ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನದಿಯ ಬಿಕ್ಕಳಿಕೆ ತೆರೆದಿಟ್ಟ ಚಿತ್ರಪಟ

ನಮ್ಮದೇ ಆರೋಗ್ಯಕ್ಕೂ ಒಳಿತಿಗೂ ಪೂರಕವಾಗಿರುವ ಹಸಿರನ್ನೂ ಪರಿಸರ ಘಟಕಗಳನ್ನೂ ತಾಜಾ ಆಗಿ ಉಳಿಸಿಕೊಳ್ಳಬೇಕಾದುದು ನಮ್ಮ ಕರ್ತವ್ಯ
Published 26 ಅಕ್ಟೋಬರ್ 2023, 9:25 IST
Last Updated 26 ಅಕ್ಟೋಬರ್ 2023, 9:25 IST
ಅಕ್ಷರ ಗಾತ್ರ

ತುಂಗೆಯ ತಟದಲ್ಲಿ ನದಿಯ ನಡಿಗೆಗುಂಟ ಸಾಗುವ ಹೆದ್ದಾರಿಯ ನಿತ್ಯಸಂಚಾರಿಗೆ ನದಿಯೊಂದು ನಿತ್ಯಬೆಡಗು- ಬೆರಗಿನ ಸಂಗಾತಿ. ಅದೇ ಹೊತ್ತಿಗೆ ಕಿವಿತಾಕುವ ನದಿಯ ಆರ್ತನಾದವು ಬೇರೆಯದೇ ಕತೆ ಹೇಳುತ್ತದೆ... ಅಬ್ಬರದ ಮಳೆ ಕಾಣುವ ಮಲೆನಾಡಲ್ಲೂ ಈ ಬಾರಿ ಬರದ ಛಾಯೆ! ಭತ್ತ ಮತ್ತು ಹುಲ್ಲಿಗೆ ಸಣ್ಣ ಬೆಲೆ ಬಂತೆಂಬ ಖುಷಿಯಲ್ಲಿ ಮಳೆಯಾಶ್ರಿತ ಮಕ್ಕಿಗದ್ದೆಗಳಲ್ಲೂ ಕಂಡ ಭತ್ತದ ಬೇಸಾಯಕ್ಕೆ ಈ ಬಾರಿ ಮುಗಿಲು ಯಾಕೋ ಮುನಿದಿದೆ.

ಹನಿಹನಿ ನೀರೂ ಅಮೂಲ್ಯವೆನಿಸಿರುವ ಸಮಯದಲ್ಲಿ ನದಿಯ ಒಡಲು ಖಾಲಿಯಾಗುತ್ತದೆಂಬ ಕಳವಳ. ಪಶ್ಚಿಮಘಟ್ಟಗಳು ಹೆರುವ ನದಿತೊರೆಗಳು ಸರ್ವಋತು ಜಲನಿಧಿಗಳಾಗಿ ವರ್ಷವಿಡೀ ಮೈದುಂಬಿ ಮೆರೆಯುತ್ತಿದ್ದ, ಜೀವಪೊರೆಯುತ್ತಿದ್ದ ದಿನಗಳು ಮರೆಯಾಗಿವೆ. ಈಗೆಲ್ಲಾ ಮುಂಗಾರು ಕಳೆಯುತ್ತಿ
ದ್ದಂತೆ ನದಿಗಳಿಗೂ ಎದೆಬೇನೆ ಕಾಡುತ್ತಿದೆ. ಫಲವತ್ತಾದ ಕಾಡುಗುಡ್ಡಗಳನ್ನು ಬಳಸಿ ಮಳೆಗಾಲದಲ್ಲೂ ತಿಳಿಯಾಗಿ ಹರಿಯುತ್ತಿದ್ದ ‘ತುಂಗಾ ಪಾನ, ಗಂಗಾ ಸ್ನಾನ...’ ಶೀರ್ಷಿಕೆ ಹೊತ್ತಿದ್ದ ನದಿ ತುಂಗೆಗೆ ಬಿಸಿಲುಗಾಲಕ್ಕೆ ವಿಪರೀತ ಬಳಲಿಕೆ. ಎರಡು ದಂಡೆಗಳ ನಡುವಿನ ಕಮರು- ಕೊರಕಲಿನಾಳದಲ್ಲಿ ಹರಿಯುತ್ತಿದ್ದ ನದಿ, ತೊರೆಗಳ ಆಳವೀಗ ಹೂಳು ತುಂಬಿ ಕೆಲವೆಡೆ ಸಪಾಟಾಗಿ ನೆಲಮಟ್ಟದಲ್ಲಿದೆ. ಹೂಳು ತುಂಬಿದ ಕೆರೆ, ಹೊಳೆಗಳು ಮೊದಲ ಮಳೆಗೇ ಊರು ಮುಳುಗಿಸಿದ ಉದಾಹರಣೆಗಳಿವೆ.

ಮಣ್ಣಿನ ನೀರುಹೀರಿಕೆ, ಸಂಗ್ರಹ, ಧಾರಣೆಯ ಸಾಮರ್ಥ್ಯ ಕುಂಠಿತಗೊಂಡ ಕಾರಣಕ್ಕೆ ಈಗೀಗ ಮಲೆನಾಡಿನಲ್ಲಿ ‘ಮಳೆಗಾಲ ಮುಗಿದ ಮಾರನೇ ತಿಂಗಳೇ ಬರಗಾಲ’ ಎನ್ನುವಂತಾಗಿದೆ. ಘಟ್ಟಭಾಗ
ದಲ್ಲಿ ಕಾಡು ನಾಶವಾಗುತ್ತಿರುವ ಕಾರಣಕ್ಕೆ ಜಲಮೂಲ, ಸಂಗ್ರಹಾಗಾರಗಳು ತೀವ್ರಗತಿಯಲ್ಲಿ ಬತ್ತುತ್ತಿವೆ. ಅರಣ್ಯ ಒತ್ತುವರಿ, ಕೃಷಿಭೂಮಿ ನಾಶ, ನಗರೀಕರಣ, ಕೊಳವೆಬಾವಿ ಹಾವಳಿ, ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳಲ್ಲಿ ಬಿಕ್ಕಳಿಸುತ್ತಿರುವ ಜಲನಿಧಿಗಳ ಅರಣ್ಯರೋದನಕ್ಕೆ ಕಿವಿಗೊಡುವವರು ಇಲ್ಲವಾಗಿದೆ.

ಮುಂಗಾರಿನ ಆರಂಭದಲ್ಲೇ ಭರ್ತಿಯಾಗುತ್ತಿರುವ ತುಂಗಾ ಜಲಾಶಯ ತುಂಬಿಕೊಳ್ಳುತ್ತಿರು
ವುದು ನೀರನ್ನೋ ಹೂಳನ್ನೋ ಅನ್ನುವ ಅನುಮಾನ ಕೆಲವರಿಗಿದೆ. ಮೊದಲಿನಂತಿಲ್ಲ, ಮಳೆಗಾಲದಲ್ಲಿ ನದಿಗಳು ಕೆಂಪಾಗುತ್ತವೆ. ಭಾರಿ ಪ್ರಮಾಣದಲ್ಲಿ ಮಣ್ಣು, ಮರಳು, ಹೂಳನ್ನು ಹೊತ್ತು ಸಾಗುವ ಹಳ್ಳಕೊಳ್ಳಗಳು ಜಲಾಶಯವನ್ನು ತುಂಬಿಕೊಳ್ಳುತ್ತವೆ. ಹೀಗೇ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ನಾಡಿನ ಬಹುತೇಕ ಜಲಾಶಯಗಳು ಆಟದ ಬಯಲಾಗುವ ಸಾಧ್ಯತೆಯೇ ಹೆಚ್ಚು! ಸಾವಿರಾರು ಕೋಟಿ ವಿನಿಯೋಗಿಸಿ, ಸಾವಿರಗಟ್ಟಲೆ ಹೆಕ್ಟೇರ್ ದಟ್ಟಾರಣ್ಯ, ಫಲವತ್ತಾದ ಕೃಷಿಭೂಮಿ ಹಾಗೂ ನೆಲೆನಿಂತ ಜನ
ಜೀವನವನ್ನೂ ಮುಳುಗಿಸಿ ಮೇಲೆದ್ದ ವಿವಿಧೋದ್ದೇಶ ಯೋಜನೆಗಳು ಹೀಗೆ ಮಣ್ಣುಪಾಲಾದರೆ ಹೇಗೆ?

28,000 ಚದರ ಕಿ.ಮೀ. ವಿಸ್ತಾರದಲ್ಲಿ ಹಬ್ಬಿರುವ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಹೂಳು ತುಂಬಿ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿರುವುದು ನೀರಾವರಿ ಯೋಜನೆಗೆ ತೊಡಕಾಗಿದೆ. ಸುಮಾರು ₹ 8,000 ಕೋಟಿ ಖರ್ಚು ಮಾಡಿ 31 ಟಿಎಂಸಿ ಅಡಿಯಷ್ಟು ನೀರು ಸಂಗ್ರಹಕ್ಕಾಗಿ ಉದ್ದೇಶಿತ ಸಮಾನಾಂತರ ಜಲಾಶಯವೆಂಬ ಮತ್ತೊಂದು ಮುಳುಗಡೆ ಯೋಜನೆಯ ಬದಲು, ₹ 6,000 ಕೋಟಿ ವೆಚ್ಚದಲ್ಲಿ ತುಂಗಭದ್ರೆಯ ಹೂಳು ತೆಗೆಯುವ ಯೋಜನೆಯನ್ನು ಸ್ಥಳೀಯ ರೈತರು ಬೆಂಬಲಿಸುತ್ತಿದ್ದಾರೆ. ಹಾಗಾದಲ್ಲಿ ಅಂದಾಜು ಐದೂವರೆ ಸಾವಿರ ಹೆಕ್ಟೇರ್ ಭೂಮಿಯನ್ನೂ ಮುಳುಗಡೆಯಿಂದ ಉಳಿಸಿಕೊಳ್ಳಬಹುದು.

ಜಲಾಶಯಗಳ ಹೂಳು ತೆಗೆಯುವುದು ಕಷ್ಟದ ಕೆಲಸ. ಅದರೊಟ್ಟಿಗೆ ತಗಲುವ ವೆಚ್ಚವೂ ಅಧಿಕ. ಹೂಳು ತೆಗೆಯದೇಹೋದರೆ ಕೆರೆಕಟ್ಟೆ, ಜಲಾಶಯ ಗಳಿಗೆ ಉಳಿಗಾಲವಿಲ್ಲ. ಈಗಾಗಲೇ ಬೆಂಗಳೂರು ಒಂದರಲ್ಲೇ ಇದ್ದ ಸುಮಾರು ಎಂಟುನೂರು ಕೆರೆಗಳ ಪೈಕಿ ಪ್ರಸ್ತುತ ಅಳಿದುಳಿದ 80- 90 ಕೆರೆಗಳೇ ಜಲನಿಧಿಯ ವಿನಾಶಕ್ಕೊಂದು ಜೀವಂತ ಮತ್ತು ಜ್ವಲಂತ ಉದಾಹರಣೆ! ನದಿದಂಡೆಯ ಹೆಕ್ಟೇರ್‌
ಗಟ್ಟಲೆ ಕಾಡುಗುಡ್ಡಗಳು ಕರಗಿ ಅಡಿಕೆ ತೋಟಗಳಾಗಿವೆ. ಉದ್ದಕ್ಕೂ ಹತ್ತಾರು ಅಶ್ವಶಕ್ತಿಯ ಅಸಂಖ್ಯ ಪಂಪ್‍ಸೆಟ್‌ಗಳು ಹಗಲಿರುಳು ನೀರು ಹೀರುತ್ತಿವೆ. ನದಿತಟದಲ್ಲಿ ಅವ್ಯಾಹತವಾಗಿರುವ ಮರಳು ಗಣಿ ಗಾರಿಕೆ ಮತ್ತು ಸ್ವಾರ್ಥಕ್ಕಾಗಿ ಅಸೂಕ್ಷ್ಮವಾಗಿ ಕೈಗೆತ್ತಿ ಕೊಳ್ಳುತ್ತಿರುವ ಬೃಹತ್ ಅಭಿವೃದ್ಧಿ ಯೋಜನೆಗಳು ಕೂಡ ನದಿ, ಜಲಮೂಲಗಳ ಸಾವಿಗೆ ನಾಂದಿ ಹಾಡುತ್ತಿವೆ.

ನೀರಿನಂತೆಯೇ ಮೇಲ್ಮಣ್ಣು ಕೂಡ ಅಮೂಲ್ಯನಿಧಿ. ತೀವ್ರಗತಿಯ ಅರಣ್ಯನಾಶದ ಪರಿಣಾಮ, ಮೇಲ್ಮಣ್ಣು ಸಡಿಲಗೊಂಡು ತೀವ್ರಗತಿಯಲ್ಲಿ ಸವಕಳಿಯಾಗುತ್ತಿದೆ. ಮಳೆಯೊಟ್ಟಿಗೆ ಮೇಲ್ಮಣ್ಣು ಕೊಚ್ಚಿಕೊಂಡು ಹೊಳೆ ಸೇರುತ್ತಿದೆ. ಉಳಿದೆಡೆ ಅಡಿಕೆ ತೋಟ, ಶುಂಠಿ ಹಕ್ಕಲು, ಭತ್ತದ ಗದ್ದೆಗಳಿಗೆ ತಂದು ಸುರಿಯುತ್ತಿರುವ ಲೋಡುಗಟ್ಟಲೆ ರಾಸಾಯನಿಕಗಳಿಂದ ನೆಲದ ಸೂಕ್ಷ್ಮಾಣು ಜೀವಜಂತುಗಳು ಸತ್ತು ಮಣ್ಣಿನ ಅಂತಃಸತ್ವವೇ ನಾಶವಾಗುತ್ತಲಿದೆ. ಮಣ್ಣಿಗೆ ವಿಷವುಣಿಸಿ ಬೆಳೆದ ಹಾನಿಕರ ಪೈರು ಹಣ ತರಬಹುದಾದರೂ ಅಲ್ಲಿ ನಿಸ್ತೇಜಗೊಂಡ ನೆಲ ಮರುಭೂಮೀಕರಣಕ್ಕೆ ದಾರಿ ಮಾಡುವುದಂತೂ ಸತ್ಯ.

ನಮ್ಮದೇ ಆರೋಗ್ಯಕ್ಕೂ ಒಳಿತಿಗೂ ಪೂರಕ ವಾಗಿರುವ ಹಸಿರನ್ನೂ ಪರಿಸರ ಘಟಕಗಳನ್ನೂ ತಾಜಾ ಆಗಿ ಉಳಿಸಿಕೊಳ್ಳಬೇಕು. ನೆಮ್ಮದಿಯ ಬದುಕಿಗೆ ಭಂಗ ತರುವ ಅಭಿವೃದ್ಧಿ ಯೋಜನೆಗಳನ್ನು ನಿರಾಕರಿಸಿ ಸರಳ ಮತ್ತು ಸಾತ್ವಿಕ ಜೀವನಕ್ರಮವನ್ನು ಬದುಕುವುದು ಮತ್ತು ಬೆಂಬಲಿಸುವುದು ಈಗ ನಮಗುಳಿದಿರುವ ಅನಿವಾರ್ಯ ಆಯ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT