ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಉತ್ತಮ ಶಿಕ್ಷಕ ಮತ್ತು ಪ್ರಶಸ್ತಿಯ ಗೌರವ

ಉತ್ತಮ ಶಿಕ್ಷಕನ ಆಯ್ಕೆಗೆ ಪಾರದರ್ಶಕ ವ್ಯವಸ್ಥೆಯೊಂದು ರೂಪುಗೊಳ್ಳಬೇಕಾದ ತುರ್ತಿದೆ
Last Updated 15 ಜುಲೈ 2022, 19:31 IST
ಅಕ್ಷರ ಗಾತ್ರ

‘ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಕರೆದಿದ್ದಾರೆ ನೋಡು, ನೀನು ಈ ಶಾಲೇನ ಅದ್ಭುತವಾಗಿ ಕಟ್ಟಿದ ಪರಿಗೆ ನಿನಗೊಂದು ಪ್ರಶಸ್ತಿ ಬರಬೇಕಾದದ್ದು ಧರ್ಮ. ಅರ್ಜಿ ಹಾಕು’ ಅಂತ ಮೊನ್ನೆಯಷ್ಟೆ ನನ್ನ ಶಿಕ್ಷಕ ಮಿತ್ರರೊಬ್ಬರಿಗೆ ಹೇಳಿದೆ. ಇಡೀ ಊರು ಅವನ ಬಗ್ಗೆ ಹೆಮ್ಮೆಪಡುತ್ತದೆ, ವರ್ಗಾವಣೆ ಮಾಡಿಸಿಕೊಂಡು ಹೊರಟಿದ್ದ ಅವನನ್ನು ಕೋರಿ ಉಳಿಸಿಕೊಂಡಿದೆ. ಅವನ ಕೈಕೆಳಗೆ ಕಲಿತ ಮಕ್ಕಳು ಒಳ್ಳೆಯ ಬದುಕು ಕಟ್ಟಿಕೊಂಡಿದ್ದಾರೆ. ಶಾಲೆ ನಳನಳಿಸುತ್ತಿದೆ. ‘ಇಂತಹ ಪ್ರಾಮಾಣಿಕ ಮೇಷ್ಟ್ರೊಬ್ಬರನ್ನು ಗುರುತಿಸುವುದು ವ್ಯವಸ್ಥೆಯ ಕರ್ತವ್ಯ. ನೀನು ಅರ್ಜಿ ಹಾಕು’ ಅಂತ ಬಲವಂತ ಮಾಡಿದೆ. ಅವನು ನಕ್ಕು ಒಂದು ಮಾತು ಹೇಳಿದ:

‘ಬಹುಶಃ ಪ್ರಶಸ್ತಿ ಹುಚ್ಚು ನನ್ನ ತಲೆಗೆ ಏರಿದರೆ ಮಕ್ಕಳ ಕಾಳಜಿಗಿಂತ ಹೆಚ್ಚಾಗಿ ದಾಖಲೆ ನಿರ್ವಹಣೆ ಕಡೆ ನನ್ನ ಗಮನ‌ ಹೋಗುತ್ತೆ. ನಿನಗೆ ಗೊತ್ತಾ, ಈಗ ಶಿಕ್ಷಕರಿಗೆ ಕೊಡುವ ಪ್ರಶಸ್ತಿ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಲಾಬಿ ಮಾಡಿ ಪಡೆದುಕೊಂಡವರು ಅಂತಲೇ ನೋಡುತ್ತೆ ಸಮಾಜ. ಪ್ರಶಸ್ತಿಯೂ ಬೇಡ ಜನ ನನ್ನನ್ನು ಗುಮಾನಿಯಿಂದ ನೋಡುವುದೂ ಬೇಡ’ ಅಂದ. ನನ್ನ ಮನಸ್ಸು ಮ್ಲಾನವಾಯಿತು.

ನಾರ್ವೆಯ ಕವಯತ್ರಿ ಆನ್‌ಸೆಟ್ ಸಿಗ್ರಿಡ್ ನೆನಪಾದರು. ಅವರಿಗೆ ಆ ದೇಶದ ಅತ್ಯುನ್ನತ ಪ್ರಶಸ್ತಿ ಪ್ರಕಟವಾಗುತ್ತಲೇ ಪತ್ರಕರ್ತರು ಸಂದರ್ಶನಕ್ಕೆ ಅವರ ಮನೆಗೆ ತೆರಳಿದಾಗ ಸಿಗ್ರಿಡ್ ಹೇಳಿದರು: ‘ಕ್ಷಮಿಸಿ, ನನಗೀಗ ಮಾತನಾಡಲು ಸಮಯವಿಲ್ಲ. ನನ್ನ ಮಗುವನ್ನು ಮಲಗಿಸುತ್ತಿದ್ದೇನೆ. ನಾನು ಲಾಲಿ ಹಾಡಿದಾಗಲೇ ಅದು ಮಲಗುತ್ತದೆ. ಪ್ರಶಸ್ತಿ ಪಡೆದ ಸಂತೋಷ ನನಗಿದೆ. ಆದರೆ ಅದಕ್ಕಿಂತ ಹೆಚ್ಚಿನ ಸಂತೋಷ ನನ್ನ ಮಗುವಿನ ಪಾಲನೆ, ಪೋಷಣೆಯಲ್ಲಿ ಸಿಗುತ್ತದೆ...’ ಪ್ರಶಸ್ತಿ ತಲೆಗೇರಬಾರದು ಅನ್ನುವುದಕ್ಕೆ‌ ಇದೊಂದು ನಿದರ್ಶನ ಸಾಕು.

ವ್ಯವಸ್ಥೆಯಲ್ಲಿ ಭ್ರಷ್ಟತೆ ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ ಎಂಬುದು ದಿಟ. ಮಕ್ಕಳ ಮುಖದಲ್ಲಿ ಜ್ಞಾನದ ನಗು ತಂದವರನ್ನು ಪ್ರಾಮಾಣಿಕವಾಗಿ ಗುರುತಿಸಬೇಕಾದದ್ದು ವ್ಯವಸ್ಥೆಯ ಕರ್ತವ್ಯ. ಆದರೆ ಇಲ್ಲೂ ಲಾಬಿಗಳ ಸದ್ದು ಕೇಳುತ್ತಿದೆ. ಪ್ರಶಸ್ತಿ ತಂಟೆಗೆ ಹೋಗದೆ ತಮ್ಮ ಪಾಡಿಗೆ ತಾವು ಮಕ್ಕಳಿಗಾಗಿ ದುಡಿಯುತ್ತಿರುವವರು ಬಹಳಷ್ಟು ಜನರಿದ್ದಾರೆ. ಆದರೆ ಈ ಸಂಖ್ಯೆಯನ್ನು ಮೀರಿಸುವಷ್ಟು ಪ್ರಮಾಣದಲ್ಲಿ ಬರೀ ಪ್ರಶಸ್ತಿಗಾಗಿ ಕೆಲಸ ಮಾಡುವವರು ಇದ್ದಾರೆ. ಹೀಗಾದಾಗ ಪ್ರಶಸ್ತಿಯ ಗೌರವವಾದರೂ ಹೇಗೆ ಉಳಿದೀತು?

‘ಪಾಪ ಕೊಟ್ಟುಬಿಡಿ, ಇನ್ನೆರಡು ವರ್ಷ ಅಷ್ಟೇ, ಆಮೇಲೆ ರಿಟೈರ್‌ ಆಗ್ಬಿಡ್ತಾರೆ’, ‘ಕಳೆದ ಬಾರಿ ಆ ವರ್ಗಕ್ಕೆ ಕೊಟ್ಟಿದ್ದೀರಿ, ಈ ಸಾರಿ ನಮ್ಮ ವರ್ಗಕ್ಕೆ ಸಿಗಬೇಕು’, ‘ಪ್ರಶಸ್ತಿ ಏನ್ರೀ, ಕೊಡ್ಸೋಣ ಬಿಡ್ರಿ, ಒಂದು ಫೋನ್ ಅಷ್ಟೇ’ ಅನ್ನುವ ಕುತೂಹಲಕಾರಿ ಮಾತುಗಳು ನನ್ನ ಕಿವಿಗೆ ಬಿದ್ದಿವೆ.

ವ್ಯಕ್ತಿಯಿಂದ ಪ್ರಶಸ್ತಿಗೊಂದು ಗೌರವ ದೊರಕಬೇಕು, ಅದೇ ಸರಿಯಾದ ಕ್ರಮ. ವ್ಯಕ್ತಿಯಿಂದ ಪ್ರಶಸ್ತಿಗಿರುವ ಗೌರವ ಹಾಳಾದರೆ ಅದಕ್ಕಿಂದ ದುರ್ದೈವ ಮತ್ತೊಂದಿಲ್ಲ.‌ ಪಂಪ ಪ್ರಶಸ್ತಿ ಬಂದಾಗ ಪೂರ್ಣಚಂದ್ರ ತೇಜಸ್ವಿ ಅವರು ಆಡಿದ
ಮಾತುಗಳು ಇಲ್ಲಿ ನೆನಪಾಗುತ್ತಿವೆ: ‘ನಮ್ಮ ತಂದೆಯವರಿಗಾಗ್ಲಿ, ಶಿವರಾಮ ಕಾರಂತರಿಗಾಗ್ಲಿ ಪ್ರಶಸ್ತಿ ಬಂದಾಗ ಅದು ಪ್ರಶಸ್ತಿಗೇ ಮರ್ಯಾದೆ. ಯಾಕಂದ್ರೆ ಅಷ್ಟು ದೊಡ್ಡ ವ್ಯಕ್ತಿಗಳಿಗೆ ಮರ್ಯಾದೆ ಕೊಟ್ಟಾಗ ಮರ್ಯಾದೆ ಕೊಟ್ಟವರಿಗೇ ಮರ್ಯಾದೆ ಬರುತ್ತೆ’ ಅಂದಿದ್ದರು.

ಹಾಗೆಂದು ಪ್ರಶಸ್ತಿಗಳೆಲ್ಲಾ ಅನರ್ಹರ ಪಾಲಾಗುತ್ತವೆ ಎಂದು ಹೇಳಲಾಗುವುದಿಲ್ಲ. ಅದರಲ್ಲಿ ಅರ್ಹರೂ ಇರುತ್ತಾರೆ. ಆದರೆ ಸಮಾಜವು ಅನರ್ಹರು ಪಡೆದ ಪ್ರಶಸ್ತಿಯನ್ನು ನೋಡಿ ಅರ್ಹರನ್ನೂ ಅನುಮಾನದಿಂದಲೇ ನೋಡುತ್ತದೆ. ಅದಾಗಬಾರದು.

‘ನಾನು ಉತ್ತಮ ಶಿಕ್ಷಕ, ನನಗೊಂದು ಪ್ರಶಸ್ತಿ ಕೊಡಿ’ ಎಂದು ಅರ್ಜಿ ಬರೆದುಕೊಟ್ಟು ಕಾಯುವುದು ಎಂತಹ ಮುಜುಗರದ ವಿಷಯ. ‌ಎಷ್ಟೋ ಅರ್ಹ ಶಿಕ್ಷಕರು ಇಂತಹ ಮುಜುಗರದ ಕಾರಣ
ಕ್ಕಾಗಿಯೇ ಅರ್ಜಿ ಸಲ್ಲಿಸುವುದಿಲ್ಲ.‌ ಅರ್ಹರು ಅರ್ಜಿ ಸಲ್ಲಿಸದೇ ಇದ್ದಾಗ ಅದು ಅನರ್ಹರ ಪಾಲಾಗುವುದು ಅನಿವಾರ್ಯ. ಆಗ ಪ್ರಶಸ್ತಿಯ ಮೌಲ್ಯ‌ ಕುಸಿದು ಹೋಗುತ್ತದೆ.

ಉತ್ತಮ ಶಿಕ್ಷಕ ಪ್ರಶಸ್ತಿಯ ಆಯ್ಕೆಯ ವಿಧಾನ ಬದಲಾಗಬೇಕಿದೆ. ಅರ್ಜಿ ಹಾಕಿ ಪ್ರಶಸ್ತಿ ಕೊಡಿ ಅನ್ನುವುದು ಖಂಡಿತ ನಿಲ್ಲಬೇಕಾಗಿದೆ. ಒಂದು ಸೋಜಿಗವೆಂದರೆ, ಶಿಕ್ಷಕನಾದವನು ಪ್ರಶಸ್ತಿಗಾಗಿ ತನ್ನ ಸೇವೆಯ ಪೂರ್ತಿ ದಾಖಲೆಗಳನ್ನು ಜೋಡಿಸುತ್ತಾ ಕೂರಬೇಕೇ? ಅದ್ಭುತ ತಂತ್ರಜ್ಞಾನದ ಈ ಕಾಲದಲ್ಲಿ ಎಂತಹ ದಾಖಲೆಗಳನ್ನು ಬೇಕಾದರೂ ಒಂದು ದಿನದಲ್ಲಿ ಸಿದ್ಧಗೊಳಿಸಬಹುದು. ದಾಖಲೆಗಳಷ್ಟೇ ಶಿಕ್ಷಕನೊಬ್ಬ ಉತ್ತಮ ಎಂದು ನಿರ್ಧರಿಸಲಾರವು.

ಉತ್ತಮ ಶಿಕ್ಷಕನನ್ನು ಆಯ್ಕೆ ಮಾಡಲು ಪ್ರಾಮಾಣಿಕ ವ್ಯವಸ್ಥೆಯೊಂದು ರೂಪುಗೊಳ್ಳುವ ತುರ್ತಿದೆ. ಇದು ಬದಲಾಗದೇ ಹೋದರೆ
ಪ್ರಶಸ್ತಿ ತನ್ನ ಗೌರವವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಅಪಾಯವಿದೆ. ‘ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?’ ಎಂಬ ಮನಸ್ಸಿನ ಒಳ್ಳೆಯ ಶಿಕ್ಷಕರು ನಮ್ಮ ನಡುವೆ ತುಂಬಾ ಜನ ಇದ್ದಾರೆ. ಖಂಡಿತ ಅವರ ಹಾಡಿಗೆ ಒಂದು ಬಿರುದು, ಸನ್ಮಾನ ಸಲ್ಲಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT