ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ರೈಲಿನಲ್ಲಿ ಮಹಿಳೆ ಎಷ್ಟು ಸುರಕ್ಷಿತ?

ಮಹಿಳಾ ಸುರಕ್ಷೆಯು ಸ್ವಸ್ಥ ಸಮಾಜದ ಲಕ್ಷಣ ಮತ್ತು ಎಲ್ಲರ ಹೊಣೆ
ಡಾ. ಕೆ.ಎಸ್.ಚೈತ್ರಾ
Published 5 ಫೆಬ್ರುವರಿ 2024, 19:15 IST
Last Updated 5 ಫೆಬ್ರುವರಿ 2024, 19:15 IST
ಅಕ್ಷರ ಗಾತ್ರ

ಶಿವಮೊಗ್ಗ– ಬೆಂಗಳೂರು ನಡುವೆ ಸಂಚರಿಸುವ ರೈಲಿನಲ್ಲಿ ರಾತ್ರಿವೇಳೆ ಪ್ರಯಾಣಿಸುತ್ತಿದ್ದ ಅರಣ್ಯ ಭವನದ ಮಹಿಳಾ ಸಿಬ್ಬಂದಿಯೊಬ್ಬರ ಇತ್ತೀಚಿನ ಹತ್ಯಾ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಸಾಮಾನ್ಯ ದರ್ಜೆ ಬೋಗಿಯಲ್ಲಿ ಕೂರಲು ಜಾಗವಿರಲಿಲ್ಲ ಎಂಬ ಕಾರಣಕ್ಕೆ, ಖಾಲಿ ಇದ್ದ ಮಹಿಳಾ ಬೋಗಿಗೆ ಹೋಗಿ ಮಲಗಿದ್ದ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಆಭರಣ ಕದ್ದು, ಮೊಬೈಲ್ ಫೋನ್‌ ಸ್ವಿಚ್ಡ್‌ ಆಫ್ ಮಾಡಿ ಬ್ಯಾಗಿನಲ್ಲಿ ಇಡಲಾಗಿದೆ. ಗಾಬರಿ ಹುಟ್ಟಿಸುವ ಅಂಶವೆಂದರೆ, ಸುರಕ್ಷತೆಯ ದೃಷ್ಟಿಯಿಂದ ಮಹಿಳೆಯರಿಗಾಗಿಯೇ ಮೀಸಲಿದ್ದ ವಿಶೇಷ ಬೋಗಿಯಲ್ಲಿ ಈ ಬರ್ಬರ ಹತ್ಯೆ ನಡೆದಿರುವುದು. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.

ಕೆಳ, ಮಧ್ಯಮ ವರ್ಗದವರಿಗೆ, ಬಸ್ಸು ಮತ್ತು ರೈಲು ನೆಚ್ಚಿನ ಸಾರಿಗೆ ವ್ಯವಸ್ಥೆ. ಅದರಲ್ಲೂ ರೈಲು ಪ್ರಯಾಣವು ಸಮಯದ ಉಳಿತಾಯ ಮತ್ತು ಆರ್ಥಿಕ ದೃಷ್ಟಿಯಿಂದ ಅನುಕೂಲಕರ. ಬೋಗಿಯ ಒಳಗೆ ಓಡಾಡಲು ಅವಕಾಶವಿರುವ, ಶೌಚಾಲಯ ಇರುವ ರೈಲುಗಳು ಹಿರಿಯ ನಾಗರಿಕರಿಗೆ ಮತ್ತು ವಿಶೇಷವಾಗಿ ಮಹಿಳೆಯರು, ಮಕ್ಕಳಿಗೆ ವರದಾನವೇ ಸರಿ. ಹಾಗಾಗಿಯೇ ಬಸ್‍ಗಳಲ್ಲಿ ತಮಗೆ ಉಚಿತ ಸೌಲಭ್ಯ ಇದ್ದರೂ ರೈಲುಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಹೀಗಿರುವಾಗ, ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂಬ ಸುದ್ದಿಯ ಜತೆಗೇ ಈ ಪ್ರಕರಣ! ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಿ, ಅವರಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದರೊಂದಿಗೆ ಇದಕ್ಕೆ ಕಾರಣವಾಗುವ ಅಂಶಗಳನ್ನೂ ಗಮನಿಸಬೇಕು.

ಬಹುತೇಕ ರೈಲುಗಳಲ್ಲಿ ಮಹಿಳೆಯರಿಗೆ ವಿಶೇಷ ಬೋಗಿಗಳಿವೆ. ಎಂಜಿನ್ ಹಿಂದೆ ಅಥವಾ ಕಡೆಯ ಭಾಗದಲ್ಲಿ ಈ ಬೋಗಿಗಳಿರುತ್ತವೆ. ಕೆಲ ವರ್ಷಗಳ ಹಿಂದೆ ಈ ಬೋಗಿಗಳನ್ನು ಮಧ್ಯದಲ್ಲಿ ಅಳವಡಿಸಬೇಕು ಎಂಬ ಆದೇಶ ಬಂದರೂ ಅದು ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಹೀಗಾಗಿ ನಿಲ್ದಾಣ, ಕ್ರಾಸಿಂಗ್ ಬಂದಾಗ ಇವು ಪ್ಲ್ಯಾಟ್‍ಫಾರ್ಮ್‌ನಿಂದ ದೂರದಲ್ಲಿ, ಕತ್ತಲಿನಲ್ಲಿ ನಿಂತಿರುತ್ತವೆ. ಹತ್ತಲು, ಇಳಿಯಲು ಮಹಿಳೆಯರಿಗೆ ಕಷ್ಟ, ದರೋಡೆಗೆ ಅತ್ಯಂತ ಪ್ರಶಸ್ತ ತಾಣಗಳು. ಹಾಗಾಗಿ, ಮಹಿಳಾ ಬೋಗಿಯನ್ನು ಮಧ್ಯದಲ್ಲಿ ಅಳವಡಿಸುವುದು ಕಡ್ಡಾಯವಾಗಬೇಕು. ಹಾಗೆಯೇ ಸಾಮಾನ್ಯವಾಗಿ ರೈಲಿನಲ್ಲಿ ಬೋಗಿಗಳ ನಡುವೆ ಸಂಪರ್ಕವಿರುತ್ತದೆ. ಆದರೆ ಮಹಿಳಾ ಬೋಗಿಗೆ ಬೇರೆ ಬೋಗಿಗಳೊಂದಿಗೆ ಸಂಪರ್ಕವಿಲ್ಲ. ಪುರುಷರು ಪ್ರವೇಶಿಸಬಾರದು ಎನ್ನುವ ಸದುದ್ದೇಶ ಇದರ ಹಿಂದಿದ್ದರೂ ಮಹಿಳೆಯರ ಸಂಖ್ಯೆ ಕಡಿಮೆ ಇದ್ದಾಗ ಇತರರೊಂದಿಗೆ ಸಂಪರ್ಕವೇ ಇಲ್ಲದಿರುವುದು ಅಪಾಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಮಹಿಳಾ ಸುರಕ್ಷತೆಯನ್ನು ಗಮನದಲ್ಲಿಟ್ಟು ರೈಲ್ವೆ ಸಂರಕ್ಷಣಾ ಪಡೆಯು 2018ರಲ್ಲಿ ‘ಆಪರೇಷನ್ ಶಕ್ತಿ’ ಎನ್ನುವ ಸುರಕ್ಷಾ ಕ್ರಮವನ್ನು ಅಳವಡಿಸಿಕೊಂಡಿತ್ತು. ಮಹಿಳಾ ಪ್ರಯಾಣಿಕರ ಟಿಕೆಟ್ ವಿವರವನ್ನು ದಿನವೂ ಸಂಗ್ರಹಿಸಿ, ಅದಕ್ಕೆ ತಕ್ಕಂತೆ, ಅಗತ್ಯವಿರುವ ಬೋಗಿ ಮತ್ತು ಅಸುರಕ್ಷಿತ ಸ್ಥಳಗಳಲ್ಲಿ ಪೊಲೀಸರನ್ನು ಉಸ್ತುವಾರಿಗಾಗಿ ನೇಮಿಸಲಾಗಿತ್ತು. ಇದಲ್ಲದೆ ಅಹಿತಕರ ಘಟನೆ ನಡೆದಲ್ಲಿ ಮಹಿಳಾ ಪ್ರಯಾಣಿಕರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಮತ್ತು ಅಧಿಕಾರಿಗಳ ಬಗ್ಗೆ ಮಾಹಿತಿ ನೀಡುವ ಜಾಗೃತಿ ಕಾರ್ಯಕ್ರಮಗಳು ನಡೆದಿದ್ದವು. ಹಾಗೆಯೇ ಈ ವಿಶೇಷ ಬೋಗಿಗಳನ್ನು ಬಳಸುತ್ತಿದ್ದ ಪುರುಷರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಇವೆಲ್ಲವೂ ಸರಿ, ಆದರೆ ರೈಲು ಪ್ರಯಾಣ ಮಾತ್ರವಲ್ಲ ರೈಲು ನಿಲ್ದಾಣದಲ್ಲಿಯೂ ಮಹಿಳೆಯರ ಮೇಲೆ ಅನೇಕ ರೀತಿಯ ಕಿರುಕುಳ, ದೌರ್ಜನ್ಯ ನಡೆಯುತ್ತವೆ. ಹೀಗಾಗಿ, ಸರಿಯಾದ ದೀಪದ ವ್ಯವಸ್ಥೆ, ಕಾಯಲು ಸೂಕ್ತ ಸ್ಥಳ, ಉತ್ತಮ ಶೌಚಾಲಯಗಳ ವ್ಯವಸ್ಥೆ ಜತೆ ಇವೆಲ್ಲದರ ಬಗ್ಗೆ ಗಮನಹರಿಸಲು ‍ಪೊಲೀಸರು, ರೈಲ್ವೆ ಸಿಬ್ಬಂದಿ ಇರುವುದು ಅವಶ್ಯಕ.

ಪ್ರಸ್ತುತ ರಾತ್ರಿ ರೈಲು ಪ್ರಯಾಣದ ವೇಳೆ ಕೆಲವು ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ಆಗಾಗ್ಗೆ ಮಹಿಳಾ ಪೊಲೀಸರು ಬರುತ್ತಾರೆ. ಅದೂ ನೆಪಕ್ಕೆ ಮಾತ್ರ. ಮುಖ್ಯವಾಗಿ ಬೇಕಾಗಿರುವುದು ರಾತ್ರಿಯಿಡೀ ಪ್ರಯಾಣಿಸಬೇಕಾದ ಸಂದರ್ಭದಲ್ಲಿ. ಹಾಗಾಗಿ, ಪ್ರಯಾಣದ ಸಂದರ್ಭದಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಮೂಲಕ ಆಗುಹೋಗುಗಳನ್ನು ಗಮನಿಸುವ ವ್ಯವಸ್ಥೆ, ಕೆಲಸ ಮಾಡುವ ಸಹಾಯವಾಣಿ, ತುರ್ತು ಅಗತ್ಯದ ಒತ್ತುಗುಂಡಿ, ಸುರಕ್ಷಿತ ಶೌಚಾಲಯಗಳ ಜತೆ ಈ ಬೋಗಿಗೆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎನ್ನುವುದು ಬಹುತೇಕರ ಬೇಡಿಕೆ.

ಇವೆಲ್ಲವನ್ನು ಮಾಡಿದರೂ ಮಹಿಳೆಯರು ರಾತ್ರಿ ಒಬ್ಬರೇ ಪಯಣಿಸುವಾಗ ಕೆಲವು ಅಂಶಗಳನ್ನು ಗಮನದಲ್ಲಿಡುವುದು ಸೂಕ್ತ. ಬೆಲೆಬಾಳುವ ಆಭರಣ, ದುಬಾರಿ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳು ಕಳ್ಳರ ಗಮನ ಸೆಳೆಯುತ್ತವೆ. ಹೀಗಾಗಿ ಅವುಗಳ ಬಗ್ಗೆ ಎಚ್ಚರಿಕೆ ಬೇಕು. ರಾತ್ರಿಯ ವೇಳೆ ಶೌಚಾಲಯಕ್ಕೆ ಹೋಗುವಾಗ ಫೋನ್‌ ಮತ್ತು ಪರ್ಸನ್ನು ಜೊತೆಗೆ ಒಯ್ಯುವುದು ಒಳ್ಳೆಯದು. ತುರ್ತು ಪರಿಸ್ಥಿತಿ ಬಂದಾಗ ಇತರರನ್ನು ಸಂಪರ್ಕಿಸಲು ಫೋನ್ ಅಗತ್ಯ. ಯಾವುದೇ ಕಾರಣಕ್ಕೆ ಸೀಟನ್ನು ಬಿಟ್ಟು ಹೋಗುವ ಸಂದರ್ಭ ಬಂದಲ್ಲಿ ರೈಲು ನಿಂತಾಗ, ನಿಧಾನವಾದಾಗ ಮಾಡಬಾರದು. ಕಳ್ಳರಿಗೆ ಒಳ ಪ್ರವೇಶಿಸಲು ಮತ್ತು ನಂತರ ತಪ್ಪಿಸಿಕೊಳ್ಳಲು ಸಹಾಯಕವಾದ್ದರಿಂದ ಬಹುತೇಕ ಕಳ್ಳತನದ ಪ್ರಕರಣಗಳು ಹೆಚ್ಚು ನಡೆಯುವುದು ಈ ಸಂದರ್ಭದಲ್ಲಿಯೇ! ಹಾಗೆಯೇ ನಿಲ್ದಾಣದಲ್ಲಿ ಅಪರಿಚಿತರ ಬಳಿ ಅನಗತ್ಯವಾದ ಮಾತು, ವೈಯಕ್ತಿಕ ವಿವರ ನೀಡುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ.

ರೈಲಿನಲ್ಲಿ ಮಾತ್ರವಲ್ಲ, ಮಹಿಳಾ ಸುರಕ್ಷೆಯು ಸ್ವಸ್ಥ ಸಮಾಜದ ಲಕ್ಷಣ ಮತ್ತು ಎಲ್ಲರ ಹೊಣೆ ಎಂದು ಅರಿವಾಗುವ ದಿಸೆಯಲ್ಲಿ ನಾವು ಕ್ರಮಿಸಬೇಕಾದ ಹಾದಿ ಬಹಳ ದೂರವಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT