ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಇಂಗ್ಲಿಷ್‌ ಕಲಿಕೆ: ಹೊಣೆ ಅರಿಯಬೇಕಿದೆ

Published 2 ಆಗಸ್ಟ್ 2023, 0:17 IST
Last Updated 2 ಆಗಸ್ಟ್ 2023, 0:17 IST
ಅಕ್ಷರ ಗಾತ್ರ

ಐಷಾರಾಮಿ ಜೀವನದ ಕನಸಿನ ಸಾಕಾರಕ್ಕೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದೊಂದೇ ದಾರಿ ಎಂಬ ಗಾಢವಾದ ನಂಬಿಕೆ ಸಮಾಜದಲ್ಲಿದೆ. ಆದರೆ ವಾಸ್ತವ ಸಂಗತಿ ಸಂಪೂರ್ಣ ಭಿನ್ನವಾಗಿದೆ.

‘ಹಿಗ್ಗಿತ್ತು ಕನ್ನಡ, ಕುಗ್ಗುತ್ತಿದೆ ಕನ್ನಡ’ ಎಂಬ ವಸಂತ ಶೆಟ್ಟಿ ಅವರ ಲೇಖನ (ಸಂಗತ, ಜುಲೈ 26)  ಚಿಂತನಾರ್ಹವಾಗಿದೆ. ‘ಕನ್ನಡವು ಶಾಲಾ ಶಿಕ್ಷಣ ಮಾಧ್ಯಮ ಆಗಿರುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಮೂರೂ ಪ್ರಮುಖ ಪಕ್ಷಗಳ ಜನಪ್ರತಿನಿಧಿಗಳಲ್ಲಿ ಯಾವ ಅಭಿಪ್ರಾಯಭೇದವೂ ಇದ್ದಂತಿಲ್ಲ. ಎಡ-ನಡು-ಬಲ ಪಂಥದ ಒಲವಿನ ಎಲ್ಲ ನಾಯಕರಲ್ಲೂ ಇದೊಂದು ವಿಷಯದಲ್ಲಿ ‘ಇಂಗ್ಲಿಷೇ ಪರಿಹಾರ’ ಅನ್ನುವ ಕುರುಡು ನಂಬಿಕೆ ಆಳವಾಗಿ ಬೇರೂರಿದೆ’ ಎಂಬ ಮಾತೂ ಸತ್ಯವಾದುದಾಗಿದೆ. ಅಷ್ಟೇ ಅಲ್ಲದೆ, ಮೇಲ್ವರ್ಗದವರು ಶಾಲಾ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ, ನಂತರ ಬರಲಿರುವ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗಬಹುದು, ಆದರೆ ತಳಸಮುದಾಯಗಳಿಂದ ಬರುವ ಮಕ್ಕಳಿಗೆ ಅದು ಸಾಧ್ಯವಾಗದೆ ಹಿಂದುಳಿದುಬಿಡುತ್ತಾರೆ ಎಂಬ ಭಯವೂ ಬಹುಮಂದಿಯಲ್ಲಿದೆ.

ಒಟ್ಟಿನಲ್ಲಿ, ಇಂಗ್ಲಿಷ್ ಮಾಧ್ಯಮದಿಂದ ಮಾತ್ರ ಬದುಕು ಬಂಧುರ ಎಂಬ ಭ್ರಮೆ ಒಂದು ಸಮೂಹಸನ್ನಿಯಾಗಿ ನಮ್ಮ ಸಮಾಜವನ್ನು ಕಾಡುತ್ತಿದೆ ಎನ್ನಬಹುದು. ಜನರ ಈ ಹುಚ್ಚನ್ನು ತಮ್ಮ ಲಾಭಕ್ಕಾಗಿ ಮತ್ತಷ್ಟು ಹೆಚ್ಚು ಮಾಡುವ ಎಲ್ಲ ತಂತ್ರಗಳೂ ಬೇರೆ ಬೇರೆ ನೆಲೆಗಳಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿವೆ.

ವಾಸ್ತವದಲ್ಲಿ ಶಿಕ್ಷಣ ಹಾಗೂ ಬದುಕಿನ ಬಗೆಗಿನ ಪರಿಕಲ್ಪನೆಯ ಕಾರಣವಾಗಿ ಈ ಮಾಧ್ಯಮದ ಆಯ್ಕೆ ಒಡಮೂಡುತ್ತದೆ ಎಂದು ಹೇಳಬಹುದು. ಗರಿಷ್ಠ ಅಂಕ ಗಳಿಸಿ, ಆ ಮೂಲಕ ಒಳ್ಳೆಯ ಸಂಬಳವನ್ನು ತಂದುಕೊಡುವ ಉದ್ಯೋಗವನ್ನು ಪಡೆಯುವುದೇ ಶಿಕ್ಷಣದ ಗುರಿ ಎಂದು ಅನೇಕರು ಭಾವಿಸಿದ್ದಾರೆ. ಕಾರು, ಬಂಗಲೆಗಳನ್ನು ಸಂಪಾದಿಸಿ ಐಷಾರಾಮಿ ಜೀವನ ನಡೆಸುವುದು ಬದುಕಿನ ಗಂತವ್ಯ ಎಂದು ಕನಸಿನ ಗೋಪುರಗಳನ್ನು ಕಟ್ಟಿಕೊಳ್ಳುತ್ತಾರೆ. ಇದೆಲ್ಲ ಇಂಗ್ಲಿಷ್ ಮಾಧ್ಯಮದಿಂದ ಮಾತ್ರ ಸಾಧ್ಯವಾಗಬಲ್ಲದು ಎಂಬ ಗಾಢವಾದ ನಂಬಿಕೆ ಇಡೀ ಸಮಾಜವನ್ನು ಆವರಿಸಿಬಿಟ್ಟಿದೆ. ವಾಸ್ತವ ಸಂಗತಿ ಸಂಪೂರ್ಣ ಭಿನ್ನವಾಗಿದ್ದರೂ ಅದನ್ನು ಅರಿತುಕೊಳ್ಳಲು ಬುದ್ಧಿ ಪ್ರಯತ್ನಿಸುವುದೇ ಇಲ್ಲ. ಇಂದು, ಶಿಶುವಿಹಾರದಿಂದ ಪದವಿಯವರೆಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಅಭ್ಯಾಸ ಮಾಡಿರುವವರಲ್ಲಿ ಅನೇಕರು ಯಾವುದೇ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಬೇಕಾದ ಕೌಶಲವನ್ನೇ ಹೊಂದಿಲ್ಲದಿರುವುದನ್ನು ನೋಡುತ್ತಿದ್ದೇವೆ.

ಬಿ.ಕಾಂ., ಎಂ.ಕಾಂ., ಎಂ.ಬಿ.ಎ. ಮಾಡಿದ್ದರೂ ಕ್ರೆಡಿಟ್‌, ಡೆಬಿಟ್‌ಗಳ ಬಗ್ಗೆ ನಿಖರವಾದ ಅರಿವಿಲ್ಲದಿರುವುದು ಸಂದರ್ಶಕರ ಅನುಭವಕ್ಕೆ ಬರುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಇದೇ ಸ್ಥಿತಿ ಇದೆ. ಕೆಲಸಕ್ಕೆ ಅರ್ಜಿ ಸಲ್ಲಿಸುವವರಲ್ಲಿ ಶೇ 20ರಷ್ಟು ಮಂದಿ ಕೂಡ ಕೆಲಸಕ್ಕೆ ಬೇಕಾದ ಕೌಶಲ ಹೊಂದಿರುವುದಿಲ್ಲವಂತೆ. ಶಿಕ್ಷಕರ ನೇಮಕಾತಿ ಪರೀಕ್ಷೆಗಳಲ್ಲಿ ಸಹ ಶೇ 20ರಿಂದ ಶೇ 30ರಷ್ಟು ಮಂದಿ ಮಾತ್ರ ಅರ್ಹತೆ ಪಡೆದಿರುವುದಕ್ಕೆ ಸಂಬಂಧಿಸಿದ ವಿವರಗಳು ವರದಿಯಾಗಿವೆ. ಕನಿಷ್ಠ ಆಂಗ್ಲಭಾಷಾ ಪ್ರೌಢಿಮೆಯೂ ಇರುವುದಿಲ್ಲ ಎಂಬುದು ಕಟು ವಾಸ್ತವ.

ಐಐಟಿಯಂತಹ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಪ್ರವೇಶ ಪರೀಕ್ಷೆಯಲ್ಲಿ ಶೇ 2ರಷ್ಟು ಮಂದಿ ಮಾತ್ರ ಅರ್ಹರಾಗುತ್ತಾರಂತೆ. ಹೀಗಾಗಿ ಇಂಗ್ಲಿಷ್ ಮಾಧ್ಯಮವು ವಿಫಲವಾಗಿದೆ. ಆದರೆ ಅದರ ಬಗ್ಗೆ ಸರಿಯಾದ ಚರ್ಚೆ ಆಗುತ್ತಿಲ್ಲ. ಶಿಕ್ಷಣದ ಸಾಫಲ್ಯದ ಮೂಲ ಕಾರಣ ಇಂಗ್ಲಿಷ್‌ ಮಾಧ್ಯಮ ಅಲ್ಲ. ಪ್ರಾಥಮಿಕ ಶಿಕ್ಷಣದಿಂದ ಮೊದಲ್ಗೊಂಡು ಸಮರ್ಥ ಶಿಕ್ಷಕರಿಂದ ಬೋಧನೆ ನಡೆಯಬೇಕಾಗಿದೆ. ಎಲ್ಲ ಶಾಲೆ–ಕಾಲೇಜುಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಬೋಧಕರು ಇರಬೇಕು. ಪ್ರಯೋಗಶಾಲೆ, ಗ್ರಂಥಾಲಯ, ಕೊಠಡಿಗಳು, ಪೀಠೋಪಕರಣದಂತಹ ನಾನಾ ಅಂಶಗಳಲ್ಲಿ ಯಾವ ಕೊರತೆಯೂ ಇರಬಾರದು. ಜೊತೆಗೆ ಪೋಷಕರೂ ತಮ್ಮ ಯಥೋಚಿತ ಜವಾಬ್ದಾರಿಯನ್ನು ನಿರ್ವಹಿಸಲೇಬೇಕು. ಎಲ್ಲಕ್ಕಿಂತ ಮಿಗಿಲಾಗಿ ಎಲ್ಲರೂ ಸೇರಿ ಮಕ್ಕಳಲ್ಲಿ ಜ್ಞಾನದ ದಾಹವನ್ನು ಬೆಳೆಸಬೇಕು. ಇಂತಹ ಪೂರಕ ವಾತಾವರಣ ನಿರ್ಮಾಣವಾದರೆ ಕನ್ನಡ ಮಾಧ್ಯಮವು ಇಂಗ್ಲಿಷ್ ಮಾಧ್ಯಮಕ್ಕಿಂತ ಉತ್ತಮ ಫಲವನ್ನು ನೀಡುತ್ತದೆ. ಒಂದು ಭಾಷೆಯಾಗಿ ಇಂಗ್ಲಿಷ್ ಅನ್ನು ಕಲಿಸುವುದನ್ನು ಸಹ ಅಷ್ಟೇ ಜವಾಬ್ದಾರಿಯಿಂದ ಮಾಡಬೇಕಾಗುತ್ತದೆ.

ಶಿಕ್ಷಣದಲ್ಲಿ ಗರಿಷ್ಠ ಅಂಕ ಗಳಿಕೆಗಿಂತ ವಿಷಯ ಜ್ಞಾನ ಚೆನ್ನಾಗಿ ಮನದಟ್ಟಾಗಬೇಕು. ಪಠ್ಯಪುಸ್ತಕಗಳಲ್ಲಿರುವ ವಿಷಯ ಮಕ್ಕಳ ಮನಸ್ಸನ್ನು ಮುಟ್ಟಬೇಕು ಮತ್ತು ತಟ್ಟಬೇಕು ಎಂಬ ಸತ್ಯ ಗೊತ್ತಿರುವವರು ಕನ್ನಡ ಮಾಧ್ಯಮವನ್ನೇ ಆರಿಸುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳೇ ಹೆಚ್ಚಿನ ಮಟ್ಟಿಗೆ ಗುಣಮಟ್ಟದಲ್ಲಿ ಕಳಪೆ ದರ್ಜೆಯ ಶಾಲೆಗಳಾಗಿವೆ. ಇವುಗಳನ್ನು ಉತ್ತಮಗೊಳಿಸುವುದು ಸರ್ಕಾರ ಹಾಗೂ ಸಮಾಜದ ಜವಾಬ್ದಾರಿ. ಈ ದೋಷವನ್ನು ಕನ್ನಡ ಮಾಧ್ಯಮದ ಮೇಲೆ ಹಾಕಿರುವುದು ಸಹ ಒಂದು ರೀತಿಯ ಸಂಚೇ ಇರಬೇಕು.

ಮನುಷ್ಯನ ಬದುಕು ಸಾರ್ಥಕವಾಗುವುದು ಅವನು ರಾಶಿ ಹಾಕುವ ದುಡ್ಡಿನಿಂದ ಅಲ್ಲ. ಐಷಾರಾಮಿ ಜೀವನದಿಂದಲ್ಲ. ಕಾರು– ಬಂಗಲೆಗಳಿಂದಲ್ಲ. ಅವನ ಒಳ್ಳೆಯತನದಿಂದ, ಜ್ಞಾನಾರ್ಜನೆಯಿಂದ, ದಕ್ಷತೆಯನ್ನು ಹೆಚ್ಚಿಸಿಕೊಳ್ಳುವುದರಿಂದ, ಪ್ರಾಮಾಣಿಕವಾಗಿ ಬದುಕುವುದರಿಂದ. ಪರೋಪಕಾರ, ಸಮಾಜಸೇವೆ, ನ್ಯಾಯವಾದ ಮತ್ತು ಸತ್ಯವಾದ ರೀತಿಯಲ್ಲಿನ ಕರ್ತವ್ಯಪಾಲನೆಯಿಂದ. ಸತ್ಯ ಹಾಗೂ ಸರಳ ಬದುಕಿನ ಶ್ರೇಷ್ಠತೆಯನ್ನು ಜೀವನ ಮೌಲ್ಯಗಳೆಂದು ಅರಿತವರು ಕನ್ನಡ ಮಾಧ್ಯಮವನ್ನು ಆರಿಸಿಕೊಳ್ಳಲು ಹೆದರುವುದಿಲ್ಲ. ಆದರೆ ಈ ಆದರ್ಶ ಸಮಾಜದ ನಿರೀಕ್ಷೆ ತಿರುಕನ ಕನಸು. ಆದ್ದರಿಂದ ಎಸ್ಎಸ್ಎಲ್‌ಸಿವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವುದೊಂದೇ ದಾರಿ. ಇಂದಿನ ರಾಜಕೀಯ ವಾತಾವರಣದಲ್ಲಿ ಅದೂ ಗಗನಕುಸುಮವೇ ಆದೀತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT