ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಾತ್ಮಕ ಶಿಕ್ಷಣ: ಖಾತರಿಪಡಿಸಲು ಸಕಾಲ

ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅಧಿಕಾರಿಗಳು ನಿರೀಕ್ಷಿತ ಉತ್ಸಾಹ ತೋರದಿರುವುದೇ ಇಂದಿನ ದುಃಸ್ಥಿತಿಗೆ ಪ್ರಮುಖ ಕಾರಣ
Last Updated 30 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಶಿಕ್ಷಣದಲ್ಲಿ ನಿರೀಕ್ಷಿತ ಗುಣಮಟ್ಟ ಸಾಧಿಸುವ ಉದ್ದೇಶದಿಂದ 2017ರ ಫೆಬ್ರುವರಿಯಲ್ಲಿ ಕೇಂದ್ರದ ಶಿಕ್ಷಣ ಹಕ್ಕು ಕಾಯ್ದೆ ನಿಯಮಗಳಿಗೆ ತಿದ್ದುಪಡಿ ತರಲಾಯಿತು. ಇದರ ಅನ್ವಯ, ರಾಜ್ಯ ಸರ್ಕಾರಗಳು ಶಾಲಾ ಶಿಕ್ಷಣದಲ್ಲಿ ಮಕ್ಕಳು ತರಗತಿವಾರು- ವಿಷಯವಾರು ಸಾಧಿಸಬೇಕಾದ ಕಲಿಕಾ ಫಲಿತಾಂಶಗಳನ್ನು ಸಿದ್ಧಪಡಿಸಬೇಕು. ಇದನ್ನು ಸಾಕಾರಗೊಳಿಸಲು ಶಿಕ್ಷಕರು ಮತ್ತು ಪಾಲಕರಿಗೆ ಅಗತ್ಯ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಮೂಲಕ ಕಲಿಕಾ ಫಲಿತಾಂಶ ಸಾಧನೆಯ ಬಗ್ಗೆ ಮೇಲುಸ್ತುವಾರಿ ವಹಿಸಬೇಕು. ಹಾಗೆಯೇ, ಕಲಿಕಾ ಫಲಿತಾಂಶದ ಸಾಕಾರಕ್ಕೆ ಒತ್ತಾಯಿಸುವುದು ಪಾಲಕರು ಮತ್ತು ಮಕ್ಕಳ ಕಾನೂನುಬದ್ಧ ಹಕ್ಕಾಗಿರುತ್ತದೆ. ತರಗತಿವಾರು- ವಿಷಯವಾರು ಸಾಧಿಸಬೇಕಾದ ಕಲಿಕಾ ಫಲಿತಾಂಶವನ್ನು ಶೈಕ್ಷಣಿಕ ಪ್ರಾಧಿಕಾರವಾದ ಡಿಎಸ್‍ಇಆರ್‌ಟಿ ಈಗಾಗಲೇ ಪ್ರಕಟಿಸಿದೆ.

ಶಿಕ್ಷಣದ ಗುಣಮಟ್ಟವನ್ನು ಸಾಕಾರಗೊಳಿಸಲು ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಪಷ್ಟವಾಗಿ ಎರಡು ಮುಖ್ಯ ವಾಹಿನಿಗಳಿವೆ. ಒಂದು, ಆಡಳಿತಾತ್ಮಕ ಮತ್ತು ಮತ್ತೊಂದು ಶೈಕ್ಷಣಿಕ. ಆಡಳಿತಾತ್ಮಕ ವಾಹಿನಿಯಲ್ಲಿ
ರುವ ಶಿಕ್ಷಣ ಸಂಯೋಜಕ, ಕ್ಷೇತ್ರ ಶಿಕ್ಷಣಾಧಿಕಾರಿ ಮುಂತಾದವರನ್ನು ಒಳಗೊಂಡ ಸಿಬ್ಬಂದಿಯು, ಶಾಲೆಗಳು ಭೌತಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಯಾವುದೇ ಅಡಚಣೆಯಿಲ್ಲದೆ ಶಿಕ್ಷಕರು, ಪಾಲಕರು ಮತ್ತು ಮಕ್ಕಳು ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುವಾಗುವಂತಹ ಭೌತಿಕ, ಆಡಳಿತಾತ್ಮಕ ವಾತಾವರಣವನ್ನು ಕಟ್ಟಿಕೊಡುವ ಜವಾಬ್ದಾರಿ ಹೊಂದಿದ್ದಾರೆ. ಅದೇ ರೀತಿ, ಶೈಕ್ಷಣಿಕ ವಾಹಿನಿಯಲ್ಲಿರುವ ಕ್ಲಸ್ಟರ್ ಹಂತದ ಸಂಪನ್ಮೂಲ ವ್ಯಕ್ತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮುಂತಾದವರನ್ನು ಒಳಗೊಂಡ ಸಿಬ್ಬಂದಿಯು ಶಾಲಾ ಹಂತದಲ್ಲಿ ಅತ್ಯುತ್ತಮ ಕಲಿಕಾ ವಾತಾವರಣವನ್ನು ಕಟ್ಟಿಕೊಡುವ ಮೂಲಕ ಬೋಧನೆ- ಕಲಿಕೆಯಲ್ಲಿ ಎದುರಾಗಬಹುದಾದ ಎಲ್ಲಾ ಅಡೆತಡೆಗಳನ್ನು ತೊಡೆದುಹಾಕಿ, ಪ್ರತಿ ಶಾಲೆಯೂ ಕಲಿಕೆಯಲ್ಲಿ ನಿರೀಕ್ಷಿತ ಮಟ್ಟವನ್ನು ಮುಟ್ಟುವಂತೆ ಖಾತರಿಪಡಿಸಿ
ಕೊಳ್ಳುವ ಪ್ರಮುಖ ಜವಾಬ್ದಾರಿ ಹೊಂದಿರುತ್ತಾರೆ.

ಈ ಎರಡೂ ವಿಭಾಗಗಳ ಅಧಿಕಾರಿಗಳು ನಿರಂತರ ಮೇಲುಸ್ತುವಾರಿಯ ಮೂಲಕ, ಎಲ್ಲಾ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ದೊರಕುವಂತೆ ನೋಡಿಕೊಳ್ಳುವ ಗುರುತರವಾದ ಜವಾಬ್ದಾರಿ ಹೊಂದಿದ್ದಾರೆ. ಈ ಎರಡೂ ವಾಹಿನಿಗಳು ಎಷ್ಟರಮಟ್ಟಿಗೆ ಕೆಲಸ ನಿರ್ವಹಿಸುತ್ತಿವೆ ಎಂಬುದು ಶಾಲಾ ಶಿಕ್ಷಣ ವ್ಯವಸ್ಥೆಯ ಗುಣಾತ್ಮಕತೆಯ ಸೂಚ್ಯಂಕವಾಗುತ್ತದೆ. ಸ್ವಯಂಸೇವಾ ಸಂಸ್ಥೆಯೊಂದು ಹೈಕೋರ್ಟ್‌ನಲ್ಲಿ ರಾಜ್ಯದ ಶಾಲಾ ಸ್ಥಿತಿಗಳ ದಾರುಣ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದನ್ನು ಹೂಡಿತ್ತು. ಇದಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸಿದ ಹೈಕೋರ್ಟ್‌, ಜಿಲ್ಲಾ ಹಂತದಲ್ಲಿನ ಕಾನೂನು ಸೇವಾ ಪ್ರಾಧಿಕಾರಗಳ ಸಿಬ್ಬಂದಿ ಖುದ್ದಾಗಿ ಶಾಲೆಗಳಿಗೆ ಭೇಟಿ ನೀಡುವ ಮೂಲಕ ಪರಿಸ್ಥಿತಿಯನ್ನು ಅವಲೋಕಿಸಿ, ನ್ಯಾಯಾಲಯಕ್ಕೆ ಲಿಖಿತ ವರದಿ ನೀಡಬೇಕೆಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿತ್ತು. ಸೇವಾ ಪ್ರಾಧಿಕಾರವು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ‘ಮಗು ಮತ್ತು ಕಾನೂನು ಕೇಂದ್ರ’ದ ಸಹಯೋಗದಲ್ಲಿ ಪ್ರಶ್ನಾವಳಿಯೊಂದನ್ನು ತಯಾರಿಸಿ, 2019ರ ಜೂನ್- ಜುಲೈನಲ್ಲಿ ಶಾಲೆಗಳಿಗೆ ಖುದ್ದು ಭೇಟಿ ನೀಡಿ ದತ್ತಾಂಶವನ್ನು ಸಂಗ್ರಹಿಸಿತು. ಈ ದತ್ತಾಂಶವನ್ನು ಕ್ರೋಡೀಕರಿಸಿ, ಕೋಷ್ಟಕಗಳ ಮೂಲಕ ವ್ಯಾಖ್ಯಾನಿಸಿ ವಿಶ್ಲೇಷಿಸಲು ಮಗು ಮತ್ತು ಕಾನೂನು ಕೇಂದ್ರವು ಪ್ರಾಧಿಕಾರಕ್ಕೆ ನೆರವು ನೀಡಿದ್ದಲ್ಲದೆ, ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಸಮಗ್ರ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಿತು.

ಈ ಸಂದರ್ಭದಲ್ಲಿ ಹಲವು ವಿಷಯಗಳ ಬಗ್ಗೆ ದತ್ತಾಂಶ ಸಂಗ್ರಹಿಸಲಾಯಿತು. ಇದರಲ್ಲಿ ಬಹಳ ಮುಖ್ಯವಾದ ಅಂಶವೆಂದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಭಾಯಿಸುವ ಭಾಗವಾಗಿ ಅಧ್ಯಯನಕ್ಕೆ ಆಯ್ದುಕೊಂಡಿದ್ದ 889 ಶಾಲೆಗಳ ಪೈಕಿ, 2018-19ನೇ ಸಾಲಿನಲ್ಲಿ ಎಷ್ಟು ಶಾಲೆಗಳಿಗೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಒದಗಿಸುವ ದತ್ತಾಂಶ. ಈ ಅಂಶವು ಶಾಲಾ ಹಂತದಲ್ಲಿ ನಮ್ಮ ಮೇಲುಸ್ತುವಾರಿ ಮತ್ತು ಮೇಲ್ವಿಚಾರಣೆ ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂಬ ಬಗ್ಗೆ ಬೆಳಕು ಚೆಲ್ಲುತ್ತದೆ. ಮೇಲಿನ ಹಂತದ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡುವ ಸಂಖ್ಯೆಯು ಮೇಲ್ಮಟ್ಟಕ್ಕೆ ಹೋದಂತೆ ಗಣನೀಯವಾಗಿ ಕುಸಿದಿರುವುದು ಕಂಡುಬರುತ್ತದೆ.

ಇಂತಹ ಅಂಶಗಳು ಶಾಲಾ ಶಿಕ್ಷಣ ವ್ಯವಸ್ಥೆಯು ಗುಣಾತ್ಮಕ ಶಿಕ್ಷಣ ಒದಗಿಸಲು ಏಕೆ ಸೋತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತವೆ. ನಿರಂತರ ಮೇಲುಸ್ತುವಾರಿ ಮತ್ತು ಮೇಲ್ವಿಚಾರಣೆಯ ಭಾಗವಾಗಿ ಶಾಲಾ ಶಿಕ್ಷಣದ ಗುಣಮಟ್ಟವನ್ನು ಅಭಿವೃದ್ಧಿಪಡಿಸಬೇಕಾದ ಅಧಿಕಾರಿಗಳು, ಅದರಲ್ಲೂ ವಿಶೇಷವಾಗಿ ಶೈಕ್ಷಣಿಕ ವಾಹಿನಿಯಲ್ಲಿರುವ ಅಧಿಕಾರಿಗಳು ಶಾಲೆಯಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ನಿರೀಕ್ಷಿತ ಉತ್ಸಾಹ ತೋರದಿರುವುದೇ ಇಂದಿನ ಕಳಪೆ ಗುಣಮಟ್ಟದ ಶಿಕ್ಷಣಕ್ಕೆ ಪ್ರಮುಖ ಕಾರಣ. ಪ್ರತೀ ಅಧಿಕಾರಿ ತನ್ನ ಕೆಲಸ ನಿರ್ವಹಣಾ ದಿನಗಳಲ್ಲಿ ಕನಿಷ್ಠ ಒಂದು ಶಾಲೆಗೆ ಭೇಟಿ ನೀಡಿ, ಗುಣಾತ್ಮಕ ಶಿಕ್ಷಣವನ್ನು ಖಾತರಿಗೊಳಿಸುವುದನ್ನು ಕಡ್ಡಾಯಗೊಳಿಸುವ ಕಾಲ ಸನ್ನಿಹಿತವಾಗಿದೆ. ರಾಜ್ಯದ ಶಿಕ್ಷಣ ಸಚಿವರು ಆದಷ್ಟು ಬೇಗ ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT