ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸೇನಾನಿಗಳ ನೆರವಿಗೆ ಮುಕ್ತ ಮನಸ್ಸಿರಲಿ

Published 6 ಡಿಸೆಂಬರ್ 2023, 23:32 IST
Last Updated 6 ಡಿಸೆಂಬರ್ 2023, 23:32 IST
ಅಕ್ಷರ ಗಾತ್ರ

ರಾಷ್ಟ್ರದಾದ್ಯಂತ ಡಿಸೆಂಬರ್ 7ರಂದು ‘ಸಶಸ್ತ್ರ ಪಡೆಗಳ ಧ್ವಜದಿನ’ವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಹಿಂದೆ ಮಹೋನ್ನತವಾದ ಉದ್ದೇಶವಿದೆ, ನೊಂದವರಿಗೆ ನೆರವು ನೀಡುವ ಗುರಿ ಇದೆ.

ದೇಶದ ಮೂರೂ ಪಡೆಗಳ ಯೋಧರಿಗೆ ಒದಗಿಸಬೇಕಾದ ಸವಲತ್ತು, ಕಲ್ಪಿಸಬೇಕಾದ ಅಗತ್ಯ ನೆರವಿನಂತಹ ಸಂಗತಿಗಳು ರಕ್ಷಣಾ ಸಚಿವಾಲಯದ ವ್ಯಾಪ್ತಿಗೆ ಒಳಪಡುತ್ತವೆ. ಈ ಸಚಿವಾಲಯದಡಿ ನಿವೃತ್ತ ಸೈನಿಕರ ಯೋಗಕ್ಷೇಮವನ್ನು ರಾಷ್ಟ್ರಮಟ್ಟದಲ್ಲಿ ಕೇಂದ್ರ ಸೈನಿಕ ಕಲ್ಯಾಣ ಮಂಡಳಿ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಮಟ್ಟದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಸೈನಿಕ ಕಲ್ಯಾಣ ಮಂಡಳಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸೈನಿಕ ಮಂಡಳಿಗಳು ನೋಡಿಕೊಳ್ಳುತ್ತವೆ. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕಲ್ಪಿಸುವ ಗುರಿಯೊಂದಿಗೆ ರಾಜ್ಯ ಹಾಗೂ ಕೇಂದ್ರಾಡಳಿತದ 32 ಮಂಡಳಿಗಳು, 392 ಜಿಲ್ಲಾ ಸೈನಿಕ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ.

ದೇಶ ವಿಭಜನೆ, ಯುದ್ಧ, ಆರ್ಥಿಕ ಸಂಕಷ್ಟದಂತಹ ಕಾರಣಗಳಿಂದ ಕಡುಕಷ್ಟದಲ್ಲಿದ್ದ ಸೈನಿಕರಿಗೆ ಸಮರ್ಪಕವಾಗಿ ಗೌರವ ಸಲ್ಲಿಸುವ, ಸಹಾಯಹಸ್ತ ಚಾಚುವ ಸದುದ್ದೇಶದಿಂದ 1949ರಲ್ಲಿ ಅಂದಿನ ರಕ್ಷಣಾ ಸಚಿವ ಬಲದೇವ್‍ ಸಿಂಗ್ ಅವರ ಅಧ್ಯಕ್ಷತೆ ಯಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ಸಶಸ್ತ್ರ ಪಡೆಗಳ ಸೇನಾನಿಗಳಿಗೆ ನೀಡಬೇಕಾದ ಸೌಲಭ್ಯಗಳು, ಯುದ್ಧಾನಂತರದಲ್ಲಿ ಅವರು ಅನುಭವಿಸುವ ಸಂಕಷ್ಟಗಳಿಗೆ ಪರಿಹಾರ, ಜಾರಿಗೊಳಿಸಬೇಕಾದ ಪುನರ್ವಸತಿ ಯೋಜನೆಯಂತಹವುಗಳ ಬಗ್ಗೆ ಸಮಿತಿಯು ಕೂಲಂಕಷವಾಗಿ ಪರಿಶೀಲಿಸಿ, ವರದಿಯೊಂದನ್ನು ಸಿದ್ಧಪಡಿಸಿತು. ಯೋಧರಿಗೆ ಸರ್ಕಾರದಿಂದ ಮಾತ್ರ ಸಹಾಯ ನೀಡುವುದಕ್ಕಿಂತ, ಸಾರ್ವಜನಿಕರನ್ನೂ ಒಳಗೊಂಡು ನೆರವಿನ ಯೋಜನೆ ರೂಪಿಸುವುದು ಸಮಂಜಸ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅದರಂತೆ, ತತ್ಕಾಲೀನ ಆರ್ಥಿಕ ಪರಿಸ್ಥಿತಿಯನ್ನು ಸಹ ಗಮನದಲ್ಲಿ ಇಟ್ಟುಕೊಂಡು ‘ಧ್ವಜದಿನ’ ಆಚರಣೆಯನ್ನು ಜಾರಿಗೆ ತರಲಾಯಿತು.

ಭರತಭೂಮಿಯ ಸಂರಕ್ಷಣಾ ಕಾರ್ಯದಲ್ಲಿ ನಮ್ಮ ಸಶಸ್ತ್ರ ಪಡೆಗಳ ಸಾವಿರಾರು ಸೈನಿಕರು ಸಾವಿನ ಸನಿಹ ಹೋಗಿಬರುತ್ತಾರೆ. ದೈಹಿಕ ಅಂಗವೈಕಲ್ಯಕ್ಕೆ ಒಳಗಾಗುತ್ತಾರೆ. ಕೆಲವು ಬಾರಿ ಸಮರಾಂಗಣದಲ್ಲಿ ಹುತಾತ್ಮರಾದ ಸೈನಿಕರ ಮೃತದೇಹಗಳೇ ಪತ್ತೆಯಾಗುವುದಿಲ್ಲ. ಎಷ್ಟೋ ಮಕ್ಕಳು ತಾಯಿಯ ಗರ್ಭದಲ್ಲಿರುವಾಗಲೇ ತಂದೆಯನ್ನು ಕಳೆದುಕೊಂಡು ಜೀವನಪೂರ್ತಿ ಕೊರಗುವುದನ್ನು ನಾವು ಕಂಡಿದ್ದೇವೆ. ವಿವಾಹಕ್ಕೆಂದು ರಜೆ ಹಾಕಿ ಊರಿಗೆ ಬರುವ ಮುನ್ನವೇ ಹುತಾತ್ಮರಾದವರ ಕರುಣಾಜನಕ ಕಥೆಗಳನ್ನೂ ಕೇಳಿದ್ದೇವೆ. ನಮಗಾಗಿ ಇಷ್ಟೊಂದು ಪರಿಶ್ರಮಪಡುವ, ನಮ್ಮ ರಕ್ತಸಂಬಂಧಿಗಳಲ್ಲದ, ಆದರೆ ನಮಗಾಗಿ ತಮ್ಮ ನೆತ್ತರನ್ನು ಹರಿಸುವ ಈ ಯೋಧರ ಧೈರ್ಯ, ಸಾಹಸ, ಬದ್ಧತೆಯನ್ನು ಜನಸಾಮಾನ್ಯರೂ ಪ್ರಶಂಸಿಸಿ ತಮ್ಮ ಗೌರವ ಸಲ್ಲಿಸಲಿ, ಹುತಾತ್ಮರಾದ ಯೋಧರನ್ನು ಸ್ಮರಿಸಲಿ, ಅವರಿಂದಲೂ ಅಲ್ಪಸ್ವಲ್ಪ ನೆರವು ಹರಿದುಬರಲಿ ಎಂಬ ಉದ್ದೇಶವೂ ಧ್ವಜ ದಿನಾಚರಣೆಯ ಹಿಂದಿದೆ.

ನಮ್ಮ ಸುಖಕ್ಕಾಗಿ ಸ್ಪಂದಿಸುವ ನಮ್ಮ ಸೇನಾನಿಗಳ ಕಷ್ಟಸುಖಕ್ಕೆ ಪ್ರತಿಸ್ಪಂದಿಸುವುದು ನಾಗರಿಕರ ಜವಾಬ್ದಾರಿ. ಅದಕ್ಕಾಗಿಯೇ ಬಡವ ಬಲ್ಲಿದರೆಲ್ಲರೂ ಶಕ್ತ್ಯಾನುಸಾರ ಧ್ವಜ ಖರೀದಿಸುವ ಮೂಲಕ ಸಹಾಯಹಸ್ತ ಚಾಚಲಿ ಎಂಬ ಕಾರಣಕ್ಕೆ, ಯುನೈಟೆಡ್ ಕಿಂಗ್‌ಡಮ್‍ನ ರಕ್ಷಣಾ ಇಲಾಖೆಯ ಧ್ವಜವನ್ನು ಹೋಲುವ, ಮೂರೂ ಪಡೆಗಳನ್ನು ಪ್ರತಿನಿಧಿಸುವಂತೆ ಕೆಂಪು, ಕಡುನೀಲಿ ಮತ್ತು ತಿಳಿನೀಲಿ ವರ್ಣದ 10, 20, 50, 100 ರೂಪಾಯಿ ಮೌಲ್ಯದ ಧ್ವಜಗಳನ್ನು ಕೇಂದ್ರ ಸರ್ಕಾರವು ಪ್ರತಿವರ್ಷ ದೇಶದಾದ್ಯಂತ ಮಾರಾಟಕ್ಕೆ ಬಿಡುಗಡೆ ಮಾಡುತ್ತದೆ. ಈ ಧ್ವಜದ ಆಕಾರ, ವರ್ಣಗಳನ್ನು ಕಾಮನ್‍ವೆಲ್ತ್ ರಾಷ್ಟ್ರಗಳಾದ ಭಾರತ, ಸೈಪ್ರಸ್, ಕೆನ್ಯಾ ಮತ್ತು ನೈಜೀರಿಯಾ ಸೇನಾ ಧ್ವಜಗಳಲ್ಲಿ ಬಳಸಲಾಗುತ್ತಿದೆ.

ರಕ್ಷಣಾ ಸಚಿವರ ನೇತೃತ್ವದ ಸಮಿತಿಯು 1949ರಲ್ಲಿಯೇ ‘ಧ್ವಜದಿನ ನಿಧಿ’ಯನ್ನು ಸ್ಥಾಪಿಸಿತು. ಆದರೆ ರಕ್ಷಣಾ ಇಲಾಖೆಯು 1993ರಲ್ಲಿ ವಿವಿಧ ನಿಧಿಗಳನ್ನು ಏಕತ್ರಗೊಳಿಸಿ ‘ಸಶಸ್ತ್ರ ಪಡೆಗಳ ಧ್ವಜದಿನ ನಿಧಿ’ಯಾಗಿ ಮಾರ್ಪಡಿಸಿತು. ಇದರಿಂದ ವಿವಿಧ ಹೆಸರುಗಳಲ್ಲಿ, ವಿವಿಧ ಲೆಕ್ಕ ಶೀರ್ಷಿಕೆಗಳ ಅಡಿಯಲ್ಲಿ ಸಂಗ್ರಹವಾಗುತ್ತಿದ್ದ, ಧ್ವಜ ಮಾರಾಟದಿಂದ ಬರುತ್ತಿದ್ದ ಹಣದ ಶೀಘ್ರ ಬಳಕೆ ಸುಲಭವಾಯಿತು.

ಧ್ವಜ ಖರೀದಿಸುವಂತೆ ವಿವಿಧ ಸರ್ಕಾರಿ ಕಚೇರಿಗಳ ಸಿಬ್ಬಂದಿ ವಿನಂತಿಸಿದರೆ, ಬಹುತೇಕ ನಾಗರಿಕರು ನೂರೆಂಟು ಸಬೂಬು ಹೇಳುತ್ತಾರೆ ಎಂಬ ಮಾತಿದೆ. ಇದು ವಿಷಾದದ ಸಂಗತಿ. ಧ್ವಜ ಖರೀದಿ ಒಂದು ಹೊರೆ ಎಂದು ಭಾವಿಸುವ ಬದಲು, ನಾಡಿನ ಗಡಿಯ ರಕ್ಷಣೆಗಾಗಿ ತೆರಳಲು ನಮಗೆ ಸಾಧ್ಯವಿಲ್ಲದಿದ್ದರೂ, ದೇಶಸೇವೆಗೆ ತನುಮನವನ್ನು ಮುಡಿಪಾಗಿಟ್ಟಿರುವವರ ನೆರವಿಗೆ ನಮಗೆ ಇದೊಂದು ಸುವರ್ಣಾವಕಾಶ ಎಂದು ಭಾವಿಸಬಾರದೇಕೆ? ಹೀಗೆ ಮಾರಾಟವಾದ ಧ್ವಜಗಳಿಂದ ಬರುವ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸದೆ, ಸೇವಾನಿರತ-ನಿವೃತ್ತ ಸೈನಿಕರ ಕಲ್ಯಾಣಕ್ಕಾಗಿ ಮಾತ್ರ ಬಳಸಲಾಗುತ್ತದೆ.

ಪ್ರತಿಯೊಬ್ಬ ಭಾರತೀಯ ಉದಾರ ಮನಸ್ಸಿನಿಂದ, ಹೃತ್ಪೂರ್ವಕವಾಗಿ ಈ ಧ್ವಜಗಳನ್ನು ಖರೀದಿಸಿ, ನಮ್ಮ ಸೇನಾಶೂರರನ್ನು ಹುರಿದುಂಬಿಸಬೇಕಾದ ಅಗತ್ಯ ಇದೆ. ಸೈನಿಕರು ಹುತಾತ್ಮರಾದಾಗ ಒಂದೆರಡು ದಿನಗಳ ಕಾಲ ಕಣ್ಣೀರು ಸುರಿಸಿ, ಶೋಕಾಚರಣೆ ಮಾಡಿದರೆ ಸಾಲದು. ಸೇನಾನಿಗಳ ಜಾತಿ, ಪ್ರಾಂತ್ಯ, ಲಿಂಗಭೇದವನ್ನು ಮೀರಿದ ನೆರವು ನೀಡುವ ಮನಸ್ಸು ನಮಗಿದ್ದರೆ, ಈ ಬಾರಿ ಮುಕ್ತ ಮನಸ್ಸಿನಿಂದ ಸಶಸ್ತ್ರ ಪಡೆಗಳ ಧ್ವಜಗಳನ್ನು ಖರೀದಿಸಿ ಪ್ರೋತ್ಸಾಹಿಸುವ ಸಂಕಲ್ಪ ಮಾಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT