ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಜನರೇ ಹಣ ಕೊಟ್ಟರು ಈ ಜನನಾಯಕನಿಗೆ!

Published 3 ಏಪ್ರಿಲ್ 2024, 0:00 IST
Last Updated 3 ಏಪ್ರಿಲ್ 2024, 0:00 IST
ಅಕ್ಷರ ಗಾತ್ರ

ಮತ್ತೊಂದು ಚುನಾವಣೆಯ ಹೊಸ್ತಿಲಲ್ಲಿ, ಧೀಮಂತ ರಾಜಕಾರಣಿ, ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡ ಅವರ ಜನ್ಮಶತಮಾನೋತ್ಸವವು (ಜನನ: 14, ಮಾರ್ಚ್‌ 1923) ನಾಡಿನಲ್ಲಿ ವರ್ಷಪೂರ್ತಿ ನಡೆದು ಈಚೆಗಷ್ಟೇ ಸಂಪನ್ನಗೊಂಡಿದೆ. ಗೌಡರ ತವರುನೆಲ ಮತ್ತು ಚಳವಳಿಯ ತೊಟ್ಟಿಲು ಎನಿಸಿಕೊಂಡ ಶಿವಮೊಗ್ಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶತಮಾನೋತ್ಸವ ವರ್ಷಾಚರಣೆಯ ಅಂತ್ಯದಲ್ಲಿ ಜನ್ಮಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಗೌಡರ ಬದುಕು, ಹೋರಾಟ, ವಿಚಾರಧಾರೆಯ ಕುರಿತು ಚಿಂತಕರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳೊಟ್ಟಿಗೆ
ವಿಚಾರಮಂಡನೆ, ಸಂವಾದಗಳಿಗೆ ವೇದಿಕೆ ಕಲ್ಪಿಸಿದ್ದು ಶ್ಲಾಘನೀಯ ಕಾರ್ಯವೆನಿಸಿತು.

ಬಡತನದ ಹಿನ್ನೆಲೆಯಿಂದ ಬಂದು ಮೂರು ಬಾರಿ ಶಾಸಕರಾಗಿದ್ದ ಗೋಪಾಲಗೌಡರು ಜನರ ಕಷ್ಟಗಳಿಗೆ ದನಿಯಾಗಿ, ನ್ಯಾಯಯುತ ಬದಲಾವಣೆಗೆ ಕಾರಣರಾಗಿ ಕೊನೆಗೆ ಬರಿಗೈಯಲ್ಲೇ ಹೊರಟು ಹೋಗಿದ್ದನ್ನು ನಾಡು ಹೆಮ್ಮೆಯಿಂದ ನೆನೆಯುತ್ತದೆ. ಅದೊಂದು ನಾಡಿನ ರಾಜಕೀಯ ಚರಿತ್ರೆಯ ಸೋಜಿಗದ ಪಯಣ. 19 ವರ್ಷದವರಾಗಿದ್ದಾಗಲೇ ಆಕರ್ಷಕ ವ್ಯಕ್ತಿತ್ವ ಅವರದಾಗಿತ್ತು. ಪ್ರಖರ ವಾಗ್ಮಿ, ಛಲದ ಹೋರಾಟಗಾರನಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ಗೌಡರು, 29 ವರ್ಷಕ್ಕೆ ಶಾಸನಸಭೆ ಪ್ರವೇಶಿಸಿದವರು. 49 ವರ್ಷಕ್ಕೆ ತೀರಿಕೊಂಡ ಅವರನ್ನು ಅರ್ಧ ಶತಮಾನದ ಬಳಿಕವೂ ಸ್ಮರಿಸಿಕೊಳ್ಳಲು ಸಕಾರಣಗಳಿವೆ. ಜಾತಿ ಮೀರಿ, ಚುನಾವಣೆಯಲ್ಲಿ ಹಣ ಹಂಚದೆಯೇ ‘ಒಂದು ನೋಟು, ಒಂದು ವೋಟು’ ಘೋಷಣೆಯೊಂದಿಗೆ ಜನರೇ ದುಡ್ಡು ಕೊಟ್ಟು ಗೆಲ್ಲಿಸಿ ಕಳಿಸುತ್ತಿದ್ದ ಅಪೂರ್ವ ನಿದರ್ಶನವದು.

ನಾಡು, ನುಡಿಯ ಸ್ವಾಭಿಮಾನ ಮತ್ತು ಶೋಷಿತ ವರ್ಗಗಳ ಕಳಕಳಿಯ ದನಿಯಾಗಿ, ಶಾಸನಸಭೆಯಲ್ಲಿ ನೇರ, ನಿಷ್ಠುರವಾಗಿ ಮಂಡಿಸುತ್ತಿದ್ದ ಅವರ ವಿಚಾರ ಲಹರಿಗಳು ಮಾಹಿತಿ ಕಣಜಗಳಂತಿದ್ದು, ಹೊಸ ಜನಪ್ರತಿನಿಧಿಗಳಿಗಂತೂ ಮಾದರಿ ಕೈಪಿಡಿಯಂತಿರುವುದು ಸತ್ಯ. ಮುಖ್ಯಮಂತ್ರಿಯಲ್ಲದ, ಮಂತ್ರಿಗಿರಿಯ ಅಧಿಕಾರವೂ ಇರದ ಗೋಪಾಲಗೌಡರ ಹೆಸರನ್ನು ಹೊರಗಿಟ್ಟು ಸಮಕಾಲೀನ ಕರ್ನಾಟಕದ ರಾಜಕೀಯ ಅಥವಾ ಸಾಂಸ್ಕೃತಿಕ ಚರಿತ್ರೆಯನ್ನು ಬರೆಯಲು ಯಾರಿಗೂ ಸಾಧ್ಯವಾಗದು!

ಗೋಪಾಲಗೌಡರು ಸಮಕಾಲೀನ ಸಾಹಿತ್ಯ ಮತ್ತು ಚರಿತ್ರೆಯ ಆಳ ಓದುಗರಾಗಿದ್ದರು. ಹಿರಿಯರು, ದಾರ್ಶನಿಕರ ಒಡನಾಟವಿದ್ದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ, ಜೈಲೇ ವಿಶ್ವವಿದ್ಯಾಲಯವಾಗಿ ಅವರ ವ್ಯಕ್ತಿತ್ವವನ್ನು ಅಪ್ಪಟ ಸಮಾಜವಾದಿಯನ್ನಾಗಿರೂಪಿಸಿತ್ತು. ರಾಜಕೀಯ ಸ್ವಾತಂತ್ರ್ಯ ಮತ್ತು ಪ್ರಾತಿನಿಧಿತ್ವದೊಟ್ಟಿಗೆ ಸಾಮಾಜಿಕ, ಆರ್ಥಿಕ ಸಮಾನತೆ ಸಾಧ್ಯವಾಗದ ವಿನಾ ರಾಷ್ಟ್ರ ಏಳಿಗೆ ಕಾಣದು ಎಂದು ನಂಬಿದ್ದವರಲ್ಲಿ ಅಗ್ರಮಾನ್ಯರು. ಸ್ವಾತಂತ್ರ್ಯ ಚಳವಳಿ, ರೈತ ಚಳವಳಿ, ಸಮಾಜವಾದಿ ಪಕ್ಷ ಸಂಘಟನೆ, ಕನ್ನಡ ಏಕೀಕರಣ ಹೋರಾಟ, ಶಾಸನಸಭೆಯಲ್ಲಿನ ಅಧಿಕಾರ ರಾಜಕಾರಣ, ಬಡವರು ಮತ್ತು ಶಿಕ್ಷಣದ ಬಗೆಗಿನ ಕಾಳಜಿ ಎಲ್ಲೆಡೆಯೂ ಅವರ ಪಾತ್ರ, ಪ್ರಭಾವಗಳು ಢಾಳಾಗಿದ್ದವು. ಅವರು ಈ ನೆಲದ ಸಂಸ್ಕೃತಿಯನ್ನು ಬಲ್ಲ ‘ಫೈರ್‌ ಬ್ರ್ಯಾಂಡ್’ ರಾಜಕಾರಣಿಯಾಗಿದ್ದರು. ಬಡವರು ಮತ್ತು ಗೇಣಿದಾರ ರೈತರಲ್ಲಿ ನ್ಯಾಯಮಾರ್ಗದ ವಿಚಾರಗಳನ್ನು ಬಿತ್ತಿ ‘ಕಾಗೋಡು ಚಳವಳಿ’ ರಕ್ತರಹಿತ ಕ್ರಾಂತಿಗೆ ಬಲ ತುಂಬಿದರು. ಮುಂದೆ ಅದು ಭೂಸುಧಾರಣಾ ಕಾಯ್ದೆಯಾಗಿ ಬಡ ಕುಟುಂಬಗಳ ಹಿತ ಕಾಯುವಂತಾಗಿದ್ದು ಚರಿತ್ರಾರ್ಹ ಸಂಗತಿಯೇ.

ಮತ್ತೊಮ್ಮೆ ಚುನಾವಣೆ ಎದುರಾಗಿದೆ. ಪ್ರಜಾಪ್ರಭುತ್ವವ್ಯವಸ್ಥೆ ಇರುವ ರಾಷ್ಟ್ರಗಳ ಪೈಕಿ ಜಗತ್ತಿನ ಅತಿದೊಡ್ಡ ಮತದಾನದ ಹಬ್ಬ ಇದೀಗ ಕಳೆಗಟ್ಟುತ್ತಿದೆ. ಪ್ರಜಾಪ್ರಭುತ್ವದ ಮೂಲ ಆಶಯವೇ ತಾಯ್ತನದ ಆಡಳಿತ. ಅದೇ ಹಿನ್ನೆಲೆಯಲ್ಲಿ ರೂಪುಗೊಂಡ ಸಂವಿಧಾನವು ಸರ್ವರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಸಾರುತ್ತದೆ.

ಇಂದಿನ ಚುನಾವಣಾ ಪ್ರಕ್ರಿಯೆಯ ಆರಂಭದ ಹಂತವೇ ದಿಗಿಲು ಮೂಡಿಸುವಂತಿದೆ. ಪಕ್ಷಭೇದ ಮರೆತು ಭಾರಿ ಭ್ರಷ್ಟರು, ಕ್ರಿಮಿನಲ್ ಹಿನ್ನೆಲೆಯುಳ್ಳವರು, ಧನಿಕರು, ರಾಜಕಾರಣಿಗಳ ಕುಟುಂಬಸ್ಥರು, ಜಾತಿವಾದಿಗಳು ಉಮೇದುವಾರರಾಗಿ ಎದುರಾಗುತ್ತಿರುವ ಹೊತ್ತಿದು. ಹಣ, ಮದ್ಯ, ಜಾತಿ, ಧರ್ಮ, ದೊಂಬಿ ಇವೆಲ್ಲವನ್ನೂ ಮೀರಿ, ದೇಶದ ಭವಿಷ್ಯದ ಬಗ್ಗೆ ಚಿಂತಿಸುವ ಯೋಗ್ಯರನ್ನು ಆಯ್ಕೆ ಮಾಡಬೇಕಾದ ಮತದಾರ ಪ್ರಭುಗಳು, ಯಾರೆಷ್ಟು ದುಡ್ಡು ಕೊಟ್ಟರು, ಸೀರೆ, ಕುಕ್ಕರ್ ಹಂಚಿದರು, ಮದ್ಯ ಕುಡಿಸಿದರು, ಯಾರು ನಮ್ಮ ಜಾತಿಯವರು, ಧರ್ಮದವರು ಅಂತೆಲ್ಲಾ ಲೆಕ್ಕಾಚಾರದಲ್ಲಿ ಮುಳುಗಿದರೆ ನಾಳೆಗಳು ಕರಾಳ. ಅಕ್ರಮವಾಗಿ ಚುನಾವಣೆ ಗೆದ್ದವರು ಭ್ರಷ್ಟರಾಗುವುದು ಮತ್ತು ಕೆಲವೊಮ್ಮೆ ಹಣ, ಅಧಿಕಾರಕ್ಕಾಗಿ ಮಾರಾಟಗೊಳ್ಳುವ ಸಂಪ್ರದಾಯವೂ ಇತ್ತೀಚೆಗೆ ಚಾಲ್ತಿಯಲ್ಲಿರುವುದನ್ನು ಮರೆಯಬಾರದು.

ಜೀವನಪೂರ್ತಿ ಅತ್ಯಂತ ಸರಳವಾಗಿ, ಗಾಢವಾಗಿ ಬದುಕಿದ, ಮತದಾರರ ಹಣದಿಂದಲೇ ರಾಜಕೀಯ ಮಾಡಿದ, ತನ್ನ ಕುಟುಂಬಸ್ಥರನ್ನು ರಾಜಕೀಯ ಪಡಸಾಲೆಗೆ ಕರೆತರದ ಗೋಪಾಲಗೌಡರಂತಹ
ಅಪರೂಪದ ವ್ಯಕ್ತಿತ್ವವು ರಾಜಕಾರಣಿಗಳಿಗೆ ಆದರ್ಶ ಆಗಬೇಕು. ಎಲ್ಲಾ ಕಾಲದ ಮಾದರಿಯಾಗಿ ನಿಲ್ಲುವಂತಹ, ಬಹುಜನರ ಹಿತ ಕಾಯುವಂತಹ ಶಾಂತವೇರಿ ಗೋಪಾಲಗೌಡರ ಸೈದ್ಧಾಂತಿಕ ಬದ್ಧತೆ, ಪ್ರಾಮಾಣಿಕತೆ, ಸರಳತೆ ಮತ್ತು ನಿಸ್ವಾರ್ಥ ರಾಜಕಾರಣವನ್ನು ಮತ್ತೆಮತ್ತೆ ಬಿತ್ತುವುದು ಮುಖ್ಯ. ಹಣ, ಮದ್ಯ, ಜಾತಿ, ಧರ್ಮವು ಚುನಾವಣಾ ಅಸ್ತ್ರಗಳಾಗಿ ಬಳಕೆಯಾಗದಂತೆ ಎಚ್ಚರ ವಹಿಸುವುದು ಪ್ರಜಾ
ಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ತುರ್ತು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT