ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಧನ್ಯವಾದ್ ಮಿತ್ರೋಂ!

Last Updated 19 ಏಪ್ರಿಲ್ 2020, 21:50 IST
ಅಕ್ಷರ ಗಾತ್ರ

ನಾಲ್ಕೇ ತಿಂಗಳಲ್ಲಿ 23 ಲಕ್ಷಕ್ಕೂ ಹೆಚ್ಚು ದೇಹಗಳಲ್ಲಿ ತೂರಿಕೊಂಡು, ಒಂದೂವರೆ ಲಕ್ಷಕ್ಕೂ ಹೆಚ್ಚು ಜನರ ಕಣ್ಮುಚ್ಚಿಸಿ, ಘಟಾನುಘಟಿಗಳಿಗೂ ಮಣ್ಣು ಮುಕ್ಕಿಸಿ, ‘ನಮ್ಮಲ್ಲಿದೆ ಸಂಜೀವಿನಿ’ ಎಂದ ಆಧುನಿಕ ವೈದ್ಯರಿಂದ ಹಿಡಿದು ಚರಕ– ಸುಶ್ರುತ ಸಂಹಿತೆಯಲ್ಲಿ ಎಲ್ಲದಕ್ಕೂ ರಾಮಬಾಣವಿದೆ ಎನ್ನುವ ಸಂಸ್ಕೃತಿವೀರರಿಗೂ ಚಳ್ಳೆಹಣ್ಣು ತಿನ್ನಿಸುತ್ತ, ದುಪ್ಪಟ್ಟು ಗುಣಿಸುವ ಮತ್ತು ಮನುಷ್ಯರನ್ನು ಕಳೆಯುವ ಲೆಕ್ಕದಲ್ಲಿ ನನ್ನ ಮೀರಿಸುವರಿಲ್ಲವೆಂದು ಅಟ್ಟಹಾಸಗೈಯ್ಯುತ್ತ ನಡೆದಿದ್ದ ಕೋವಿದಣ್ಣ, ಅರೆಕ್ಷಣ ಸುಧಾರಿಸಿಕೊಳ್ಳಲು ನಡುರಾತ್ರಿ ಒಂದೆಡೆ ಕೂತು ತನ್ನ ಇ–ಮೇಲ್ ಬಾಕ್ಸ್ ತೆರೆದ.

‘ಲಾಕ್‍ಡೌನಿನಿಂದಾಗಿ ಹನಿ ಮದ್ಯಕ್ಕೂ ತತ್ವಾರ, ನಿನ್ ಮನೆ ಎಕ್ಕುಟ್ಟೋಗ’ ಎಂದೆಲ್ಲ ಹೆಂಡ್ಕುಡುಕ ಸಂಘದವರು ವಾಚಾಮಗೋಚರ ಬೈದಿದ್ದರೆ, ಅವರ ಹೆಂಡತಿಯರು ‘ನಾಕೊಪ್ಪತ್ತು ಕುಡಿತ ನಿಲ್ಲಿಸಿ, ತುತ್ತು ಗಂಜಿ ಕುಡಿಯೋ ಹಂಗೆ ಮಾಡಿದೆಯಲ್ಲ, ನಿನ್ ಮನೆ ತಣ್ಣಗಿರಲಪ್ಪ’ ಎಂದು ಹರಸಿದ್ದರು. ‘ಮೊದ್ಲೇ ಗೌರವಧನಾನೂ ಸರಿಯಾಗಿ ಕೊಡಲ್ಲ, ಇದೇನ್ ಕರ್ಮ ತಂದಿಟ್ಯಪ್ಪ, ಜೀವ ಕೈಯಲ್ಲಿ ಹಿಡಿದು ಸೇವೆ ಮಾಡಬೇಕು, ಜೊತೆಗೆ ಜನರ ಹತ್ರ ಬಡಿಸ್ಕೋಬೇಕು’ ಎಂದು ಭಾರತಮಾತೆಯ ಆಶಾಪುತ್ರಿಯರು ಹಿಡಿಶಾಪ ಹಾಕಿದ್ದರು. ದೊಡ್ಡಣ್ಣನ ಮನೆಯ ದಾದಿಯರು ಹಳೇ ಡಸ್ಟ್‌ಬಿನ್‍ ಕವರುಗಳನ್ನೇ ಮಾಸ್ಕ್‌ ಮಾಡಿಕೊಂಡು ಓಡಾಡೋ ಪರಿಸ್ಥಿತಿಗಾಗಿ ಬೈದು ಬರೆದಿದ್ದರು. ಇಬ್ಬರು ಮಾತ್ರ ಭಾರೀ ‘ಪೊಲಿಟಿಕಲಿ ಕರೆಕ್ಟ್’ ಭಾಷೆಯಲ್ಲಿ ಇಮೇಲಿಸಿದ್ದರು.

ಬಿದ್ದರೂ ಮೀಸೆ ಮಣ್ಣಾಗಿಲ್ಲವೆಂದು ಎದ್ದ ದೊಡ್ಡಣ್ಣ ನಂಬರ್ ಒನ್ ಅಮೆರಿಕ, ಕೊರೊನಾ ಸಂತ್ರಸ್ತರು ಮತ್ತು ಸತ್ತವರ ಸಂಖ್ಯೆಯಲ್ಲೂ ಟಾಪ್ ಮೋಸ್ಟ್ ಎನ್ನುತ್ತಲೇ ಚೀನಾ ಸುಳ್ಳು ಹೇಳುತ್ತಿದೆ ಎಂದು ಎಗರಾಡಿತ್ತು.

ಭಾರತಮಾತೆಯ ವರಪುತ್ರ ಶ್ರೀಮಾನ್ ಶ್ರೀ ಚೌಕಿದಾರರು ಕೊರೊನಾ ಕುಲದವರನ್ನು ಉದ್ದೇಶಿಸಿ, ‘ಎಲ್ಲವನ್ನೂ ನಿಯಂತ್ರಿಸುವ ಮತ್ತು ಜಿಡಿಪಿ ಕುಸಿತದ ವೈಫಲ್ಯಗಳನ್ನು ನಿನ್ನ ತಲೆಗೆ ಕಟ್ಟುವ ಅವಕಾಶ ಕೊಟ್ಟಿದ್ದೀಯ. ಎಲ್ಲರ ಚಿತ್ತ ನಿನ್ನ ಮೇಲೆ. ತೇಲ್ತುಂಬ್ಡೆ ಬಿಡು, ಅಂಬೇಡ್ಕರ್ ಬದುಕಿದ್ದರೆ, ಅವರನ್ನೇ ನಾವೀಗ ಜೈಲಿಗಟ್ಟಿದರೂ ಯಾರೂ ಕೇಳುವುದಿಲ್ಲ’ ಎಂದು ‘ಕೊರೊನಾ ಮಿತ್ರೋಂ’ಗಳಿಗೆ ಧನ್ಯವಾದ ಸಮರ್ಪಿಸಿದ್ದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT