ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತದಿರಲಿ ಜೀವಸೆಲೆ...

ಮಳೆಗಾಲ ಮುಗಿಯುತ್ತಿದ್ದಂತೆ ಮಲೆನಾಡಿನ ನದಿಗಳ ಹರಿವಿನಲ್ಲಿ ತೀವ್ರ ಕುಸಿತವನ್ನು ಆತಂಕದಿಂದ ನೋಡುವಂತಾಗಿದೆ
Last Updated 19 ನವೆಂಬರ್ 2018, 20:01 IST
ಅಕ್ಷರ ಗಾತ್ರ

ನೀರು ಸಮಸ್ತ ಜೀವರಾಶಿಯ ಜೀವನಾಧಾರ, ಪಂಚಭೂತಗಳಲ್ಲೊಂದು. ಜೀವಸಂಕುಲವು ಮೊದಲು ಅವತರಿಸಿದ್ದು ನೀರಿನಲ್ಲಿಯೇ. ಬಹಳಷ್ಟು ಖನಿಜಾಂಶಗಳು ದೇಹಕ್ಕೆ ದೊರಕಲು ನೀರೇ ಮೂಲ. ಆವಾಸವಾಗಿಯೂ ಜೀವರಾಸಾಯನಿಕ ಕ್ರಿಯೆಗಳಿಗೆಲ್ಲಾ ಮಾಧ್ಯಮ
ವಾಗಿಯೂ ನೀರು ಅವಶ್ಯಕ. ಹಾಗಾಗಿ ಅನ್ಯಗ್ರಹಗಳಲ್ಲಿ ಜೀವಸಾಧ್ಯತೆಯನ್ನು ಅನ್ವೇಷಿಸುವಾಗೆಲ್ಲಾ ಮೊದಲು ಹುಡುಕುವುದು ನೀರಿನ ಇರುವಿಕೆಯನ್ನೇ.

ಶಾಲಾದಿನಗಳಲ್ಲಿ ಓದಿದ ‘ವಾಟರ್ ವಾಟರ್ ಎವೆರಿವೇರ್...’ ಅನ್ನೋ ಸಾಮ್ಯುಯೆಲ್ ಕೋಲ್ರಿಜ್‍ರ ಪದ್ಯವೀಗ ಪದೇಪದೇ ಕಾಡುತ್ತಿದೆ. ಸುತ್ತೆಲ್ಲಾ ನೀರಿದ್ದಾಗಲೂ ಸಮುದ್ರಯಾನಿಗೆ ದಾಹ ತೀರಲು ಗುಟುಕು ನೀರಿಲ್ಲದೇ ಪರದಾಡುವ ಸ್ಥಿತಿಯು ಕಣ್ಣಿಗೆ ಕಟ್ಟಿದೆ. ಇವತ್ತು ನಮ್ಮೆದುರಿಗಿರುವ ವಾಸ್ತವವೂ ಅದೇ. ಭೂಗೋಳದ ಶೇ 70 ಭಾಗವನ್ನು ನೀರು ಆವರಿಸಿದ್ದರೂ ನಮ್ಮ ಬಳಕೆಗೆ ಲಭ್ಯವಿರುವ ಸಿಹಿನೀರು ಶೇ 0.24ರಷ್ಟು ಮಾತ್ರ. ಉಳಿದಿದ್ದೆಲ್ಲಾ ಉಪ್ಪುನೀರು, ಹಿಮಗಡ್ಡೆಗಳು, ಅಂತರ್ಜಲ ಅಥವಾ ನೀರಾವಿ ರೂಪದಲ್ಲಿರುವ ಅಲಭ್ಯ ನೀರು.

ಆಧುನಿಕ ಜಗತ್ತು ಎದುರಿಸುತ್ತಿರುವ ಗಂಭೀರ ಸವಾಲುಗಳಲ್ಲಿ ಜಲಕ್ಷಾಮವು ಮಹತ್ವದ್ದು. ಅತಿಯಾದ ಜನಸಂಖ್ಯೆಯು ಅಕ್ಷಯಪಾತ್ರೆಯಂತಿರುವ ಪರಿಸರವನ್ನು ಶೋಷಿಸುತ್ತಿದೆ. ನೀರಿನ ಅಮಿತವಾದ ಬಳಕೆ, ನದಿ- ಜಲಮೂಲಗಳ ನಾಶ, ಅರಣ್ಯನಾಶ ಮತ್ತು ಜಲಮಾಲಿನ್ಯದಿಂದಾಗಿ ಈ ನವೀಕರಿಸಬಹುದಾದ ಸಂಪನ್ಮೂಲಕ್ಕೆ ಧಕ್ಕೆಯೊದಗಿದೆ.

ಜಲಚಕ್ರದಲ್ಲಿಯ ಏರುಪೇರಿ ನಿಂದಾಗಿ ಆಗಾಗ ಅಕಾಲಿಕ ಮಳೆ, ನೆರೆಹಾವಳಿ ಮತ್ತು ಭೀಕರ ಬರವನ್ನು ಎದುರಿಸುತ್ತಿದ್ದೇವೆ. ವರ್ಷವೆಲ್ಲಾ ಮಳೆ ಸುರಿಯುವ ಚಿರಾಪುಂಜಿಯಲ್ಲಿ ನೀರಿಗೆ ಬರ, ಮರುಭೂಮಿಯಲ್ಲಿ ನೆರೆಯಂತಹ ವಿದ್ಯಮಾನಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಹಸಿರುಮನೆ ಅನಿಲದ ಪರಿಣಾಮದಿಂದಾಗಿ ಹಿಮಪರ್ವತಗಳು ಕರಗುತ್ತಿವೆ.

ಆಫ್ರಿಕಾದ 40,000 ಚ.ಕಿ.ಮೀ. ವಿಸ್ತೀರ್ಣದ ಚಾಡ್ ಸರೋವರವು ನಮ್ಮ ಸರಸ್ವತಿ ನದಿಯಂತೆ ಕಳೆದುಹೋಗಿದೆ. ಜಗತ್ತಿನ ಹತ್ತು ಮಹಾನದಿಗಳು ಬೇಸಿಗೆಯಲ್ಲಿ ಬತ್ತುತ್ತಿವೆ.ಅಷ್ಟೇ ಏಕೆ, ನಮ್ಮ ಕಾವೇರಿ, ಕೃಷ್ಣೆಯರೂ ವರ್ಷದಲ್ಲಿ ಎರಡು ತಿಂಗಳು ಸಮುದ್ರವನ್ನೇ ಸೇರುವುದಿಲ್ಲ. ಹಾಗಾಗಿ ‘ನದಿ ಉಳಿಸಿ’ ಆಂದೋಲನದಂತಹ ಲೋಕಕಲ್ಯಾಣದ ಕೆಲಸಗಳಿಗೆ ಮಹತ್ವ ಕೊಡಬೇಕಿದೆ.

ಜಲಕ್ಷಾಮವು ನಮ್ಮ ಬೆಂಗಳೂರನ್ನೂ ಕಾಡುತ್ತಿದೆ. 120 ಕಿ.ಮೀ. ದೂರದಿಂದ ಕಾವೇರಿ ನೀರನ್ನು ಪಂಪ್ ಮಾಡಿ ನಗರಕ್ಕೆ ತರಲಾಗುತ್ತದೆ. ಹನಿಹನಿ ನೀರಿಗೂ ಅದೆಷ್ಟು ಮೌಲ್ಯ! ಅಂತರ್ಜಲ 700 ಅಡಿಗೂ ಹೆಚ್ಚು ಆಳಕ್ಕೆ ಇಳಿದಿದೆ. ನಗರದ ಉಷ್ಣಾಂಶ ಹೆಚ್ಚಾಗಿದೆ. ಕಾಂಕ್ರೀಟ್ ನೆಲದಲ್ಲಿ ನೀರು ಇಂಗಲು ಜಾಗವಿಲ್ಲದೆ, ಮಳೆಯಾದಾಗ ಕೆರೆಗಳ ಬದಲು ಮನೆಗಳಿಗೆ ನೀರು
ನುಗ್ಗುತ್ತದೆ. ಇತ್ತೀಚೆಗಂತೂ ಕೆರೆ, ನದಿಗಳಿಗೆ ರಾಸಾಯನಿಕ, ಅಪಾಯಕಾರಿ ತ್ಯಾಜ್ಯಗಳು ಸೇರುತ್ತಿವೆ. ನಗರದ
ತ್ಯಾಜ್ಯವನ್ನೆಲ್ಲಾ ನದಿಗೆ ಹರಿಸಿ ಅದನ್ನು ವಿಷಮಯಗೊಳಿಸಿ ಆ ನೀರನ್ನೇ ಕುಡಿಯಬೇಕಾದ ಅನಿವಾರ್ಯ ಸ್ಥಿತಿ ನಮ್ಮದಾಗಿದೆ. ಗಾಳಿ ಆಂಜನೇಯನಿಗೆ ಶುದ್ಧನೀರಿನ ಅಭಿಷೇಕ ಮಾಡುತ್ತಿದ್ದ ವೃಷಭಾವತಿ ನದಿಯು ಈಗ ತ್ಯಾಜ್ಯ ಸುರಿಯುವ ಚರಂಡಿಯಾಗಿದೆ.

ಎಲ್ಲವನ್ನೂ ಸಾಧಿಸಬಲ್ಲ ಇವತ್ತಿನ ತಂತ್ರಜ್ಞಾನದ ಕಾಲಕ್ಕೂ ನೀರನ್ನು ಕೃತಕವಾಗಿ ಸೃಷ್ಟಿಸುವುದು ಸಾಧ್ಯವಾಗಿಲ್ಲ. ಹನಿನೀರನ್ನು ಅರಸಿ ಊರಿಗೆ ಊರುಗಳೇ ಗುಳೆ ಹೋಗುತ್ತಿವೆ. ವನ್ಯಜೀವಿಗಳ ಅಳಲು ಯಾರಿಗೂ ಕೇಳಿಸುತ್ತಿಲ್ಲ. ಮಲಿನ ನೀರು ಸೇವನೆಯಿಂದ ಹತ್ತಾರು ಕಾಯಿಲೆಗಳಿಂದ ಜನರು ಬಳಲುತ್ತಿದ್ದಾರೆ. ನೀರಿಗಾಗಿ ಕುಟುಂಬಗಳು, ಊರು, ರಾಜ್ಯ, ದೇಶದೇಶಗಳ ನಡುವೆ ವ್ಯಾಜ್ಯ
ಗಳು, ಮನಸ್ತಾಪಗಳಿವೆ. ಬರದ ಪರಿಣಾಮ ಕೃಷಿ- ಆಹಾರೋತ್ಪಾದನೆಗೆ ಹಿನ್ನಡೆಯಾಗಿ ಬೇಳೆಕಾಳುಗಳ ಬೆಲೆ ಗಗನ ಕಂಡಿದೆ. ನದಿ- ಕೆರೆಗಳ ಹೂಳು ತೆಗೆಯಲು, ಶುದ್ಧೀಕರಣ ಮಾಡಲು ಸಾವಿರಾರು ಕೋಟಿ ವ್ಯಯಿಸಬೇಕಾದ ಅನಿವಾರ್ಯತೆಯಲ್ಲಿದೆ ವರ್ತಮಾನ.

ಜಗತ್ತಿನಲ್ಲೇ ಅತ್ಯಂತ ಹೆಚ್ಚು ಜಲಮೂಲಗಳನ್ನು ಹೊಂದಿರುವ ನೆಲವಾಗಿದ್ದೂ ಭರತಭೂಮಿ ಬರಡಾಗಿಯೇ ಉಳಿದಿದೆ. ಹಾಗೆಯೇ ಅತಿಹೆಚ್ಚು ಒಣಭೂಮಿಯನ್ನು ಹೊಂದಿರುವ, ದೇಶದಲ್ಲೇ ತೀವ್ರಗತಿಯಲ್ಲಿ ಮರುಭೂಮೀಕರಣಗೊಳ್ಳುತ್ತಿರುವ ರಾಜ್ಯವೆಂದರೆ ಕರ್ನಾಟಕವೇ! ಮಳೆ ಬೀಳುವ ಪ್ರಮಾಣವಷ್ಟೇ ಮುಖ್ಯವಲ್ಲ, ನೀರಿನ ಇಂಗುವಿಕೆ, ಸಂಗ್ರಹಣೆ, ಸದ್ಬಳಕೆಯ ಬಗೆಗೆ ಕಾಳಜಿ ವಹಿಸುವುದೂ ಅತ್ಯಗತ್ಯ. ಮಾಲಿನ್ಯ ನಿಯಂತ್ರಣ, ನೀರಿನ ಮಿತವಾದ ಬಳಕೆ, ಇಂಗುಗುಂಡಿಗಳ ಹೆಚ್ಚಳ, ಸುಧಾರಿತ ಕೃಷಿವಿಧಾನ, ಮಳೆನೀರು ಸಂಗ್ರಹ, ಜಲ ಮರುಪೂರಣ ವಿಧಾನಗಳಿಂದ ಜಲಕ್ಷಾಮವನ್ನು ನೀಗಿ ಅಂತರ್ಜಲ ವೃದ್ಧಿಮಾಡುವುದು ಸಾಧ್ಯ.

ಈ ಬಾರಿ ವಿಪರೀತವೆನಿಸುವಷ್ಟು ಮಳೆಯನ್ನು ಕಂಡ ಮಲೆನಾಡು ಕೂಡ ಮಳೆಗಾಲ ಮುಗಿಯುತ್ತಿದ್ದಂತೆ ನದಿಗಳ ಹರಿವಿನಲ್ಲಿ ತೀವ್ರ ಕುಸಿತವನ್ನು ಆತಂಕದಿಂದ ನೋಡುವಂತಾಗಿದೆ. ‘ದುಡ್ಡನ್ನು ನೀರಿನಂತೆ ಖರ್ಚು ಮಾಡಬಾರದು’ ಎಂಬ ಮಾತನ್ನು ಈಗ ‘ನೀರನ್ನು ದುಡ್ಡಿನಂತೆ ಖರ್ಚು ಮಾಡಬಾರದು’ ಎಂದುಬದಲಾಯಿಸಿಕೊಳ್ಳಬೇಕಾದ ಸಂದರ್ಭ. ಶುದ್ಧ ನೀರನ್ನುಮುಂದಿನ ತಲೆಮಾರಿಗೆ ಉಳಿಸಿಹೋಗಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಹೊಣೆಗಾರಿಕೆ. ಗುಡಿಗೋಪುರಗಳನ್ನು ಕಟ್ಟೋದಕ್ಕಿಂತಲೂ ಕೆರೆಕಟ್ಟೆಗಳನ್ನು ಕಟ್ಟುವುದರಲ್ಲಿ ಸಮಾಜೋದ್ಧಾರವಿದೆ. ಜೀವದ್ರವ್ಯವನ್ನು ಶುದ್ಧವಾಗಿ ಉಳಿಕೊಳ್ಳುವ ಕೈಂಕರ್ಯದಲ್ಲಿ ಎಲ್ಲರೂ ತೊಡಗಬೇಕಿದೆ. ಅದಿಲ್ಲದೇ ಹೋದರೆ ತಲೆಮಾರು ನಮ್ಮನ್ನು ಕ್ಷಮಿಸಲಾರದು. ಹಾಗಾಗಿ ವಾಸ್ತವದ ಅರಿವಿನಲ್ಲಿ ಸಮಾಜ ಆ ದಿಕ್ಕಿಗೊಂದು ಹೆಜ್ಜೆ ಇಡುವಂತಾಗಲಿ. ಎಲ್ಲರೆದೆಗಳಲ್ಲಿ ಜೀವಸೆಲೆಯ ಪಸೆ ಎಂದಿಗೂ ಬತ್ತದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT