ಸೋಮವಾರ, ಡಿಸೆಂಬರ್ 9, 2019
17 °C
ಪಠ್ಯ, ಪರೀಕ್ಷೆ, ಅಂಕಗಳ ಬಿಗಿಚೌಕಟ್ಟುಗಳಿಂದ ಬಿಡಿಸಿಕೊಂಡು ಸೃಜನಶೀಲ ಸಾಮರ್ಥ್ಯ ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ಶಿಕ್ಷಕರು ನೆರವಾಗಬೇಕು

ಪುಸ್ತಕದಾಚೆ ಆಲೋಚನೆ

Published:
Updated:
Deccan Herald

ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸಿ ಆವಿಷ್ಕಾರಗಳನ್ನು ಮಾಡುವಂತೆ ಪ್ರೇರೇಪಿಸಲು ಅನುಕೂಲವಾಗುವಂತೆ ಆಯ್ದ ಪ್ರೌಢಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳನ್ನು ಕೇಂದ್ರ ಸರ್ಕಾರ ಸ್ಥಾಪಿಸಿದೆ. ಅಂಥ ಶಾಲೆಗಳ ಶಿಕ್ಷಕರೊಂದಿಗೆ ಇತ್ತೀಚೆಗೆ ನಡೆಸಿದ ಸಂವಾದವೊಂದು ಕುತೂಹಲಕಾರಿಯಾಗಿತ್ತು. 

ಈ ಪ್ರಯೋಗಾಲಯಗಳಲ್ಲಿ ಎಲೆಕ್ಟ್ರಾನಿಕ್ಸ್‌ಗೆ ಸಂಬಂಧಿಸಿದ ಆಧುನಿಕ ಸಲಕರಣೆಗಳ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಇತರ ಉಪಕರಣಗಳಿರುತ್ತವೆ. ಕೆಲವು ಶಿಕ್ಷಕರು, ‘ಇಂಥ ಪ್ರಯೋಗಾಲಯಗಳು ಶಿಕ್ಷಕರಿಗೆ ಅಧಿಕ ಹೊರೆ, ಸಿಲಬಸ್ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ, ನಿರ್ವಹಣೆಗೆ ಪ್ರತ್ಯೇಕ ಶಿಕ್ಷಕರು ಅಗತ್ಯ, ಪ್ರಸ್ತುತ ಇರುವ ಸಿಲಬಸ್‍ಗೆ ಪೂರಕವಾಗಿ ಪ್ರಯೋಗಾಲಯ ಇಲ್ಲ...’ ಎಂದು ಸಮಸ್ಯೆಗಳನ್ನು ವಿವರಿಸಿದರು. ಇನ್ನು ಕೆಲವರು ಇಂತಹ ಪ್ರಯೋಗಾಲಯಗಳು ‘ಶಾಲೆಗಳನ್ನು ಆಧುನಿಕ ಜಗತ್ತಿನ ಸವಾಲುಗಳಿಗೆ ಸಜ್ಜುಗೊಳಿಸಲು ಪೂರಕವಾಗುತ್ತವೆ’ ಎಂಬ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಿದರು.

ದೇಶದಲ್ಲಿ ಸ್ಥಾಪನೆಯಾಗಿರುವ 2,441 ಅಟಲ್ ಟಿಂಕರಿಂಗ್ ಲ್ಯಾಬ್‍ಗಳಲ್ಲಿ ಬೆಂಗಳೂರಿನ ಉತ್ತರಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಲ್ಯಾಬ್‌ ಸಹ ಒಂದು. ಈ ಶಾಲೆಯಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಮಧ್ಯಮ, ಕೆಳಮಧ್ಯಮ ವರ್ಗದ ಕುಟುಂಬದ ವಿದ್ಯಾ
ರ್ಥಿಗಳು ತಂತ್ರಜ್ಞಾನದ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ತಮ್ಮ ಶಾಲೆಗೊಂದು ಜಾಲತಾಣವನ್ನು ಅಭಿವೃದ್ಧಿಗೊಳಿಸಿರುವುದಲ್ಲದೆ ತಾವೇ ಅದರ ನಿರ್ವಹಣೆಯನ್ನೂ ಮಾಡುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ನಡೆಯುವ ಹ್ಯಾಕಥಾನ್‍ಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡದ ಜೊತೆ ಇಂಗ್ಲಿಷ್‌ ಭಾಷೆಯನ್ನೂ ತೊಡಕಿಲ್ಲದೆ ಮಾತನಾಡುತ್ತಾ ತಮ್ಮ ಅಭಿಪ್ರಾಯಗಳನ್ನು ಆತ್ಮವಿಶ್ವಾ
ಸದಿಂದ ಹಂಚಿಕೊಳ್ಳುತ್ತಿದ್ದಾರೆ. ಪ್ರಯೋಗಾಲಯದಲ್ಲಿರುವ ವಿಜ್ಞಾನದ ಉಪಕರಣಗಳನ್ನು ಬಳಸಿಕೊಂಡು ಅನೇಕ ಮಾದರಿಗಳನ್ನು ತಾವೇ ಸಿದ್ಧಪಡಿಸಿದ್ದಾರೆ.

ಸರ್ಕಾರೇತರ ಸಂಸ್ಥೆಗಳ ಬೆಂಬಲ, ಆಸಕ್ತ ಹಾಗೂ ಪ್ರೇರಿತ ಶಿಕ್ಷಕರ ಒತ್ತಾಸೆಗಳು ಈ ಬದಲಾವಣೆಗೆ ಕಾರಣವಾದಂತೆ ತೋರಿತು. ಇಂತಹ ಶಾಲೆಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಅನನುಕೂಲಗಳನ್ನು ಹೊಂದಿದ ಕುಟುಂಬಗಳಿಂದ ಬಂದ ವಿದ್ಯಾರ್ಥಿ, ವಿದ್ಯಾ
ರ್ಥಿನಿಯರು ಸಲೀಸಾಗಿ ತಂತ್ರಜ್ಞಾನವನ್ನು ಬಳಸುವುದನ್ನು ಗಮನಿಸಿದರೆ ಸಾಮಾಜಿಕ ಹಾಗೂ ಲಿಂಗತ್ವದ ಅಂತರ ಹಾಗೂ ತಾರತಮ್ಯಗಳನ್ನು ಕುಗ್ಗಿಸುವ ಶಕ್ತಿಯಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯನಿರ್ವಹಿಸಬಲ್ಲದು ಎಂಬುದು ಮನವರಿಕೆಯಾಗುತ್ತದೆ.

ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯಂತೆಯೇ ಇನ್‍ಸ್ಪೈರ್ ಎಂಬ ಕಾರ್ಯಕ್ರಮವು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳನ್ನು ಸಮಾಜದಲ್ಲಿರುವ ಕೊರತೆಗಳನ್ನು ತಂತ್ರಜ್ಞಾನದ ಮೂಲಕ ತುಂಬುವ ನೂತನ ಆವಿಷ್ಕಾರಗಳನ್ನು ಮಾಡಲು ಪ್ರೇರೇಪಿಸುವುದಾಗಿದೆ. ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಆವಿಷ್ಕಾರದ ಮಾದರಿಯನ್ನು ಸಿದ್ಧಪಡಿಸಲು ₹ 10,000 ಜಮೆ ಮಾಡಲಾಗುತ್ತದೆ. ಈ ವರ್ಷ ಒಟ್ಟು 50,279 ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗಿದೆ. ಅದರಲ್ಲಿ ಕರ್ನಾಟಕದ 7,179 ವಿದ್ಯಾರ್ಥಿಗಳೂ ಸೇರಿದ್ದಾರೆ.

ಈ ವಿದ್ಯಾರ್ಥಿಗಳು ತಾವು ತಯಾರಿಸುವ ಮಾದರಿಯನ್ನು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆಯುವ ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸುತ್ತಾರೆ. ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗುವ 60 ಉತ್ತಮ ಮಾದರಿಗಳು ರಾಷ್ಟ್ರಪತಿ ಭವನದಲ್ಲಿ ಆಯೋಜಿಸುವ ‘ಆವಿಷ್ಕಾರ ಉತ್ಸವ’ದಲ್ಲಿ ಪ್ರದರ್ಶಿತವಾಗುತ್ತವೆ. ವಿದ್ಯಾರ್ಥಿಗಳು ಈ ಹಿಂದೆ ಆವಿಷ್ಕರಿಸಿರುವ ಮಾದರಿಗಳು ಜನೋಪಯೋಗಿಯಾಗಿದ್ದು, ಅವರ ಸಂಶೋಧನಾ ಸಾಮರ್ಥ್ಯ ಎಂಥವರನ್ನೂ ಬೆರಗುಗೊಳಿಸುತ್ತದೆ. ಅಂಗವಿಕಲರಿಗೆ ಸುಲಭವಾಗಿ ಮೆಟ್ಟಿಲುಗಳನ್ನು ಏರಲು ಸಾಧ್ಯವಾಗುವ ಸಾಧನಗಳು, ತ್ಯಾಜ್ಯ ಸಂಗ್ರಹಿಸುವ ಉಪಕರಣ, ಅತಿಹೆಚ್ಚು ವಾಹನ ದಟ್ಟಣೆ ಇದ್ದ ಸಂದರ್ಭಗಳಲ್ಲಿ ಪರ್ಯಾಯ ರಸ್ತೆಗಳಲ್ಲಿ ಚಲಿಸಬಹುದು ಎಂದು ಸೂಚಿಸಲು ನೀಲಿ ದೀಪ ಅಳವಡಿಸುವ ಚಿಂತನೆ... ಇತ್ಯಾದಿ ಕೆಲವು ಉದಾಹರಣೆಗಳು. 2009-10ನೇ ಸಾಲಿನಿಂದ ವಿದ್ಯಾರ್ಥಿಗಳು ಮಾಡಿರುವ ಆವಿಷ್ಕಾರಗಳನ್ನು www.inspireawards-dst.gov.in/UserP/children-corner.aspx ಜಾಲತಾಣದಲ್ಲಿ ಗಮನಿಸಬಹುದು.

ಪಠ್ಯಪುಸ್ತಕ, ಪರೀಕ್ಷೆ, ಅಂಕಗಳ ಬಿಗಿಚೌಕಟ್ಟುಗಳನ್ನು ಶಿಕ್ಷಕರು ಹಂತ ಹಂತವಾಗಿ ಬಿಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿರುವ ಸಹಜ ಆಸಕ್ತಿ, ಕುತೂಹಲ, ಸೃಜನಶೀಲ ಸಾಮರ್ಥ್ಯಗಳ ಸೆಲೆಯನ್ನು ಕಂಡುಕೊಳ್ಳಲು ಅವರಿಗೆ ನೆರವಾಗಬೇಕು. ಇದಕ್ಕೆ ಪೂರಕವಾಗಿ ವ್ಯವಸ್ಥೆ
ಯನ್ನು ಸಜ್ಜುಗೊಳಿಸಬೇಕು. ಇದಕ್ಕೆ ಅಟಲ್ ಟಿಂಕರಿಂಗ್ ಲ್ಯಾಬ್ ಹಾಗೂ ಇನ್‍ಸ್ಪೈರ್‌ನಂತಹ ಕಾರ್ಯಕ್ರಮಗಳು ನೆಪವಾಗಬೇಕು. ನಮ್ಮಲ್ಲಿರಬಹುದಾದ ಪೂರ್ವಗ್ರಹಗಳನ್ನು ಮೀರಲು ಅಧಿಕಾರಿಗಳು ಹಾಗೂ ಶಿಕ್ಷಕರೊಂದಿಗೆ ಸಂವಾದ, ಚರ್ಚೆಗಳನ್ನು ಕೈಗೊಳ್ಳ
ಬೇಕು. ಏಕತಾನತೆಯ ಶೈಕ್ಷಣಿಕ ಸನ್ನಿವೇಶಗಳಾಚೆ ವಿದ್ಯಾರ್ಥಿಗಳನ್ನು ಕೊಂಡೊಯ್ದು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದತ್ತ ಸೆಳೆದಲ್ಲಿ ಭವಿಷ್ಯದ ಭಾರತಕ್ಕೆ ವಿಜ್ಞಾನಿಗಳ ಅಭಾವ ಕಾಡದು. ಇನ್‍ಸ್ಪೈರ್, ಅಟಲ್ ಟಿಂಕರಿಂಗ್ ಲ್ಯಾಬ್‍ನಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಲ್ಲಿರುವ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಅಭಿನಯದಂತಹ ಸಾಮರ್ಥ್ಯಗಳನ್ನು ಹೊರಗೆಡಹುವ ರೀತಿಯಲ್ಲಿ ವಿನ್ಯಾಸಗೊಳಿಸಿ, ಅನುಷ್ಠಾನಗೊಳಿಸುವ ಅಗತ್ಯವಿದೆ.

ಪ್ರತಿಕ್ರಿಯಿಸಿ (+)