ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ತಡೆಯಬನ್ನಿ ಸವಳು- ಜವಳು ಬಾಧೆ

ನೀರು ನಿರ್ವಹಣೆಗೆ ವೈಜ್ಞಾನಿಕ ವಿಧಾನವನ್ನು ಎಲ್ಲ ರೈತರು ಕಡ್ಡಾಯವಾಗಿ ಪಾಲಿಸದಿದ್ದರೆ ಈ ಸಮಸ್ಯೆಗೆ ಪರಿಹಾರ ಕಷ್ಟಸಾಧ್ಯ
Last Updated 25 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲೆಯ ಇಂಗಳಗಿ ಗ್ರಾಮದ ಯುವ ರೈತಮಿತ್ರರೊಬ್ಬರು ಮೂರು ಎಕರೆ ಭೂಮಿ ಹೊಂದಿದ್ದಾರೆ. ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದ ಎಡದಂಡೆ ಕಾಲುವೆಯಿಂದ ಅವರ ಭೂಮಿಗೆ ನೀರಾವರಿ ಸೌಲಭ್ಯ ದೊರೆತಿದೆ. ನೋವಿನ ಸಂಗತಿ ಎಂದರೆ, ಅತಿಯಾದ ನೀರಿನ ಬಳಕೆಯಿಂದ ಈ ಭೂಮಿ ಸವಳು- ಜವಳು ಬಾಧೆಗೆ ಒಳಗಾಗಿ ಬರಡಾಗಿ ನಿಂತಿದೆ.

ಕೆಲವು ವರ್ಷಗಳ ಹಿಂದೆ ತನ್ನ ಜಮೀನಿಗೆ ನೀರು ಬಂತು ಎಂದು ಹಿಗ್ಗಿ ಕುಣಿದ ಈ ರೈತ, ಈಗ ಬೇರೆಯವರ ಭೂಮಿಯಲ್ಲಿ ಕೂಲಿ ಮಾಡಿ ಬದುಕು ಸಾಗಿಸಬೇಕಾಗಿ ಬಂದಿದೆ. ಇಂಗಳಗಿ ಹಾಗೂ
ಸುತ್ತಮುತ್ತಲಿನ ಗ್ರಾಮಗಳ ಅನೇಕ ರೈತರ ಬವಣೆ ಇದೇ ಮಾದರಿಯಲ್ಲಿದೆ. ರಾಜ್ಯದಲ್ಲಿ ನೀರಾವರಿಗೆ ಒಳಪಟ್ಟ ಪ್ರದೇಶದ ಬಹಳಷ್ಟು ಭೂಮಿಯಲ್ಲಿ ಈ ಸಮಸ್ಯೆ ಉಂಟಾಗಿದೆ.

ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳುತ್ತಲೇ ಇದೆ. ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು, ಡ್ಯಾಮ್‍ಗಳನ್ನು ಕಟ್ಟಬೇಕು, ಏತ ನೀರಾವರಿ ಯೋಜನೆಗಳನ್ನು ರೂಪಿಸಬೇಕು, ಕಾಲುವೆಗಳ ಜಾಲ ವಿಸ್ತರಿಸಬೇಕು ಎಂಬ ಬೇಡಿಕೆಗಳ ಕೂಗು ಕೇಳುತ್ತಲೇ ಇದೆ. ವಿಪರ್ಯಾಸವೆಂದರೆ, ಅತಿಯಾದ ನೀರಿನ ಬಳಕೆಯಿಂದ ಕೃಷಿಯೋಗ್ಯ
ಶೇಕಡ 20ರಷ್ಟು ಭೂಮಿ ಬರಡಾಗಿ ನಿಂತಿದೆ. ಅಣೆಕಟ್ಟುಗಳ ಅಚ್ಚುಕಟ್ಟು ಪ್ರದೇಶದಲ್ಲಿ ಸವಳು- ಜವಳು ಪ್ರಮಾಣ ಇನ್ನೂ ಹೆಚ್ಚಾಗಿದೆ. ರೈತರು ಬೇಗ ಎಚ್ಚೆತ್ತುಕೊಳ್ಳದಿದ್ದರೆ ಈ ತೊಂದರೆ ಕ್ರಮೇಣ ಹೆಚ್ಚಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಜಲಾಶಯಗಳಲ್ಲಿ ಸಂಗ್ರಹಿಸಿದ ನೀರನ್ನು ಕಾಲುವೆಗಳ ಮೂಲಕ ಬೆಳೆಗಳಿಗೆ ಪೂರೈಸುವ ವಿಧಾನವನ್ನು ಹೆಚ್ಚು ರೈತರು ಅನುಸರಿಸುತ್ತಿದ್ದಾರೆ. ಇದು, ನೀರು ಹರಿಯುವ ಸರಳ ವಿಧಾನ. ಪಂಪ್‌ಸೆಟ್‌ ಮತ್ತು ವಿದ್ಯುತ್‌ ಬೇಕಾಗಿಲ್ಲ. ತಮ್ಮ ಭೂಮಿ ಪೂರ್ಣ ನೀರುಂಡಮೇಲೆ ನೀರು ಹರಿದು ಬರುವುದನ್ನು ನಿಲ್ಲಿಸಲು ರೈತರು ಕಾಳಜಿ ವಹಿಸಬೇಕು. ಇದನ್ನು ಪಾಲಿಸದೇ ಇರುವುದರಿಂದ ನೀರು ಪೋಲಾಗುತ್ತದೆ ಮಾತ್ರವಲ್ಲ, ಭೂಮಿ ಹಾಗೂ ಬೆಳೆಗಳು ಹಾಳಾಗುತ್ತವೆ. ಕಾಲುವೆಗಳು ಬಿರುಕು ಬಿಟ್ಟಾಗ, ಒಡೆದಾಗ, ಜಲಾಶಯಗಳು ತುಂಬಿದ ಕಾರಣಕ್ಕೆ ಅಧಿಕ ನೀರು ಹೊರಬಿಟ್ಟಾಗ ಇನ್ನೂ ಹೆಚ್ಚು ನೀರು ರೈತರ ಭೂಮಿಗೆ ನುಗ್ಗುತ್ತದೆ. ಇದನ್ನು ತ್ವರಿತವಾಗಿ ತಡೆಯುವುದು ಬಹಳ ಅವಶ್ಯ.

ನದಿಗಳ ದಂಡೆ, ಬಾವಿ, ಕೆರೆ, ಕೊಳವೆಬಾವಿ ಮೂಲಕ ನೀರಾವರಿ ಸೌಲಭ್ಯ ಮಾಡಿಕೊಂಡ ರೈತರು ಪಂಪ್‌ಸೆಟ್ ಬಳಸಿ ಭೂಮಿಗೆ ನೀರುಣಿಸುತ್ತಾರೆ. ಇವರಲ್ಲಿ ಕೂಡ ಬಹಳ ಜನ ನೀರನ್ನು ಮಿತವಾಗಿ ಬಳಸಲು ಗಮನ ಕೊಡುವುದಿಲ್ಲ. ರೈತರು ವಿದ್ಯುತ್ ಪಂಪ್‍ಸೆಟ್ ಚಾಲೂ ಮಾಡುತ್ತಾರೆ, ಆದರೆ ಬಂದ್‌ ಮಾಡುವುದೇ ಇಲ್ಲ ಎಂಬ ಮಾತಿದೆ.

ಸವಳು- ಜವಳಿನಿಂದಾಗಿ ಭೂಮಿಯ ಆರೋಗ್ಯ ಕೆಡುತ್ತದೆ, ಕೃಷಿ ಆದಾಯ ಕುಂಠಿತವಾಗುತ್ತದೆ, ರೈತರ ಆರ್ಥಿಕ ಸ್ಥಿತಿ ಹದಗೆಡುತ್ತದೆ, ರೈತರ ವಲಸೆಗೆ ಕಾರಣವಾಗುತ್ತದೆ ಮತ್ತು ವಾತಾವರಣ ಕಲುಷಿತವಾಗುತ್ತದೆ. ಇವೆಲ್ಲ ಸಾಮಾಜಿಕ– ಆರ್ಥಿಕ ದುಷ್ಪರಿಣಾಮಗಳು.

ಕೃಷಿಗೆ ಫಲವತ್ತಾದ ಆರೋಗ್ಯಪೂರ್ಣ ಭೂಮಿ ಬೇಕು. ಮಣ್ಣಿನಲ್ಲಿ ಮೂರು ಕೋಟಿಗಿಂತಲೂ ಅಧಿಕ ಸೂಕ್ಷ್ಮಜೀವಿಗಳಿರುತ್ತವೆ. ಸಾಗುವಳಿ ಭೂಮಿಯಲ್ಲಿ ನೀರು ಮೇಲಕ್ಕೆ ಏರುತ್ತ ಬಂದಂತೆ ಕೆಳಪದರ
ದಲ್ಲಿರುವ ಲವಣಾಂಶಗಳು ಭೂಮಿಯ ಮೇಲ್ಭಾಗಕ್ಕೆ ಬರುತ್ತವೆ. ನೀರು ಆವಿಯಾಗಿ ಹೋಗಿ ಲವಣಾಂಶಗಳು ಭೂಮಿಯ ಮೇಲೆ ಸಂಗ್ರಹವಾಗುತ್ತವೆ. ಅಲ್ಲಿ ಉಪ್ಪಿನ ಪದರು ನಿರ್ಮಾಣವಾಗಿ ಸವಳು- ಜವಳು ಉಂಟಾಗುತ್ತದೆ.

ದೇಶದಲ್ಲಿ ನೀರಾವರಿ ಸೌಲಭ್ಯ ಜಾಲ ನಿರ್ಮಿಸಿದ್ದ
ರಿಂದ ಅನೇಕ ಅನುಕೂಲಗಳಾಗಿವೆ. ಜೊತೆ ಜೊತೆಗೆ ಅವೈಜ್ಞಾನಿಕ ನೀರಿನ ಬಳಕೆಯಿಂದ ದೊಡ್ಡ ಪ್ರಮಾಣದಲ್ಲಿ ಭೂಮಿ ಬರಡಾಗುತ್ತಿರುವುದು ಆತಂಕದ ಸಂಗತಿಯಾಗಿದೆ.

‘ಮುಂಜಾಗ್ರತೆಯೇ ಮದ್ದಿಗಿಂತ ಉತ್ತಮ’ ಎನ್ನುವಂತೆ, ಈ ಸಮಸ್ಯೆ ಇನ್ನಷ್ಟು ಉಲ್ಬಣಿಸದಂತೆ ನೋಡಿಕೊಳ್ಳಬೇಕು. ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಕ್ಕೆ ಆದ್ಯತೆ ನೀಡುವುದು ಅವಶ್ಯ. ಜಮೀನನ್ನು ನೀರಾವರಿಗೆ ಅಳವಡಿಸುವ ಮುನ್ನ ಮಣ್ಣಿನ ಗುಣಲಕ್ಷಣಗಳನ್ನು ಅರಿತುಕೊಂಡು ಸಮರ್ಪಕವಾಗಿ ನೀರುಣಿಸಬೇಕು. ನಾಲೆಗಳನ್ನು ಸದಾ ಸುಸ್ಥಿತಿಯಲ್ಲಿ ಇಡಬೇಕು. ಬಿರುಕು ಕಂಡರೆ ತಕ್ಷಣ ರಿಪೇರಿ ಮಾಡಬೇಕು. ನೀರು ನಿರ್ವಹಣೆಗೆ ವೈಜ್ಞಾನಿಕ ವಿಧಾನವನ್ನು ಎಲ್ಲ ರೈತರು ಕಡ್ಡಾಯವಾಗಿ ಪಾಲಿಸಬೇಕು.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮರಗೂರ ಗ್ರಾಮದ ರೈತರು ಸಂಘಟಿತರಾಗಿ,
ಸವಳು- ಜವಳು ಬಾಧೆಗೆ ಒಳಗಾದ ಸುಮಾರು 500 ಎಕರೆ ಭೂಮಿಗೆ ಮರುಜೀವ ನೀಡಿದ್ದಾರೆ. ಇದು ನಿಜಕ್ಕೂ ಒಂದು ಮಾದರಿ ಕಾರ್ಯವಾಗಿದೆ.

ಸಮಸ್ಯೆಯ ಪರಿಹಾರಕ್ಕೆ ಅನೇಕ ಆವಿಷ್ಕಾರ
ಗಳಾಗಿವೆ. ತಜ್ಞರು ಕೆಲವು ಪರಿಣಾಮಕಾರಿ ಮಾರ್ಗಗಳನ್ನು ಕಂಡುಹಿಡಿದಿದ್ದಾರೆ. ಇವುಗಳಲ್ಲಿ ಮುಖ್ಯವಾಗಿ ತೆರೆದ ಹಾಗೂ ಅಂತರ್ಗತ ಬಸಿಗಾಲುವೆಗಳ ನಿರ್ಮಾಣ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಸರ್ಕಾರ ಮತ್ತು ರೈತರ ಜಂಟಿ ಪ್ರಯತ್ನದ ಮೂಲಕ ಸವಳು- ಜವಳು ಭೂಮಿಗೆ ಮೊದಲಿನ ಶಕ್ತಿ ತುಂಬಬೇಕು ಹಾಗೂ ಭೂಮಿ ಈ ಬಾಧೆಗೆ ಒಳಗಾಗದಂತೆ ಮುಂಜಾಗ್ರತೆ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT