ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕಾಳ್ಗಿಚ್ಚು: ಬದುಕನ್ನೂ ಸುಟ್ಟೀತು!

ಪಶ್ಚಿಮಘಟ್ಟದ ಕಾಡಿಗೆ ಬೆಂಕಿ ಬಿದ್ದರೆ, ಹೆಚ್ಚಿನ ಸಂದರ್ಭಗಳಲ್ಲಿ ಅದರ ಹಿಂದೆ ಅಗೋಚರವಾಗಿ ಒಬ್ಬ ಮನುಷ್ಯ ಇರುವುದು ವಿಷಾದಕರ
ನಾಗರಾಜ ಕೂವೆ
Published 15 ಫೆಬ್ರುವರಿ 2024, 0:30 IST
Last Updated 15 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಫೆಬ್ರುವರಿ ಮೊದಲ ವಾರದಿಂದಲೇ ಈ ವರ್ಷ ಬಿಸಿಲಿನ ಬೇಗೆ ಕಂಡುಬಂದಿದೆ. ಈ ಬೇಸಿಗೆಯಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ತಜ್ಞರು ಹೇಳಿದ್ದಾರೆ. ಈ ಮಧ್ಯೆ, ಗುಡ್ಡ-ಬೆಟ್ಟಗಳಲ್ಲಿನ ಹುಲ್ಲೆಲ್ಲಾ ಒಣಗಿ ನಿಂತಿದೆ. ಪಶ್ಚಿಮಘಟ್ಟದಲ್ಲಿ ಕಾಳ್ಗಿಚ್ಚಿನ ಆತಂಕ ಶುರುವಾಗಿದೆ.

ಮಲೆನಾಡಿನ ಶಾಲೆಯೊಂದರಲ್ಲಿ ಇತ್ತೀಚೆಗೆ ಪರಿಸರ ಸಂರಕ್ಷಣೆಯ ಬಗೆಗೆ ಸಂವಾದ ನಡೆಸುತ್ತಿದ್ದಾಗ, ‘ಪಶ್ಚಿಮಘಟ್ಟದಲ್ಲಿ ಕಾಳ್ಗಿಚ್ಚಿಗೆ ಕಾರಣವೇನು?’ ಎಂದು ಕೇಳಿದೆ. ತಕ್ಷಣ ವಿದ್ಯಾರ್ಥಿಯೊಬ್ಬ ‘ಜಿಂಕೆಗಳು ಓಡುವಾಗ ಕಲ್ಲಿಗೆ ಕಲ್ಲು ತಾಗುವುದರಿಂದ, ಮರ-ಮರಗಳ ನಡುವಿನ ಘರ್ಷಣೆಯಿಂದ ಬೆಂಕಿ ಹೊತ್ತಿಕೊಳ್ಳುತ್ತದೆ’ ಎಂದ. ನಾನು ಕೂಡ ಶಾಲಾ ಹಂತದಲ್ಲಿ ಹೀಗೆಯೇ ನಂಬಿದ್ದೆ. ಆದರೆ ಬಹುತೇಕ ಬಾರಿ ವಾಸ್ತವ ಬೇರೆಯೇ ಇರುತ್ತದೆ.

ಇಂದು ಹೆಚ್ಚಿನ ಸಂದರ್ಭಗಳಲ್ಲಿ, ಯಾವುದೇ ಕಾಡಿಗೆ ಬೆಂಕಿ ಬಿದ್ದರೂ ಅದರ ಹಿಂದೆ ಅಗೋಚರವಾಗಿ ಒಬ್ಬ ಮನುಷ್ಯ ಇರುತ್ತಾನೆ. ಪ್ರವಾಸಿಗರ ಸಿಗರೇಟು, ದನಗಾಹಿಗಳ ಬೀಡಿಯ ಕಿಡಿ, ಶಿಕಾರಿಯವರ ಬೆಂಕಿ, ರೆಸಾರ್ಟ್‌ಗಳ ಕ್ಯಾಂಪ್‌ಫೈರ್ ಕಾಡಿನಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗುತ್ತಿವೆ. ಅರಣ್ಯ ಇಲಾಖೆಯವರ ಮೇಲಿನ ದ್ವೇಷಕ್ಕೆ ಕಾಡಿಗೆ ಬೆಂಕಿ ಹಚ್ಚುವವರಿದ್ದರೆ, ಕಾಫಿ-ಟೀ ತೋಟಗಳನ್ನು ಒತ್ತುವರಿ ಮಾಡುವುದು ಸುಲಭವಾಗಲಿ ಎಂಬ ಕಾರಣಕ್ಕೆ ಕಿಡಿ ಹೊತ್ತಿಸುವವರೂ ಇದ್ದಾರೆ. ಸುಮ್ಮನೆ ಕಾಡಿಗೆ ಬೆಂಕಿ ಕೊಟ್ಟು ಖುಷಿಪಡುವ ವಿಕೃತ ಮನಸ್ಕರೂ ಇಲ್ಲದಿಲ್ಲ. ಒಮ್ಮೊಮ್ಮೆ ಯಾವುದೋ ಆಕಸ್ಮಿಕವು ಹಸಿರನ್ನು ಬಲಿ ತೆಗೆದುಕೊಳ್ಳುವುದೂ ಇದೆ.

‘ಬೇಸಿಗೆಯಲ್ಲಿ ಗುಡ್ಡಕ್ಕೆ ಬೆಂಕಿ ಕೊಟ್ಟರೆ ಅಲ್ಲಿರುವ ಒಣಹುಲ್ಲೆಲ್ಲಾ ಸುಟ್ಟುಹೋಗಿ, ಮಳೆ ಬಂದಾಗ ಹೊಸ ಹುಲ್ಲು ಚಿಗುರುತ್ತದೆ. ಆಗ ಹಸಿರು ಹುಲ್ಲನ್ನು ತಿನ್ನುವ ಕಾಡುಕೋಣ, ಜಿಂಕೆಯಂತಹ ಪ್ರಾಣಿಗಳು ನಮ್ಮ ಕೃಷಿ ಭೂಮಿಗೆ ಬರುವುದಿಲ್ಲ’ ಎಂಬ ನಂಬಿಕೆಯೊಂದು ಕಾಡಂಚಿನ ಹಳ್ಳಿಗಳ ರೈತರಲ್ಲಿದೆ. ಆದರೆ ಆ ಬೆಂಕಿ ಗುಡ್ಡದ ಮೇಲಿನ ಹುಲ್ಲನ್ನಷ್ಟೇ ಸುಡುವುದಿಲ್ಲ, ಜೊತೆಗಿರುವ ವಿವಿಧ ಜಾತಿಯ ಪೊದೆ ಸಸ್ಯಗಳು, ಕುರುಚಲು ಗಿಡಗಳು, ಗುಡ್ಡದ ಮೇಲೆ ಮಾತ್ರ ಬೆಳೆಯುವ ಮರಗಳನ್ನೂ ಆಹುತಿ ತೆಗೆದುಕೊಳ್ಳುತ್ತದೆ. ಪ್ರಾಣಿ ಪಕ್ಷಿಗಳು, ಅವುಗಳ ಮೊಟ್ಟೆ, ಮರಿಗಳು ಸಹ ಬಲಿಯಾಗುತ್ತವೆ. ಬೆಂಕಿಯು ಗುಡ್ಡದ ಶಿಖರವನ್ನು ತಲುಪಿದಾಗ, ರಭಸದಿಂದ ಬೀಸುವ ಗಾಳಿಯಿಂದ ಅದರ ವ್ಯಾಪ್ತಿ ಹೆಚ್ಚಾಗುತ್ತಾ ಪಕ್ಕದ ಕಣಿವೆಗೂ ಬೆಂಕಿ ವ್ಯಾಪಿಸಿಕೊಳ್ಳುತ್ತದೆ.

ಚಿಗುರುವ ಹುಲ್ಲನ್ನು ತಿಂದುಕೊಂಡು ಕಾಡುಕೋಣ ಗುಡ್ಡದಲ್ಲಿ ಇರುವುದಿಲ್ಲ! ಏಕೆಂದರೆ ಕಾಡುಕೋಣಗಳ ಎರಡನೇ ಆದ್ಯತೆ ಹುಲ್ಲು. ಅವುಗಳ ಮೊದಲ ಆದ್ಯತೆ ಏನಿದ್ದರೂ ಸೊಪ್ಪು. ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಕಾಟಿಗಳು 32 ವಿವಿಧ ಜಾತಿಯ ಸಸ್ಯಗಳನ್ನು ತಿನ್ನುತ್ತವೆ. ಅಲ್ಲದೆ ಅವುಗಳ ಆಹಾರ ಪದ್ಧತಿ ಜೌಗು ನೆಲವನ್ನು ಅವಲಂಬಿಸಿರುವುದರಿಂದ ಅವು ಕಣಿವೆಗೆ ಇಳಿದೇ ಇಳಿಯುತ್ತವೆ. ಇನ್ನು ಜಿಂಕೆ, ಕಡವೆಯಂತಹ ಸಸ್ಯಾಹಾರಿಗಳ ದಿನನಿತ್ಯದ ಓಡಾಟದ ವ್ಯಾಪ್ತಿ ಗುಡ್ಡದ ಬುಡದಿಂದ ತುದಿಯ ಹುಲ್ಲುಗಾವಲಿನವರೆಗೂ ವಿಸ್ತರಿಸಿರುತ್ತದೆ. ಕಾಲಕಾಲಕ್ಕೆ ಅವುಗಳ ಓಡಾಟದ ದಿಕ್ಕು ಅವುಗಳಿಗೆ ಅಗತ್ಯವಿರುವ ವಿವಿಧ ಮೇವುಗಳ ಹುಡುಕಾಟ, ನೀರಿಗಾಗಿ ಅಲೆದಾಟದಂತಹ ಹಲವು ಅಂಶಗಳನ್ನು ಒಳಗೊಂಡಿರುತ್ತದೆ. ಮನುಷ್ಯ ಏನೇ ಮಾಡಿದರೂ ಆ ಜೀವಿಗಳು ಹುಲ್ಲನ್ನು ಮಾತ್ರ ತಿಂದುಕೊಂಡು ಗುಡ್ಡದಲ್ಲೇ ಇರಲಾರವು. ಗುಡ್ಡದ ಹುಲ್ಲಿಗೆ ಬೆಂಕಿ ಕೊಡುವಾಗ ಪರಿಸರದ ಈ ಸತ್ಯ ನಮ್ಮ ವಿವೇಕವನ್ನು ಎಚ್ಚರಿಸಬೇಕು.

ಪಶ್ಚಿಮಘಟ್ಟದ ಹುಲ್ಲುಗಾವಲು, ಮಳೆಯ ನೀರನ್ನು ಹಿಡಿದಿಟ್ಟುಕೊಂಡು, ನಿರಂತರವಾಗಿ ಕೆಳಗಿನ ಶೋಲಾ ಅರಣ್ಯಕ್ಕೆ ಸರಬರಾಜು ಮಾಡುತ್ತದೆ. ಅಲ್ಲಿನ ಶಿಲಾಪದರಗಳಲ್ಲಿ ಸಂಗ್ರಹವಾಗುವ ಅದು ಮುಂದಿನ ಮಳೆಗಾಲದವರೆಗೂ ಕಣಿವೆಯಲ್ಲಿರುವ ಝರಿ-ತೊರೆಗಳನ್ನು ಜೀವಂತವಾಗಿಡುತ್ತದೆ. ಈ ಹುಲ್ಲುಗಾವಲಿಗೆ ಕೊಡುವ ಬೆಂಕಿ ಇಂತಹ ನೀರಿನ ಮೂಲಗಳನ್ನು ಬತ್ತಿಸಿಬಿಡುತ್ತದೆ. ಇದು ಜಲಚರಗಳು ಮತ್ತು ಮನುಷ್ಯನ ನೀರಿನ ಆಕರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಒಂದು ಗುಡ್ಡದಲ್ಲಿ ನಿರಂತರವಾಗಿ ಮೂರ್ನಾಲ್ಕು ಬಾರಿ ಕಾಳ್ಗಿಚ್ಚು ಕಾಣಿಸಿಕೊಂಡರೆ, ಅಲ್ಲಿನ ಹುಲ್ಲು ಮತ್ತು ಕುರುಚಲು ಗಿಡಗಳ ಬೇರು ಸಂಪೂರ್ಣ ಸುಟ್ಟುಹೋಗಿ, ಮತ್ತೆ ಚಿಗುರಲು ಅವಕಾಶವೇ ಇಲ್ಲದಂತಾಗುವ ಸಾಧ್ಯತೆಯೂ ಉಂಟು. ಅಂತಹ ಸಂದರ್ಭದಲ್ಲಿ ಮಳೆಗಾಲದಲ್ಲಿ ಮೇಘಸ್ಫೋಟದಂತಹ ವಿದ್ಯಮಾನ
ಗಳು ಘಟಿಸಿದರೆ ಅಲ್ಲಿ ಭೂಕುಸಿತ ಆಗಬಹುದು. ಅದರಿಂದ ಶೋಲಾ ಅರಣ್ಯಕ್ಕೆ, ನೀರಿನ ಮೂಲಗಳಿಗೆ, ಕಣಿವೆಯಲ್ಲಿರುವ ಕೃಷಿ ಭೂಮಿಗೆ ಅಪಾರ ಹಾನಿ ಉಂಟಾಗುತ್ತದೆ. ಹೀಗೆ, ಕೃಷಿಯನ್ನು ಉಳಿಸಿಕೊಳ್ಳಬೇಕೆಂದು ಬೆಟ್ಟಕ್ಕೆ ಕೊಡುವ ಬೆಂಕಿ, ಕೊನೆಗೆ ರೈತರ ಜೀವನೋಪಾಯವನ್ನೇ ಕಸಿದುಬಿಡುತ್ತದೆ.

ಕಾಡಿಗೆ ಬೆಂಕಿ ಕೊಡುವುದರ ಬಗೆಗೆ ಜನರಿಗಿರುವ ತಪ್ಪುಕಲ್ಪನೆಗಳನ್ನು ದೂರ ಮಾಡಬೇಕಾದುದು ಇಂದಿನ ತುರ್ತು ಅಗತ್ಯ. ಹಾಗೆಯೇ ಬಿರು ಬೇಸಿಗೆಯಲ್ಲಿ ಚಾರಣಕ್ಕೆ ನಿರ್ಬಂಧ ಹೇರಿ, ಪ್ರವಾಸಿಗರಲ್ಲಿ ಅರಿವು ಮೂಡಿಸಬೇಕಾಗಿದೆ. ಕಾಳ್ಗಿಚ್ಚಿನ ಬಗೆಗೆ ಹಾಡು, ನಾಟಕ, ವಿಡಿಯೊ, ಸಾಕ್ಷ್ಯಚಿತ್ರ, ಕರಪತ್ರಗಳು ಸೇರಿದಂತೆ ವಿವಿಧ ಸ್ವರೂಪಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಇಂದು ಆಗಬೇಕಿದೆ. ಪರಿಸರ ಸಂರಕ್ಷಣೆಯಲ್ಲಿ ಜನರನ್ನು ಒಳಗೊಳ್ಳುವುದರಿಂದ ಕಾಡಿಗೆ ಬೆಂಕಿ ಹಚ್ಚುವುದನ್ನು ತಡೆಯಬಹುದು. ವೈಜ್ಞಾನಿಕ ಸತ್ಯಗಳನ್ನು ನೆಲಮೂಲದ ಜನರಿಗೆ ಮನವರಿಕೆ ಮಾಡಿಕೊಡುವಂತಹ ರಚನಾತ್ಮಕ ಕೆಲಸಗಳು ನಮ್ಮ ಕಾಡುಗಳನ್ನು ಕಾಳ್ಗಿಚ್ಚಿನಿಂದ ಕಾಪಾಡಬಹುದು ಎಂಬುದು ಒಂದು ಭರವಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT