ಶಾಸಕರೇ, ಇದೆಂಥ ಭಾಷೆ?

ಬುಧವಾರ, ಏಪ್ರಿಲ್ 24, 2019
31 °C

ಶಾಸಕರೇ, ಇದೆಂಥ ಭಾಷೆ?

Published:
Updated:
Prajavani

ರಾಜಕಾರಣದ ಅಖಾಡದಲ್ಲಿನ ವಿರೋಧಿ ತಂಡವನ್ನು ಹೀಯಾಳಿಸಿ ಮಾತನಾಡುವುದು ಇತ್ತೀಚೆಗೆ ಸರ್ವೇ ಸಾಮಾನ್ಯ. ಇದಕ್ಕೆ ಯಾವ ರಾಜಕೀಯ ಪಕ್ಷವೂ ಹೊರತಾಗಿಲ್ಲ.

ರಚನಾತ್ಮಕ ಟೀಕೆ, ವ್ಯಂಗ್ಯೋಕ್ತಿಗಳು ರಾಜಕೀಯ ಭಾಷಣಗಳಲ್ಲಿ ಇರಲೇಬೇಕು. ಆಗಲೇ ಅಂತಹ ಭಾಷಣಗಳು ಸ್ಮರಣೀಯವೂ, ಸೊಗಸಾದವೂ ಆಗುತ್ತವೆ. ಆದರೆ, ‘ನನ್ನ ಸಿದ್ಧಾಂತವನ್ನು ಅಥವಾ ನನ್ನ ಸಿದ್ಧಾಂತದ ನಾಯಕನನ್ನು ಒಪ್ಪದವರು ದೇಶದ್ರೋಹಿಗಳು’ ಎಂದು ಕೆಲವು ಅಭ್ಯರ್ಥಿಗಳು ಘೋಷಿಸುವುದನ್ನು ನಿರ್ವಚಿಸುವುದು ಹೇಗೆ? ಬಿಜೆಪಿ ಮುಖಂಡ, ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರು, ‘ಮೋದಿಗೆ ಮತ ನೀಡದವರನ್ನು ತಾಯ್ಗಂಡರು ಎಂದು ತೀರ್ಮಾನಿಸಬೇಕಾಗುತ್ತದೆ’ ಎಂದು ರಾಜಕೀಯ ಫತ್ವಾ ಹೊರಡಿಸಿರುವುದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?

ಕಳೆದ ಬಾರಿಯ, ಅಂದರೆ 2014ರ ಲೋಕಸಭಾ ಚುನಾವಣೆಯ ಅಂಕಿ ಅಂಶಗಳು ಹೇಳುವಂತೆ, ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಪರವಾಗಿ ಮತ ಚಲಾವಣೆ ಮಾಡಿದವರ ಪ್ರಮಾಣ ಸರಿಸುಮಾರು ಶೇಕಡ 31ರಷ್ಟು ಮಾತ್ರ. ಅಂದರೆ, ಅರ್ಧಕ್ಕಿಂತಲೂ ಕಡಿಮೆ. ಈ ದೇಶದ ಇನ್ನುಳಿದ ಶೇಕಡ 69ರಷ್ಟು ಜನ ಮೋದಿ ನಾಯಕತ್ವದ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಪರಿಭಾವಿಸಲು ಅಡ್ಡಿಯಿಲ್ಲ. ಅವರು ಮೋದಿಯವರ ಪಕ್ಷದ ವಿರುದ್ಧವಾಗಿ ಮತ ಚಲಾಯಿಸಿದ್ದಕ್ಕೆ ಹಲವು ಕಾರಣಗಳು ಇರಬಹುದು. ಆ ಹಲವು ಕಾರಣಗಳಲ್ಲಿ ‘ಧರ್ಮ, ಜಾತಿ’ಯ ಕಾರಣಗಳೂ ಇದ್ದಿರಬಹುದು. ಹೀಗಿರುವಾಗ ರವಿ ಅವರ ಹೇಳಿಕೆಯನ್ನು ಅನ್ವಯಿಸಿ ನೋಡಿ, ಮೋದಿ ಅವರ ಪಕ್ಷಕ್ಕೆ ಮತ ನೀಡದ ಶೇಕಡ 69ರಷ್ಟು ಮತದಾರರನ್ನು ... ಎಂದು ಕರೆಯಬಹುದೇ?!

ಉದ್ವೇಗದ ಮತ್ತು ಉದ್ರೇಕಕಾರಿ ಮಾತುಗಳು ರವಿ ಮತ್ತು ಅವರ ತಂಡಕ್ಕೆ ಹೊಸವೇನೂ ಅಲ್ಲ. ಅವರಿಗೆ ‘ಮಾತೆಯ ಮಾನ ರಕ್ಷಣೆಗಾಗಿ ಮುಡಿಪಾಗಿರಲೆನ್ನಯ ಪ್ರಾಣ’ ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೀತೆಯನ್ನು ಸಂಘದ ಶಾಖೆಯಲ್ಲಿ ಸದಾ ಹೇಳಿ ಕೊಡಲಾಗುತ್ತದೆ. ರವಿಯವರು ಸಹ ಈ ಗೀತೆಯನ್ನು ಲಾಠಿ ಸಹಿತ ಹಾಡಿದವರೇ.

ತಾಯಿ ಮತ್ತು ಮಗುವಿನ ನಡುವೆ ಇರುವ ಸಂಬಂಧವನ್ನು ಮತ ರಾಜಕಾರಣದ ಕಣ್ಣಿನಲ್ಲಿ ನೋಡುವುದು ಸರಿಯಲ್ಲ ಎಂದು ಇಂಥವರಿಗೆ ಅನಿಸಲಿಲ್ಲವೇ? ತಮ್ಮ ನಾಯಕರನ್ನು ಒಪ್ಪದವರು ‘ತಾಯ್ಗಂಡರು’ ಎಂದು ಫರ್ಮಾನು ಹೊರಡಿಸಿದ್ದನ್ನು ಸ್ವತಃ ರವಿ ಅವರ ತಾಯಿಯಾಗಲೀ, ಸಹೋದರಿಯಾಗಲೀ, ಪತ್ನಿ ಹಾಗೂ ಸಹೋದರ ಕೂಡಾ ಸಮರ್ಥಿಸಲಾರರು ಎಂದು ನಾನು ನಂಬಿದ್ದೇನೆ. ಗೋಪ್ಯ ಮತದಾನವನ್ನು ಪವಿತ್ರ ಎಂದು ಭಾವಿಸಿರುವ ಈ ದೇಶದಲ್ಲಿ ಅವರೆಲ್ಲರಿಗೂ ಮೋದಿ ಅವರ ನಾಯಕತ್ವ ವಿರೋಧಿಸುವ ಅಭಿಪ್ರಾಯಗಳು ಇದ್ದಿರಲೂಬಹುದು, ಯಾರಿಗೆ ಗೊತ್ತು?

ತಾಯಿ ಮತ್ತು ತಾಯಿ ನಾಡನ್ನು ಪ್ರೀತಿಸುವ ಎಲ್ಲರಿಗೂ ಅವರವರ ಇಷ್ಟದ ನಾಯಕನನ್ನು ಸಮರ್ಥಿಸುವ ಅವಕಾಶ ಇದ್ದೇ ಇದೆ. ಸಮರ್ಥಿಸುವ ಹಕ್ಕಿನ ಅಡಿಯಲ್ಲೇ, ತಮಗೆ ಇಷ್ಟವಾಗದ ನಾಯಕನನ್ನು ವಿರೋಧಿಸುವ ಹಕ್ಕು ಕೂಡ ಇದೆ. ಆದರೆ, ಪ್ರಚೋದನಕಾರಿ ಮತ್ತು ಅಸಂಸದೀಯ ಮಾತುಗಳನ್ನು ಆಡುವುದನ್ನೇ ನಾಯಕತ್ವ ಎಂದು ಪರಿಗಣಿಸಿರುವ ಪರಂಪರೆಗೆ ರವಿಯವರ ಮಾತು ಆಪ್ಯಾಯಮಾನವಾಗಿರಲು ಸಾಕು. ಇಷ್ಟಕ್ಕೂ ‘ತಾಯ್ಗಂಡರು’ ಎಂಬುವ ಬೈಗುಳ ಸರಳವಾದದ್ದೇನೂ ಅಲ್ಲ. ಇದು ಭಾವಶೂನ್ಯವಾದ, ಅಸೂಕ್ಷ್ಮನಾದ ವ್ಯಕ್ತಿ ಮಾತ್ರ ಪ್ರಯೋಗಿಸಬಲ್ಲ ಭಾಷೆ.

‘ಅವ್ವ’ ಕವನದಲ್ಲಿ ಪಿ. ಲಂಕೇಶ್ ತನ್ನವ್ವನನ್ನು ಫಲವತ್ತಾದ ಕಪ್ಪು ನೆಲಕ್ಕೆ ಹೋಲಿಸುತ್ತಲೇ, ಅವ್ವ ಬದುಕಿದ್ದು ಸರೀಕರ ಎದುರು ತಲೆ ಎತ್ತಿ ನಿಲ್ಲಲಿಕ್ಕೆ ಎನ್ನುವ ಮಾತು ಸಕಲ ತಾಯಂದಿರ ಸ್ವಾಭಿಮಾನವನ್ನು ಹೇಳುತ್ತದೆ. ಸಕಲ ಸಂಕಟ, ಕಣ್ಣೀರು, ಹಸಿವು, ಬಡತನ, ಅಸಹಾಯಕತೆ, ನಿಟ್ಟುಸಿರುಗಳ ನಡುವೆ ಈ ನೆಲದ ತಾಯಿ ತನ್ನ ಮಗುವನ್ನು ಸಾಕಿ ಬೆಳೆಸುತ್ತಾಳೆ. ಅಂತಹ ಮಗುವೊಂದು ಬೆಳೆದು ದೊಡ್ಡವನಾಗಿ ಮೋದಿಯವರ ವಿರುದ್ಧ ಅಭಿಪ್ರಾಯ ರೂಪಿಸಿಕೊಂಡರೆ ಅವರನ್ನು ‘ತಾಯ್ಗಂಡರು’ ಎಂದು ನಿಂದಿಸಿದರೆ? ಅಂತಹ ಮಾತುಗಳನ್ನು ಯಾವ ತಾಯಿಯೂ ಕ್ಷಮಿಸಲಾರಳು. ಅವಳ ನಿಟ್ಟುಸಿರಿನ ಶಾಪ ತಟ್ಟದಿರುವುದೇ?

‘ಬಿಜೆಪಿಯು ಸ್ಥಾಪನೆಯಾದ ದಿನದಿಂದಲೂ ತನ್ನ ಸಿದ್ಧಾಂತಗಳನ್ನು ರಾಜಕೀಯವಾಗಿ ಒಪ್ಪದೆ ಇರುವವರನ್ನು ‘ಶತ್ರುಗಳು’ ಎಂದು ಭಾವಿಸಿಲ್ಲ; ರಾಜಕೀಯ ಎದುರಾಳಿಗಳು ಎಂದಷ್ಟೇ ಭಾವಿಸಿದೆ. ನಮ್ಮ ಪರಿಕಲ್ಪನೆಯ ಭಾರತೀಯ ರಾಷ್ಟ್ರೀಯತೆಯ ಅನ್ವಯ, ನಮ್ಮ ಜೊತೆ ರಾಜಕೀಯ ಭಿನ್ನಾಭಿಪ್ರಾಯ ಹೊಂದಿರುವವರನ್ನು ನಾವು ಎಂದಿಗೂ ರಾಷ್ಟ್ರವಿರೋಧಿಗಳು ಎಂದು ಭಾವಿಸಿಲ್ಲ. ವೈಯಕ್ತಿಕ ಮಟ್ಟದಲ್ಲಿ ಹಾಗೂ ರಾಜಕೀಯ ಮಟ್ಟದಲ್ಲಿ ಪ್ರತಿ ವ್ಯಕ್ತಿಯೂ ಹೊಂದಿರುವ ಆಯ್ಕೆಯ ಸ್ವಾತಂತ್ರ್ಯ ಎತ್ತಿಹಿಡಿಯಲು ಪಕ್ಷ ಯಾವತ್ತಿಗೂ ಬದ್ಧವಾಗಿದೆ’ ಎಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ತೀರಾ ಈಚೆಗೆ ಹೇಳಿರುವ ಮಾತು ರವಿ ಅವರ ಗಮನಕ್ಕೆ ಬಂದಿಲ್ಲವೇ?

ರವಿ ಹಾಗೂ ಅವರಂತಹ ನಾಯಕರ ಮಾತಿನ ನಾಲಿಗೆಗೆ ಶಾರದೆಯೋ, ಚಾಮುಂಡೇಶ್ವರಿಯೋ, ಭಾರತಾಂಬೆಯೋ ಸಂಸ್ಕಾರ ನೀಡಲಿ. ಕೊನೆಯಪಕ್ಷ ಚುನಾವಣೆ ಆಯೋಗವಾದರೂ ಗಟ್ಟಿ ಕ್ರಮ ಕೈಗೊಳ್ಳಲಿ.

ಬರಹ ಇಷ್ಟವಾಯಿತೆ?

 • 19

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !