ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ರಾಸುವಿನ ‘ಕಸ’ ಕಸವಲ್ಲ!

ನೋವು ನಿವಾರಕ ಗುಣ ಹೊಂದಿರುವ ಮಾಸುವಿನ ಬಗೆಗೆ ಮಿಥ್ಯೆಗಳು ಹಲವು
Published 24 ನವೆಂಬರ್ 2023, 0:30 IST
Last Updated 24 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಮೇಯಲೆಂದು ಹೊರಗೆ ಬಿಟ್ಟಿದ್ದ ಆ ರೈತರ ನಾಟಿ ಗಬ್ಬದ ದನ ಕೊಟ್ಟಿಗೆಗೆ ಮರಳಿದಾಗ ಕತ್ತಲಾಗಿತ್ತು. ಬೆಳಿಗ್ಗೆಯಿಂದಲೇ ಜೋರಾಗಿ ಕೂಗತೊಡಗಿದ್ದ ಅದಕ್ಕೆ ಹೆರಿಗೆ ನೋವೋ ಮತ್ತೇನೋ ತೊಂದರೆಯಾಗಿ ರಬೇಕೆಂದು ಆತಂಕದಲ್ಲಿ ಕರೆ ಕಳುಹಿಸಿದ್ದರು. ಹಸುವನ್ನು ಪರೀಕ್ಷಿಸಿ ‘ಹೊಟ್ಟೆಯಲ್ಲಿ ಕರು ಇಲ್ಲ’ ಎಂದಾಗ ಮನೆಮಂದಿಗೆಲ್ಲಾ ಆಶ್ಚರ್ಯದ ಜೊತೆಗೆ ದಿಗ್ಭ್ರಮೆ! ತಕ್ಷಣ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಹುಡುಕಾಡಿ ಬಂದರೂ ಕರು ಸಿಕ್ಕಿರಲಿಲ್ಲ. ‘ಹಸುವಿನ ಹಗ್ಗ ತಪ್ಪಿಸಿ ಹಿಂದಿನಿಂದ ಹೋಗಿ’ ಎಂಬ ಸಲಹೆಯಂತೆ ಹಿಂಬಾಲಿಸಿದವರಿಗೆ ಸುಮಾರು ಎರಡು ಕಿ.ಮೀ. ದೂರ ದಲ್ಲಿ ಪೊದೆಯೊಂದರ ಬಳಿ ಕಾಣಿಸಿದ ಪುಟ್ಟ ಕರು ಸಂತೋಷ ತಂದಿತ್ತು!

ಹಿಂದಿನಿಂದಲೇ ಮತ್ತೊಂದು ತಲೆಬಿಸಿ. ದನದ ಕಸ (ಮಾಸು) ಎಲ್ಲೂ ಕಾಣಿಸುತ್ತಿಲ್ಲ, ಕಸ ತಿಂದರೆ ಬಾಣಂತಿ ದೇಹಕ್ಕೆ ನಂಜೇರುವ ಜೊತೆಗೆ ಹಾಲೂ ಕಮ್ಮಿಯಾಗುತ್ತದೆ ಎಂಬ ಆತಂಕ! ‘ಹಸು ತನ್ನ ಮಾಸು ತಿನ್ನುವುದು ಸಹಜ ಸ್ವಭಾವ. ಬೇಟೆಪ್ರಾಣಿ ವಾಸನೆಯ ಜಾಡು ಹಿಡಿದು ದಾಳಿ ಮಾಡಬಾರದೆಂದು ಎಲ್ಲವನ್ನೂ ತಿಂದು ಸ್ವಚ್ಛಗೊಳಿಸುವ ಮೂಲಕ ತನ್ನನ್ನು, ತನ್ನ ಕರುವನ್ನು ರಕ್ಷಿಸಿಕೊಳ್ಳುವ ಉಪಾಯವಿದು. ಜೊತೆಗೆ ಮಾಸು ಒಳ್ಳೆಯ ಆಹಾರ, ತಿಂದರೆ ಹಾಲಿಗೂ ತೊಂದರೆ ಆಗದು’ ಎಂದು ಎಷ್ಟೇ ತಿಳಿಹೇಳಿದರೂ ಅವರು ಒಪ್ಪಲು ಸಿದ್ಧರಿರಲಿಲ್ಲ. ದೊಡ್ಡ ಪ್ರಮಾದವೊಂದು ಘಟಿಸಿದ ಚಿಂತೆ ಮುಖದಲ್ಲಿ ಎದ್ದು ಕಾಣುತ್ತಿತ್ತು!

ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಹಲವ ರಲ್ಲಿ ಜಾನುವಾರುಗಳ ಪಾಲನೆಯ ವಿಚಾರದಲ್ಲಿ ಅನೇಕ ಅಸಂಗತಗಳು, ಮೂಢನಂಬಿಕೆಗಳು, ತಪ್ಪು ಕಲ್ಪನೆಗಳು ಮನೆಮಾಡಿವೆ. ಮಾಸು ಎನ್ನುವುದು ತಾಯಿಯ ಗರ್ಭಾಶಯದೊಳಗೆ ಕರುವನ್ನು ಸುತ್ತುವರಿದಿ ರುವ ವಿಶೇಷ ಚೀಲದಂತಹ ರಚನೆ. ತಾಯಿ ಮತ್ತು ಕರುವನ್ನು ಬೇರ್ಪಡಿಸುವ ಈ ಸದೃಢ ಚೀಲದೊಳಗೆ ಗರ್ಭಜಲ ತುಂಬಿದ್ದು, ಅದರ ಪದರಗಳ ಮೂಲಕ ಪೌಷ್ಟಿಕಾಂಶಗಳು, ಪ್ರಾಣವಾಯು ಕರುವಿನ ದೇಹಕ್ಕೂ ಅಲ್ಲಿರುವ ತ್ಯಾಜ್ಯವು ಮರಳಿ ತಾಯಿಯ ದೇಹಕ್ಕೂ ಸೇರುತ್ತವೆ. ಮಾನವ ಸೇರಿದಂತೆ ಎಲ್ಲಾ ಸಸ್ತನಿಗಳ ಗರ್ಭಕೋಶದಲ್ಲೂ ಇಂತಹ ರಚನೆಯಿದೆ. ಪ್ರಾಣಿಯು ಮರಿ ಹಾಕುತ್ತಿದ್ದಂತೆಯೇ ಮಾಸುವಿನ ಕಾರ್ಯ ಮುಗಿಯುವುದರಿಂದ ಅದು ತಾಯಿಯ ಶರೀರದಿಂದ ಪೂರ್ಣವಾಗಿ ಹೊರಬೀಳುತ್ತದೆ. ದೇಹದಿಂದ ಕಸ ಹೊರಬಿದ್ದಾಗ ಪೂರ್ಣವಾಗಿ ತಿಂದುಹಾಕುವುದು ಬಹುತೇಕ ಸಸ್ತನಿಗಳ ಸಹಜ ನಡವಳಿಕೆ.

ಈ ಕಸವೆಂಬ ಚೀಲದೊಳಗೆ ತುಂಬಿರುವ ಮಿಥ್ಯೆ ಗಳು ಹಲವು. ತಲೆತಲಾಂತರದಿಂದ ಇಂತಹ ಪದ್ಧತಿ ಗಳನ್ನು ಪಾಲಿಸಿಕೊಂಡು ಬಂದಿರುವುದರಿಂದ ಇವು ಸತ್ಯವೆಂದೇ ರೈತರ ನಂಬಿಕೆ. ಎಮ್ಮೆ, ದನಗಳು ಕಸವನ್ನು ತಿಂದರೆ ಹಾಲು ಕಡಿಮೆಯಾಗುತ್ತದೆ, ದೇಹಕ್ಕೆ ನಂಜಾಗುತ್ತದೆ, ಜಾನುವಾರುಗಳು ಸೋಲುತ್ತವೆ ಎಂಬ ಭೀತಿಯಂತೂ ಸಾರ್ವತ್ರಿಕ. ಕಸ ಲೋಳೆ ಲೋಳೆಯಾಗಿ ಜಾರುವ ಗುಣ ಹೊಂದಿರುವುದರಿಂದ ತಿನ್ನುವಾಗ ಗಂಟಲಿಗೆ ಸಿಕ್ಕಿ ಹಸುವಿಗೆ ಅಪಾಯವಾಗಬಹುದೆಂಬ ಹೆದರಿಕೆ. ಹಾಗಾಗಿ, ಜಾನುವಾರುಗಳು ಕರು ಹಾಕಿದ ನಂತರ ಕಸ ಬೀಳುವವರೆಗೂ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾರೆ. ಅಪ್ಪಿತಪ್ಪಿಯೂ ಅವು ಕಸ ತಿನ್ನಬಾರದೆಂದು ಈ ಎಚ್ಚರಿಕೆ. ಕಸ ಬೀಳುವವರೆಗೂ ನೀರು, ಆಹಾರ ನೀಡಬಾರದು, ಕರುವಿಗೆ ಹಾಲುಣಿಸ ಬಾರದು ಎಂಬ ಕಂದಾಚಾರಗಳೂ ಚಾಲ್ತಿಯಲ್ಲಿವೆ!

ಸಾಧಾರಣವಾಗಿ ಹಸುವು ಕರು ಹಾಕಿದ ಎರಡರಿಂದ ಎಂಟು ಗಂಟೆಯೊಳಗೆ ಕಸ ಬೀಳುತ್ತದೆ. ಇಪ್ಪತ್ತನಾಲ್ಕು ಗಂಟೆಯೂ ಬೀಳದಿದ್ದರೆ ಏನೋ ಕೊರತೆ, ಸಮಸ್ಯೆ ಇವೆಯೆಂದು ಅರ್ಥ. ಹಾಗೆಂದು ಬಲಾತ್ಕಾರವಾಗಿ ಕಸ ತೆಗೆಸಿದರೆ ಗರ್ಭಾಶಯಕ್ಕೆ ಹಾನಿಯಾಗಿ ಮುಂದೆ ಗರ್ಭ ಕಟ್ಟಲು ಸಮಸ್ಯೆಯಾಗಬಹುದು. ಸೋಂಕು ತಗುಲಬಹುದು. ಬಂಜೆತನವೂ ಕಾಡಬಹುದು. ಕಸವನ್ನು ತೆಗೆಯದೇ ಬಿಟ್ಟರೆ ಎರಡು– ಮೂರು ದಿನಗಳಲ್ಲಿ ಕರಗಿ ಬಿದ್ದುಹೋಗುತ್ತದೆ. ಹೆಚ್ಚೆಂದರೆ, ಹೊರಗೆ ತೂಗಾಡುವ ಭಾಗವನ್ನು ಕತ್ತರಿಸಿ ತೆಗೆದು ಉಳಿದದ್ದನ್ನು ಹಾಗೆಯೇ ಬಿಡಬಹುದು. ವೈದ್ಯಕೀಯ ಸಲಹೆ ಮೇರೆಗೆ ಆ್ಯಂಟಿಬಯೊಟಿಕ್‌ ಔಷಧ ಬಳಸಿದರೆ ಸುಗಮ ನಿರ್ವಹಣೆ ಸಾಧ್ಯ.

ಕಸ ಬೇಗನೆ ಬೀಳಲೆಂದು ಅದಕ್ಕೆ ಕಲ್ಲು, ಕಸಬರಿಗೆ, ಚಪ್ಪಲಿಯಂತಹ ವಸ್ತುಗಳನ್ನು ಕಟ್ಟುವ ಮೌಢ್ಯವೂ ಬಹಳೆಡೆ ಬಳಕೆಯಲ್ಲಿದೆ. ಹೀಗೆ ಹೊರಗೆ ಭಾರ ತೂಗುವುದರಿಂದ ಗರ್ಭಕೋಶಕ್ಕೆ ಹಾನಿಯಾಗ ಬಹುದು. ಇನ್ನು ಕಸ ಬೀಳುವವರೆಗೆ ಕಣ್ಣಿಗೆ ಎಣ್ಣೆ ಬಿಟ್ಟು ಕೊಂಡಂತೆ ಕಾಯುವ ಶ್ರಮ ಯಾಕೆಂದು ಕೆಲವರು ಕರು ಹಾಕಿದ ಸ್ವಲ್ಪ ಹೊತ್ತಿಗೇ ಪಶುವೈದ್ಯಕೀಯ ವೃತ್ತಿನಿರ ತರಿಗೆ ಕಸ ತೆಗೆಯುವಂತೆ ದುಂಬಾಲು ಬೀಳುವುದೂ ಉಂಟು!

ಸಸ್ತನಿಗಳು ಕಸವನ್ನು ಏಕೆ ತಿನ್ನುತ್ತವೆ ಎಂಬುದಕ್ಕೆ ಸ್ಪಷ್ಟ ಕಾರಣಗಳನ್ನು ಗುರುತಿಸಲು ಸಾಧ್ಯವಾಗದಿದ್ದರೂ ಇದರಿಂದ ಉಪಯೋಗಗಳು ಇರುವುದಂತೂ ಸತ್ಯ. ಮಾಸು ಮೇದಸ್ಸು, ಕೊಬ್ಬು, ಕ್ಯಾಲ್ಸಿಯಂ ಸೇರಿದಂತೆ ಖನಿಜಾಂಶಗಳ ಖಜಾನೆ. ಕರು ಹಾಕಿ ಸುಸ್ತಾದ ರಾಸು ಇದನ್ನು ತಿನ್ನುವುದರಿಂದ ಶಕ್ತಿಯ ಪೂರಣವಾಗು
ತ್ತದೆ. ಇದರಲ್ಲಿರುವ ಆಕ್ಸಿಟೋಸಿನ್ ಎಂಬ ಚೋದಕವು ಗರ್ಭಾಶಯದ ಶೀಘ್ರ ಚೇತರಿಕೆಗೆ ನೆರವಾಗುವ ಜೊತೆಗೆ ಕರುವಿನ ಜೊತೆಗಿನ ಅನುಬಂಧವನ್ನು ಗಟ್ಟಿಗೊಳಿಸು ತ್ತದೆ ಎಂದು ಹೇಳಲಾಗುತ್ತದೆ. ಮಾಸುವಿನಲ್ಲಿ ಇರುವ ರಾಸಾಯನಿಕಗಳು ನೋವು ನಿವಾರಕ ಗುಣ ಹೊಂದಿವೆ. ಹಾಗಾಗಿಯೆ ರಾಸುಗಳಲ್ಲಿ ಕಸವೆಂಬುದು ಖಂಡಿತಾ ಕಸವಲ್ಲ!

ಹೌದು, ಹೈನುಗಾರಿಕೆ ಎಂಬುದು ಈಗ ಉದ್ಯಮ ವಾಗಿ ಬೆಳೆಯುತ್ತಿದೆ. ಇದನ್ನು ಲಾಭದಾಯಕವಾಗಿ
ಸಲು ಮೂಢಾಚರಣೆಗಳಿಂದ ಹೊರಬಂದು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅತಿ ಅಗತ್ಯ.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಸರ್ಕಾರಿ ಪಶುಆಸ್ಪತ್ರೆ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT