ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸರಕು, ಖರೀದಿ ಮತ್ತು ಹಕ್ಕು

Published 25 ಸೆಪ್ಟೆಂಬರ್ 2023, 0:24 IST
Last Updated 25 ಸೆಪ್ಟೆಂಬರ್ 2023, 0:24 IST
ಅಕ್ಷರ ಗಾತ್ರ

ವ್ಯಾಪಾರಿ-– ಬಳಕೆದಾರ ಸಂಬಂಧದ ಯಶಸ್ಸು ಇಬ್ಬರಿಗೂ ಹಿತಕರ

‘ಪಾರ್ಸಲ್’ ಎಂದು ಹೇಳಿ ಒಂದು ಎಳನೀರು ಖರೀದಿಸಿದ್ದೆ. ಬೈಕಿಗೆ ಲಗತ್ತಿಸಲು ಸಾಧ್ಯವಾಗುವಂತೆ ನಾರಿನ ಕುಣಿಕೆಯಿರಲಿ ಅಂದೆ. ಅದಕ್ಕೆ ಆ ವ್ಯಾಪಾರಿ, ಜೋಡಿ ಎಳನೀರು ಕೊಂಡರೆ ಮಾತ್ರ ಕುಣಿಕೆ ಎಂದವನೆ ಮತ್ತೊಬ್ಬ ಗಿರಾಕಿಯತ್ತ ಗಮನ ಹರಿಸಿದ್ದ! ವ್ಯಾಪಾರಿಗಳು ತಮ್ಮಲ್ಲಿಗೆ ಬರುವ ಬಳಕೆದಾರರನ್ನು ಇಂದ್ರ, ಚಂದ್ರರಂತೆ ಪರಿಗಣಿಸುವುದು ಬೇಡ, ಸ್ನೇಹಿತರಂತೆ ಕಂಡರೆ ಸಾಕು. ಬಂದವರು ಎಷ್ಟು ಮೊತ್ತದ ಮಾಲು ಖರೀದಿಸುತ್ತಾರೆ, ತಮಗೆ ಅವರ ವಹಿವಾಟಿನಿಂದ ಬರುವ ಲಾಭವೆಷ್ಟು ಎನ್ನುವುದೇ
ವ್ಯಾಪಾರಿಗಳಿಗೆ ಮುಖ್ಯವಾಗಬಾರದು.

ಗ್ರಾಹಕನೇ ವಹಿವಾಟಿನ ದೊರೆ ಎನ್ನುವುದು ಅರ್ಥಶಾಸ್ತ್ರದ ಮೊದಲ ಪಾಠ. ಬಳಕೆದಾರರು ಮಾರುಕಟ್ಟೆಯಲ್ಲಿ ವಸ್ತು ವೈವಿಧ್ಯಗಳೊಂದಿಗೆ ಹಕ್ಕುಗಳನ್ನೂ ಕೊಳ್ಳುತ್ತಾರೆ. ಕೊಳ್ಳುವ ಸರಕಿನ ಗುಣಮಟ್ಟ, ಪ್ರಮಾಣ, ಸಾಮರ್ಥ್ಯ, ತಾಜಾತನ, ಬೆಲೆ ಇವೆಲ್ಲವೂ ಅವರಿಗೆ ಅಹುದಹುದು ಎನ್ನುವಂತಿರ
ಬೇಕು. ಈಚೀಚೆಗೆ ವ್ಯಾಪಾರಿ ದೃಷ್ಟಿಯದೇ ಮೇಲುಗೈ ಯಾಗುತ್ತಿದೆ. ಬಳಕೆದಾರನೇ ಲಾಭ ತರುವ ಸರಕಾಗಿದ್ದಾನೆ!

ಪದಾರ್ಥಗಳ ಗುಣಮಟ್ಟ ಬರುಬರುತ್ತ ಅಧೋಗತಿಗಿಳಿಯುತ್ತಿದೆ. ಟೂತ್‌ಪೇಸ್ಟ್ ಟ್ಯೂಬಿನಲ್ಲಿ ಗಾಳಿಯದೇ ಕಾರುಬಾರು! ಕೊಂಡ ನಂತರವೂ ಹಣ್ಣುಗಳಲ್ಲಿ ಉತ್ತಮವಾದವನ್ನು ಆರಿಸಿಕೊಳ್ಳಬೇಕು. ಅಂಗಡಿ, ಮಳಿಗೆಯಲ್ಲಿ ಯಾವುದೇ ಪದಾರ್ಥ ಕೊಳ್ಳಲು ಮುಂದಾದರೆ, ಬಹುತೇಕ ‘ಚಿಲ್ಲರೆ ಸರಿಯಾಗಿ ಕೊಡಿ’ ಎನ್ನುವ ತಾಕೀತು. ವ್ಯಾಪಾರಿಗಳಿಗೆ ಮಾತ್ರ ಚಿಲ್ಲರೆಗೆ ಬರವೇ? ಅದು ಗ್ರಾಹಕರಿಗೆ ಇರದೇ? ಹಾಗೆ ನೋಡಿದರೆ ಚಿಲ್ಲರೆ ಇಟ್ಟುಕೊಳ್ಳುವಲ್ಲಿ ಸಾವಿರಾರು ರೂಪಾಯಿಗಳ ವಹಿವಾಟು ನಡೆಸುವ ವ್ಯಾಪಾರಿಗಳು ಒಂದು ಹೆಜ್ಜೆ ಮುಂದಿರಬೇಕು. ಕೊಳ್ಳುವವರು ನಾಣ್ಯಗಳ ಚೀಲದೊಂದಿಗೆ ಮಾರುಕಟ್ಟೆಗೆ ಬರುವರೆಂಬ ನಿರೀಕ್ಷೆಯೇ?

ಅಮೆರಿಕದಲ್ಲಿ, ಸಿಂಗಪುರ, ದುಬೈನಂತಹ ಕಡೆ ಟ್ಯಾಕ್ಸಿಯವ, ಟಾಕೀಸು ಅಥವಾ ಮಾಲ್‍ನ ಸಿಬ್ಬಂದಿ ಕೊನೆಯ ಸೆಂಟ್ ತನಕ ಗ್ರಾಹಕರಿಗೆ ಚಿಲ್ಲರೆ ಮರಳಿಸುತ್ತಾರೆ. ನಮ್ಮಲ್ಲೂ ಇಂಥ ನಿಯತ್ತು, ನಿಖರತೆಯ ವ್ಯವಸ್ಥೆಯಿರಲು ಏನಡ್ಡಿ? ನೋಡಿ, ಇಷ್ಟು ಚಿಲ್ಲರೆ ಉಳಿದಿದೆ, ಬೇರೆ ಏನಾದರೂ ಖರೀದಿಸಿಬಿಡಿ ಎನ್ನುವ ಪುಕ್ಕಟೆ ಸಲಹೆ ಬಳಕೆದಾರನಿಗೆ ಸಂದಿರುತ್ತದೆ. ಪಾದರಕ್ಷೆಗಳ ಬೆಲೆಯೋ ಬರೀ ‘499’, ‘999’. ಕಾಫಿಪುಡಿಯೊಂದಿಗೆ ಸಕ್ಕರೆ, ಉದ್ದಿನ ಬೇಳೆಯೊಂದಿಗೆ ಅಕ್ಕಿ, ಶರ್ಟ್‌ನೊಂದಿಗೆ ಎರಡು ಡಜನ್ ಗುಂಡಿ... ಹೀಗೆ ಉಚಿತವಾಗಿ ಕೊಡುವ ಅಗತ್ಯವೇನಿರದು.

ಆಯಾ ಪದಾರ್ಥದ ಗುಣಮಟ್ಟ ಚೆನ್ನಾಗಿದ್ದರೆ ಬಳಕೆದಾರರಿಗೆ ಮುಗಿಬಿದ್ದು ಖರೀದಿಸಲು ಅಷ್ಟೇ ಸಾಕು. ಅವಧಿ ಮುಗಿದ ಅಥವಾ ದೋಷಪೂರಿತ ಸರಕುಗಳಿಗೆ ವಿಶೇಷ ರಿಯಾಯಿತಿ ಕೊಟ್ಟು ಗ್ರಾಹಕರ ಕಣ್ತಪ್ಪಿಸುವುದು ಒಂದು ಬಗೆಯಾದರೆ, ತುಂಬಿಸಿದ ಪ್ಯಾಕೆಟ್ಟುಗಳಲ್ಲಿ ಕಡಿಮೆ ತೂಕದ ಸರಕು ಇರಿಸುವುದು ಇನ್ನೊಂದು ಬಗೆ. ತಂಗಳು ಪಫ್, ಬನ್, ಬಿಸ್ಕತ್ ಮೈಕ್ರೊ ಓವನ್ನೇರಿ ಬಿಸಿ ಬಿಸಿ ತಾಜಾ ಎನ್ನುವಂತೆ ಗಿರಾಕಿಯ ಕೈ ತಲುಪಿರುತ್ತವೆ! ನಿಸ್ಸಂದೇಹವಾಗಿ ಇವಕ್ಕೆಲ್ಲ ಅಪವಾದಗಳಿವೆ. ಎಲ್ಲೇ ಇದ್ದರೂ ಹುಡುಕಿಕೊಂಡು ಹೋಗಿ ಕೊಳ್ಳೋಣ ಅನ್ನಿಸುವ ಮುಂಗಟ್ಟುಗಳು ಉಂಟು. ಅಂತಹವು ಹೆಚ್ಚಾಗಬೇಕೆನ್ನುವುದೇ ಆಶಯ.

ವಿಮಾನಗಳಲ್ಲೂ ಈಗ ಹಿಂದಿನಂತೆ ಗ್ರಾಹಕ ಸ್ನೇಹಿ ವಾತಾವರಣ ಹೆಚ್ಚಾಗಿ ಕಂಡುಬರು
ತ್ತಿಲ್ಲ. ಪ್ರಯಾಣಿಕರಿಗೆ ಕೊಡುವ ತಿಂಡಿ, ತಿನಿಸು, ಪಾನೀಯದಲ್ಲಿ ಗುಣಮಟ್ಟದ ಕೊರತೆ, ಪರಿಮಾಣವೂ ಕಡಿಮೆ. ಮತ್ತೆ ಮತ್ತೆ ಗೋಗರೆದರೆ ಮಾತ್ರ ನೀರು.

60-70ರ ದಶಕದಲ್ಲಿ ಬಾಡಿಗೆ ಮನೆಗೆ ಯಾವುದೇ ಕರಾರು ಪತ್ರ ಇರುತ್ತಿರಲಿಲ್ಲ. ಒಂದು ತಿಂಗಳ ಬಾಡಿಗೆ ಮುಂಗಡ ನೀಡುತ್ತಲೇ ಮಾಲೀಕರು ಕೀಲಿಕೈ ಕೊಡುತ್ತಿದ್ದರು. ಇಂದು ಮನೆ ಮಾಲೀಕರ ಪಾಲಿಗೆ ಬಾಡಿಗೆದಾರ ಬಹುತೇಕ ವೈರಿಯಂತೆ ತೋರುತ್ತಾನೆ. ಮಾಲೀಕ ಮತ್ತು ಬಾಡಿಗೆದಾರರ ನಡುವಿನ ವಿಶ್ವಾಸವನ್ನು ಹನ್ನೊಂದು ತಿಂಗಳ ಮುಂಗಡ ಬಾಡಿಗೆ ದಿಢೀರನೆ ತುಂಬಿಕೊಡಲು ಸಾಧ್ಯವೆ? ಇದು ಹಾಗಿರಲಿ, ತಮಗೇ ಮನೆ ಬೇಕು, ಒಡೆದು ಕಟ್ಟಬೇಕು, ನವೀಕರಿಸಬೇಕು ಎಂಬಂತಹ ನೆಪಗಳು, ಇರುವವರನ್ನು ಖಾಲಿ ಮಾಡಿಸಿ ಇನ್ನಷ್ಟು ಅಧಿಕ ಬಾಡಿಗೆಯ ಬೆನ್ನೇರುವ ತಂತ್ರಗಳು ತಾನೆ? ಅರಮನೆಯಾದರೂ ವರ್ಷಾಂತರದಲ್ಲಿ ಅಂದಗೆಡುವುದು, ಬಣ್ಣ ಮಂಕಾಗುವುದು, ಗೋಡೆ ಶಿಥಿಲ ಸಾಧ್ಯ, ಬಾಗಿಲು, ಅಗುಳಿ ಅಳ್ಳಕವಾಗುವುದು. ಮನೆ ಬಿಡುವಾಗ ‘ಸವಕಳಿ ವೆಚ್ಚ’ದ ಹೇರಿಕೆ ಸಮರ್ಥನೀಯವೇ?

ಅನ್ನಕ್ಕಿಷ್ಟು ಸಾಂಬಾರು, ಇಡ್ಲಿಗಿಷ್ಟು ಚಟ್ನಿ ಅಥವಾ ಪೂರಿಗಿಷ್ಟು ಸಾಗು ಎನ್ನುವ ನಿರ್ಧಾರ ಬಳಕೆದಾರನದೇ ವಿನಾ ಹೋಟೆಲ್ ಒಡೆಯನದ್ದಲ್ಲವಲ್ಲ. ಇದೆಲ್ಲಿ, ಹೇಗೆ ಕಳೆದುಹೋಯಿತು ವ್ಯಾಪಾರಿ ಮತ್ತು ಗ್ರಾಹಕರ ನಡುವಿನ ನೆಚ್ಚಿಗೆ, ಭರವಸೆ. ಇಂದು ಬಿಡಿ, ಒಲ್ಲೆನೆಂದರೂ ಮೇಜಿನ ಮೇಲೆ ನೀರಿನ ಬಾಟಲ್ಲು ಬಿಲ್ ಸೇರಲು ಪ್ರತ್ಯಕ್ಷವಾಗಿರುತ್ತದೆ!

ಜನಪದರಲ್ಲಿ ‘ಕೊಸರು’ ಎಂಬ ಗ್ರಾಹಕಸ್ನೇಹಿ ಪರಿಕಲ್ಪನೆ ಇಂದಿಗೂ ಪ್ರಚಲಿತವಿದೆ. ದವಸಧಾನ್ಯ, ಸೊಪ್ಪುಸದೆ, ಹೂವು, ಹಣ್ಣು, ತರಕಾರಿ ವಗೈರೆ ಒದಗಿಸುವಾಗ ತೂಕ, ಅಳತೆ, ಎಣಿಕೆಯಲ್ಲಿ ವ್ಯತ್ಯಯ ಆಗಬಹುದು. ತನ್ನಿಂದಾದ ಆ ಕೊರೆಗೆ ಗ್ರಾಹಕ ಗುರಿಯಾಗಬಾರದು ಎನ್ನುವುದು ವ್ಯಾಪಾರಿಯ ಕಾಳಜಿ. ಅದಕ್ಕಾಗಿ ಮೇಲೊಂದು ಹಿಡಿ ಸರಕು, ಹೆಚ್ಚಿಗೆ ನಾಲ್ಕೈದಾದರೂ ಎಣಿಕೆ. ಬಳಕೆದಾರನಲ್ಲಿ ಮನುಷ್ಯನನ್ನು ಕಾಣುವುದೆಂದರೆ ಇದೇ ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT