ್ತ್ರೀಜಿ ಬೇಕಿದ್ದಾರೆ

ಅಧಿಕಾರವನ್ನು ಎಂದೂ ಸ್ವಂತಕ್ಕೆ ಬಳಸಿಕೊಳ್ಳದ ಲಾಲ್‌ ಬಹದ್ದೂರ್‌ ಶಾಸ್ತ್ರಿ ನೈತಿಕ ಬಲದ ಮಾದರಿಯಾಗಿ ಎಂದೆಂದಿಗೂ ನಮಗೆ ಪ್ರಸ್ತುತವಾಗುತ್ತಾರೆ
Last Updated 2 ಅಕ್ಟೋಬರ್ 2020, 19:55 IST
ಅಕ್ಷರ ಗಾತ್ರ

ಬಾಲಕ ಪ್ರತಿನಿತ್ಯ ಶಾಲೆಗೆ ಹೋಗಲು ಹೊಳೆ ದಾಟಬೇಕಿತ್ತು. ಒಂದು ದಿನ ಅಂಬಿಗನಿಗೆ ತೆರಲು ಅವನ ಬಳಿ ಹಣವಿರಲಿಲ್ಲ. ಸರಿ, ಮಾಡುವುದೇನು? ಪುಸ್ತಕ ತಲೆ ಮೇಲಿರಿಸಿಕೊಂಡವನೇ ಈಜಿ ಶಾಲೆ ತಲುಪಿದ್ದ. ಇದೇ ಕಿಶೋರ ತನ್ನ ಹೆಸರಿನೊಂದಿಗೆ ಜಾತಿ ಸೂಚಕವಾದ ಶ್ರೀವಾಸ್ತವ ಎಂಬ ಕುಲನಾಮ ಬೇಡವೆಂದು ಅದನ್ನು ತೊರೆದ. ಬರೀ ಲಾಲ್ ಬಹದ್ದೂರ್ ಆದ. ಮುಂದೆ 1926ರಲ್ಲಿ ಕಾಶಿ ವಿದ್ಯಾಪೀಠದಲ್ಲಿ ‘ದರ್ಶನ ಶಾಸ್ತ್ರ’ದಲ್ಲಿ ವಿದ್ಯಾರ್ಜನೆ ಮಾಡಿ ‘ಶಾಸ್ತ್ರಿ’ ಉಪಾಧಿ ಪಡೆದು ಲಾಲ್ ಬಹದ್ದೂರ್ ಶಾಸ್ತ್ರಿ ಆದರು. ಹೆಸರಿನ ಹಿಂದೆ ಸಲ್ಲದ್ದೆನ್ನಿಸಿದ್ದರ ಬದಲು ಇದೀಗ ಸಲ್ಲುವಂಥದ್ದು! ಇದಲ್ಲವೇ ಅನುಪಮ?

ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್‍ರ ಪ್ರಭಾವಕ್ಕೊಳಗಾಗಿ ಲಾಲ್‌ ಬಹದ್ದೂರ್‌ ವಿದ್ಯಾಭ್ಯಾಸ ಮುಂದುವರಿಸಲಾಗದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಅವರು ಜೈಲಿನಲ್ಲಿದ್ದಾಗ ನಡೆದ ಒಂದು ಪ್ರಸಂಗ ಉಲ್ಲೇಖಾರ್ಹ. ಅವರ ಪತ್ನಿ ಲಲಿತಾ ಶಾಸ್ತ್ರಿಯವರಿಗೆ ತಿಂಗಳಿಗೆ 50 ರೂಪಾಯಿ ಪಿಂಚಣಿ ಸರ್ಕಾರದಿಂದ ಲಭ್ಯವಿತ್ತು. ಅದರಲ್ಲಿ 10 ರೂಪಾಯಿಯನ್ನು ಅವರು ಉಳಿತಾಯ ಮಾಡುತ್ತಿದ್ದರು. ಈ ವಿಷಯ ಶಾಸ್ತ್ರಿಯವರಿಗೆ ತಿಳಿದು ‘ಸರ್ವೆಂಟ್ಸ್ ಆಫ್ ಪೀಪಲ್ಸ್ ಸೊಸೈಟಿ’ಗೆ ಪತ್ರ ಬರೆದರು. ‘ನನ್ನ ಪತ್ನಿ ಪ್ರತೀ ತಿಂಗಳ ಪಿಂಚಣಿಯಲ್ಲಿ ಹತ್ತು ರೂಪಾಯಿಯನ್ನು ಉಳಿಸುವ ಕಾರಣ, ನಲವತ್ತೇ ರೂಪಾಯಿ ಅವರಿಗೆ ಸಾಕೆಂದಾಗಿದೆ. ಆದ್ದರಿಂದ ಬರುವ ತಿಂಗಳಿಂದಲೇ ಪಿಂಚಣಿಯಲ್ಲಿ ಹತ್ತು ರೂಪಾಯಿಯನ್ನು ಕಟಾಯಿಸಿ’ ಎನ್ನುವುದು ಒಕ್ಕಣೆ!

ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಗೋವಿಂದ ವಲ್ಲಭ ಪಂತ್, ಶಾಸ್ತ್ರಿಯವರನ್ನು ಗೃಹ ಹಾಗೂ ಸಾರಿಗೆ ಸಚಿವರಾಗಿ ನೇಮಕ ಮಾಡುತ್ತಾರೆ. ಮೊದಲ ಬಾರಿಗೆ ಬಸ್ಸುಗಳಲ್ಲಿ ಮಹಿಳಾ ನಿರ್ವಾಹಕರನ್ನು ನೇಮಿಸಿದ ಕೀರ್ತಿ ಶಾಸ್ತ್ರಿಯವರಿಗೆ ಸಲ್ಲುತ್ತದೆ. ಇನ್ನು ಪೊಲೀಸ್ ಇಲಾಖೆಯಲ್ಲಿ ಅವರು ತಂದ ಸುಧಾರಣೆ ವಿಶಿಷ್ಟವೆ. ಪೊಲೀಸರು ಹಿಂಸಾನಿರತ ಜನರ ಗುಂಪು ಚದುರಿಸಲು ಓಬಿರಾಯನ ಕಾಲದಂತೆ ಲಾಠಿ ಹಿಡಿಯುವುದು ಬೇಡ, ವಾಟರ್ ಜೆಟ್ ಬಳಸಲಿ ಎನ್ನುವ ಕ್ರಾಂತಿಕಾರಕ ಹೆಜ್ಜೆಯಿಡುತ್ತಾರೆ.

ಪ್ರಧಾನಿ ಜವಾಹರಲಾಲ್ ನೆಹರೂ ಸಂಪುಟದಲ್ಲಿ ಶಾಸ್ತ್ರಿಯವರು ರೈಲ್ವೆ ಮಂತ್ರಿಯಾಗಿದ್ದರು. ತಮಿಳುನಾಡಿನ ಅರಿಯಲ್ಲೂರಿನಲ್ಲಿ 1956ರ ನವೆಂಬರ್‌ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿ 142 ಮಂದಿ ಜೀವತೆತ್ತರು. ಇದರ ನೈತಿಕ ಹೊಣೆ ಹೊತ್ತು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪಂಡಿತ್ ನೆಹರೂ ಎಷ್ಟೇ ಬಲವಂತ ಮಾಡಿದರೂ ರಾಜೀನಾಮೆಯಿಂದ ಹಿಂದೆ ಸರಿಯಲಿಲ್ಲ.

1964ರ ಜೂನ್‌ 6ರಂದು ಶಾಸ್ತ್ರಿಯವರು ಪ್ರಧಾನಿಯಾದರು. ‘ನನ್ನ ಎತ್ತರ, ಕೃಶ ಕಾಯ, ಗಡಸಲ್ಲದ ಧ್ವನಿ ಗಮನಿಸಿ ಬಹಳ ಜನ ನನ್ನನ್ನು ಅಶಕ್ತನೆಂದೇ ಭಾವಿಸಬಹುದು. ಇಲ್ಲ ನಾನು ಗಟ್ಟಿಗ’ ಎಂದವರು ಅಧಿಕಾರ ಸೂತ್ರ ಹಿಡಿದ ಆರಂಭದಲ್ಲಿ ಚಟಾಕಿ ಹಾರಿಸಿದ್ದಿದೆ. ಅಧಿಕಾರದಲ್ಲಿದ್ದದ್ದು ಕೇವಲ 20 ತಿಂಗಳು, ಎರಡು ದಿನಗಳು ಮಾತ್ರವೆ. ಆದರೆ ಆ ಅವಧಿಯಲ್ಲಿ ಅವರ ಒಂದೊಂದು ನಡೆಯೂ ಮಾದರಿಯಾಗಿತ್ತು. ಪ್ರಜೆಗಳು ಕೊಡಮಾಡಿದ ಅಧಿಕಾರವನ್ನು ಎಂದೂ ಯಾವ ಕಾರಣಕ್ಕೂ ತಮ್ಮ ಸ್ವಂತಕ್ಕೆ ಬಳಸದ ಅವರು ಪ್ರಾಮಾಣಿಕತೆಯನ್ನು ಸಾಕ್ಷಾತ್ಕರಿಸಿದ ಧೀಮಂತ.

ಎರಡು ಪ್ರಸಂಗಗಳು ಸ್ವಾರಸ್ಯಕರವಾಗಿವೆ. ಮಗ ಅನಿಲ್ ಶಾಸ್ತ್ರಿಯವರಿಗೆ ಅವರಿದ್ದ ಸಂಸ್ಥೆಯಲ್ಲಿ ದಿಢೀರನೆ ಬಡ್ತಿ ದೊರೆಯುತ್ತದೆ. ‘ನಾನು ಪ್ರಧಾನಿಯಾದ ಕೂಡಲೇ ನಿನ್ನ ಅರ್ಹತೆ ಹೆಚ್ಚಲು ಹೇಗೆ ಸಾಧ್ಯ? ಬಡ್ತಿಯನ್ನು ಒಪ್ಪಿಕೊಳ್ಳಬೇಡ’ ಎಂದು ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಪ್ರಧಾನಿ ಹುದ್ದೆಗೇರಿದಾಗ ಶಾಸ್ತ್ರಿಯವರ ಬಳಿ ಸ್ವಂತ ಕಾರಿರಲಿಲ್ಲ. ‘ನನಗೇಕೆ ಕಾರು, ಯಾವ ಯಾತ್ರೆ ಹೊರಡಬೇಕಿದೆ?’ ಎಂದು, ಪದೇಪದೇ ಒತ್ತಾಯಿಸುತ್ತಿದ್ದ ಕುಟಂಬದವರ ಬಾಯಿ ಮುಚ್ಚಿಸುತ್ತಿದ್ದರು. ಕಡೆಗೆ 12,000 ರೂಪಾಯಿಯಲ್ಲಿ ಸಣ್ಣ ಕಾರು ಖರೀದಿಸಲು ಸಮ್ಮತಿಸುತ್ತಾರೆ. ಆದರೆ ಅವರ ಬಳಿ ಇದ್ದದ್ದು ಬರೀ ₹ 7,000! ಉಳಿದ ₹ 5,000ಕ್ಕೆ ಸಾಲಕ್ಕೆಂದು ಬ್ಯಾಂಕಿಗೆ ಅರ್ಜಿ ಹಾಕಿಕೊಳ್ಳುತ್ತಾರೆ.

ಬ್ಯಾಂಕ್ ಮ್ಯಾನೇಜರ್ ಒಂದೇ ದಿನದಲ್ಲಿ ಸಾಲ ಮಂಜೂರು ಮಾಡುತ್ತಾರೆ. ಕುಪಿತರಾದ ಶಾಸ್ತ್ರಿಯವರು ‘ನನಗೆ ಇಷ್ಟು ಬೇಗ ಸಾಲ ಹೇಗೆ ನೀಡಿದಿರಿ? ಉಳಿದ ಅರ್ಜಿದಾರರು ಅದೆಷ್ಟು ದಿನಗಳಿಂದ ಕಾಯುತ್ತಿದ್ದಾರೆ. ನಿಮ್ಮ ವಿರುದ್ಧ ಕಠಿಣ ಕ್ರಮವನ್ನೇಕೆ ಕೈಗೊಳ್ಳಬಾರದು. ನಿಮ್ಮಿಂದ ಸಮಜಾಯಿಷಿ ಬರಲಿ’ ಎಂದು ಅವರಿಗೆ ನೋಟಿಸ್ ಜಾರಿಗೊಳಿಸುತ್ತಾರೆ. ಹಗಲಿರುಳೂ ದೇಶದ ಗಡಿ ಕಾಯುವ ಸೈನಿಕ ಮತ್ತು ಅನ್ನ ಬೆಳೆದು ಉದರ ಸಲಹುವ ರೈತ- ಇಬ್ಬರೂ ಬಹದ್ದೂರರಿಗೆ ದೇಶದ ನಿಜವಾದ ನೇತಾರರಾಗಿ ಕಾಣುತ್ತಾರೆ. ‘ಜೈ ಜವಾನ್, ಜೈ ಕಿಸಾನ್’ ಎಂದು ಘೋಷಣೆ ಮೊಳಗಿಸುತ್ತಾರೆ. ರಾಜಕೀಯವೆಂದರೆ ಚುನಾವಣಾ ರಾಜಕೀಯವೇ ಎನ್ನುವಂತಹ ಇಂದಿನ ಪರಿಸ್ಥಿತಿಯಲ್ಲಿ ನಾವು ಒಬ್ಬೊಬ್ಬರೂ ಶಾಸ್ತ್ರಿಯವರನ್ನು ಒಳಗೊಳ್ಳಬೇಕಿದೆ.

ಗಾಂಧೀಜಿ ಮತ್ತು ಶಾಸ್ತ್ರಿ ಇಬ್ಬರ ಜನ್ಮದಿನವೂ ಒಂದೇ ದಿನ- ಅಕ್ಟೋಬರ್ 2. ಮಹಾತ್ಮರ ಜನ್ಮದಿನ ಆಚರಿಸಿದರೆ ನನಗೂ ಅದು ಸಂದೀತೆಂದು ಶಾಸ್ತ್ರಿಯವರ ಆತ್ಮ ನಿರಾಡಂಬರವನ್ನೇ ಎತ್ತಿಹಿಡಿದಿದೆ ಎನ್ನೋಣವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT