‘ನನ್ನ ಮೊಮ್ಮಗ ಅದ್ಭುತ ಪ್ರತಿಭಾವಂತ. ವಾಹನ ಚಾಲನೆ ಕಲಿಯಲು ನನಗೆ ತುಂಬ ದಿವಸ ಬೇಕಾಯಿತು. ಇವನು ಹಾಗಲ್ಲ, ನನ್ನ ಪಕ್ಕ ಕುಳಿತು ಚಾಲನೆಯ ವಿಧಾನ ನೋಡಿಯೇ ಕಲಿತುಕೊಂಡಿದ್ದಾನೆ. ಅವನ ಕೈಯಲ್ಲಿ ಸ್ಟಿಯರಿಂಗ್ ಕೊಟ್ಟು ನಿಶ್ಚಿಂತವಾಗಿ ಮಲಗಿಕೊಳ್ಳಬಹುದು’ ಎಂದು ಅಜ್ಜ ತಮ್ಮ ಮೊಮ್ಮಗನ ಕೌಶಲದ ಬಗೆಗೆ ಹೇಳಿದ್ದರು. ಎಂಟು ವರ್ಷದ ಹುಡುಗ ಹೆದ್ದಾರಿಯಲ್ಲಿ ಅವರ ಕಾರನ್ನು ಚಾಲನೆ ಮಾಡಿದ್ದೂ ಹೌದು. ಆದರೆ ಎದುರಿನಿಂದ ಬಂದ ವಾಹನವನ್ನು ತಪ್ಪಿಸಿಕೊಳ್ಳಲಾಗದೆ ನಡೆದ ದುರಂತದಲ್ಲಿ ಮೊಮ್ಮಗ ಸ್ಥಳದಲ್ಲಿಯೇ ಅಸುನೀಗಿದ, ಅಜ್ಜ ಆಮೇಲೂ ಬಹುಕಾಲ ಬದುಕಿದ್ದರು.

ಪ್ರತಿ ಮಗುವೂ ಪ್ರತಿಭಾಶಾಲಿಯಾಗಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಪ್ರೋತ್ಸಾಹದ ಕೊರತೆಯಿಂದ ಎಷ್ಟೋ ಪ್ರತಿಭೆಗಳು ಬೆಳಕಿಗೆ ಬರದೆ ಕಮರಿಹೋಗುತ್ತವೆ. ಎಳೆಯ ವಯಸ್ಸಿನಲ್ಲಿಯೇ ಮಕ್ಕಳು ಮೊಬೈಲ್ ಫೋನ್ ಬಳಕೆ ಮತ್ತು ವಾಹನ ಚಾಲನೆಯತ್ತ ಬಲು ಬೇಗ ಆಕರ್ಷಿತರಾಗುವುದು ಸಹಜ. ಅದರಲ್ಲಿ ಶೀಘ್ರಗತಿಯಲ್ಲಿ ನೈಪುಣ್ಯವನ್ನೂ ಹೊಂದುತ್ತಾರೆ. ಆದರೆ ಮಕ್ಕಳಿಗೆ ಪ್ರತಿಕೂಲ ಪರಿಸ್ಥಿತಿಯ ಅರಿವು ಇರುವುದಿಲ್ಲ. ಈ ಕಾರಣದಿಂದ ಸಂಭವಿಸಬಹುದಾದ ಅಪಾಯಗಳ ಕುರಿತು ಮಕ್ಕಳಿಗಿಂತ ಹಿರಿಯರಿಗೆ ಹೆಚ್ಚಿನ ಮುಂಜಾಗರೂಕತೆ ಇದ್ದರೆ ಸಂಭಾವ್ಯ ತೊಂದರೆಗಳನ್ನು ತಪ್ಪಿಸಬಹುದು. ಇಲ್ಲದಿದ್ದರೆ, ಮಕ್ಕಳು ಅದ್ಭುತ ಪ್ರತಿಭಾವಂತರು ಎಂಬುದನ್ನು ಲೋಕಕ್ಕೆ ಪರಿಚಯಿಸುವ ಆತುರದಲ್ಲಿ ತುಂಬಲಾಗದ ನಷ್ಟಕ್ಕೆ ಭಾಜನರಾಗಬೇಕಾಗುತ್ತದೆ.

ಮೀಸೆ ಮೂಡದ ವಯಸ್ಸಿನಲ್ಲೂ ತಮ್ಮ ಮಕ್ಕಳು ಬೈಕ್ ಚಾಲನೆ ಮಾಡುವುದು ಹಿರಿಯರಿಗೆ ವಿಶೇಷ ಪ್ರತಿಭೆಯ ಪ್ರದರ್ಶನವೆಂದು ಅನ್ನಿಸಬಹುದು. ಆದರೆ ಚಾಲನಾ ಪರವಾನಗಿ ಕೂಡ ಸಿಗದ ವಯೋಮಾನದ ಹುಡುಗ ವಿಪರೀತ ವೇಗದಲ್ಲಿ ಸಾಗುವುದು, ಒಂದೇ ಚಕ್ರದಲ್ಲಿ ಚಲಿಸುತ್ತ ರೀಲ್ಸ್ ಮಾಡುವುದು, ಮುಂದಿರುವ ವಾಹನವನ್ನು ಹಿಂದಿಕ್ಕುವ ಭರಾಟೆಯಲ್ಲಿ ತೊಡಗುವುದು ಬಹುತೇಕ ಸಂದರ್ಭಗಳಲ್ಲಿ ಆತಂಕಕ್ಕೆ ಗುರಿ ಮಾಡುತ್ತದೆ. ಇಂತಹ ಅತಿರೇಕದ ಸಾಹಸ ತೋರಿಸುವ ಮಕ್ಕಳ ಬಗೆಗೆ ಅಭಿಮಾನಪಡುವುದು, ಹತ್ತು ಮಂದಿಯ ಮುಂದೆ ಹೊಗಳುವುದು, ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ಹಿರಿಯರು ಎಸಗುವ ತಪ್ಪುಗಳಲ್ಲಿ ಒಂದೆನಿಸಬಹುದು.

ಕಲಿಕೆಯ ಕಾತರ ಇರುವ ವಯಸ್ಸು. ಕಲಿಯುವುದು ತಪ್ಪಲ್ಲ. ಆದರೆ ಸೂಕ್ತ ವಯಸ್ಸಿನವರೆಗೂ ಕಾಯಲೇಬೇಕು. ಹಿರಿಯರು ಜೊತೆಗಿರುವಾಗ ಮಾತ್ರ ನಿರಪಾಯಕರ ಜಾಗಗಳಲ್ಲಿ ಚಾಲನೆಯ ತಂತ್ರಗಳನ್ನು ಅರಿಯಬಹುದೇ ವಿನಾ ಸ್ವತಂತ್ರ ಬಲ ಪ್ರದರ್ಶನಕ್ಕೆ ಇಳಿಯಲು ಹಿರಿಯರು ಅವಕಾಶ ನೀಡಬಾರದು. ಮಾಡಬಾರದು ಎಂದು ಒತ್ತಡ ಹೇರಿದಾಗ, ಅತಿ ಮುದ್ದಿನಿಂದ ಬೆಳೆದ ಮಕ್ಕಳ ಮನಸ್ಸಿಗೆ ಬಹು ದೊಡ್ಡ ಆಘಾತವಾಗಿ ಅವರು ಅತಿರೇಕದ ನಿರ್ಧಾರಗಳನ್ನು ಕೈಗೊಂಡ ಪ್ರಸಂಗಗಳೂ ಸಂಭವಿಸಿವೆ. ಮುದ್ದಿನ ಪರಮಾವಧಿ ಎಂಬಂತೆ, ಅಪಾಯಕರ ಕೌಶಲಗಳನ್ನು ಕಲಿಯಲು ಮಕ್ಕಳಿಗೆ ಅತಿರೇಕದ ಬೆಂಬಲ ನೀಡುವ ಮೊದಲೇ ಸಾವಧಾನದ ಪಾಠವನ್ನು ಮನವರಿಕೆ ಮಾಡುವುದು ಅವರ ಕ್ಷೇಮದ ದೃಷ್ಟಿಯಿಂದ ಅಗತ್ಯ ವಾಗುತ್ತದೆ.

ಮಕ್ಕಳು ಹಾದಿ ತಪ್ಪುವ ಪ್ರಸಂಗಗಳು ಹಿರಿಯರ ಬೇಜವಾಬ್ದಾರಿಯಿಂದಲೇ ಸಂಭವಿಸುವುದು ಹೆಚ್ಚು. ಮಕ್ಕಳು ಈಜಲು ಹೋಗಿ ಪ್ರಾಣಾಪಾಯ ತಂದುಕೊಳ್ಳುವ ಪ್ರಸಂಗಗಳು ವರದಿಯಾಗುತ್ತಿರುತ್ತವೆ. ಸಾಹಸ, ಕಸರತ್ತುಗಳ ಪ್ರದರ್ಶನಕ್ಕಿಳಿದು ಹಿರಿಯರಿಂದ ಶಹಭಾಸ್ ಎನಿಸಿಕೊಂಡ ಮಕ್ಕಳು, ಸ್ವಂತ ಬಲ ತೋರಲು ಮುಂದಾಗುವುದುಂಟು. ಹೊಸದೊಂದು ಶೋಧನೆಯ ಹಿಂದೆ ಉತ್ಸಾಹದ ಮನಸ್ಸು ಹೆಚ್ಚು ಕೆಲಸ ಮಾಡುತ್ತದೆ ಎಂದು ಥಾಮಸ್ ಆಲ್ವ ಎಡಿಸನ್ ಹೇಳಿದ್ದಾರೆ. ಇಂದಿನ ಮಕ್ಕಳು ಜನೋಪಕಾರಿಯಾದ ಹೊಸ ಸಂಶೋಧನೆಗೆ ಕೊಡುಗೆ ನೀಡುವುದಕ್ಕಾಗಿ ಅಪಾಯ ತಂದುಕೊಳ್ಳುತ್ತಿಲ್ಲ. ಮುಂಬರುವ ಅಪಾಯದ ಅರಿವಿನ ಕೊರತೆಯಿಂದ ಶಾಶ್ವತ ಅಂಗವೈಕಲ್ಯವನ್ನೋ ಪ್ರಾಣಾಪಾಯವನ್ನೋ ಬಳಿಗೆ ಎಳೆದುಕೊಳ್ಳುತ್ತಿದ್ದಾರೆ ಅನ್ನಿಸುತ್ತದೆ.

ಈ ಆಧುನಿಕ ಪ್ರಪಂಚದ ಆಗುಹೋಗುಗಳಲ್ಲಿ ಪ್ರತಿ ಮಗುವೂ ಪರಿಣತಿಯನ್ನು ಪಡೆಯುವುದು ಸ್ವಾಗತಾರ್ಹ. ಆದರೆ ಕಲಿಕೆಯ ವಯಸ್ಸು ಮಾನಸಿಕವಾಗಿ ಪ್ರಬುದ್ಧವಾಗದಿರುವಾಗ ಅಪಾಯ ತರಬಲ್ಲ ಕಲಿಕೆಗೆ ಹಿರಿಯರು ಪ್ರೋತ್ಸಾಹ ನೀಡಬಾರದು. ಬದಲಿಗೆ ಎಚ್ಚರಿಸಬೇಕು. ಅಪಾಯದ ಅರಿವು ಮೂಡಿಸಬೇಕು. ಸ್ವಾತಂತ್ರ್ಯ ನೀಡುವ ಮೊದಲು ಕಡಿವಾಣವನ್ನೂ ಹಾಕಬೇಕು. ಮಕ್ಕಳು ಮೈ ಮರೆಯುವುದು ಅಸಹಜವಲ್ಲ. ಹಿರಿಯರು ಮತಿ ಮರೆತರೆ ಬಾಳಿ ಬದುಕಬೇಕಾದ ಕಿರಿಯ ಜೀವ ಅಪಾಯಕ್ಕೆ ಸಿಲುಕುವುದಕ್ಕೆ ಪರೋಕ್ಷ ಕಾರಣ ಅವರೇ ಆಗಬಹುದು.

ಮಕ್ಕಳು ಬೆಳೆಯುತ್ತಿರುವಾಗಲೇ ಅವರನ್ನು ಸಮಾಧಾನಪಡಿಸಲು ಕೈಗೆ ಮೊಬೈಲ್ ಫೋನ್ ಕೊಡುವುದರಿಂದಲೇ ಅವರ ಸ್ವಚ್ಛಂದ ಪ್ರವೃತ್ತಿಗೆ ಹಿರಿಯರು ನೀರೆರೆಯಲು ಆರಂಭಿಸುತ್ತಾರೆ. ಸ್ವಂತ ವಾಹನ ಬೇಕು ಎಂದಾಗ ವಿವೇಚನೆ ಮಾಡುವುದಿಲ್ಲ. ಜಾಗೃತಿ ಎಂಬ ಪದವನ್ನೇ ಬಳಸುವುದಿಲ್ಲ. ಮಗುವನ್ನು ಮಗುವಾಗಿಯೇ ಬೆಳೆಸಬೇಕು. ಯಾವುದೇ ವಿಷಯದಲ್ಲಿ ವಯಸ್ಸಿಗೆ ಮೀರಿದ ಪರಿಣತಿಯನ್ನು ನಿರೀಕ್ಷಿಸುವ ಮುನ್ನ ಅದರ ವಯಸ್ಸಿನ ಬಾಲಿಶತನವು ಪೋಷಕರಿಗೆ ಮತ್ತೆ ಮತ್ತೆ ನೆನಪಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.